Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ತೊಣಚಿಕೊಪ್ಪಲಿನಲ್ಲಿ ಯುಜಿಡಿ ಅವ್ಯವಸ್ಥೆ , ಜನತೆಗೆ ರೋಗದ ಭೀತಿ

ಪ್ರಶಾಂತ್ ಎಸ್.

ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಪಾಲಿಕೆ ಅಽಕಾರಿಗಳು ಪ್ರಚಾರಕ್ಕೆ ಸೀಮಿತವಾಯ್ತೆ ಸ್ವಚ್ಛ ಭಾರತ್ ಅಭಿಯಾನ

ಮೈಸೂರು: ಸಣ್ಣ ಪ್ರಮಾಣದಲ್ಲಿ ಮಳೆ ಬಂದರೆ ಸಾಕು ತೊಣಚಿಕೊಪ್ಪಲು (ಟಿ.ಕೆ.ಲೇಔಟ್) ಬಡಾವಣೆಯ ವಾರ್ಡ್ ನಂ ೪೩ ಮತ್ತು ೪೪ರ ನಿವಾಸಿ ಗಳು ಆತಂಕಕ್ಕೆ ಒಳಗಾಗುತ್ತಾರೆ. ಮ್ಯಾನ್‌ಹೋಲ್‌ಗಳಿಂದ ಉಕ್ಕಿ ಮನೆ ಯೊಳಗೆ ಹರಿದು ಬರುವ ಯುಜಿಡಿ ನೀರು, ಸೊಳ್ಳೆಗಳ ಕಾಟ, ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇದ್ದಾರೆ ಇಲ್ಲಿನ ನಿವಾಸಿಗಳು. ಇಡೀ ಬಡಾವಣೆಗೆ ಯುಜಿಡಿ ಸಮಸ್ಯೆ ಕಂಟಕವಾಗಿದೆ.

ಏನು ಸಮಸ್ಯೆ?: ಯುಜಿಡಿಯ ಕೊಳಚೆ ನೀರು ಒಳ ಚರಂಡಿ ಸೇರುವ ಬದಲು ತೆರೆದ ಚರಂಡಿಗೆ ಸೇರುತ್ತಿದೆ.ಅಲ್ಲದೆ ನಡು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ಚರಂಡಿ ಕಟ್ಟಿಕೊಳ್ಳುತ್ತಿದೆ. ಚರಂಡಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳ ಮುಂದೆ ನಿಲ್ಲುತ್ತದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು ರೋಗ ಹರಡುವ ಭೀತಿ ಎದುರಾಗಿದೆ. ಕಸ-ಕಡ್ಡಿ, ಪ್ಲಾಸ್ಟಿಕ್‌ಗಳಿಂದ ಕಟ್ಟಿಕೊಂಡಿರುವ ತೆರೆದ ಚರಂಡಿಗಳಿಂದ ಶಿಲ್ಟಿಂಗ್ ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹ: ಟಿ.ಕೆ. ಬಡಾವಣೆ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಅವೈಜ್ಞಾನಿಕವಾಗಿದ್ದು ಹೋಟೆಲ್‌ಗಳ ತ್ಯಾಜ್ಯ ಹಾಗೂ ಮನೆಗಳ ತ್ಯಾಜ್ಯಗಳೆಲ್ಲವೂ ಚರಂಡಿ ಸೇರುತ್ತಿವೆ. ಇದರಿಂದಾಗಿ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳೇ ಹೆಚ್ಚಿರುತ್ತವೆ. ವಾಟ್ಸಾಪ್ ಮೊರೆ ಹೋದ ನಿವಾಸಿಗಳು: ಸಮಸ್ಯೆಯ ಬಗ್ಗೆ ನಿವಾಸಿಗಳು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಮತ್ತೊಂದೆಡೆ ಅವರ ವಾಟ್ಸಾಪ್‌ಗೆ ಮಾಹಿತಿ ನೀಡಿದ್ದರೂ ಆಯುಕ್ತರಿಂದಾಗಲಿ, ಅಽಕರಿಗಳಿಂದಾಗಲಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಯುಜಿಡಿ ಸಮಸ್ಯೆ ಪರಿಹಾರಕ್ಕೆ ಮೀನಮೇಷ ಎಣಿಸುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಸಮಸ್ಯೆ ಪರಿಹರಿಸಲು ಅಧಿಕಾರಿಗಳ ನಿರ್ಲಕ್ಷ್ಯ: ಟಿ.ಕೆ.ಲೇಔಟ್‌ನ ೧೩ನೇ ಮೇನ್ ೪ನೇ ಹಂತದ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಅನೈರ್ಮಲ್ಯ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ನಗರಪಾಲಿಕೆ ಅಧಿಕಾರಿಗಳು ಸಾರ್ವಜನಿಕರ ಅಹವಾಲನ್ನು ಕಡೆಗಣಿಸಿ, ಸ್ವಚ್ಛ ಭಾರತ್ ಅಭಿಯಾನ ಪ್ರಚಾರದಲ್ಲಿ ಮುಳುಗಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

” ಟಿ.ಕೆ.ಲೇಔಟ್‌ನ ಮುಖ್ಯ ರಸ್ತೆಯಲ್ಲಿಯೇ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಬೇಕೆಂದು ಸಾಕಷ್ಟುಬಾರಿ ಮನವಿ ಮಾಡಿದ್ದರೂ ನಗರಪಾಲಿಕೆ ಇಂಜಿನಿಯರ್‌ಗಳು ಸ್ಪಂದಿಸಿಲ್ಲ. ಮನೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಕಸದ ರಾಶಿ ತುಂಬಿದ್ದು ಅದನ್ನು ತೆರವುಗೊಳಿಸುವ ಕೆಲಸಕ್ಕೂ ಮುಂದಾಗಿಲ್ಲ. ಇನ್ನಾದರೂ ನಗರಪಾಲಿಕೆ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಾರಾ ಕಾದು ನೋಡಬೇಕಿದೆ.”

-ಸತ್ಯನಾರಾಯಣ ರಾವ್, ಸ್ಥಳೀಯರು

” ಯುಜಿಡಿ ಸಮಸ್ಯೆ ಯಾವ ಭಾಗದಲ್ಲಿ ಹೆಚ್ಚಾಗಿದೆಯೋ ಅಲ್ಲಿಗೆ ಸಂಬಂಧಪಟ್ಟ ಇಂಜಿನಿಯರ್‌ಗಳು ಬಂದು ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಕಲ್ಪಿಸಬೇಕು. ಆದರೆ ಇಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ಕಂಡು ಕೊಂಡರೆ ಒಳ್ಳೆಯದು.”

-ಎಸ್.ರವಿ, ಸ್ಥಳೀಯರು

” ಯುಜಿಡಿ ಅವ್ಯವಸ್ಥೆಯಿಂದ ಇಡೀ ಬಡಾವಣೆ ಕೊಳೆಗೇರಿಯಂತಾಗಿದೆ. ಮ್ಯಾನ್ ಹೋಲ್‌ಗಳು ಉಕ್ಕಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಬಡಾವಣೆಯಲ್ಲಿ ದುರ್ನಾತ ಬೀರುತ್ತಿದೆ. ರಸ್ತೆಗಳಲ್ಲಿ ಓಡಾಡಲು ತೀವ್ರ ಸಮಸ್ಯೆಯಾಗಿದೆ.”

-ಶ್ರೀನಿವಾಸ್, ಸ್ಥಳೀಯರು

Tags:
error: Content is protected !!