Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಇರುವ ಇಬ್ಬರು ಅಧಿಕಾರಿಗಳಿಗೆ ಅಧಿಕ ಕಾರ್ಯಭಾರ

ಮಂಜು ಕೋಟೆ

ತಾರಕ, ಹೆಬ್ಬಾಳ ಜಲಾಶಯಗಳ ನಾಲಾ ವ್ಯಾಪ್ತಿಯಲ್ಲಿ ೬ ಮಂದಿ ಅಧಿಕಾರಿಗಳಿಲ್ಲದೆ ಸಮಸ್ಯೆ

ಎಚ್.ಡಿ.ಕೋಟೆ: ತಾಲ್ಲೂಕಿನ ಜೀವನದಿ ತಾರಕ ಜಲಾಶಯ ವಾರದಲ್ಲಿ ಎರಡು ಬಾರಿ ತುಂಬಿ ರೈತರಲ್ಲಿ ಸಂತಸ ಮೂಡಿಸಿದ್ದರೂ ಜಲಾಶಯದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದ್ದ ೬ ಮಂದಿ ಅಧಿಕಾರಿಗಳೇ ಇಲ್ಲದಿರುವುದರಿಂದ ಇರುವ ಇಬ್ಬರು ಕಾರ್ಯದ ಒತ್ತಡದಿಂದ ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಕಬಿನಿ, ನುಗು, ತಾರಕ, ಹೆಬ್ಬಾಳ ಈ ನಾಲ್ಕು ಜಲಾಶಯಗಳಿದ್ದರೂತಾಲ್ಲೂಕಿನ ರೈತರಿಗೆ ತಾರಕ ಮತ್ತು ಹೆಬ್ಬಾಳದ ಜಲಾಶಯ ಮಾತ್ರ ಉಪಯುಕ್ತವಾಗಿವೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಈ ಎರಡೂ ಜಲಾಶಯಗಳು ಭರ್ತಿಯಾಗಿ ಭಾರಿ ಪ್ರಮಾಣದ ನೀರನ್ನು ಇದೇ ವಾರದಲ್ಲಿ ಎರಡು ಬಾರಿ ಹೊರಬಿಡಲಾಗಿತ್ತು.

ತಾರಕ ಮತ್ತು ಹೆಬ್ಬಾಳ ಜಲಾಶಯಗಳಿಂದ ರೈತರ ೧೫,೦೦೦ ಎಕರೆ ಪ್ರದೇಶದ ಜಮೀನುಗಳಿಗೆ ನೀರು ಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಈಗ ಇರುವ ಇಬ್ಬರು ಅಧಿಕಾರಿಗಳಾದ ಎಇಇ ನಟಶೇಖರ ಮೂರ್ತಿ, ಜೆಇ ಗೌಶಿಯ ಅವರು ಎರಡೂ ಜಲಾಶಯ ಗಳು ಮತ್ತು ನಾಲೆಗಳ ವ್ಯಾಪ್ತಿಯ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ಹರಸಾಹಸ ಪಡುವಂತಾಗಿದೆ.

ತಾರಕ ಜಲಾಶಯದ ಕಚೇರಿಯ ವ್ಯಾಪ್ತಿಯಲ್ಲಿ ೨ ಎಇ, ೪ ಜೆಇಗಳ ಹುದ್ದೆ ಖಾಲಿಯಾಗಿರು ವುದರಿಂದ ಹಾಲಿ ಇರುವ ಇಬ್ಬರು ಅಧಿಕಾರಿಗಳು ಜಲಾಶಯದ ಅಥವಾ ನಾಲೆಗಳ ಕೆಲಸವನ್ನು ಎಷ್ಟರಮಟ್ಟಿಗೆ ನಿಭಾಯಿ ಸಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ. ಕೇರಳದ ವಯನಾಡು ಮತ್ತು ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಲಾಶಯಕ್ಕೆ ಯಾವ ಕ್ಷಣದಲ್ಲಾದರೂ ಒಳಹರಿವಿನ ಪ್ರಮಾಣ ಹೆಚ್ಚಾಗಲಿದ್ದು, ಜಲಾಶಯದ ಹಿತದೃಷ್ಟಿಯಿಂದ ಈ ಅಧಿಕಾರಿಗಳು ಅಲ್ಲೇ ವಾಸ್ತವ್ಯ ಮಾಡಬೇಕಿದೆ. ಶೀಘ್ರದಲ್ಲೇ ನಾಲೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವುದರಿಂದ ಈ ಭಾಗದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಿ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹೋಗುವ ರೀತಿಯಲ್ಲಿ ಕೆಲಸವನ್ನು ಈ ಅಧಿಕಾರಿಗಳೇ ಮಾಡಬೇಕಿದೆ.

ಜಲಾಶಯ ಮತ್ತು ರೈತರ ಜಮೀನುಗಳ ನಾಲೆಗಳ ಕೆಲಸದ ನಿರ್ವಹಣೆಯನ್ನು ಒಟ್ಟಿಗೆ ನಿರ್ವಹಿಸಿದರೆ ಸಮರ್ಪಕವಾಗಿ ಕೆಲಸ ನಡೆಯದೆ ಯಾವುದಾದರೂ ಸಮಸ್ಯೆಗಳು ಎದುರಾಗಲಿದೆ ಎಂಬ ಆತಂಕ ಉಂಟಾಗಿದೆ. ಆದ್ದರಿಂದ ತಾರಕ ಮತ್ತು ಹೆಬ್ಬಾಳ ಜಲಾಶಯಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿ ರೈತರ ಮತ್ತು ಜಲಾಶಯದ ಹಿತ ಕಾಪಾಡಲು ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ.

” ಈ ಸಾಲಿನಲ್ಲಿ ಜುಲೈ ತಿಂಗಳಿನಲ್ಲೇ ಜಲಾಶಯ ಭರ್ತಿಯಾಗಿದ್ದು, ತಾರಕ ಬಲದಂಡೆ ಮತ್ತು ಎಡದಂಡೆ ನಾಲೆ ಹಾಗೂ ಹೆಬ್ಬಾಳ ಎಡದಂಡೆ ನಾಲೆ ವ್ಯಾಪ್ತಿಯ ಪೂರ್ಣ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಉದ್ದೇಶಿಸಲಾಗಿದೆ. ಕಚೇರಿಯಲ್ಲಿ ಇಂಜಿನಿಯರ್, ಸಿಬ್ಬಂದಿ ಕೊರತೆ ಇದ್ದರೂ ಇರುವ ಅಧಿಕಾರಿಗಳು ಶ್ರಮವಹಿಸಿ ರೈತರಸಹಕಾರದೊಂದಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಲಭ್ಯವಿರುವ ಅನುದಾನದಲ್ಲೇ ಅಗತ್ಯ ತುರ್ತು ಕಾಮಗಾರಿಗಳನ್ನು ಕೈಗೊಂಡು ನೀರು ಸರಬರಾಜು ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.”

-ನಟಶೇಖರಮೂರ್ತಿ, ಎಇಇ, ತಾರಕ ಮತ್ತು ಹೆಬ್ಬಾಳ ಜಲಾಶಯ, ಕೋಟೆ 

Tags:
error: Content is protected !!