ಹಾವನೂರು ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿ ಅರಸು ಅವರು ‘ಹಿಂದುಳಿದ ವರ್ಗಗಳ ಬೈಬಲ್’ ಎಂದು ಬಣ್ಣಿಸಿದರೆ, ಸರ್ವೋಚ್ಚ ನ್ಯಾಯಾಲಯವು ‘ಹಿಂದುಳಿದ ವರ್ಗಗಳ ನಿಖರವಾದ ಅಂಕಿ-ಅಂಶಗಳ ವೈಜ್ಞಾನಿಕ ಅಧ್ಯಯನ’ ಎಂದು ಪ್ರಶಂಸೆ ಮಾಡಿತು. ಬಿ.ಪಿ.ಮಂಡಲ್ ಅವರು ‘ಕರ್ನಾಟಕದ ಹಾವನೂರು ವರದಿಯೇ ಆಲ್ ಇಂಡಿಯಾ ಎಡಿಷನ್ ಅಷ್ಟೇ’ ಎಂದಿದ್ದರು.
ದಾವಣಗೆರೆ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಮಾತನಾಡುತ್ತಿದ್ದಾಗ ಯುವಕನೊಬ್ಬ, “ನಿಮಗೆ ನಿಜವಾಗಿಯೂ ಹಿಂದುಳಿದ ವರ್ಗಗಳ ಬಗ್ಗೆ ಕಳಕಳಿ ಇದ್ದರೆ ಈಗ ಅಧಿಕಾರ ನಿಮ್ಮ ಕೈಯಲ್ಲಿದೆ ಇದನ್ನು ಕೃತಿಯಲ್ಲಿ ಮಾಡಿ ತೋರಿಸಿ ಎಂದು ಸವಾಲು ಹಾಕುತ್ತಾರೆ. ಅರಸು ಅವರು ಬೆಂಗಳೂರಿಗೆ ಬಂದ ನಂತರ, ಆ ಯುವಕನನ್ನು ಕರೆಯಿಸಿಕೊಂಡು ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿ ಸಂಬಂಧ ಸುದೀರ್ಘ ಚರ್ಚೆ ನಡೆಸುತ್ತಾರೆ. ಆ ಯುವಕನೇ ಹಿಂದುಳಿದ ವರ್ಗಗಳ ಏಳೆಗಾಗಿ ಹೋರಾಟಕ್ಕೆ ಎದೆಕೊಟ್ಟು ನಿಂತ ಎಲ್.ಜಿ.ಹಾವನೂರು! ರಾಜ್ಯದಲ್ಲಿಯೇ ಕಾನೂನು ತಜ್ಞರಲ್ಲಿ ಒಬ್ಬರಾಗಿದ್ದ ಹಾಗೂ ಹಿಂದುಳಿದ ವರ್ಗಗಳ ಜನರ ಮನಸ್ಸಿನಲ್ಲಿ ಇಂದಿಗೂ ಶಾಶ್ವತವಾಗಿರುವ ಎಲ್.ಜಿ.ಹಾವನೂರು ಅವರು ಸಮ ಸಮಾಜ ನಿರ್ಮಾಣಕ್ಕಾಗಿ ನಡೆಸಿದ ಹೋರಾಟದ ಹಾದಿಯನ್ನು ನಾವು ಇಂದು ಮತ್ತೆ ಮತ್ತೆ ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ.
ಎಲ್.ಜಿ.ಹಾವನೂರು (ಲಕ್ಷ್ಮಣ ಗುಂಡಪ್ಪ ಹಾವನೂರು) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅಗಡಿ ಗ್ರಾಮದಲ್ಲಿ 1927ರ ಮಾರ್ಚ್ 25 ರಂದು ಜನಿಸಿದರು. ಧಾರವಾಡದಲ್ಲಿ ಪದವಿ ವ್ಯಾಸಂಗ ಮಾಡಿದ ನಂತರ ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಅಲ್ಲಿನ ಪೋಸ್ಟ್ ಮಾಸ್ಟರ್ ಒಬ್ಬರು ಹಾವನೂರು ಅವರ ಪ್ರತಿಭೆಯನ್ನು ಗುರುತಿಸಿ ಕಾನೂನು ಪದವಿ ಪಡೆಯಲು ಪ್ರೇರೇಪಿಸಿದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಹಾವನೂರು ಅವರು ಬೆಳಗಾವಿಯ ಆರ್‌ಎಲ್‌ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ನಂತರ ವಕೀಲಿ ವೃತ್ತಿ ಆರಂಭಿಸಿದರು. ಆ ಸಂದರ್ಭದಲ್ಲಿ ಆರ್.ನಾಗನಗೌಡ ಸಮಿತಿಯು ನೀಡಿದ್ದ ಹಿಂದುಳಿದವರ್ಗಗಳ ವರದಿಯನ್ನು ಸರ್ವೋಚ್ಚ ನ್ಯಾಯಾಲಯವು ಅನೂರ್ಜಿತಗೊಳಿಸಿತು.
ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಮೀಸಲಾತಿಗೆ ಜಾತಿ ಪರಿಗಣನೆ ಇಲ್ಲ ಎಂದು ಆದೇಶ ಹೊರಡಿಸುತ್ತಾರೆ. ಇದನ್ನು ಪ್ರಶ್ನಿಸಿ ಹಾವನೂರು ದೊಡ್ಡ ಮಟ್ಟದ ಸಂವಿಧಾನಾತ್ಮಕ ಹೋರಾಟ ಪ್ರಾರಂಭಿಸುವುದರ ಮೂಲಕ ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ವಿದ್ವತ್ತನ್ನು ಧಾರೆ ಎರೆದರು. ಅವರು 2006ರ ಸೆಪ್ಟೆಂಬರ್ 15ರಂದು ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು. ಅದರಿಂದ ಹಿಂದುಳಿದ ವರ್ಗಗಳ ಹೋರಾಟಕ್ಕೆ ಮಂಕು ಕವಿದಂತಾಯಿತು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳು ಶೇ.20ರಷ್ಟು ಇದ್ದಾರೆ. ಸಂವಿಧಾನದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಿದೆ. ಆದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.60ಕ್ಕೂ ಹೆಚ್ಚು ಜನರು ಇರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರಿ ಹುದ್ದೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯಕ್ಕೆ ಅವಕಾಶವಿಲ್ಲ ಎಂಬುದನ್ನು ಹಾವನೂರು ಅವರು ಅಂದು ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಗಮನಕ್ಕೆ ತಂದರು.
ಅರಸು ಅವರು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಕಲ್ಪ ಮಾಡಿದ್ದರ ಫಲವಾಗಿ ರಚನೆಯಾದದ್ದು ಹಾವನೂರು ಆಯೋಗ. ಈ ಆಯೋಗವು ಅಂತಿಮ ವರದಿ ಸಿದ್ಧಪಡಿಸುವುದಕ್ಕೆ ಮುಂಚೆ ರಾಜ್ಯದ 368 ಗ್ರಾಮಗಳಿಗೆ ಭೇಟಿ ನೀಡಿ 3.5 ಲಕ್ಷಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿದ್ದರು. 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್‌ಗಳಲ್ಲಿ ಸಂಚರಿಸಿಂ3 ಸಾವಿರ ಕುಟುಂಬಗಳು ಮತ್ತು 4 ಲಕ್ಷ ಹಿಂದುಳಿದವರ್ಗಗಳ ಜನರಸಮೀಕ್ಷೆಯನ್ನು ನಡೆಸಿದ ಹಾವನೂರು ಆಯೋಗವು ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿ’ಗಳನ್ನಾಗಿ ವಿಭಾಗ ಮಾಡಿತು.
ವಿವಿಧ ಉಪ ಜಾತಿಗಳನ್ನು ಒಳಗೊಂಡ ಹಿಂದುಳಿದ ವರ್ಗಗಳಿಗೆ (ಬಿಸಿಎಂ) ಶೇ.11ರಷ್ಟು ಹಿಂದುಳಿದ ಜಾತಿಗಳಿಗೆ ಶೇ.10 ರಷ್ಟು ಮತ್ತು ಹಿಂದುಳಿದ ಬುಡಕಟ್ಟುಗಳಿಗೆ ಶೇ.6 ರಷ್ಟು ಮೀಸಲಾತಿಯನ್ನು ರಷ್ಟು ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅನ್ವಯವಾಗುವಂತೆ ವರದಿಯನ್ನು ಸಿದ್ಧಪಡಿಸಲಾಗಿತ್ತು. ಈ ವರದಿಯನ್ನು 1975ರ ನವೆಂಬರ್ 19 ರಂದು ಹಾವನೂರು ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತು. ಹಾಗೆಯೇ ಕೆಲವು ಮಾರ್ಪಾಡುಗಳೊಂದಿಗೆ ಸಮತೋಲನ ಸಾಧಿಸಿದ ಅರಸು ಅವರು 1977 ಫೆಬ್ರವರಿ 22ರಂದು ಹಾವನೂರು ವರದಿಯನ್ನು ಜಾರಿಗೆ ತಂದರು.
ಬಾಲ್ಯದಿಂದಲೂ ಬಡತನ, ಹಸಿವು, ಅವಮಾನಗಳನ್ನು ಅರಗಿಸಿಕೊಂಡು ಉಂಡ ನೊವುಗಳನ್ನೇ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಿರುವ ಮದ್ದನ್ನು ರೂಪಿಸುವ ನಿಟ್ಟಿನಲ್ಲಿ ಹಾವನೂರು ಅವರನ್ನು ಅಣಿಗೊಳಿಸಿದವು ಎಂದು ಸಾಹಿತಿ ಬಿ.ಶ್ರೀನಿವಾಸ ಅವರು ಎಲ್.ಜಿ.ಹಾವನೂರು ಬದುಕಿನ ಸಮಗ್ರ ನೋಟವನ್ನು ‘ಸಾಮಾಜಿಕ ನ್ಯಾಯದ ಸಾಕ್ಷಿಪ್ರಜ್ಞೆ ಎಲ್.ಜಿ.ಹಾವನೂರು’ ಎಂಬ ಕೃತಿಯಲ್ಲಿ ದಾಖಲಿಸಿರುವುದು ಸ್ಮರಣಾರ್ಹ.
ಹಾವನೂರು ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿ ಅರಸು ಅವರು ‘ಹಿಂದುಳಿದ ವರ್ಗಗಳ ಬೈಬಲ್ ಎಂದು ಬಣ್ಣಿಸಿದರೆ, ಸರ್ವೋಚ್ಚ ನ್ಯಾಯಾಲಯವು ‘ಹಿಂದುಳಿದ ವರ್ಗಗಳ ನಿಖರವಾದ ಅಂಕಿಅಂಶಗಳ ವೈಜ್ಞಾನಿಕ ಅಧ್ಯಯನ’ ಎಂದು ಪ್ರಶಂಸೆ ಮಾಡಿತು. ಬಿ.ಪಿ.ಮಂಡಲ್ ಅವರು ‘ಕರ್ನಾಟಕದ ಹಾವನೂರು ವರದಿಯೇ ಆಲ್ ಇಂಡಿಯಾ ಎಡಿಷನ್ ಅಷ್ಟೇ’ ಎಂದಿದ್ದರು. ಹಾವನೂರು ಆಯೋಗದ ವರದಿಯು ಮುಂದಿನ ದಿನಗಳಲ್ಲಿ ಬಿ.ಪಿ.ಮಂಡಲ್ ಆಯೋಗಕ್ಕೂ ಮಾನದಂಡವಾಗಿ ಕಾರ್ಯನಿರ್ವಹಿಸಿತು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸಂವಿಧಾನ ರಚನಾ ಸಲಹಾ ಸಮಿತಿಗೆ ಆಹ್ವಾನ ನೀಡಿದ್ದರ ಮೇರೆಗೆ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಹಾವನೂರು ಅವರ ಸಂವಿಧಾನ ಪ್ರಜ್ಞೆಗೆ ಇದೊಂದು ಸಾಕ್ಷಿಯಾಗಿದೆ.
ಹಾವನೂರು ಅವರು ಸಾಮಾಜಿಕ ಬದ್ಧತೆಯನ್ನು ಇಟ್ಟುಕೊಂಡು ಕೆಲಸ ಮಾಡಿ, ಅದನ್ನು ದೇವರಾಜ ಅರಸು ಎಂಬ ಮುಖ್ಯಮಂತ್ರಿಯ ಮೂಲಕ ಸಾಮಾಜಿಕ ನ್ಯಾಯ ಎಂಬ ಔಷಧಿಯ ಹೆಸರಿನಲ್ಲಿ ಇಂಜೆಕ್ಟ್ ಮಾಡಿಸಿದರು.
ಜಾತಿವಾರು ಸಮೀಕ್ಷೆ ಅನಿವಾರ್ಯ. ತೀರಾ ಹಿಂದುಳಿದ ಜಾತಿಗಳನ್ನು ಗುರುತಿಸಿ ಅವರನ ಮೇಲಕ್ಕೆತ್ತಲು ಇದು ಸಹಕಾರಿ, ರಾಜ್ಯದಲ್ಲಿ ಇಂತಹ ಪ್ರಯತ್ನ ನಡೆದಾಗಲೆಲ್ಲಾ ಅಂದರೆ ಮಿಲ್ಲರ್ ವರದಿಯಿಂದ ಹಿಡಿದು ತೀರಾ ಇತ್ತೀಚಿನ ಕಾಂತರಾಜ ವರದಿಯವರೆಗೂ ಅಡ್ಡಿ ಆತಂಕಗಳೇ ಎದುರಾಗಿವೆ.
ತುಳಿತಕ್ಕೆ ಒಳಗಾದವರ್ಗಗಳಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಿದರೆ ಪ್ರಜಾಪ್ರಭುತ್ವಕ್ಕೆ ಬೆಲೆ. ಹಿಂದುಳಿದ ವರ್ಗಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಎತ್ತರಕ್ಕೆ ಕೊಂಡೊಯ್ಯುವುದು ಹಾವನೂರು ಅವರ ಆಶಯವಾಗಿತ್ತು.
• ಎಚ್.ಹಾಲಪ್ಪ
(ಲೇಖಕರು, ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು)





