ಮೂಗು ಮುಚ್ಚಿಕೊಂಡು ಸಂಚರಿಸುವ ನಿವಾಸಿಗಳು; ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ
• ಸಿಂಧುವಳ್ಳಿ ಸುಧೀರ
ಮೈಸೂರು: ದಸರಾ ಮಹೋತ್ಸವದ ವೇಳೆ ಎಲ್ಲೆಡೆ ಸ್ವಚ್ಛತೆ ಸಾಮಾನ್ಯ… ಬಡಾವಣೆಗಳು, ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗುತ್ತದೆ. ಆದರೆ, ಅಗ್ರಹಾರದ ಬಸವೇಶ್ವರ ಮುಖ್ಯರಸ್ತೆಯ 12ನೇ ಕ್ರಾಸ್ ಬಳಿಯ ರಸ್ತೆ ಮಾತ್ರ ದಸರಾ ಮಹೋತ್ಸವದ ವೇಳೆಯೂ ಸ್ವಚ್ಛತೆ ಕಾಣದೆ ಅಶುಚಿತ್ವದ ಗೂಡಾಗಿದೆ. ಎಲ್ಲೆಂದರಲ್ಲಿ ಕಸ ಕಡ್ಡಿಗಳು ಹರಡಿಕೊಂಡು ದುರ್ನಾತ ಬೀರುತ್ತಿವೆ.
ನಾಡಹಬ್ಬ ದಸರಾ ಬಂದರೂ ಅಷ್ಟೇ, ಯಾವುದೇ ಹಬ್ಬವಾದರೂ ಅಷ್ಟೇ ಸ್ವಚ್ಛತೆ ಎಂಬುದು ಅಷ್ಟಕ್ಕಷ್ಟೇ ಎಂಬಂತಾಗಿದೆ. ಹಸಿ ಮತ್ತು ಒಣ ಕಸಕ್ಕೆ ಮಳೆ ನೀರು ಬಿದ್ದ ಪರಿಣಾಮ ತ್ಯಾಜ್ಯಗಳೆಲ್ಲ ಕೊಳೆತು ನಿವಾಸಿಗಳು-ಬೈಕ್ ಸವಾರರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಗ್ರಹಾರದ ವಿವಿಧ ರಸ್ತೆಗಳ ನಿವಾಸಿಗಳು ಬೈಕ್‌ಗಳಲ್ಲಿ, ಪ್ಲಾಸ್ಟಿಕ್ ಕವರ್ ಮತ್ತು ಚೀಲಗಳಲ್ಲಿ ಕಸ ತುಂಬಿಕೊಂಡು ಬಂದು ಇಲ್ಲಿ ಸುರಿದು ಹೋಗುತ್ತಿದ್ದಾರೆ. ನಗರಪಾಲಿಕೆ ಸಿಬ್ಬಂದಿ ಬೆಳಿಗ್ಗೆ ಕಸ ವಿಲೇವಾರಿ ಮಾಡಿದರೆ, ರಾತ್ರಿ ವೇಳೆಗೆ ಮತ್ತಷ್ಟು ಕಸ ರಸ್ತೆಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುತ್ತದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಇದೇ ಗೋಳಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಹಬ್ಬ ಬಂತೆಂದರೆ ಮನೆಯಲ್ಲಿ ಅಳಿದುಳಿದ ಆಹಾರ, ಬಳಸಿದ ಬಾಳೆ ಎಲೆ, ಪ್ಲಾಸ್ಟಿಕ್ ಲೋಟ ಮತ್ತು ಎಲೆ, ಹಳೆಯ ಬಟ್ಟೆ ಬರೆ, ಹಾಸಿಗೆ ಹೀಗೆ ಗೃಹಬಳಕೆಯ ಎಲ್ಲ ತ್ಯಾಜ್ಯಗಳನ್ನೂ ಈ ರಸ್ತೆಯ ಅಂಚಿನಲ್ಲಿಯೇ ತಂದು ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ಅಶುಚಿತ್ವದ ಜತೆಗೆ ಸಾಂಕ್ರಾಮಿಕ ಕಾಯಿಲೆಗಳೂ ಹರಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಎಲ್ಲಿಂದಲೋ ಬರುವ ಜನರು ಕಸ ತಂದು ಇಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ನಗರಪಾಲಿಕೆಯವರು ಸ್ವಚ್ಛಗೊಳಿಸಿದರೂ ರಾತ್ರೋರಾತ್ರಿ ಕಸದ ರಾಶಿ ಈ ರಸ್ತೆಯಲ್ಲಿ ತುಂಬಿ ತುಳುಕುತ್ತದೆ. ಆದ್ದರಿಂದ ಈ ರಸ್ತೆಯಲ್ಲಿ ಕಸ ಹಾಕದ ರೀತಿ ಶಾಶ್ವತವಾದ ಕ್ರಮವನ್ನು ಕೈಗೊಳ್ಳಬೇಕು.
-ನಾಗೇಶ್, ಸ್ಥಳೀಯ ನಿವಾಸಿ.