Mysore
16
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ರೈಲ್ವೆ ಕಂಬಿಗಳಿಗೆ ತಂತಿ ಜಾಲರಿ ಅಳವಡಿಕೆ ಪ್ರಯೋಗ ಯಶಸ್ವಿ

ಮಂಜು ಕೋಟೆ

ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ; ರೈತರು, ಸಾರ್ವಜನಿಕರು ನಿರಾಳ 

ಎಚ್.ಡಿ.ಕೋಟೆ: ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ತಡೆಗಟ್ಟಲು ನಿರ್ಮಿಸಲಾಗಿದ್ದ ರೈಲ್ವೆ ಕಂಬಿಗಳಿಗೆ ದಾನಿಗಳ ಮೂಲಕ ಅರಣ್ಯ ಅಧಿಕಾರಿಗಳು ತಂತಿ ಜಾಲರಿಗಳನ್ನು ಅಳವಡಿಸಿ ಹೊಸ ಪ್ರಯೋಗ ಮಾಡಿರುವುದು ಯಶಸ್ವಿಯಾಗಿದ್ದು, ರೈತರು ಮತ್ತು ಸಾರ್ವಜನಿಕರು ನಿರಾಳವಾಗುವಂತಾಗಿದೆ.

ತಾಲ್ಲೂಕಿನ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಮತ್ತು ಚಿರತೆಯಂತಹ ವನ್ಯ ಪ್ರಾಣಿಗಳು ರೈತರು, ಸಾರ್ವಜನಿಕರು, ದನ-ಕರುಗಳ ಮೇಲೆ ದಾಳಿ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ, ತಾತ್ಕಾಲಿಕವಾಗಿ ಸಫಾರಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಿತ್ತು.

ನಾಗರಹೊಳೆ ಅಭಯಾರಣ್ಯದ ದಮನಕಟ್ಟೆ ಅರಣ್ಯದ ವಲಯ ಅರಣ್ಯ ಅಧಿಕಾರಿ ಸಿದ್ದರಾಜು ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ನೇಹಿತರ ಜೊತೆ ಅನೇಕ ಬಾರಿ ಸಭೆ ನಡೆಸಿ, ಚಾಕ್ಲೇಟ್ ಫೌಂಡೇಶನ್ ಶ್ರೀಧರ್ ಎಂಬವರ ಮೂಲಕ ತಾರಕ ಜಲಾಶಯದ ಹಿನ್ನೀರಿನಿಂದ ದಮ್ಮನಕಟ್ಟೆಯ ಗೇಟ್ ವರೆಗೆ ಮೂರೂವರೆ ಕಿ.ಮೀ. ವಿಸ್ತೀರ್ಣದಲ್ಲಿ ರೈಲ್ವೆ ಕಂಬಿಗಳಿಗೆ ಕಬ್ಬಿಣದ ಜಾಲರಿ ಮೆಶ್ ಅನ್ನು ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ್ದಾರೆ. ಇದರಿಂದಾಗಿ ಈ ಭಾಗದ ಕಾಡಂಚಿನ ಗ್ರಾಮಗಳಾದ ತಾರಕ, ಪಿಂಜಳ್ಳಿ, ದಮ್ಮನಕಟ್ಟೆ ಹಾಡಿ, ಅಂಕನಾಥಪುರ ಹಾಡಿ, ಹುಣಸೆಕುಪ್ಪೆ, ಸುತ್ತಿಗೆ ಹುಂಡಿ, ಅಂತರಸಂತೆ ಮತ್ತಿತರ ಗ್ರಾಮಗಳ ವ್ಯಾಪ್ತಿಯ ಜಮೀನುಗಳು ಮತ್ತು ಗ್ರಾಮಗಳಿಗೆ ಬರುತ್ತಿದ್ದ ಹುಲಿ, ಜಿಂಕೆ, ಕಡವೆ, ಚಿರತೆಗಳ ಹಾವಳಿ ನಿಯಂತ್ರಣಗೊಂಡು ಜನರು, ರೈತರು ನೆಮ್ಮದಿಯಿಂದ ಇರುವಂತಾಗಿದೆ.

ಅನೇಕ ವರ್ಷಗಳಿಂದ ವನ್ಯಪ್ರಾಣಿಗಳ ಹಾವಳಿ ಮತ್ತು ದಾಳಿಯಿಂದ ಬೆಳೆಗಳ ನಷ್ಟವಾಗಿ, ಸಾವು ನೋವುಗಳು ನಡೆದು ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವೆ ಸಂಘರ್ಷ ಏರ್ಪಡುವ ಜೊತೆಗೆ ಇಲಾಖೆಯಿಂದ ಪರಿಹಾರ ಪಡೆಯಲು ಕಚೇರಿಗೆ ಅಲೆದಾಡಬೇಕಿತ್ತು. ಆದರೆ ಅರಣ್ಯ ಅಧಿಕಾರಿ ಸಿದ್ದರಾಜು ಅವರು ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿ ಸರ್ಕಾರ ನೀಡಬೇಕಾದ ಪರಿಹಾರದ ಹಣ ಉಳಿತಾಯವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

” ತಂತಿ ಬೇಲಿ ಮೆಶ್‌ಅನ್ನು ಅಳವಡಿಸಿದ ನಂತರ ನಮ್ಮ ಗ್ರಾಮಗಳಿಗೆ ಮತ್ತು ಜಮೀನುಗಳಿಗೆ ಬರುತ್ತಿದ್ದ ಹುಲಿ, ಚಿರತೆ, ಜಿಂಕೆ, ಕಡವೆ ಇನ್ನಿತರ ಪ್ರಾಣಿಗಳ ಹಾವಳಿ ಇಲ್ಲದಂತಾಗಿದೆ. ಇದರಿಂದ ನಿರ್ಭೀತಿಯಿಂದ ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದೇವೆ. ರೈತರು ಮತ್ತು ಅರಣ್ಯ, ವನ್ಯ ಪ್ರಾಣಿಗಳ ಬಗ್ಗೆ ಸಿದ್ದರಾಜು ಅವರ ರೀತಿ ಇತರ ಅಧಿಕಾರಿಗಳೂ ಕಾಳಜಿ ವಹಿಸಬೇಕಿದೆ.”

ಮಂಜಯ್ಯ, ರೈತ

” ರೈಲ್ವೆ ಕಂಬಿ ತಡೆಗೋಡೆ ನಿರ್ಮಾಣದಿಂದ ಕಾಡಿನಿಂದ ರೈತರ ಜಮೀನುಗಳಿಗೆ ಮತ್ತು ಗ್ರಾಮಗಳಿಗೆ ಕಾಡಾನೆಗಳು ಬರುವುದನ್ನು ತಡೆಗಟ್ಟಬಹುದು. ಆದರೆ ಹುಲಿ, ಚಿರತೆ, ಜಿಂಕೆ, ಕಡವೆಗಳನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಕ್ಷೇತ್ರದ ಬಂಡೀಪುರ ವ್ಯಾಪ್ತಿಯಲ್ಲಿ ಹುಲಿ ದಾಳಿ ನಡೆದು ಅನೇಕ ರೈತರು ಬಲಿಯಾಗಿದ್ದರಿಂದ ನಮ್ಮ ಭಾಗದಲ್ಲಿ ಈ ಸಂಘರ್ಷವನ್ನು ತಡೆಗಟ್ಟಲು ದಾನಿಗಳ ಮುಖಾಂತರ ಲಕ್ಷಾಂತರ ರೂ. ವೆಚ್ಚದಲ್ಲಿ ರೈಲ್ವೆ ಕಂಬಿ ತಡೆಗೋಡೆಗೆ ಕಬ್ಬಿಣದ ಮೆಶ್ ಅನ್ನು ಅಳವಡಿಸಿರುವುದರಿಂದ ಈ ಭಾಗದಲ್ಲಿ ಜಮೀನುಗಳಿಗೆ ಮತ್ತು ನಾಡಿಗೆ ವನ್ಯಪ್ರಾಣಿಗಳು ಹಾವಳಿ ನಿಯಂತ್ರಣವಾಗಿದೆ. ನನ್ನ ವ್ಯಾಪ್ತಿಯ ಇನ್ನೂ ೮ ಕಿ.ಮೀ. ಅನ್ನು ದಾನಿಗಳು ಅಥವಾ ಶಾಸಕರು, ಸಚಿವರು, ಅಧಿಕಾರಿಗಳ ಸಹಕಾರದಿಂದ ಕಬ್ಬಿಣದ ತಂತಿ ಬೇಲಿಗೆ ಮೆಶ್ ಅಳವಡಿಸಲಾಗುವುದು.”

ಸಿದ್ದರಾಜು, ವಲಯ ಅರಣ್ಯ ಅಧಿಕಾರಿ, ದಮ್ಮನಕಟ್ಟೆ 

 

 

 

Tags:
error: Content is protected !!