Mysore
25
clear sky

Social Media

ಭಾನುವಾರ, 22 ಮಾರ್ಚ್ 2026
Light
Dark

ರಣರಂಗದಿಂದ ಪಲಾಯನಕ್ಕೆ ಟ್ರಂಪ್ ಸಿದ್ಧತೆ..!

ಅನಗತ್ಯವಾಗಿ ಮತ್ತು ಅಪ್ರಚೋದಿತವಾಗಿ ಇರಾನ್ ವಿರುದ್ಧ ಯುದ್ಧಕ್ಕಿಳಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಿತಿ ಈಗ ಮಹಾಭಾರತದ ಅಭಿಮನ್ಯುವಿನ ಪರಿಸ್ಥಿತಿಯಂತಾಗಿದೆ. ಇಸ್ರೇಲ್ ಬೀಸಿದ ಬಲೆಗೆ ಬಿದ್ದು ಇರಾನ್‌ನ ಚಕ್ರವ್ಯೂಹದೊಳಗೆ ನುಗ್ಗಿದ ಡೊನಾಲ್ಡ್ ಟ್ರಂಪ್ ಯುದ್ಧದಿಂದ ಹೊರಬರುವ ಮಾರ್ಗ ತೋಚದೇ ಈಗ ಒದ್ದಾಡುತ್ತಿದ್ದಾರೆ. ಅಭಿಮನ್ಯು ನ್ಯಾಯಯುತ ಕಾರಣಗಳಿಗಾಗಿ ಚಕ್ರವ್ಯೂಹ ಪ್ರವೇಶಿಸಿದ್ದರೆ ಡೊನಾಲ್ಡ್ ಟ್ರಂಪ್ ನ್ಯಾಯಸಮ್ಮತವಲ್ಲದ ಕಾರಣಗಳಿಗಾಗಿ ಯುದ್ಧಕ್ಕಿಳಿದು ಬೆಲೆ ತೆರಬೇಕಾಗಿದೆ. ಮುಖ ಉಳಿಸಿಕೊಳ್ಳುವುದಕ್ಕಾಗಿ ಈಗಲೂ ಟ್ರಂಪ್ ವೀರಾವೇಶದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಏನಾದರೊಂದು ಕಾರಣ/ ನೆಪ ಹುಡುಕಿ ಯುದ್ಧಕ್ಕೆ ಪೂರ್ಣ ವಿರಾಮ ನೀಡುವುದೇ ಅಮೆರಿಕದ ಸದ್ಯದ ಆದ್ಯತೆಯಾಗಿರುವುದು ಸ್ಪಷ್ಟವಾಗಿದೆ.

ಕೇವಲ ಮೂರ್ನಾಲ್ಕು ದಿನಗಳಲ್ಲಿ ಸುಲಭವಾಗಿ ಇರಾನ್‌ಅನ್ನು ಪರಾಭವಗೊಳಿಸಬಹುದು, ಆ ದೇಶದಲ್ಲಿ ಪ್ರಭುತ್ವ ಬದಲಾವಣೆ ಮಾಡಬಹುದು, ಅಮೆರಿಕದ ಕೈಗೊಂಬೆ ಸರ್ಕಾರವನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಬಹುದು ಮತ್ತು ಇರಾನ್‌ನ ತೈಲ ಸಂಪತ್ತಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂದು ಡೊನಾಲ್ಡ್ ಟ್ರಂಪ್ ನಂಬಿದ್ದರು ಅಥವಾ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಆ ರೀತಿ ನಂಬಿಸಿದ್ದರು. ಅದೇ ಕಾರಣಕ್ಕಾಗಿ ಆತ್ಮವಿಶ್ವಾಸ ಮತ್ತು ಅಹಂಕಾರದಿಂದ ತುಂಬಿ ತುಳುಕುತ್ತಿದ್ದ ಟ್ರಂಪ್, ಯುದ್ಧ ಆರಂಭವಾದ ಮೊದಲ ದಿನವೇ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲ ಅಲಿ ಖಮೇನಿ ಅವರನ್ನು ಹೊಡೆದುರುಳಿಸಿದರು. ಸುಪ್ರೀಂ ಲೀಡರ್ ಹತ್ಯೆಯ ನಂತರ ಇರಾನ್‌ನಲ್ಲಿ ಅರಾಜಕತೆ ಉಂಟಾಗುತ್ತದೆ, ಖಮೇನಿ ಅವರ ಇಸ್ಲಾಮಿಕ್ ರಿಪಬ್ಲಿಕ್‌ನ ದೌರ್ಜನ್ಯದ ವಿರುದ್ಧ ಜನ ದಂಗೆ ಏಳುತ್ತಾರೆ, ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ, ಆಗ ಅಲ್ಲಿ ಹೊಸ ಸರ್ಕಾರವನ್ನು ರಚನೆ ಮಾಡುವುದು ದೊಡ್ಡ ಮಾತೇನಲ್ಲ ಎಂಬ ಟ್ರಂಪ್ ಭ್ರಮೆ ಈಗ ನುಚ್ಚುನೂರಾಗಿದೆ. ಯುದ್ಧ ಆರಂಭವಾಗಿ ೨೩ ದಿನಗಳು ಕಳೆದರೂ ಈಗಲೂ ಇರಾನ್ ಹಿಡಿತಕ್ಕೆ ಸಿಗುತ್ತಿಲ್ಲ.

ಅಸಾಂಪ್ರದಾಯಿಕ ಯುದ್ಧ: 

ಅಮೆರಿಕ ಮತ್ತು ಇಸ್ರೇಲ್‌ಗಳ ಸೈನ್ಯ ಶಕ್ತಿಗೆ ಹೋಲಿಸಿದರೆ ಇರಾನ್‌ನ ಸೈನ್ಯ ಶಕ್ತಿ ಬಹಳ ದುರ್ಬಲ. ಆದರೆ, ಇರಾನ್ ಬುದ್ಧಿವಂತಿಕೆ, ತಂತ್ರಗಾರಿಕೆ ಹಾಗೂ ಅಸಾಂಪ್ರದಾಯಿಕ ಶೈಲಿಯ ಯುದ್ಧದ ಮೂಲಕ ಅಮೆರಿಕ-ಇಸ್ರೇಲ್‌ಗಳಿಗೆ ದಂಗುಬಡಿಸಿದೆ. ಇರಾನ್ ಈ ರೀತಿಯ ದಾಳಿ ಮಾಡಬಹುದು ಎಂದು ಯೋಚನೆಯನ್ನೂ ನಾನು ಮಾಡಿರಲಿಲ್ಲ ಎಂದು ಸ್ವತಃ ಟ್ರಂಪ್ ಒಪ್ಪಿಕೊಂಡಿದ್ದಾರೆ.

ಒಂದೆಡೆ ಕೊಲ್ಲಿಯಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ಮಾಡಿ ಅವುಗಳ ನಿದ್ರೆಗೆಡಿಸುವ ಮೂಲಕ ಅಮೆರಿಕದ ಮೇಲೆ ಇರಾನ್ ಒತ್ತಡ ಹೇರುತ್ತಿದೆ. ಯುಎಇ, ಸೌದಿ ಅರೇಬಿಯಾ, ಕತಾರ್, ಕುವೈತ್, ಬಹರೇನ್ ಮತ್ತು ಇರಾಕ್‌ಗಳಲ್ಲಿನ ಅಮೆರಿಕದ ಸೈನ್ಯ ನೆಲೆಗಳ ಮೇಲೆ ಘಾತಕ ದಾಳಿಯನ್ನು ಮಾಡಿದೆ. ‘ನಿಮ್ಮ ನೆಲದಿಂದ ನಮ್ಮ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಅವಕಾಶ ಕೊಟ್ಟರೆ ನಿಮ್ಮನ್ನು ಸಹ ಶತ್ರುಗಳೆಂದು ಪರಿಗಣಿಸುತ್ತೇವೆ’ ಎಂಬ ಸ್ಪಷ್ಟ ಸಂದೇಶವನ್ನು ಇರಾನ್ ಕೊಟ್ಟಿದೆ.

ಇನ್ನೊಂದೆಡೆ ಜಗತ್ತಿನ ಶೇ.೨೦ರಷ್ಟು ತೈಲ ಮತ್ತು ಶೇ.೩೦ಕ್ಕಿಂತ ಹೆಚ್ಚು ಗ್ಯಾಸ್ ಸಾಗಾಟದ ಮಾರ್ಗವಾಗಿರುವ ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಽಯನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ದುಸ್ವಪ್ನವಾಗಿ ಇರಾನ್ ಕಾಡುತ್ತಿದೆ. ಕೇವಲ ಚೀನಾ ಮತ್ತು ರಷ್ಯಾದ ಹಡಗುಗಳಿಗೆ ಮಾತ್ರ ಈ ಜಲಸಂಧಿಯ ಮಾರ್ಗವನ್ನು ಮುಕ್ತಗೊಳಿಸಿದೆ. ಹೇಗಾದರೂ ಸರಿ ಸ್ಟ್ರೇಟ್‌ಆಫ್ ಹಾರ್ಮುಜ್ ಮಾರ್ಗವನ್ನು ಎಲ್ಲ ರಾಷ್ಟ್ರಗಳಿಗೆ ಮುಕ್ತಗೊಳಿಸುವುದಕ್ಕಾಗಿ ಯೂರೋಪ್, ಚೀನಾ, ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಸೇರಿದಂತೆ ಕಂಡಕಂಡ ರಾಷ್ಟ್ರಗಳ ನೆರವನ್ನು ಅಮೆರಿಕ ಕೇಳುತ್ತಿದೆ. ಆದರೆ, ನೆರವಿಗೆ ಬರಲು ಯಾರೂ ಸಿದ್ಧರಿಲ್ಲ.

ಟ್ರಂಪ್ ಹಸಿ ಸುಳ್ಳು ಬಹಿರಂಗ:  ಇರಾನ್ ಪರಮಾಣು ಬಾಂಬ್‌ಗಳನ್ನು ಹೊಂದುವ ಪ್ರಯತ್ನ ಮಾಡುತ್ತಿದೆ, ಇರಾನ್‌ನಿಂದ ಅಮೆರಿಕಕ್ಕೂ ಅಪಾಯವಿದೆ, ನಾವೀಗ ಇರಾನ್ ಮೇಲೆ ದಾಳಿ ಮಾಡದಿದ್ದರೆ ನಮ್ಮ ಮೇಲೆಯೇ ಇರಾನ್ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಕಾರಣವನ್ನು ನೀಡಿ ಈ ಯುದ್ಧವನ್ನು ಟ್ರಂಪ್ ಆರಂಭಿಸಿದ್ದರು. ಆದರೆ, ಈ ಎಲ್ಲ ಕಾರಣಗಳೂ ಸುಳ್ಳು ಎಂಬುದು ಈಗ ಸಾಬೀತಾಗಿದೆ. ಇರಾನ್ ಪರಮಾಣು ಶಕ್ತ ರಾಷ್ಟ್ರವಾಗುವ ಯೋಜನೆಯನ್ನು ಮೊದಲೇ ಕೈಬಿಟ್ಟಿತ್ತು. ೨೦೨೫ರ ಜೂನ್ ತಿಂಗಳಲ್ಲಿ ಹನ್ನೆರಡು ದಿನಗಳ ಕಾಲ ನಡೆದ ಯುದ್ಧದಲ್ಲಿ ಪರಮಾಣು ಬಾಂಬ್ ತಯಾರಿಸುವ ಇರಾನ್‌ನ ಸಾಮರ್ಥ್ಯ ಸಂಪೂರ್ಣವಾಗಿ ನಾಶವಾಗಿತ್ತು. ತಕ್ಷಣ ಅಮೆರಿಕಕ್ಕೆ ಇರಾನ್‌ನಿಂದ ಯಾವುದೇ ಅಪಾಯವಿರಲಿಲ್ಲ ಎಂದು ಟ್ರಂಪ್ ಆಡಳಿತದಲ್ಲಿ ನ್ಯಾಷನಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥೆಯಾಗಿರುವ ತುಳಸಿ ಗಬಾರ್ಡ್ ಮತ್ತು ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಜೋ ಕೆಂಟ್ ಹೇಳಿದ್ದಾರೆ.

ಜೋ ಕೆಂಟ್ ಅವರಂತೂ ‘ಇರಾನ್ ಮೇಲೆ ಯುದ್ಧ ಮಾಡುವ ಡೊನಾಲ್ಡ್ ಟ್ರಂಪ್ ನಿರ್ಧಾರದ ಜೊತೆಗಿರಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ’ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೇ ಕೊಟ್ಟಿದ್ದಾರೆ. ‘ಈ ಯುದ್ಧ ಅಮೆರಿಕಕ್ಕೆ ಅಗತ್ಯವಿರಲಿಲ್ಲ. ಇಸ್ರೇಲ್ ಲಾಬಿಗೆ ಮಣಿದು ಅಮೆರಿಕ ಈ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದೆ. ಇಸ್ರೇಲ್‌ಗಾಗಿ ನಮ್ಮ ದೇಶದ ಸೈನಿಕರು ಏಕೆ ಬಲಿಯಾಗಬೇಕು’ ಎಂದೂ ಅವರು ಕೇಳಿದ್ದಾರೆ.

ಈ ಹೇಳಿಕೆಯ ನಂತರ ದೇಶದ ಸುರಕ್ಷತೆಯ ದೃಷ್ಟಿಯಿಂದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಹೊರಿಸಿ ಜೋ ಕೆಂಟ್ ವಿರುದ್ಧ ತನಿಖೆಗೆ ಟ್ರಂಪ್ ಆದೇಶಿಸಿದ್ದಾರೆ. ಅಮೆರಿಕದ ಪರವಾಗಿ ಹನ್ನೊಂದು ಯುದ್ಧಗಳಲ್ಲಿ ಭಾಗವಹಿಸಿರುವ ಜೋ ಕೆಂಟ್, ಡೊನಾಲ್ಡ್ ಟ್ರಂಪ್ ನೀತಿಗಳ ಪ್ರಬಲ ಸಮರ್ಥಕರಾಗಿದ್ದವರು. ಆದರೆ, ಈಗ ಇರಾನ್ ಯುದ್ಧ ವಿರೋಽಸಿದ ಏಕೈಕ ಕಾರಣಕ್ಕಾಗಿ ಅವರ ಮೇಲೆ ಗಂಭೀರ ಆರೋಪ ಹೊರಿಸಿ ತನಿಖೆಗೆ ಆದೇಶಿಸಲಾಗಿದೆ.

ಮಂಡಿಯೂರಿದ ಅಮೆರಿಕ: ಇರಾನ್ ಯುದ್ಧ ತಂತ್ರಗಳಿಂದ ಕಂಗೆಟ್ಟು ಅಸಹಾಯಕ ಸ್ಥಿತಿಗೆ ತಲುಪಿರುವ ಅಮೆರಿಕವೀಗ ಯುದ್ಧದ ತೀವ್ರತೆಯನ್ನು ಕಡಿಮೆ ಮಾಡುವುದಕ್ಕಾಗಿ ಇರಾನ್ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ರದ್ದು ಮಾಡುವುದಾಗಿಯೂ ಹೇಳಿದೆ. ಯಾವ ಇರಾನ್ ವಿರುದ್ಧ ಯುದ್ಧವನ್ನು ಮಾಡುತ್ತಿದೆಯೋ ಅದೇ ಇರಾನ್ ಮೇಲಿನ ನಿರ್ಬಂಧವನ್ನು ಮೂವತ್ತು ದಿನಗಳ ಕಾಲ ಸಡಿಲುಗೊಳಿಸಿ ಇರಾನ್‌ಗೆ ಆರ್ಥಿಕ ಲಾಭವನ್ನು ಮಾಡಿಕೊಡಬೇಕಾದ ಅಸಹಾಯಕ ಸ್ಥಿತಿಗೆ ಅಮೆರಿಕ ತಲುಪಿದೆ. ಕಳೆದ ೮-೧೦ ವರ್ಷಗಳಿಂದ ಇರಾನ್ ಮೇಲೆ ಹಲವು ನಿರ್ಬಂಧಗಳನ್ನು ಅಮೆರಿಕ ವಿಧಿಸಿತ್ತು. ಆದರೆ, ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, ಇರಾನ್ ಮೇಲಿನ ನಿರ್ಬಂಧವನ್ನು ಮೂವತ್ತು ದಿನಗಳ ಕಾಲ ರದ್ದು ಮಾಡುವುದಾಗಿ ಶುಕ್ರವಾರ ಹೇಳಿದ್ದಾರೆ. ‘ಸ್ಟ್ರೇಟ್ ಆಫ್ ಹಾರ್ಮುಜ್‌ನಲ್ಲಿ ಇರಾನ್‌ನ ೧೪೦ ಮಿಲಿಯನ್ ಬ್ಯಾರಲ್ ತೈಲವನ್ನು ಹೊತ್ತ ಹಡಗುಗಳು ನಿಂತಿವೆ. ಆ ತೈಲವನ್ನು ಈಗ ಉಳಿದ ರಾಷ್ಟ್ರಗಳು ಖರೀದಿ ಮಾಡಬಹುದು’ ಎಂದು ಸ್ಕಾಟ್ ಹೇಳಿರುವುದು ಈ ಯುದ್ಧದಲ್ಲಿ ಅಮೆರಿಕ ಹಿನ್ನಡೆ ಅನುಭವಿಸುತ್ತಿದೆ ಎಂಬುದರ ದ್ಯೋತಕವಾಗಿದೆ.

ಅಮೆರಿಕ – ಇಸ್ರೇಲ್ ಮಧ್ಯೆ ಬಿರುಕು? ಈ ನಡುವೆ ಅಮೆರಿಕ ಮತ್ತು ಇಸ್ರೇಲ್ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವೂ ಮೂಡಿದೆ ಎಂಬ ಮಾಹಿತಿಗಳಿವೆ. ಇರಾನ್‌ನ ಸೌತ್ ಪಾರ್ಸ್‌ನಲ್ಲಿರುವ ತೈಲ ಘಟಕದ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಕ್ಕೆ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ‘ಸೌತ್ ಪಾರ್ಸ್ ಮೇಲೆ ಇಸ್ರೇಲ್ ದಾಳಿ ನಡೆಸುವ ವಿಚಾರ ನಮಗೆ ತಿಳಿದಿರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ‘ನಾವು ಅಮೆರಿಕಕ್ಕೆ ಮೊದಲೇ ತಿಳಿಸಿ ಸೌತ್ ಪಾರ್ಸ್ ಮೇಲೆ ದಾಳಿ ನಡೆಸಿದ್ದೇವೆ’ ಎಂದು ಹೇಳುವ ಮೂಲಕ ಟ್ರಂಪ್‌ಗೆ ಇಸ್ರೇಲ್ ಮುಜುಗರ ಉಂಟು ಮಾಡಿದೆ.

ಕೇವಲ ಮೂರ್ನಾಲ್ಕು ದಿನಗಳಲ್ಲಿ ಸುಲಭವಾಗಿ ಇರಾನ್‌ಅನ್ನು ಪರಾಭವಗೊಳಿಸಬಹುದು, ಆ ದೇಶದಲ್ಲಿ ಪ್ರಭುತ್ವ ಬದಲಾವಣೆ ಮಾಡಬಹುದು, ಅಮೆರಿಕದ ಕೈಗೊಂಬೆ ಸರ್ಕಾರವನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಬಹುದು ಮತ್ತು ಇರಾನ್‌ನ ತೈಲ ಸಂಪತ್ತಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂದು ಡೊನಾಲ್ಡ್ ಟ್ರಂಪ್ ನಂಬಿದ್ದರು ಅಥವಾ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಆ ರೀತಿ ನಂಬಿಸಿದ್ದರು.

” ಅಮೆರಿಕ ಮತ್ತು ಇಸ್ರೇಲ್‌ಗಳ ಸೈನ್ಯ ಶಕ್ತಿಗೆ ಹೋಲಿಸಿದರೆ ಇರಾನ್‌ನ ಸೈನ್ಯ ಶಕ್ತಿ ಬಹಳ ದುರ್ಬಲ. ಆದರೆ, ಇರಾನ್ ಬುದ್ಧಿವಂತಿಕೆ, ತಂತ್ರಗಾರಿಕೆ ಹಾಗೂ ಅಸಾಂಪ್ರದಾಯಿಕ ಶೈಲಿಯ ಯುದ್ಧದ ಮೂಲಕ ಅಮೆರಿಕ-ಇಸ್ರೇಲ್‌ಗಳಿಗೆ ದಂಗುಬಡಿಸಿದೆ. ಇರಾನ್ ಈ ರೀತಿಯ ದಾಳಿ ಮಾಡಬಹುದು ಎಂದು ಯೋಚನೆಯನ್ನೂ ನಾನು ಮಾಡಿರಲಿಲ್ಲ ಎಂದು ಸ್ವತಃ ಟ್ರಂಪ್ ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ ಜಗತ್ತಿನ ಶೇ.೨೦ರಷ್ಟು ತೈಲ ಮತ್ತು ಶೇ.೩೦ಕ್ಕಿಂತ ಹೆಚ್ಚು ಗ್ಯಾಸ್ ಸಾಗಾಟದ ಮಾರ್ಗವಾಗಿರುವ ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಇರಾನ್ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ದುಸ್ವಪ್ನವಾಗಿ ಕಾಡುತ್ತಿದೆ.”

 

 

Tags:
error: Content is protected !!