Mysore
23
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

‘ಹುಲಿ ಉಳಿದರೆ ಕಾಡು ಉಳಿಯುತ್ತದೆ-ಕಾಡು ಉಳಿದರೆ ನಾವು ಉಳಿಯುತ್ತೇವೆ’

Tiger spotted in Hanur

ಶ್ರೇಯಸ್ ದೇವನೂರು

ಭಾರತವು ವನ್ಯಜೀವಿ ಸಂರಕ್ಷಣೆಯಲ್ಲಿ ಹಲವು ಪ್ರಮುಖ ಸಾಧನೆಗಳನ್ನು ದಾಖಲಿಸಿದೆ. ೨೦೦೬ರಲ್ಲಿ ಕೇವಲ ೧,೪೦೦ರಷ್ಟಿದ್ದ ಹುಲಿಗಳ ಸಂಖ್ಯೆ ೨೦೨೨ರ ವೇಳೆಗೆ ೩,೦೦೦ರ ಗಡಿ ದಾಟಿದೆ ಎಂಬುದು ದೇಶದ ಪರಿಸರ ನೀತಿ ಮತ್ತು ನಿರ್ವಹಣೆಗೆ ಸಾಕ್ಷಿಯಾಗಿದೆ.

ಆದರೆ ಈ ಸಂಖ್ಯಾ ಬೆಳವಣಿಗೆ ಸಮರ್ಥ ನಿರ್ವಹಣೆಗೆ ಹೊಸ ಸವಾಲುಗಳನ್ನು ಉಂಟುಮಾಡಿದೆ. ಅದರಲ್ಲೂ ಮಾನವ-ಹುಲಿ ಸಂಘರ್ಷ ಎಂಬ ಹೊಸ ಸಂಚಲನೆಯು ದಿನದಿಂದ ದಿನಕ್ಕೆ ಗಂಭೀರವಾಗಿ ತೀವ್ರತೆ ಪಡೆದುಕೊಂಡಿದೆ. ಬಂಡೀಪುರ, ನಾಗರಹೊಳೆ, ಮೈಸೂರು ಹೀಗೆ ಕರ್ನಾಟಕದ ಹಲವಾರು ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿನ ಹುಲಿಗಳು ಹಳ್ಳಿಗಳವರೆಗೆ ಬಂದು, ಹಸು, ಕುರಿ, ಎಮ್ಮೆಗಳನ್ನು ಬೇಟೆಯಾಡು ವುದು ಮಾತ್ರವಲ್ಲ, ಕೆಲವೊಮ್ಮೆ ಮನುಷ್ಯರ ಮೇಲೂ ದಾಳಿ ನಡೆಸಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇವಲ ಅರಣ್ಯದ ಆಳದಲ್ಲಿ ನಡೆಯುವ ಅಪರೂಪದ ಘಟನೆಗಳೆಂದು ಲಘುವಾಗಿ ನೋಡಲಾಗದು; ಅದು ಮಾನವನ ನಡವಳಿಕೆಯ ಪ್ರತಿಫಲನವಾಗಿದೆ.

ಅರಣ್ಯ ನಾಶ, ಅಕ್ರಮ ಮರಳು ಗಣಿಗಾರಿಕೆ, ಕೃಷಿ ಕ್ಷೇತ್ರದ ವಿಸ್ತರಣೆ, ಹಾಗೂ ರಸ್ತೆಗಳ ಅಗಲೀಕರಣ ಇವೆಲ್ಲ ಮಾನವ ಚಟುವಟಿಕೆಗಳು ಕಾಡಿನ ಎದೆ ಕತ್ತರಿಸುತ್ತಿವೆ. ಒಂದು ಹುಲಿಗೆ ಸರಾಸರಿ ೫೦oಟಿ ಕಿ.ಮೀ. ವಿಸ್ತೀರ್ಣದ ನೈಸರ್ಗಿಕ ವಾಸಸ್ಥಳ ಬೇಕಾಗಿರುವ ಸಂದರ್ಭದಲ್ಲಿ ನಾವು ಅದೇ ಕಾಡಿನಲ್ಲಿ ತೋಟ, ಮನೆ, ರಸ್ತೆ ನಿರ್ಮಿಸಿರುವುದರ ಪರಿಣಾಮವಾಗಿ, ಆಹಾರ ಮತ್ತು ಆಶ್ರಯ ಕಳೆದುಕೊಂಡ ಹುಲಿಗಳು ಹಳ್ಳಿಗಳತ್ತ ಧಾವಿಸಿ ಮನುಷ್ಯ ವಾಸಸ್ಥಾನಕ್ಕೇ ನೇರವಾಗಿ ತಲೆಹಾಕುತ್ತಿವೆ. ಈ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರು ಹುಲಿಗಳಿಗೆ ಬಲಿಯಾಗುತ್ತಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಅರಣ್ಯ ಪ್ರದೇಶದ ಸಮೀಪ, ಹುಲಿ ಹಂದಿಗಳನ್ನು ಬಲಿ ತೆಗೆದುಕೊಂಡ ನಂತರ ಮನೆಗಳವರೆಗೂ ಬಂದಿತ್ತು. ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದರಿಂದ ತಕ್ಷಣ ಕ್ರಮ ಕೈಗೊಂಡ ಸಿಬ್ಬಂದಿ ಹುಲಿಯನ್ನು ಕಾಡಿಗೆ ಮರಳಿಸುವಲ್ಲಿ ಯಶಸ್ವಿಯಾದರು.

ಹುಲಿ ಕೇವಲ ಒಂದು ಕ್ರೂರ ಪ್ರಾಣಿ ಅಲ್ಲ, ಅದು ಪರಿಸರ ಸಮತೋಲನದ ಶ್ರೇಷ್ಠ ಭಕ್ಷಕ. ಹುಲಿ ಆಹಾರ ಸರಪಳಿಯ ಶೃಂಗದಲ್ಲಿ ಇರುವ ಕಾರಣ, ಇತರ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಗಿಡಮರಗಳ ಬೆಳವಣಿಗೆ ಹೆಚ್ಚಾಗುತ್ತದೆ, ಕಾಡಿನ ಸ್ಥಿತಿಶೀಲತೆ ಕಾಪಾಡಲ್ಪಡುತ್ತದೆ. ಹುಲಿ ಇಲ್ಲದ ಕಾಡಿನಲ್ಲಿ ಇತರೆ ಪ್ರಾಣಿಗಳ ಸಂಖ್ಯೆಯ ಹೆಚ್ಚಳದಿಂದಾಗಿ ಸಸ್ಯವರ್ಗದನಾಶ, ಭೂಮಿಯ ಪೋಷಣಾ ಶಕ್ತಿಯ ಕುಸಿತ, ಮಳೆಯ ಅಭಾವ ಮುಂತಾದ ದುಷ್ಪರಿಣಾಮಗಳು ಎದುರಾಗಬಹುದು. ಈ ಕಾರಣದಿಂದ ಹುಲಿಯು ಇರುವ ಅರಣ್ಯವನ್ನು ಆರೋಗ್ಯವಂತ ಪರಿಸರದ ಸೂಚಕವೆಂದು ಪರಿಗಣಿಸಲಾಗುತ್ತದೆ.

ಮಾನವ – ಹುಲಿ ಸಂಘರ್ಷದ ನಿವಾರಣೆಗೆ ಹಲವಾರು ಪರಿಣಾಮಕಾರಿಯಾದ ಮಾರ್ಗಗಳನ್ನು ರೂಪಿಸಬಹುದು. ಮೊದಲು, ಹುಲಿಗಳಿಗೆ ಸುರಕ್ಷಿತ ವಾಸಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ವಿಸ್ತರಣೆಯೊಂದಿಗೆ ವನ್ಯಜೀವಿಗಳ ಸಂಪರ್ಕ ಪಥಗಳನ್ನು ರೂಪಿಸುವ ಅಗತ್ಯವಿದೆ. ಹಲವಾರು ಹಳ್ಳಿಗಳು ಇನ್ನೂ ಹುಲಿಗಳ ನೈಸರ್ಗಿಕ ವಾಸಸ್ಥಳದ ಒಳಗೆ ಇದ್ದು, ಆ ಗ್ರಾಮಗಳ ಜನರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವು ಸೂಕ್ತ ಯೋಜನೆಯೊಂದಿಗೆ ನಡೆಯಬೇಕು. ಅದರೊಂದಿಗೆ, ಬಫರ್ ಝೋನ್‌ಗಳ ಸ್ಥಾಪನೆ, ಎಲೆಕ್ಟ್ರಾನಿಕ್ ಎಚ್ಚರಿಕೆ ವ್ಯವಸ್ಥೆ, ಸಿಸಿ ಕ್ಯಾಮೆರಾ, ಜಿಪಿಎಸ್ ಕಾಲರ್, ಡ್ರೋನ್ ಇತ್ಯಾದಿ ತಂತ್ರಜ್ಞಾನಗಳ ಬಳಕೆಯೂ ಹೆಚ್ಚಾಗಬೇಕು. ಗ್ರಾಮೀಣ ಜನರಲ್ಲಿ ಹುಲಿಗಳ ಮಹತ್ವವನ್ನು ತಿಳಿಸುವ ಜನಜಾಗೃತಿ ಅಭಿಯಾನಗಳು ನಡೆಯಬೇಕಾಗಿವೆ. ಕೇವಲ ಸಂರಕ್ಷಣೆಯ ಬಗ್ಗೆ ಅಲ್ಲ, ಸಹಜಜೀವಿಯ ನಿಟ್ಟಿನಲ್ಲಿ ಬದುಕುವ ಬುದ್ಧಿವಂತಿಕೆಯತ್ತ ಜನರ ಮನಸ್ಸನ್ನು ವಾಲಿಸುವುದು ಅಗತ್ಯ. ಇದೇ ಸಂದರ್ಭದಲ್ಲಿ ನಾವು ಪ್ರಶ್ನಿಸಬೇಕಾದ ವಿಷಯ, ಹುಲಿ ನಗರಗಳ ಕಡೆಗೆ ಬರಬೇಕಾದ ಪರಿಸ್ಥಿತಿ ಏಕೆ ಸೃಷ್ಟಿಯಾಗಿದೆ?

ಹುಲಿ ತನ್ನ ಕಾಡು ಬಿಟ್ಟು ವಲಸೆ ಬರುವುದೇ ತನ್ನ ವಾಸಸ್ಥಳದ ಕುಸಿತದ ಸಂಕೇತ. ಇದು ಕೇವಲ ಒಂದು ಪ್ರಾಣಿ ನಮ್ಮ ವ್ಯಾಪ್ತಿ ಮೀರಿ ಬಂದ ದೋಷವಲ್ಲ, ಇದು ನಾವೆಲ್ಲರೂ ಸೇರಿ ಮಾಡಿದ ದೋಷಗಳ ಪ್ರತಿಫಲ. ಪ್ರಕೃತಿಯ ಶ್ರೇಷ್ಠ ಭಕ್ಷಕನಿಗೆ ಸ್ಥಾನವಿಲ್ಲದ ಅರಣ್ಯವಿರುವಾಗ, ಅದು ಮನುಷ್ಯನ ಹೊಲವನ್ನೇ ತನ್ನ ವಾಸವಾಗಿಸಿಕೊಳ್ಳಲು ಹೋಗುವುದು ಸಹಜ. ಅಂತಿಮವಾಗಿ, ಇದು ಕೇವಲ ಸರ್ಕಾರ ಅಥವಾ ಅರಣ್ಯ ಇಲಾಖೆಯ ಹೊಣೆಗಾರಿಕೆ ಅಲ್ಲ. ಪರಿಸರ ಸಂರಕ್ಷಣೆಯು ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯವಾಗಿದೆ.

ನಾವೆಲ್ಲರೂ ಪ್ರಜ್ಞಾವಂತರಾಗಿ ಈ ಸಮಸ್ಯೆಗೆ ಸ್ಪಂದಿಸಬೇಕು. ಹುಲಿಯ ರಕ್ಷಣೆಯು ಕೇವಲ ವನ್ಯಜೀವಿ ಉಳಿವಿನ ವಿಚಾರವಲ್ಲ ? ಅದು ಮನುಷ್ಯನ ಜೀವನದ ಮೂಲತತ್ವಗಳ ಉಳಿವಿಗೆ ನೇರ ಸಂಬಂಧ ಹೊಂದಿದೆ. ಹುಲಿ ಉಳಿದರೆ ಕಾಡು ಉಳಿಯುತ್ತದೆ, ಕಾಡು ಉಳಿದರೆ ನೀರು, ಮಳೆ, ನದಿಗಳು, ಬೆಳೆ ಮೊದಲಾದ ಮನುಷ್ಯನ ಬದುಕಿಗೆ ಆಧಾರವಾದ ಅಂಶಗಳು ಉಳಿಯುತ್ತವೆ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದು ನಮ್ಮೆಲ್ಲರ ಭವಿಷ್ಯದ ಅಡಿಪಾಯವಾಗಬೇಕು.

 

 

Tags:
error: Content is protected !!