Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಎಚ್.ಡಿ.ಕೋಟೆಯಲ್ಲಿ ಇಂದಿನಿಂದ ನವರಾತ್ರಿ ಉತ್ಸವ

ವಿವಿಧ ದೇವಾಲಯಗಳಲ್ಲಿ ಸಿದ್ಧತೆ; ಕಂಗೊಳಿಸುತ್ತಿರುವ ದೀಪಾಲಂಕಾರ

ಮಂಜು ಕೋಟೆ

ಎಚ್.ಡಿ.ಕೋಟೆ: ನವರಾತ್ರಿ ಉತ್ಸವ ಮತ್ತು ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸಲು ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಮತ್ತು ವರದರಾಜ ಸ್ವಾಮಿ ದೇವಸ್ಥಾನ ಸಮಿತಿಯವರು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲು ವಿಶೇಷ ಅಲಂಕಾರ, ಸಿದ್ಧತೆ ಕೈಗೊಂಡಿದ್ದಾರೆ.

ಪಟ್ಟಣದ 1ನೇ ಮುಖ್ಯ ರಸ್ತೆಯಲ್ಲಿರುವ ಚೋಳರ ಕಾಲದ ಮುಜರಾಯಿ ಇಲಾಖೆಯ ಶ್ರೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ಮತ್ತು ಹೌಸಿಂಗ್ ಬೋರ್ಡಿನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ವಿಶೇಷ ಪೂಜಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಂಡಿ ರುವುದರಿಂದ ಒಂದನೇ ಮುಖ್ಯ ರಸ್ತೆ ಮತ್ತು ಚಾಮುಂಡೇಶ್ವರಿ ಹೌಸಿಂಗ್ ಬೋರ್ಡಿನ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಯ ಬದಿಗಳಲ್ಲಿ ಅಳವಡಿಸಿರುವ ಜಗಜಗಿಸುವ ದೀಪಾಲಂಕಾರ ಜನರನ್ನು ಆಕರ್ಷಿಸುತ್ತಿದೆ.

ಶ್ರೀ ವರದರಾಜು ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ 14 ದಿನಗಳ ಕಾಲ ಶ್ರೀ ವರದರಾಜ ಸ್ವಾಮಿ, ಶ್ರೀ ದೇವಿ ಭೂದೇವಿ ದೇವರಿಗೆ ಹೂವಿನ ಅಲಂಕಾರ, ಹೋಮ ನಡೆಯಲಿದ್ದು, ಎಲ್ಲ ಜನಾಂಗದವರೂ ಪ್ರತಿನಿತ್ಯ ವಿಶೇಷ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಶಾಸಕ ಅನಿಲ್ ಚಿಕ್ಕಮಾದು, ಸಮಿತಿಯ ಬಿ.ಎಸ್.ರಂಗಯ್ಯ ಅಯ್ಯಂಗಾರ್, ತಹಸಿಲ್ದಾರ್ ಶ್ರೀನಿವಾಸ್, ಆಡಳಿತ ಅಧಿಕಾರಿ ವಿಜಯಕುಮಾರ್, ಡೇರಿ ಶ್ರೀಕಾಂತ್, ದೇವರಾಜು, ಜಯಂತ್, ತಿರುಮಲಾಚಾರ್, ಪೂರ್ಣೇಶ, ಕೆಂಡಗಣ್ಣ ಇತರರು ಕಾರ್ಯಕ್ರಮದ ನೇತೃತ್ವ ಹಾಗೂ ರೂಪರೇಷೆಗೆ ಅಗತ್ಯ ಸಿದ್ಧತೆಯನ್ನು ಕೈಗೊಂಡು ವಿಜಯದಶಮಿ ದಿನದಂದು ಸಂಜೆ 5 ಗಂಟೆಗೆ ಬನ್ನಿಮರಕ್ಕೆ ಪೂಜೆ, ಪೊಲೀಸ್ ಪೂಜೆ ಸಲ್ಲಿಸಿದ ನಂತರ ಅದ್ದೂರಿ ಮೆರವಣಿಗೆ ನಡೆಯಲಿದೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಚಾಮುಂಡೇಶರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ದೇವಿಗೆ ವಿಶೇಷ ಪೂಜಾಕೈಂಕರ್ಯಗಳು ನೆರವೇರಲಿವೆ. ಜೊತೆಗೆ ವಿಜಯದಶಮಿ ದಿನದಂದು ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ಅನೇಕ ಕಲಾ ತಂಡಗಳೊಂದಿಗೆ ಸ್ತಬ್ಧ ಚಿತ್ರಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ವಿಜಯದ ಶಮಿಯನ್ನು ಮಿನಿ ದಸರಾದಂತೆ ನೆರವೇರಿಸಲು ಸಮಿತಿಯ ನಟರಾಜ್, ಸತೀಶ್, ದೊಡ್ಡನಾಯಕ, ನಾಗಣ್ಣ, ಬ್ಯಾಂಕ್ ವೀರಪ್ಪ, ರಾಮಯ್ಯ, ಸತೀಶ್ ಆರಾಧ್ಯ, ಸೋಮಶೇಖರ್, ಶ್ರೀಕಾಂತ್, ವಿನಯ್ ಭಜರಂಗಿ ಮತ್ತಿತರರು ಮುಂದಾಗಿದ್ದಾರೆ.

ವಿಶೇಷ ಪೂಜಾ ಕಾರ್ಯಕ್ರಮ: ಮೈಸೂರಿನಲ್ಲಿ ದಸರಾ ಮಹೋತ್ಸವ ಹತ್ತು ದಿನಗಳ ಕಾಲ ಅದ್ದೂರಿಯಾಗಿ ನಡೆದರೆ, ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಭಾಗದ ಜನರಿಗೆ ನವರಾತ್ರಿಯ ಸಂಭ್ರಮವನ್ನು ಕಣ್ಣುಂಬಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

Tags: