ಮ್ಯಾನ್ ಹೋಲ್‌ನಿಂದ ಉಕ್ಕಿ ಹರಿಯುವ ಕೊಳಚೆ ನೀರು; ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ
ಮೈಸೂರು: ಆಸ್ಪತ್ರೆ, ಶಾಲೆ, ಮನೆಗಳ ಮುಂದೆ ಕೊಳಕು, ಮಕ್ಕಳು ದಾಟಿಕೊಂಡು ದಾಟಿಕೊಂಡು ಶಾಲೆಗೆ ಹೋದರೆ, ನಿವಾಸಿಗಳು ವಿಧಿ ಇಲ್ಲದೆ ಅದರ ಮೇಲೆಯೇ ಹೆಜ್ಜೆ ಹಾಕಿಕೊಂಡೇ ಮನೆ ಸೇರಬೇಕು. ನಗರದ ರಾಮಕೃಷ್ಣ ನಗರದ ಇ ಅಂಡ್ ಎಫ್ ಬ್ಲಾಕ್ 9ನೇ ಅಡ್ಡ ರಸ್ತೆ, ದಕ್ಷಿಣೇಶ್ವರ ರಸ್ತೆಯಲ್ಲಿ ಕಂಡು ಬಂದಿರುವ ಸಮಸ್ಯೆಯು ಅಧಿಕಾರಿ ವರ್ಗವನ್ನು ನಾಚಿಸುವಂತೆ ಮಾಡಿದೆ. ಇದು ಒಂದೆರಡು ದಿನಗಳ ಸಮಸ್ಯೆಯಲ್ಲ, ಕಳೆದ 6 ತಿಂಗಳುಗಳಿಂದ ಇದೇ ಸ್ಥಿತಿ. ಈ ರಸ್ತೆಯಲ್ಲಿರುವ ಮ್ಯಾನ್ ಹೋಲ್ ಆಗಾಗ ತುಂಬಿ ರಸ್ತೆಯಲ್ಲಿ ಹರಿಯುತ್ತಾ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇದೇ ರಸ್ತೆಯಲ್ಲಿ ಸುಯೋಗ್ ಆಸ್ಪತ್ರೆಯೂ ಇದೆ. ಅದರ ಎದುರು ರಾಮಕೃಷ್ಣ ವಿದ್ಯಾಶಾಲೆ ಇದ್ದು, ಮಳೆ ಬಂದಾಗೆಲ್ಲ ಈ ಮ್ಯಾನ್ ಹೋಲ್ ತುಂಬಿ ರಸ್ತೆಗೆ ಹರಿಯುವುದರಿಂದ ಇಲ್ಲಿ ನಿತ್ಯ ಸಂಚರಿಸುವವರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ 6 ತಿಂಗಳಿಂದ ಆಗಾಗ ಮಳೆ ಬರುತ್ತಿರುವುದು ಗೊತ್ತೇ ಇದೆ. ನಿತ್ಯ ದುರ್ವಾಸನೆಯಿಂದ ಅನೇಕರು ಬೇಸತ್ತು ಹೋಗಿದ್ದಾರೆ. ಪಾಲಿಕೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆ ಹರಿಯಲೇ ಇಲ್ಲ. ಮ್ಯಾನ್ ಹೋಲ್ ತುಂಬಿ ಹರಿದಾಗಲೆಲ್ಲ ಪಾಲಿಕೆಗೆ ಫೋನ್ ಮಾಡುತ್ತಾರೆ.
ಸ್ವಚ್ಛತಾ ತಂಡದವರು ಬಂದು ತಾತ್ಕಾಲಿಕವಾಗಿ ಸರಿಪಡಿಸುತ್ತಾರೆ. ಒಂದೆರಡು ದಿನದ ನಂತರ ಮತ್ತೆ ಅದೇ ಸಮಸ್ಯೆ ಎದುರಾಗುತ್ತೆ. ಅದಕ್ಕೊಂದು ಸರಿಯಾದ ಪರಿಹಾರ ಕಲ್ಪಿಸಲು ಆಗದಿರುವುದು ಪಾಲಿಕೆಗೆ ನಿಜಕ್ಕೂ ಅವಮಾನ ಅಲ್ಲವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮೂಗು ಮುಚ್ಚಿಕೊಂಡು ಓಡಾಡುತ್ತೇವೆ: ಚರಂಡಿಯ ಗಲೀಜಿನ ದುರ್ವಾಸನೆಯಿಂದ ನಾವು ಸರಿಯಾಗಿ ಉಸಿರಾಡುವುದಕ್ಕೂ ಆಗುತ್ತಿಲ್ಲ. ಮಾಸ್ ನಮಗೆ ಖಾಯಂ ಆಗಿದೆ. ದುರ್ವಾಸನೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮನೆಯ ಕಿಟಕಿ, ಬಾಗಿಲು ತೆರೆಯುವುದು ಅಪರೂಪ ಆಗಿದೆ. ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ವರ್ತಿಸುತ್ತಾರೆ. ಮಕ್ಕಳು ಹಿರಿಯರ ಆರೋಗ್ಯ ಕೆಡುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ನಾಲ್ಕು ತಿಂಗಳ ಹಿಂದೆ ಬಂದ ಪಾಲಿಕೆ ಅಧಿಕಾರಿಯೊಬ್ಬರು. ಪೈಪ್ ಲೈನ್ ಬದಲಿಸಬೇಕು ಎಂದು ಹೇಳಿ ಹೋಗಿದ್ದಾರೆ. ಆದರೆ ಅದು ಕಾರ್ಯಗತವಾಗಿಲ್ಲ ಎಂದು ಕಿಡಿಕಾರಿದರು.
ಆಯುಕ್ತರನ್ನು ನಾವು ತಿಂಡಿಗೆ ಆಹ್ವಾನಿಸುತ್ತೇವೆ: ನಗರ ಪಾಲಿಕೆ ಆಯುಕ್ತರಿಗೆ ಒಂದು ವಿಶೇಷ ಆಹ್ವಾನ ರಾಮಕೃಷ್ಣ ನಗರ ಇ ಅಂಡ್ ಎಫ್ ಬ್ಲಾಕ್ ನಿವಾಸಿ ಗಳಿಂದ ಬರಲಿದೆ. ಪಾಲಿಕೆ ಆಯುಕ್ತರನ್ನು ಬೆಳಗಿನ ಉಪಾಹಾರಕ್ಕೆ ಆಹ್ವಾನಿಸಲು ನಾವೆಲ್ಲ ತೀರ್ಮಾನಿಸಿದ್ದೇವೆ. ನಮ್ಮ ಬದುಕು ಎಷ್ಟು ಸೊಗಸಾಗಿದೆ ಎಂದು ನಮ್ಮ ಆಯುಕ್ತರೇ ನೋಡಿ ಸಂಭ್ರಮಿಸಲಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಳೆದ ಆರು ತಿಂಗಳುಗಳಿಂದ ನಮ್ಮ ಮೆಡಿಕಲ್ ಸ್ಟೋಗೆ ಬರುವವರೆಲ್ಲ. ದುರ್ವಾಸನೆಯಿಂದ ಬೇಸರಗೊಳ್ಳುತ್ತಾರೆ. ನಾನು ಪ್ರತಿನಿತ್ಯ ವಿಧಿ ಇಲ್ಲದೆ. ಈ ಕೆಟ್ಟ ವಾಸನೆ ಸಹಿಸಿಕೊಂಡೇ ಇದ್ದೇನೆ. ನಾನೂ ಅನೇಕ ಬಾರಿ ದೂರನ್ನು ನೀಡಿದ್ದೇನೆ. ಏನು ಪ್ರಯೋಜನವಾಗಿಲ್ಲ. ದುರಸ್ತಿ ಮಾಡಿ ಹೋದರೆ ಎರಡು ದಿನಗಳ ನಂತರ ಯಥಾ ಸ್ಥಿತಿ. ಈಗ ನಾವೇ ಹರಿಯುವ ಕೊಳಕು ನೀರನ್ನು ಸಮೀಪದ ಚರಂಡಿಗೆ ತಿರುಗಿಸಿದ್ದೇವೆ. ಇದರಿಂದ ರಸ್ತೆಗೆ ಹರಿಯುವುದು ನಿಂತಿದೆ.
-ಶಿವಮೂರ್ತಿ, ಔಷದ್ ಫಾರ್ಮಸಿ