Mysore
23
overcast clouds

Social Media

ಗುರುವಾರ, 10 ಏಪ್ರಿಲ 2025
Light
Dark

ಕೌದಳ್ಳಿಯಲ್ಲಿ ಅಶುಚಿತ್ವ: ಸ್ವಚ್ಛಗೊಳ್ಳದ ಚರಂಡಿಗಳು

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಕಿಡಿ; ಕ್ರಮಕ್ಕೆ ಒತ್ತಾಯ

ಮಹಾದೇಶ್ ಎಂ.ಗೌಡ

ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿನ ಚರಂಡಿಗಳಲ್ಲಿ ಕಸ-ಕಡ್ಡಿಗಳು ರಾಶಿಯಾಗಿ ತುಂಬಿಕೊಂಡಿದ್ದು, ಗುರುವಾರ ಸುರಿದ ಮಳೆಗೆ ತ್ಯಾಜ್ಯಗಳೆಲ್ಲ ರಸ್ತೆಯ ಮೇಲೆ ಹರಿದ ಪರಿಣಾಮ ಬಡಾವಣೆಗಳು ಗಬ್ಬು ನಾರುತ್ತಿವೆ.

ಆರು ತಿಂಗಳಿನಿಂದ ಬಹುತೇಕ ಎಲ್ಲ ವಾಡ್ ಗಳಲ್ಲಿನ ಚರಂಡಿಗಳಲ್ಲಿ ಕಸ-ಕಡ್ಡಿಗಳು, ಗಿಡಗಂಟಿಗಳನ್ನು ತೆರವು ಮಾಡದ ಹಿನ್ನೆಲೆ ಯಲ್ಲಿ ನೀರು ಸರಾಗವಾಗಿ ಹರಿಯಲಾಗದೆ ನಿಲ್ಲುತ್ತಿದೆ. ಇದರಿಂದ ತ್ಯಾಜ್ಯ ಕೊಳೆತು ಗಬ್ಬುನಾರುತ್ತಿದೆ.

ಬಿಸಿಲಿನ ತಾಪಮಾನ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ದಿನ ಕಳೆಯುತ್ತಿದ್ದಾರೆ. ಈ ಸಂಬಂಧ ಹಲವಾರು ಬಾರಿ ಪಿಡಿಒಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಮೂಲ ಸೌಲಭ್ಯ ಕಲ್ಪಿಸಲು ವಿಫಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಅಽಕಾರಿಗಳು ವಿಫಲರಾಗಿದ್ದಾರೆ. ಗ್ರಾಪಂ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಜನರು ಪರಿತಪಿಸುತ್ತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ ಸರ್ಕಾರಕ್ಕೂ ಮಾಹಿತಿ ತಲುಪಿದ ನಂತರ ಎಚ್ಚೆತ್ತುಕೊಂಡು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿದ್ದರು. ಇದೀಗ ಚರಂಡಿಯಲ್ಲಿ ಕಸ ಕಡ್ಡಿ ಕೊಳೆತು ಗಬ್ಬು ನಾರುತಿದ್ದರೂ ಸ್ವಚ್ಛ ಮಾಡುವಲ್ಲಿ ವಿಫಲರಾಗಿದ್ದಾರೆ. ಇನ್ನು ಮುಂದಾದರೂ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮುಖ್ಯರಸ್ತೆಯಲ್ಲಿ ಕೊಳಚೆ ನೀರು:ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವ ಕೌದಳ್ಳಿ ಮುಖ್ಯರಸ್ತೆಯಲ್ಲಿ ಚರಂಡಿಯ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದಲ್ಲದೆ ಪ್ಲಾಸ್ಟಿಕ್ ತ್ಯಾಜ್ಯಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ. ಮಳೆಗಾಲದಲ್ಲಿ ವ್ಯಾಪಾರಸ್ಥರ ಕಷ್ಟ ಕೇಳುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವ ದೃಶ್ಯವನ್ನು ಗ್ರಾಮದ ಪ್ರಜ್ಞಾವಂತ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಕೌದಳ್ಳಿ ಮಾರ್ಗವಾಗಿಯೇ ಭಕ್ತಾದಿಗಳು ಪಾದಯಾತ್ರೆ ಮೂಲಕ ಹೋಗುತ್ತಾರೆ. ಇಂತಹ ಮುಖ್ಯ ರಸ್ತೆಯದ್ದೇ ಇಂತಹ ಪರಿಸ್ಥಿತಿಯಾದರೆ ಇನ್ನು ಕಾಡಂಚಿನ ಗ್ರಾಮಗಳಲ್ಲಿ ಯಾವ ಪರಿಸ್ಥಿತಿ ಇರಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ.ಬೆಟ್ಟದಲ್ಲಿ ನಡೆಯುವ ಜಾತ್ರೋತ್ಸವ, ಅಮಾವಾಸ್ಯೆ ಪೂಜೆ ಇನ್ನಿತರೆ ಸಂದರ್ಭಗಳಲ್ಲಿ ಈ ರಸ್ತೆಯ ಮೂಲಕವೇ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಹೋಗುತ್ತಾರೆ. ಆದರೆ ಈ ಅವ್ಯವಸ್ಥೆಯ ಬಗ್ಗೆ ಯಾರೊಬ್ಬರೂ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸವೇ ಸರಿ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.

” ಗ್ರಾಮದ ಬಹುತೇಕ ವಾರ್ಡ್ ಗಳಲ್ಲಿನ ಚರಂಡಿಗಳಲ್ಲಿ ಕಸ-ಕಡ್ಡಿ ತುಂಬಿ ಗಬ್ಬು ನಾರುತ್ತಿದೆ. ಬಡಾವಣೆಯ ನಿವಾಸಿಗಳು ವಾಸಿಸುವುದೇ ಕಷ್ಟವಾಗಿದೆ. ಈ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.”

-ವಸಂತ, ೧ನೇ ವಾರ್ಡಿನ ನಿವಾಸಿ.

” ಕೌದಳ್ಳಿ ಗ್ರಾಮದಲ್ಲಿನ ಚರಂಡಿಗಳಲ್ಲಿ ಕಸ-ಕಡ್ಡಿಗಳು ತುಂಬಿಕೊಂಡು ಗಬ್ಬು ನಾರುತ್ತಿರುವುದು ಗಮನಕ್ಕೆ ಬಂದಿದ್ದು, ಪಿಡಿಒಗೆ ಸೂಚನೆ ನೀಡಿ, ಒಂದು ವಾರದೊಳಗೆ ಸ್ವಚ್ಛ ಮಾಡಿಸಲಾಗುವುದು.”

-ಉಮೇಶ್ , ಇಒ, ಹನೂರು ತಾಪಂ

” ಕೌದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಬೀದಿ ದೀಪ ಅಳವಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರು ಸ್ಪಂದಿಸುತ್ತಿಲ್ಲ. ಚರಂಡಿಗಳೆಲ್ಲ ಗಬ್ಬುನಾರುತಿದ್ದು ಸ್ವಚ್ಛ ಮಾಡುವಲ್ಲಿಯೂ ವಿಫಲರಾಗಿದ್ದಾರೆ. ಕೌದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿಯೆಂಬುದೇ ಮರೀಚಿಕೆಯಾಗಿದೆ.”

ಜಬಿವುಲ್ಲಾ, ಗ್ರಾಪಂ ಸದಸ್ಯರು, ೧ನೇ ವಾರ್ಡ್

Tags: