ಹೋಟೆಲ್ ಮಾಲೀಕರಿಗೆ ವರ್ಷದಲ್ಲಿ ಒಟ್ಟು ೧೫ ಲಕ್ಷ ರೂ. ದಂಡ ವಿಧಿಸಿದ ಪಾಲಿಕೆ
ಕೊಳೆತ ತರಕಾರಿ ಬಳಕೆಯಿಂದ ಆಹಾರ ಕಲುಷಿತ; ಕಲಬೆರಕೆಗಿಂತ ಪ್ರಮುಖ ಕಾರಣ
ಕೆಲ ಆಹಾರ ಉತ್ಪಾದಕರಿಂದ ಆಗಾಗ ನಿಯಮ ಉಲ್ಲಂಘನೆ
ಹಲವು ಹೋಟೆಲ್‌ಗಳಲ್ಲಿ ಸ್ಟೋರ್ ರೂಂಗಳಲ್ಲಿ ಗಬ್ಬುನಾತ
ಮೈಸೂರು: ಅಡುಗೆಗೆ ಬಳಸಲು ಯೋಗ್ಯ ವಲ್ಲದ ತರಕಾರಿಗಳು… ಗಬ್ಬುನಾರುವ ಸ್ಟೋರ್ ರೂಂಗಳು… ಪಾಚಿ ಕಟ್ಟಿದ ಶೌಚಾಲಯ, ಪ್ಲಾಸ್ಟಿಕ್ ಬಳಕೆ… ಇವು ನಗರಪಾಲಿಕೆ ಆರೋಗ್ಯಾಧಿಕಾರಿಗಳು ಅನೇಕ ಹೋಟೆಲ್ಗಳು ಹಾಗೂ ಬೇಕರಿಗಳ ಮೇಲೆ ದಾಳಿ ನಡೆಸಿದ ವೇಳೆ ಕಂಡು ಬಂದಿರುವ ದೃಶ್ಯಗಳು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬೇಕರಿಯಲ್ಲಿ ಖರೀದಿಸಿದ ಕೇಕ್ ಸೇವಿಸಿದ ಮಗು ವೊಂದು ಅಸ್ವಸ್ಥಗೊಂಡ ಹಿನ್ನೆಲೆ ಯಲ್ಲಿ ‘ಆಂದೋಲನ’ವು ವಸ್ತುಸ್ಥಿತಿ ಪರಿಶೀಲಿಸಲು ಮುಂದಾ ದಾಗ ದೊರೆತ ಮಾಹಿತಿ ಬೆಚ್ಚಿ ಬೀಳಿಸಿತು. ಈ ಕುರಿತು ನಗರಪಾಲಿಕೆ ಆರೋಗ್ಯಾಧಿಕಾರಿಯವರನ್ನು ಮಾತನಾಡಿಸಿ ದಾಗ, ಕಳಪೆ ಆಹಾರ ಸಂಬಂಧ ನಗರಪಾಲಿಕೆ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ೪೬೮ ಹೋಟೆಲ್ ಮಾಲೀಕರಿಗೆ ೧೫ ಲಕ್ಷ ರೂ. ಗಳಷ್ಟು ದಂಡ ವಿಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಆದರೂ ಈ ಅಶುಚಿತ್ವ ಹಾಗೂ ಗುಣಮಟ್ಟವಲ್ಲದ ಆಹಾರ ನೀಡುವುದು ಕೆಲವೆಡೆ ಕಂಡುಬರುತ್ತಿರುವುದು ಗ್ರಾಹಕರಲ್ಲಿ ಆತಂಕ ಉಂಟು ಮಾಡಿದೆ. ಜನರಿಗೆ ಶುಚಿತ್ವದೊಂದಿಗೆ ಗುಣಮಟ್ಟದ ಆಹಾರ ನೀಡಬೇಕು ಎಂಬ ಕಾರಣಕ್ಕಾಗಿ ಸರ್ಕಾರ ಸಾಕಷ್ಟು ನಿಯಮಗಳನ್ನು ರೂಪಿಸಿದೆ. ಸ್ಥಳೀಯ ಸಂಸ್ಥೆಗಳು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿ ಕಾರದ ಅಧಿಕಾರಿಗಳು ಕಾಲಕಾಲಕ್ಕೆ ಹೋಟೆಲ್, ಬೇಕರಿ ಹಾಗೂ ಆಹಾರ ತಯಾರಿಕಾ ಘಟಕಗಳ ಪರಿಶೀಲನೆಯನ್ನು ಆಗಿಂದಾಗ್ಗೆ ನಡೆಸಬೇಕು ಎಂಬ ಸೂಚನೆ ಕೂಡ ನೀಡಿದೆ.
ಅಧಿಕಾರಿಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಆದರೂ, ಹೋಟೆಲ್ ಹಾಗೂ ಬೇಕರಿ ಉದ್ದಿಮೆ ನಡೆಸುವವರು ಆಗಿಂದಾಗ್ಗೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಆಹಾರ ಸೇವನೆಯ ನಂತರ ಜನರು ಅಸ್ವಸ್ಥಗೊಳ್ಳುವುದು ನಡೆದೇ ಇದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಗರಪಾಲಿಕೆಯ ೯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಹೋಟೆಲ್, ಬೇಕರಿಗಳ ಮೇಲೆ ಸಾಕಷ್ಟು ಬಾರಿ ದಾಳಿಗಳನ್ನು ನಡೆಸಿದೆ. ಈ ವೇಳೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಅಡುಗೆಗೆ ಬಳಸಲು ಯೋಗ್ಯವಲ್ಲದ ತರಕಾರಿ ಬಗ್ಗೆ. ದಾಳಿ ಮಾಡಿದಾಗ ಸ್ಟೋರ್ ರೂಂಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಕೆಲ ಹೋಟೆಲ್‌ಗಳಲ್ಲಿ ದಾಸ್ತಾನಿರಿಸಿದ್ದ ತರಕಾರಿಗಳನ್ನು ನೋಡಿ ಅಧಿಕಾರಿಗಳೇ ಮೂಗು ಮುಚ್ಚು ವಂತಹ ಅನುಭವವಾಗಿದೆ. ಅರೆಬರೆ ಕೊಳೆತ ತರಕಾರಿಗಳು ಅವರುಗಳನ್ನು ಸ್ವಾಗತಿಸಿವೆ.
ಇನ್ನು ಕೆಲ ಹೋಟೆಲ್‌ಗಳಲ್ಲಿ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಸ್ವಚ್ಛತೆ ಎಂಬುದು ಇಲ್ಲ ವಾಗಿರುವುದು ಕಂಡುಬಂದಿದೆ. ಕೂದಲು ಆಹಾರದ ಮೇಲೆ ಉದುರಬಾರದು ಎಂಬ ಕಾರಣಕ್ಕಾಗಿ ತಲೆಗೆ ಕ್ಯಾಪ್ ಹಾಕಬೇಕು. ಆದರೆ, ದಾಳಿ ವೇಳೆ ಶೇ.೭೦ ರಷ್ಟು ಹೋಟೆಲ್ ಗಳ ಸಿಬ್ಬಂದಿ ಕ್ಯಾಪ್ ಬಳಸದೆ ಇರುವುದು ಕಂಡುಬಂದಿದೆ. ಇನ್ನು ಆಹಾರ ಸರಬರಾಜು ಮಾಡುವ ಪ್ಲೇಟ್, ತಟ್ಟೆ ತೊಳೆಯಲು ಸೋಪ್ ವಾಟರ್ ಬಳಸದೆ ಕೇವಲ ನೀರು ಬಳಸಿ ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇನ್ನು ಕೆಲ ಹೋಟೆಲ್‌ಗಳಲ್ಲಿ ಧಾನ್ಯಗಳ ಪರಿಶೀಲನೆ ವೇಳೆ ಹುಳುಗಳಿದ್ದ ಅಕ್ಕಿ ಕಂಡುಬಂದಿದೆ. ಇನ್ನು ಗೃಹ ಬಳಕೆ ಸಿಲಿಂಡರ್ ಬಳಕೆ, ಪ್ಲಾಸ್ಟಿಕ್ ಬಳಕೆ, ನೆಲವನ್ನು ತೊಳೆಯದೆ ಇರುವುದು, ಪಾಚಿ ಕಟ್ಟಿರುವುದು, ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ವಾರ ಗಟ್ಟಲೇ ಫ್ರಿಜ್‌ನಲ್ಲಿ ಇಡಲಾಗಿದ್ದ ಮಾಂಸ, ಇಡ್ಲಿ, ದೋಸೆ ಹಿಟ್ಟು, ಪನ್ನೀರನ್ನು ಅಡುಗೆಗೆ ಬಳಸುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ. ಮತ್ತೆ ಕೆಲ ಹೋಟೆಲ್‌ಗಳಲ್ಲಿ ಇದು ಪುನರಾ ವರ್ತನೆಯಾಗಿದೆ. ಅಂತಹ ಹೋಟೆಲ್ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಲಾಗಿದೆ.
ಫುಟ್‌ಪಾತ್ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕೊರತೆ: ಫುಟ್‌ಪಾತ್ ಹೋಟೆಲ್‌ಗಳಲ್ಲಿಯಂತೂ ಸ್ವಚ್ಛತೆ ಎಂಬುದು ಅಷ್ಟಕಷ್ಟೆ. ತೆರೆದ ಸ್ಥಳದಲ್ಲಿ ತಿನಿಸುಗಳ ತಯಾರಿಕೆ, ಬಿಸಿನೀರು ಕೊಡದಿರುವುದು, ಫುಟ್‌ಪಾತ್ ಮೇಲೆ ಕೈ ತೊಳೆಯು ವುದು, ಅಲ್ಲಿಯೇ ಪಾತ್ರೆ, ತಟ್ಟೆ ತೊಳೆಯುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವರಿಗೂ ಕೂಡ ದಂಡ ವಿಧಿಸಿದ್ದಾರೆ.
ಚೆಕ್ ಬೌನ್ಸ್: ಮೈಸೂರಿನ ಹೈವೇ ವೃತ್ತದ ಬಳಿಯ ಹೋಟೆಲ್ ವೊಂದರಲ್ಲಿ ಸ್ವಚ್ಛತೆ ಇಲ್ಲದ ಬಗ್ಗೆ ದೂರು ಕೇಳಿ ಬಂದಿತ್ತು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮಾಲೀಕರಿಗೆ ೫ ಸಾವಿರ ರೂ. ದಂಡ ವಿಧಿಸಲಾಯಿತು. ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ದೂರು ಬಂತು. ಸ್ಥಳಕ್ಕೆ ಭೇಟಿ ನೀಡಿದ ನಾವು ಅಲ್ಲಿನ ಅಶುಚಿತ್ವ ಕಂಡು ಮತ್ತೆ ೧೦ ಸಾವಿರ ರೂ. ದಂಡ ವಿಽಸಿದೆವು. ಆತ ದಂಡದ ಮೊತ್ತಕ್ಕೆ ಚೆಕ್ ನೀಡಿದ್ದ. ಬ್ಯಾಂಕ್‌ನಲ್ಲಿ ಅದು ಬೌನ್ಸ್ ಆಯಿತು. ಈ ಬಗ್ಗೆ ವಿಚಾರಣೆಗೆ ಮಾರನೆಯ ದಿನ ಹೋಟೆಲ್ ಬಳಿಗೆ ತೆರಳಿದಾಗ, ಆತ ಹೋಟೆಲ್ ಬಂದ್ ಮಾಡಿಕೊಂಡು ಹೋಗಿದ್ದ. ಇಂತಹ ಪ್ರಕರಣಗಳೂ ಸಾಕಷ್ಟಿವೆ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಹೇಳುತ್ತಾರೆ.





