Mysore
22
overcast clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಮಾ.23ರಿಂದ ವಿಜೃಂಭಣೆಯ ವೈರಮುಡಿ ಬ್ರಹ್ಮೋತ್ಸವ  

ಮೇಲುಕೋಟೆ: ಮಾ.೨೩ರಿಂದ ಏ.೩ರವರೆಗೆ ನಡೆಯುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡ ಹೇಳಿದರು.

ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಅವರು, ಬ್ರಹ್ಮೋತ್ಸವದ ಪ್ರಮುಖ ಉತ್ಸವವಾದ ಮಾ.೨೮ರ ರಾತ್ರಿ ನಡೆಯುವ ವೈರಮುಡಿ ಕಿರೀಟಧಾರಣ ಮಹೋತ್ಸವ, ಮಾ.೩೧ರ ಮಹಾರಥೋತ್ಸವ ಹಾಗೂ ಏ.೧ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆಕರ್ಷಕ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗುತ್ತದೆ ಎಂದರು.

ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ನಡೆಯುವ ಬೀದಿಗಳ ಎರಡೂ ಕಡೆಗಳಲ್ಲಿ ಉದ್ದಕ್ಕೂ ತೆರೆದ ಚರಂಡಿಗಳಿವೆ. ವೈರಮುಡಿಯಂದು ಭಕ್ತರು ನೂಕುನುಗ್ಗಲಿನಲ್ಲಿ ಚರಂಡಿಗೆ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.

ಈ ವರ್ಷ ಅದನ್ನು ತಪ್ಪಿಸಲು ಕ್ರಮವಹಿಸಿದ್ದೇವೆ. ಬ್ರಹ್ಮೋತ್ಸವದ ವೇಳೆ ಉತ್ಸವಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಯೋಜಿಸಿದ್ದು, ಸೇವೆ ಮಾಡಲು ಭಕ್ತರಿಗೂ ಅವಕಾಶ ಕಲ್ಪಿಸಿದ್ದೇವೆ. ಭಕ್ತರು ಪುಷ್ಪಾಲಂಕಾರ, ಪ್ರಸಾದ, ದೀಪಾಲಂಕಾರ ಸೇರಿದಂತೆ ಯಾವುದೇ ಸೇವೆಗಳನ್ನು ಮಾಡಬಹುದಾಗಿದ್ದು, ಸೇವಾರ್ಥದಾರರ ಹೆಸರನ್ನು ವೈರಮುಡಿ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದರ ಜತೆಗೆ ವಿಶೇಷ ಗೌರವ ಸಮರ್ಪಣೆಯನ್ನೂ ಮಾಡಲಾಗುತ್ತದೆ ಎಂದು ಹೇಳಿದರು.

ಪ್ರತಿ ವರ್ಷ ಬ್ರಹ್ಮೋತ್ಸವದಲ್ಲಿ ಮಾಡುತ್ತಿದ್ದ ದೀಪಾಲಂಕಾರವನ್ನು ಬದಲಾಯಿಸಿ ಆಕರ್ಷಕವಾಗಿ ದೀಪಾಲಂಕಾರ ಮಾಡಲಾಗುತ್ತದೆ. ಕಲ್ಯಾಣಿ, ಬೆಟ್ಟ ಹಾಗೂ ರಾಜಬೀದಿ ಸ್ಮಾರಕಗಳಿಗೆ ನಯನಮನೋಹರ ದೀಪಾಲಂಕಾರ ಮಾಡಲಾಗುತ್ತದೆ. ಸರಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯ ವಕೀಲ ಕಾಡೇನಹಳ್ಳಿ ಸತೀಶ್ ಮಾತನಾಡಿ, ದೇವಾಲಯ ಮುಂಭಾಗದ ಚಪ್ಪರವನ್ನು ಆಕರ್ಷಕವಾಗಿ ಶಾಶ್ವತವಾಗಿ ನಿರ್ಮಾಣ ಮಾಡಲಾಗುತ್ತದೆ. ದೇವಾಲಯದ ಮುಂಭಾಗವಿರುವ ಹಳೆಯ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಎಸ್.ಎಸ್. ಬ್ಯಾರಿಕೇಡ್ ಹಾಕಲಾಗುತ್ತದೆ.

ಅನಗತ್ಯ ನಾಮಫಲಕಗಳು, ಕಬ್ಬಿಣದ ಕಂಬಗಳನ್ನುತೆರವುಗೊಳಿಸಲಾಗುತ್ತದೆ. ಬ್ರಹ್ಮೋತ್ಸವ ವೇಳೆ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುವುದು. ಮೇಲುಕೋಟೆಯಲ್ಲಿ ವಾಸಿಸುತ್ತಿರುವ ಕೋತಿಗಳನ್ನು ಹಿಡಿಸಲಾಗುತ್ತದೆ. ಬಿಡಾಡಿ ದನಗಳು, ಆಡುಗಳ ಕಾಟದಿಂದಲೂ ಭಕ್ತರಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗುತ್ತದೆ. ಈ ವರ್ಷ ವೈರಮುಡಿ ಜಾತ್ರೆ ಆಹ್ವಾನ ಪತ್ರಿಕೆಯ ವಿನ್ಯಾಸವನ್ನು ಹೊಸತನಕ್ಕೆ ಬದಲಾಯಿಸಿ ಆಕರ್ಷಕವಾಗಿ ಮುದ್ರಿಸಲಾಗುತ್ತದೆ ಎಂದು ವಿವರಿಸಿದರು.

ಸ್ವಚ್ಛತೆ ಹಾಗೂ ಕುಡಿಯುವ ನೀರಿಗೆ ಆದ್ಯತೆ ಜಾತ್ರಾ ಮಹೋತ್ಸವದ ವೇಳೆ ಉತ್ಸವ ಬೀದಿ ದೇವಾಲಯದ ಹೊರ ಹಾಗೂ ಒಳ ಆವರಣಗಳು, ಸ್ಮಾರಕಗಳ ಬಳಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ನಿರಂತರ ಸ್ವಚ್ಛತೆಗೆ ಕ್ರಮವಹಿಸಲಾಗಿದೆ. ಭಕ್ತರಿಗೆ ಶುದ್ಧೀಕರಿಸಿದ ಕುಡಿಯುವ ನೀರು ನೀಡಲು ಪ್ರಯತ್ನಿಸಲಾಗುತ್ತದೆ. ಉಳಿದಂತೆ ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಲಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.

ಹಿರಿಯ ಸದಸ್ಯರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಡಾ.ವೆಂಕಟರಾಮೇಗೌಡ ಮಾತನಾಡಿದರು. ಸದಸ್ಯರಾದ ಶೋಭಾ, ಡಾ.ಪ್ರೀತಿ ಮಹದೇವ್, ವೆಂಕಟೇಶ್, ರಾಜು, ಕೆ.ಎಚ್. ಪುಟ್ಟಸ್ವಾಮಿ, ದೇವಾಲಯದ ಕಾರ್ಯನಿರ್ವಾಹಕ ಅಽಕಾರಿ ಶೀಲಾ ಭಾಗವಹಿಸಿದ್ದರು.

ಕಲ್ಯಾಣಿ ಪೂಜಾ ಶುಲ್ಕ ರದ್ದು:  ಸಾಮಾನ್ಯ ಭಕ್ತರ ಒತ್ತಾಯಕ್ಕೆ ಮನ್ನಣೆ ನೀಡಿ ಕಲ್ಯಾಣಿ ಪೂಜೆಗೆ ನಿಗದಿ ಮಾಡಿದ್ದ ೨೦ ರೂ. ಶುಲ್ಕವನ್ನು ರದ್ದು ಮಾಡಲಾಗಿದೆ ಎಂದಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶ್‌ಗೌಡ, ಜಾತ್ರಾ ಅವಽಯಲ್ಲಿ ವಿಶೇಷ ದರ್ಶನಕ್ಕೆ ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ದೇವಾಲಯದ ಚಿನ್ನದ ಗೋಪುರದ ಬಳಿ ವಿಶೇಷ ಹುಂಡಿ ಇಡಲು ತೀರ್ಮಾನಿಸಲಾಗಿದೆ ಎಂದರು.

 

 

Tags:
error: Content is protected !!