ಮಹೇಶ್ ಕಿಕ್ಕೇರಿ
ಕಿಕ್ಕೇರಿ: ಇಲ್ಲಿಗೆ ಸಮೀಪದ ಚಿಕ್ಕಮಂದಗೆರೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಶಾಲೆಯಲ್ಲಿ ನಿರ್ಮಾಣಗೊಂಡ ಶೌಚಾಲಯ ಕಳೆದ ನಾಲ್ಕು ವರ್ಷಗಳಿಂದ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇರುವುದರಿಂದ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಬಹಳ ತೊಂದರೆ ಅನುಭವಿಸುವಂತಾಗಿದೆ.
ಶಾಶ್ವತ ಶೌಚಾಲಯ ನಿರ್ಮಾಣ ಕಾಮಗಾರಿಗೆ ಲಕ್ಷಾಂತರ ರೂ.ಅನುದಾನ ಲಭಿಸಿತ್ತು. ಹೊರಗೆ ಮಾತ್ರ ಕಟ್ಟಡ ಇರುವಂತೆ ತೋರಿಸಿ, ಒಳಗೆ ಮೂಲ ಸೌಲಭ್ಯಗಳನ್ನು ಒದಗಿಸದೆ ಕಾಮಗಾರಿಯನ್ನು ಮುಗಿಸಲಾಗಿದೆ. ಆದರೂ ಬಿಲ್ ಪಾವತಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ, ಒಳಗಡೆ ನೀರಿನ ಸಂಪರ್ಕವಿಲ್ಲ, ನೀರಿನ ಪೈಪ್‌ಲೈನ್ ಕಾರ್ಯ ನಿರ್ವಹಿಸದಿರುವುದರಿಂದ ದುರ್ವಾಸನೆ ಬೀರುತ್ತಿದೆ. ಹೀಗಾಗಿ ಹೆಸರಿಗೆ ಮಾತ್ರ ಶೌಚಾಲಯವಿದ್ದು, ಉಪಯೋಗಕ್ಕೆ ಬಾರದಂತಾಗಿದೆ.
ವಿದ್ಯಾರ್ಥಿಗಳ ಆಕ್ರೋಶ: ಇಂತಹ ಸ್ಥಿತಿಯಲ್ಲಿ ನಾವು ಶಾಲೆಗೆ ಹೋಗಿ, ಅಲ್ಲಿನ ಶೌಚಾಲಯವನ್ನು ಬಳಸುವುದು ಹೇಗೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ. ನಾವು ಶೌಚಕ್ಕಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಶಿಕ್ಷಕರ ಬೇಸರ: ಶೌಚಾಲಯ ಇದೆ ಆದರೆ ಉಪಯೋಗಕ್ಕೆ ಬರುತ್ತಿಲ್ಲ. ಕಾಮಗಾರಿ ನಿರ್ವಹಿಸಿದವರು ಗುಣಮಟ್ಟ ಪಾಲಿಸಿಲ್ಲ. ಇಂತಹ ಸ್ಥಿತಿಯಿಂದ ಮಕ್ಕಳ ಶಿಕ್ಷಣಕ್ಕೂ ಭಂಗ ಉಂಟಾಗಿದೆ ಎಂದು ಶಾಲೆಯ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು. ಗ್ರಾಮಸ್ಥರು ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳಿಗೆ, ಕ್ಷೇತ್ರದ ಜನ ಪ್ರತಿನಿಽಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಶೌಚಾಲಯ ಬಳಸಲು ಅನುಕೂಲವಾಗುವಂತೆ ತುರ್ತು ನವೀಕರಣ ಕೈಗೊಳ್ಳಬೇಕು, ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.





