Mysore
19
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಫ್ಲೈಓವರ್‌ ಎರಡು; ಅಭಿಪ್ರಾಯ ಹತ್ತಾರು

ಎಚ್.ಎಸ್.ದಿನೇಶ್ ಕುಮಾರ್

ಮೈಸೂರಿನಲ್ಲಿ ಮೇಲ್ಸೇತುವೆಗಳ ನಿರ್ಮಾಣಕ್ಕೆ  ಪ್ರಸ್ತಾವನೆ

ಲೋಕೋಪಯೋಗಿ ಇಲಾಖೆಯಿಂದ ಫ್ಲೈಓವರ್‌  ರೂಪರೇಷೆ ಸಿದ್ಧತೆ

ಮೈಸೂರಿನ ಪಾರಂಪರಿಕ ಸೌಂದರ್ಯಕೆ  ಧಕ್ಕೆ: ಆರೋಪ

ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಅನಿವಾರ್ಯ: ಸಮರ್ಥನೆ 

ಮೈಸೂರು: ಯಾವುದೇ ನಗರ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಸುಗಮ ಸಂಚಾರ ವ್ಯವಸ್ಥೆ ಪ್ರಮುಖ ವಾಗುತ್ತದೆ. ಇದಕ್ಕೆ ಪೂರಕವಾಗಿ ನಗರದ ೨ ಪ್ರಮುಖ ರಸ್ತೆಗಳಲ್ಲಿ ಫೈಓವರ್ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಏತನ್ಯಧ್ಯೆ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಈ ಯೋಜನೆಯನ್ನು ವಿರೋಧಿಸಿದರೆ, ಕೈಗಾರಿಕೆ ಸಂಘ ಸೇರಿದಂತೆ ಹಲವು ಸಂಘಟನೆಗಳು ಸ್ವಾಗತಿಸಿವೆ. ರಾಜಕಾರಣಿಗಳಲ್ಲಿ ಕೂಡ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವಾಹನ ಸಂಚಾರ ದಟ್ಟಣೆಯೂ ದಿನೇದಿನೇ ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆ ಹಾಗೂ ಹುಣಸೂರು ರಸ್ತೆಗಳಲ್ಲಿ ಬೆಂಗಳೂರು ಮಾದರಿ ಫ್ಲೈಓವರ್‌ ನಿರ್ಮಿಸಲು ಚಿಂತಿಸಲಾಗಿದೆ.

ನಗರದ ರೈಲ್ವೆ ನಿಲ್ದಾಣದಿಂದ ರಾಮಸ್ವಾಮಿ ಸರ್ಕಲ್, ಎಲೆತೋಟ ಮಾರ್ಗವಾಗಿ ನಂಜನಗೂಡು ರಸ್ತೆ ಜಂಕ್ಷನ್(ಜೆಎಸ್‌ಎಸ್ ಕಾಲೇಜು) ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ (ಮೆಟ್ರೊಪೋಲ್ ಸರ್ಕಲ್) ಸರ್ಕಲ್‌ನಿಂದ ಪಡುವಾರಹಳ್ಳಿ ಜಂಕ್ಷನ್, ಐಶ್ವರ್ಯ ಪೆಟ್ರೋಲ್ ಬಂಕ್ ಜಂಕ್ಷನ್ ಮಾರ್ಗವಾಗಿ ಹಿನಕಲ್‌ವರೆಗೆ ಹುಣಸೂರು ರಸ್ತೆಯಲ್ಲಿ ಫ್ಲೈಓವರ್‌  ನಿರ್ಮಾಣವಾಗಲಿದೆ.

ಈ ಸಂಬಂಧ ಸರ್ಕಾರದ ಸೂಚನೆ ಮೇರೆಗೆ ಇಲಾಖೆಯ ಇಂಜಿನಿಯರ್‌ಗಳು ಸರ್ವೇ ಕಾರ್ಯ ಕೂಡ ಆರಂಭಿಸಿದ್ದಾರೆ. ಫ್ಲೈಓವರ್‌  ಮಾರ್ಗದಲ್ಲಿ ಎಲ್ಲೆಲ್ಲಿ ಅಂಡರ್‌ಪಾಸ್, ಮೇಲ್ಸೇತುವೆಗೆ ಪ್ರವೇಶ ಮತ್ತು ನಿರ್ಗಮನ, ಎಲ್ಲೆಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಹಾಗೂ ಇನ್ನಿತರ ಸಂಪರ್ಕ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂಬುದರ ಬಗ್ಗೆ ಅಽಕಾರಿಗಳ ತಂಡ ಸಮೀಕ್ಷೆ ನಡೆಸುತ್ತಿದೆ.

ಮೇಲ್ಸೇತುವೆ ನಿರ್ಮಾಣವಾಗಿ, ವಾಹನಗಳ ಸಂಚಾರಕ್ಕೆ ಮುಕ್ತವಾದರೆ ಮಂಗಳೂರು, ಮಡಿಕೇರಿ, ಹಾಸನ, ಕೇರಳದ ಕಡೆಯಿಂದ ಬರುವ ವಾಹನಗಳು, ಯಾವುದೇ ತಡೆಯಿಲ್ಲದೆ ಮೈಸೂರು ತಲುಪ ಬಹುದು. ಹಾಗೆಯೇ ಸ್ಥಳೀಯ ವಾಹನಗಳೂ ಸುಗಮವಾಗಿ ಸಂಚರಿಸಬಹುದಾಗಿದೆ ಎಂಬುದು ಅಧಿಕಾರಿಗಳ ಸಮಜಾಯಿಷಿ. ಆದರೆ, ಈ ಯೋಜನೆ ಕಾರ್ಯಗತವಾದಲ್ಲಿ ನಗರದ ಪಾರಂಪರಿಕ ಕಟ್ಟಡಗಳಿಗೆ ತೊಂದರೆ ಎದುರಾಗುತ್ತದೆ. ನಗರದ ಸೌಂದರ್ಯಕ್ಕೆ ಧಕ್ಕೆ ಒದಗುತ್ತದೆ ಎಂಬುದು ಕೆಲ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರ ವಾದ.

ಆದರೆ, ಯೋಜನೆಯ ಕಾರ್ಯಗತಕ್ಕೆ ಎದುರಾಗ ಬಹುದಾದ ತಾಂತ್ರಿಕ ತೊಂದರೆಗಳು ಮತ್ತು ಇನ್ನಿತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಫ್ಲೈಓವರ್‌  ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ ತಯಾರಿಸಿ ಸ್ಥಳೀಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಂಜಿನಿಯರ್‌ಗಳು ಕಾರ್ಯೋನ್ಮುಖ ರಾಗಿದ್ದಾರೆ.

ಹಿಂದಿನ ನಗರಾಭಿವೃದ್ಧಿ ಪ್ರಾಧಿಕಾರವು ಹಿನಕಲ್ ಬಳಿ ಮೈಸೂರಿನ ಮೊದಲ ಫ್ಲೈಓವರ್‌ ‌ಅನ್ನು ನಿರ್ಮಿ ಸಿತ್ತು. ಈಗ ಉದ್ದೇಶಿತ ೨ ರಸ್ತೆಗಳಲ್ಲಿ ಫ್ಲೈಓವರ್‌  ಯೋಜನೆ ಕಾರ್ಯಗತವಾದರೆ, ಅವುಗಳ ಸಂಖ್ಯೆ ೩ಕ್ಕೆ ಹೆಚ್ಚಾಗಲಿದೆ. ಆದರೆ, ಪರ- ವಿರೋಧ ಚರ್ಚೆಗಳ ನಡುವೆ ಯೋಜನೆ ಏನಾಗಬಹುದು ಎಂಬುದು ಸಾರ್ವಜನಿಕಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

” ಮೈಸೂರಿನಲ್ಲಿ ವಾಹನ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಫ್ಲೈಓವರ್‌ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಮೈಸೂರಿನ ಪರಂಪರೆಗೆ ಯಾವುದೇ ಹಾನಿ ಆಗುವುದಿಲ್ಲ. ಅಂಬಾವಿಲಾಸ ಅರಮನೆಯ ಮೇಲೆ ಅಥವಾ ಅದರ ಸುತ್ತಮುತ್ತ ಯೋಜನೆ ಜಾರಿಗೊಳ್ಳುತ್ತಿಲ್ಲ.”

-ಎಂ.ಲಕ್ಷ್ಮಣ್, ಸಂಚಾಲಕ, ಎಸಿಐಸಿಎಂ

” ರಾಜ್ಯದಲ್ಲಿ ದಿನೇದಿನೇ ಕೈಗಾರಿಕೆಗಳು ಹೆಚ್ಚುತ್ತಿವೆ. ವ್ಯಾಪಾರ, ವ್ಯವಹಾರಗಳು ಮೈಸೂರಿನವರೆಗೂ ವಿಸ್ತರಿಸಿವೆ. ಈ ಎಲ್ಲಾ ಬೆಳವಣಿಗಳೊಂದಿಗೆ ಮೈಸೂರಿನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸಲು ನಗರಕ್ಕೆ ಫ್ಲೈಓವರ್‌ ಹಾಗೂ ಮೆಟ್ರೋ ವ್ಯವಸ್ಥೆಗಳ ಅವಶ್ಯವಿದೆ.”

-ಬಿ.ಲಿಂಗರಾಜು, ಅಧ್ಯಕ್ಷರು, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

” ಮೈಸೂರಿನಲ್ಲಿ ಅಗತ್ಯವಾದ ಸ್ಥಳಗಳಲ್ಲಿ ಫ್ಲೈಓವರ್‌  ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿ. ಆದರೆ, ನಗರದ ಮಧ್ಯಭಾಗದಲ್ಲಿ ಫೈಓವರ್‌ಗಳ ನಿರ್ಮಾಣವನ್ನು ಕೈಬಿಡಬೇಕು. ಗ್ರೇಟರ್ ಮೈಸೂರು ಯೋಜನೆ ಶ್ಲಾಘನೀಯವಾದರೂ, ನಗರ ಸೌಂದರ್ಯ ಮತ್ತು ಪಾರಂಪರಿಕ ಕಟ್ಟಡಗಳನ್ನು ಯಥಾಸ್ಥಿತಿ ಉಳಿಸಿಕೊಂಡು ಕೆಲಸ ಮಾಡಬೇಕು.”

-ಸಿ.ನಾರಾಯಣಗೌಡ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ, ಮೈಸೂರು

” ಮೈಸೂರು ಅಭಿವೃದ್ಧಿ ಹೊಂದಬೇಕು ಎಂಬುದು ನಿಜ. ಅದರ ಜೊತೆಗೆ ಸಾಂಸ್ಕ ತಿಕ ಗುರುತನ್ನು ಕಾಪಾಡಿಕೊಳ್ಳವುದೂ ಅಗತ್ಯ. ಮೈಸೂರಿನ ಪರಂಪರೆಯನ್ನು ಸಂರಕ್ಷಿಸುವುದು ಮುಖ್ಯ. ಈಗಾಗಲೇ ಮೈಸೂರಿನಲ್ಲಿ ಶೇ.೬೦ರಷ್ಟು ಹಸಿರು ನಾಶವಾಗಿದೆ. ಯೋಜನೆಗಾಗಿ ಮರಗಳನ್ನು ಕಡಿದಲ್ಲಿ ಮತ್ತಷ್ಟು ಹಸಿರು ವಲಯ ಹಾಳಾಗುತ್ತದೆ.”

-ಬಿ.ವಿ.ದಯಾನಂದ ಸಾಗರ್, ಸಂಚಾಲಕ, ಮೈಸೂರು ಗ್ರಾಹಕ ಪರಿಷತ್

” ಮೈಸೂರಿನ ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ರಸ್ತೆ ಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ -ಓವರ್‌ಗಳು ಮೈಸೂರಿನ ಪರಂಪರಾನುಗತ ಸೊಬಗಿಗೆ ಶಾಶ್ವತ ಹಾನಿ ಉಂಟು ಮಾಡುತ್ತವೆ. ಜನರ ವಿರೋಧದ ನಡುವೆಯೂ ಫ್ಲೈಓವರ್‌  ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಸಾರ್ವಜನಿಕರ ಸಹಕಾರದೊಂದಿಗೆ ಜನಪರ ಚಳವಳಿಯನ್ನು ಸಂಘಟಿಸಲಾಗುವುದು.”

-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಲೋಕಸಭಾ ಸದಸ್ಯ

Tags:
error: Content is protected !!