Mysore
28
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬಿಸಿಲಿಗೆ ನಲುಗಿದ ಪ್ರವಾಸಿಗರು

ಮಹೇಂದ್ರ ಹಸಗೂಲಿ

ಗಂಟೆಗಟ್ಟಲೆ ಬಿಸಿಲು,ಮಳೆಯಲ್ಲಿ ಕಾದುನಿಲ್ಲಬೇಕಾದ ಪರಿಸ್ಥಿತಿ, ಪ್ರಯಾಣಿಕರು ಹೈರಾಣ, ಸರತಿ ಸಾಲಿನ ಶೆಡ್ ನಿರ್ಮಿಸಲು ಒತ್ತಾಯ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪ್ರತಿನಿತ್ಯ ಮತ್ತು ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು, ಪ್ರವಾಸಿಗರು ಕಿ.ಮೀ. ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕೆಎಸ್‌ಆರ್‌ಟಿಸಿ ಬಸ್ ಹಾಗೂ ಜೀಪ್ ಮೂಲಕ ಟಿಕೆಟ್ ಪಡೆದು ತೆರಳುತ್ತಾರೆ. ಆದರೆ, ಮುಜರಾಯಿ ಇಲಾಖೆ, ಅರಣ್ಯ ಇಲಾಖೆಗಳು ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ ಕಲ್ಪಿಸದೆ ಬರೀ ಆದಾಯ ಮಾತ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಭಕ್ತರು, ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ಖರೀದಿಸಿ ಮತ್ತು ಅರಣ್ಯ ಇಲಾಖೆಯ ಜೀಪಿನಲ್ಲಿ ೧ ಕುಟುಂಬಕ್ಕೆ ೮೦೦ ರೂ. ಪಾವತಿಸಿ ಹೋಗಬೇಕಿದೆ. ಆದರೆ, ಪ್ರವಾಸಿಗರಿಗೆ ಮಾತ್ರ ಯಾವುದೇ ಸೌಕರ್ಯ ಕಲ್ಪಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಅರಣ್ಯ ಇಲಾಖೆಯವರು ಗ್ರೀನ್ ಟ್ಯಾಕ್ಸ್ ಎಂದು ಬಂಡೀಪುರ ರಸ್ತೆಯಲ್ಲಿ ವಾಹನ ಸವಾರರ ಬಳಿ ಹಣ ವಸೂಲಿ ಮಾಡುತ್ತಾರೆ. ಆದರೆ, ಬೆಟ್ಟದ ತಪ್ಪಲಿನಲ್ಲಿ ಬಿಸಿಲು, ಮಳೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಪ್ರವಾಸಿಗರು ಹೈರಾಣಾಗುತ್ತಿದ್ದಾರೆ. ಆದ್ದರಿಂದ ಭಕ್ತರು ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಸರತಿ ಸಾಲಿನಲ್ಲಿ ನೆರಳಿನ ಶೆಡ್ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

” ಬೆಟ್ಟದ ತಪ್ಪಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಜನರಿಗೆ ಬಿಸಿಲು, ಮಳೆಯಿಂದ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ದ್ದೇನೆ. ಮುಜರಾಯಿ ಇಲಾಖೆಗೆ ದೇವಸ್ಥಾನ ಒಳಪಡುವುದರಿಂದ ಯಾವುದಾದರೂ ಅನುದಾನದಲ್ಲಿ ಎರಡೂ ಇಲಾಖೆಗಳ ಸಹಯೋಗದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ.”

ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ

” ನಮ್ಮ ಇಲಾಖೆಯಲ್ಲಿ ಅನುದಾನವಿಲ್ಲ. ಪಿಡಬ್ಲ್ಯುಡಿ ರಸ್ತೆಯಾಗಿರುವುದರಿಂದ ಮತ್ತು ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಅವರು ನೆರಳಿನ ವ್ಯವಸ್ಥೆ ಕಲ್ಪಿಸಬಹುದು. ಈ ಬಗ್ಗೆ ಹಿಮವದ್ ಗೊಪಾಲಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರ ಬಳಿ ಚರ್ಚಿಸಲಾಗುವುದು.”

-ನವೀನ್ ಕುಮಾರ್, ಎಸಿಎಫ್,

” ಬಂಡೀಪುರ ಬೆಟ್ಟದ ತಪ್ಪಲಿನಲ್ಲಿ ಗೇಟ್ ಹಾಕಿರುವುದು ಅರಣ್ಯ ಇಲಾಖೆ. ತಪ್ಪಲಿನಲ್ಲಿ ಪಾರ್ಕಿಂಗ್, ಜೀಪ್ ಮೂಲಕ ಪ್ರವಾಸಿಗರಿಂದ ಆದಾಯ ಪಡೆಯುತ್ತಿರುವುದು ಅರಣ್ಯ ಇಲಾಖೆ. ತಪ್ಪಲಿನಲ್ಲಿ ಮುಜರಾಯಿ ಆಸ್ತಿ ಇಲ್ಲ. ಆದ್ದರಿಂದ ಅರಣ್ಯ ಇಲಾಖೆಯೇ ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ ಮಾಡಬೇಕು.”

 -ತನ್ಮಯ್, ತಹಸಿಲ್ದಾರ್

” ಸಾವಿರಾರು ಜನರು ನಿತ್ಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುತ್ತಾರೆ. ಆದರೆ ಬಿಸಿಲು, ಮಳೆಯಲ್ಲಿ ನಿಂತು ದೇವರ ದರ್ಶನಕ್ಕೆ ತೆರಳುವ ಪರಿಸ್ಥಿತಿ ಇದೆ. ಬೆಟ್ಟದ ತಪ್ಪಲಿನಲ್ಲಿ ನಿಲ್ಲಲು ಸರತಿ ಸಾಲಿನ ನೆರಳಿನ ಶೆಡ್ ನಿರ್ಮಾಣ ಮಾಡಬೇಕು.”

-ಲೋಕೇಶ್, ಗ್ರಾಪಂ ಸದಸ್ಯ, ಗೋಪಾಲಪುರ

Tags:
error: Content is protected !!