ಚಿರಂಜೀವಿ ಸಿ.ಹುಲ್ಲಹಳ್ಳಿ
ಸಂಚಲನ ಮೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಪ್ರತ್ಯೇಕ, ಸಮಗ್ರ ಟೌನ್‌ಶಿಪ್ ಅಭಿವೃದ್ಧಿ ಯೋಜನೆ ಆಗ್ರಹಕ್ಕೆ ಪುಷ್ಟಿ
ಮೈಸೂರು: ಪಾರಂಪರಿಕ ನಗರಿಯ ಗರಿಮೆ ಹೊಂದಿರುವ ಮೈಸೂರಿನಲ್ಲಿ ಅತ್ಯಂತ ಜನಜನಿತ ಬಡಾವಣೆಯಾಗಿ ೧೫೦ ವರ್ಷಗಳ ಇತಿಹಾಸ ಹೊಂದಿರುವ ಅಶೋಕಪುರಂಗೆ ಪ್ರತ್ಯೇಕ ಹಾಗೂ ಸಮಗ್ರ ಟೌನ್‌ಶಿಪ್ ಅಭಿವೃದ್ಧಿಯ ಯೋಜನೆಯ ಆಗ್ರಹಕ್ಕೆ ಮರು ಜೀವ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ‘ದಲಿತರೇ ಹೆಚ್ಚು ವಾಸವಿರುವ ಅಶೋಕಪುರಂ ಬಡಾವಣೆಗೆ ನಗರದ ಹೊರವಲಯದಲ್ಲಿ ಅಥವಾ ಒಳಗೆ ೨೦ ಎಕರೆ ಪ್ರದೇಶ ಗುರುತಿಸಿ ಪ್ರತ್ಯೇಕ ಟೌನ್‌ಶಿಪ್ ನಿರ್ಮಿಸುವ ಸಂಬಂಧ ತಹಸಿಲ್ದಾರ್ ಮತ್ತು ಎಂಡಿಎ ಆಯುಕ್ತರ ಜೊತೆ ಚರ್ಚಿಸಲಾಗಿದೆ’ ಎಂದು ಹೇಳುವ ಮೂಲಕ ಯೋಜನೆ ವಿಚಾರ ಮುನ್ನಲೆಗೆ ಬರುವಂತಾಗಿದ್ದು, ಹಲವಾರು ವರ್ಷಗಳಿಂದ ಎದ್ದಿದ್ದ ಕೂಗಿಗೆ ಪುಷ್ಠಿ ನೀಡಿದೆ. ಮಹಾರಾಜರ ಕಾಲದಲ್ಲಿ ವಿಸ್ತರ ವಾಗಿ ನವೀನ ಮಾದರಿಯಲ್ಲಿ ನಿರ್ಮಾಣವಾದ ಅಶೋಕಪುರಂ ದಿನ ಕಳೆದಂತೆ ಜನಪ್ರಿಯತೆಗಳಿಸುತ್ತಾ ಹೊಯಿತು. ವರ್ಷಗಳು ಉರುಳಿದಂತೆ ಜನಸಂಖ್ಯೆ ಹೆಚ್ಚಾಯಿತು. ಇದೀಗ ೧೫೦ ವರ್ಷಗಳ ಹಿನ್ನೆಲೆ ಹೊಂದಿರುವ ಅಶೋಕಪುರಂನಲ್ಲಿ ೫ ಸಾವಿರ ಮನೆಗಳಿವೆ. ೨೫ ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಆದರೆ, ಬಡಾವಣೆ ವಿಸ್ತರಣೆಯಾಗದೆ ಇಕ್ಕಟ್ಟಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುವಂತಾಗಿದೆ. ಡಾ.ರಾಮಯ್ಯ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ವಟ್ಟಪ್ಪ ರಸ್ತೆ, ಸಿದ್ಧಾರ್ಥ ಪ್ರೌಢಶಾಲೆ ರಸ್ತೆ ಪ್ರಮುಖ ರಸ್ತೆಗಳು, ೧೪ ಅಡ್ಡ ರಸ್ತೆಗಳಿವೆ. ಒಂದೊಂದು ಅಡ್ಡ ರಸ್ತೆಯು ೭೫೦ ಮೀಟರ್‌ಗಳಷ್ಟು ಉದ್ದ ಇದೆ.
ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಬಡಾವಣೆಯಾದ್ದರಿಂದ ಉತ್ತಮ ವ್ಯವಸ್ಥೆಯಿರುವ ಅಚ್ಚುಕಟ್ಟಾದ ಬಡಾವಣೆಯಾಗಿದೆ. ಆದರೆ, ಜನಸಂಖ್ಯೆ ಜಾಸ್ತಿಯಾಗಿ ಒತ್ತಡ ಹೆಚ್ಚಾಗಿದೆ. ಶೇ.೪೦ರಷ್ಟು ಕುಟುಂಬಗಳು ಇಕ್ಕಟ್ಟನಲ್ಲಿ ಬದುಕುವಂತಾಗಿದೆ.
ನಗರದ ಸಿಲ್ಕ್ ಫ್ಯಾಕ್ಟರಿ ಎದುರಿನಲ್ಲಿ ಸರ್ಕಾ ರದಿಂದ ನಿರ್ಮಾಣವಾಗಿರುವ ಗುಂಪು ಮನೆಗಳು, ಅದರ ಹಿಂಭಾಗದ ವಾಸಿಗಳು, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯ ಮೇಲ್ಭಾಗದಲ್ಲಿ ಮನೆಗಳನ್ನು ಕಿರಿದಾಗಿ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಬಡಾವಣೆಯ ಜನಸಂಖ್ಯೆ ಹೆಚ್ಚುತ್ತಿರುವುದು. ನಗರಾಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆ ಇದ್ದೂ ನಗರದ ಒಳಗಿರುವ ಬಡಾವಣೆಗಳೇ ಅಭಿವೃದ್ಧಿಯಾಗದಿದ್ದರೆ ಹೇಗೆ ಎನ್ನುತ್ತಾರೆ ಮಾಜಿ ಮಹಾಪೌರ ಪುರುಷೋತ್ತಮ್.
ಫುಟ್ ರೂಟ್, ಯುಜಿಡಿಗೆ ಮೀಸಲಿಟ್ಟ ಜಾಗ ಒತ್ತುವರಿ: ಮಹಾರಾಜರ ಕಾಲದಲ್ಲಿ ಬಡಾವಣೆ ನಿರ್ಮಾಣವಾದ ಹಿನ್ನೆಲೆಯಲ್ಲಿ ವಿಶಾಲ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಈಗ ಅವು ಕಿರಿದಾಗಿವೆ. ಇದರ ಜೊತೆಗೆ ಓಡಾಡಲು ಇದ್ದ ಫುಟ್‌ರೂಟ್ ಜಾಗವೂ ಇಲ್ಲವಾಗಿದೆ. ಆದರೆ, ಯುಜಿಡಿ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
” ನಮ್ಮ ಬಡಾವಣೆಗೆ ಬೇರೆ ಯಾವುದೇ ನಿವೇಶನ ಇಲ್ಲ. ದಶಕಗಳಿಂದಲೂ ಇಲ್ಲಿನ ಜನರು ಬಹಳ ಇಕ್ಕಟ್ಟಿನಿಂದ ಬದುಕು ನಡೆಸುವಂತಾಗಿದೆ. ಈಗ ಇಲ್ಲಿನ ಜನರು ಪ್ರತ್ಯೇಕವಾಗಿ, ಆರೋಗ್ಯವಾಗಿ ಬದುಕಲು ನಗರದ ಒಳಭಾಗದಲ್ಲಿ ೨೦-೨೫ ಎಕರೆ ಜಾಗ ಗುರುತಿಸಿ ನಿವೇಶನವನ್ನು ಮೀಸಲಿಡುವ ಅವಶ್ಯಕತೆ ಇದೆ. ಕೂಡಲೇ ನಿವೇಶನ ಗುರುತು ಮಾಡಿ ಯೋಜನೆ ಜಾರಿಗೆ ತರಬೇಕು.”
– ಪುರುಷೋತ್ತಮ್, ಮಾಜಿ ಮಹಾಪೌರ.
” ಅಶೋಕಪುರಂ ಜನರು ಶ್ರಮಜೀವಿಗಳು ಅಂದಿನ ಜನಸಂಖ್ಯೆಗೆ ತಕ್ಕಂತೆ ಮನೆಗಳು ಇದ್ದವು. ಈಗ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಮನೆಗಳಲ್ಲಿ ವಾಸ ಮಾಡಲು ತೊಂದರೆಯಾಗಿದೆ. ಆದ್ದರಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಟೌನ್‌ಷಿಪ್ ನಿರ್ಮಾಣ ಮಾಡಿ ದಲಿತ ಸಮುದಾಯಕ್ಕೆ ಅನುಕೂಲ ಮಾಡಬೇಕು.”
– ನಾರಾಯಣ, ಮಾಜಿ ಮಹಾಪೌರ.
” ಅಶೋಕಪುರಂ ನಿರ್ಮಾಣವಾದ ಸಂದರ್ಭದಲ್ಲಿ ಒಂದು ಮನೆಯಲ್ಲಿ ಐದಾರು ಜನ ಇದ್ದರು. ಈಗ ಅವರಿಗೆ ಮಕ್ಕಳು, ಮೊಕ್ಕಳು, ಮರಿಮಕ್ಕಳಾಗಿವೆ. ಜನಸಂಖ್ಯೆ ಹೆಚ್ಚಾಗಿ ಒತ್ತಡ ಹೆಚ್ಚಾಗಿದ್ದು, ಪ್ರತಿ ಮನೆಯು ಕಿಷ್ಕಿಂದೆ ಆಗಿದೆ. ಹೀಗಾಗಿ ಶೀಘ್ರದಲ್ಲಿ ಸರ್ಕಾರ ಟೌನ್‌ಷಿಪ್ ನಿರ್ಮಾಣ ಮಾಡಬೇಕು. ಇಲ್ಲಿನ ಜನರ ಬಹಳಷ್ಟು ವರ್ಷಗಳ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುನ್ನಲೆ ತಂದಿರುವುದಕ್ಕೆ ಅಭಿನಂದನೆ ತಿಳಿಸುತ್ತೇನೆ.”
– ಜೆ.ರವಿ, ದಲಿತ ಮುಖಂಡ.
” ೩೩೫೫ ಇದ್ದ ಜಾಗ ಈಗ ಅದು ನಾಲ್ಕು ಭಾಗವಾಗಿವೆ. ದಿನೇ ದಿನೇ ಜನಸಂಖ್ಯೆ ಹೆಚ್ಚಾಗಿ ಒತ್ತಡ ಹೆಚ್ಚಾಗುತ್ತಿದೆ. ಸಣ್ಣ-ಪುಟ್ಟ ಮನೆಗಳಲ್ಲಿ ಎರಡ್ಮೂರು ಕುಟುಂಬಗಳು ವಾಸ ಮಾಡುತ್ತಿವೆ. ಇದನ್ನು ಅರಿತು ಸಚಿವರು ಟೌನ್‌ಷಿಪ್ ನಿರ್ಮಾಣ ವಿಚಾರ ಹೇಳಿರುವುದು ಸರಿಯಾಗಿದೆ. ಇದು ಹಲವು ವರ್ಷಗಳ ಬೇಡಿಕೆಯಾಗಿದೆ. ಮೂಲ ಸೌಕರ್ಯ ಹೊಂದಿರುವ ಜಾಗದಲ್ಲಿ ನಿವೇಶನ ಗುರುತಿಸುವ ಕೆಲಸವಾಗಲಿ.”
– ಗಿರೀಶ್, ಅಶೋಕಪುರಂ ನಿವಾಸಿ





