Mysore
19
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕೊಡಗು ಜಿಲ್ಲೆಯತ್ತ ಪ್ರವಾಸಿಗರ ದಂಡು..!

ಪುನೀತ್ ಮಡಿಕೇರಿ

ಹೊಸ ವರ್ಷಾಚರಣೆಗೆ ಕೊಡಗಿನತ್ತ ಮುಖ ಮಾಡಿದ ಜನರು; ಜಿಲ್ಲೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ

ಮಡಿಕೇರಿ: ಹೊಸ ವರ್ಷವನ್ನು ಪ್ರಕೃತಿ ಮಡಿಲಿನಲ್ಲಿ ಬರ ಮಾಡಿಕೊಳ್ಳಲು ಪ್ರವಾಸಿಗರು ಕೊಡಗು ಜಿಲ್ಲೆಯತ್ತ ಮುಖ ಮಾಡುತ್ತಿದ್ದು, ಎಲ್ಲೆಂದರಲ್ಲಿ ಪ್ರವಾಸಿಗರ ಕಲರವ ಕಂಡು ಬರುತ್ತಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಆಂಧ್ರಪ್ರದೇಶ, ಕೇರಳ, ತಮಿಳು ನಾಡು ಸೇರಿದಂತೆ ವಿವಿಧೆಡೆಯಿಂದ ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಸವಿಯುವಲ್ಲಿ ಮಗ್ನರಾಗಿದ್ದಾರೆ. ಸಾಲು ಸಾಲು ರಜೆಯೂ ಸಿಕ್ಕಿರುವುದರಿಂದ ವರ್ಷಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಪ್ರವಾಸಿತಾಣಗಳತ್ತ ಮುಖ ಮಾಡಿದ್ದಾರೆ.

೨೦೨೩ನೇ ವರ್ಷದಲ್ಲಿ ೪೩,೬೯,೫೦೭ ಸ್ವದೇಶಿಗರು,೧೧೮ ವಿದೇಶಿಗರೂ ಸೇರಿದಂತೆ ಒಟ್ಟು ೪೩,೬೯,೬೨೫ ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ೨೦೨೪ನೇ ವರ್ಷದಲ್ಲಿ ೨೫,೪೩,೯೫೬ ಸ್ವದೇಶಿಗರು, ೩೮೩ ವಿದೇಶಿಗರೂ ಸೇರಿದಂತೆ ಒಟ್ಟು ೨೫,೪೪,೩೩೯ ಪ್ರವಾಸಿಗರು ಭೇಟಿ ನೀಡಿದ್ದರು. ೨೦೨೫ರಲ್ಲಿ ೩೮,೦೯,೬೩೨ ಸ್ವದೇಶಿಗರು, ೪೧೧ ವಿದೇಶಿಗರು ಒಟ್ಟು ೩೮,೧೦೦೪೩ ಪ್ರವಾಸಿಗರು ಭೇಟಿ ನೀಡಿದ್ದಾರೆ.

೨೦೨೪ನೇ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಪ್ರವಾಸಿಗರ ಭೇಟಿ ಹೆಚ್ಚಳವಾಗಿದೆ. ವರ್ಷಾಂತ್ಯ ಹಾಗೂ ರಜೆಯ ದಿನಗಳನ್ನು ಅನುಭವಿಸಲು ಬಂದ ಪ್ರವಾಸಿಗರಿಂದ ಸ್ಥಳೀಯ ವ್ಯಾಪಾರಿಗಳಿಗೂ ಭರ್ಜರಿ ವ್ಯಾಪಾರವಾಗುತ್ತಿದೆ. ಐಸ್ ಕ್ರೀಂ ಪಾರ್ಲರ್, ರೆಸ್ಟೋರೆಂಟ್, ಹೋಟೆಲ್, ತಿಂಡಿ ಮಳಿಗೆ, ಬೀದಿ ಬದಿಯ ವ್ಯಾಪಾರಿಗಳು, ಸಪೈಸ್ ಮಾಲೀಕರು, ಹಣ್ಣು ಹಂಪಲು ವ್ಯಾಪಾರಿಗಳಿಗೂ ಪ್ರವಾಸಿಗರಿಂದ ಉತ್ತಮ ವ್ಯಾಪಾರ ನಡೆಯುತ್ತಿದೆ.

ಪ್ರವಾಸೋದ್ಯಮ ಇಲಾಖೆ ಮಾಹಿತಿಯ ಪ್ರಕಾರ ನಗರದ ಪ್ರಮುಖ ಪ್ರವಾಸಿತಾಣ ರಾಜಾಸೀಟ್, ಕುಶಾಲನಗರದ ನಿಸರ್ಗಧಾಮ, ನಾಗರಹೊಳೆ, ಧಾರ್ಮಿಕ ಕ್ಷೇತ್ರಗಳಾದ ಭಾಗಮಂಡಲದ ಭಗಂಡೇಶ್ವರ ಸನ್ನಿಧಿ, ಪವಿತ್ರ ಕ್ಷೇತ್ರ ತಲಕಾವೇರಿ, ಓಂಕಾರೇಶ್ವರ, ಮಡಿಕೇರಿ ಹಳೇ ಕೋಟೆಗಳಿಗೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ವರ್ಷಾಂತ್ಯದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ವಾಹನಗಳ ಸಂಚಾರ ಶೇ.೮೦ ಹೆಚ್ಚಾಗಿದೆ. ಸುದರ್ಶನ ವೃತ್ತ, ರಾಜಾ ಸೀಟ್, ಮುಖ್ಯರಸ್ತೆ, ಚೌಕಿ, ಖಾಸಗಿ ಬಸ್ ನಿಲ್ದಾಣ, ಮಂಗಳೂರು ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿ ಕಂಡು ಬರುತ್ತಿದೆ. ಬೆಂಗಳೂರು ನಗರದ ರೀತಿಯಲ್ಲಿ ಟ್ರಾಫಿಕ್ ಒತ್ತಡ ನಿರ್ಮಾಣವಾಗಿದೆ. ಅಲ್ಲದೆ ರಾಜಾಸೀಟ್‌ನಲ್ಲಿ ಪ್ರವಾಸಿಗರ ಹೆಚ್ಚಳವಾದ್ದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಜಾಗವಿಲ್ಲದೆ ಪರದಾಡುವಂತಾಗಿದೆ.

ನಿಸರ್ಗಧಾಮ, ದುಬಾರೆ, ಮಡಿಕೇರಿಯ ರಾಜಾಸೀಟ್ ಸೇರಿದಂತೆ ವಿವಿಧೆಡೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಸಾಲದೇ ವಾಹನಗಳು ಹೆದ್ದಾರಿ ಬದಿಯಲ್ಲೇ ಸಾಲುಗಟ್ಟಿ ನಿಲ್ಲುತ್ತಿವೆ. ಇದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೂ ಸಮಸ್ಯೆ ಉಂಟಾಗುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದರಿಂದ ಮುಕ್ತಿ ಪಡೆಯಲು ಪ್ರವಾಸಿ ತಾಣಗಳ ಬಳಿ ಮಲ್ಟಿ ಸ್ಟೋರೇಜ್ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ವರ್ಷಾಂತ್ಯದಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಬೇರೆ ಬೇರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ.

” ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ೨೦೨೫ರಲ್ಲಿ ೩೮,೦೯,೬೩೨ ಸ್ವದೇಶಿಗರು, ೪೧೧ ವಿದೇಶಿಗರೂ ಸೇರಿದಂತೆ ಒಟ್ಟು ೩೮,೧೦೦೪೩ ಪ್ರವಾಸಿಗರು ಭೇಟಿ ನೀಡಿದ್ದಾರೆ.”

ನಿತಿನ್ ಚಕ್ಕಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು

ಪ್ರವಾಸಿಗರ ಭೇಟಿಯ ಅಂಕಿ ಅಂಶ: ರಾಜರ ಗದ್ದಿಗೆ ೩೪,೨೦೦, ಮಡಿಕೇರಿ ಕೋಟೆ ೧,೬೪,೩೮೦, ನಾಲ್ನಾಡ್ ಅರಮನೆ ೨೨.೯೬೨, ಅಬ್ಬಿ ಜಲಪಾತ ೨,೬೦,೭೦೩, ತಲಕಾವೇರಿ ಮತ್ತು ಭಾಗಮಂಡಲ ಪುಣ್ಯ ಕ್ಷೇತ್ರ ೯,೨೨,೫೦೦, ರಾಜಾಸೀಟ್ ೮,೨೫,೩೪೪, ಮಾಂದಲ್‌ಪಟ್ಟಿ ೩೮,೪೧೯, ಕಾವೇರಿ ನಿಸರ್ಗಧಾಮ ೫,೧೧,೯೨೪, ಹಾರಂಗಿ ಡ್ಯಾಂ ೨,೮೫,೨೨೧, ಮಲ್ಲಳ್ಳಿ ಜಲಪಾತ ೨,೭೧,೦೬೦, ದುಬಾರೆ ೩,೫೮,೩೨೦, ಹೊನ್ನಮ್ಮನ ಕೆರೆ ೭೦.೫೩೦, ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ೪೪,೪೨೭ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.

Tags:
error: Content is protected !!