Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ನಾಗರಹೊಳೆ ಸಫಾರಿ ತಾಣಗಳಲ್ಲಿ ಸಮಯ, ದರ ಪರಿಷ್ಕರಣೆ

ದಾ.ರಾ.ಮಹೇಶ್

ಸಫಾರಿ ವೀಕ್ಷಣೆ ೨ ಗಂಟೆಗೆ ಸೀಮಿತ; ಹೆಚ್ಚುವರಿ ಟ್ರಿಪ್ ಆಯೋಜನೆ 

ವೀರನಹೊಸಹಳ್ಳಿ: ನಾಗರಹೊಳೆ ಸಫಾರಿ ತಾಣಗಳಲ್ಲಿ ಸಫಾರಿ ಅವಧಿಯನ್ನು ಕಡಿತಗೊಳಿಸಲಾಗಿದ್ದು, ಪ್ರವೇಶ ದರ, ಕ್ಯಾಮೆರಾ ಶುಲ್ಕ ಹಾಗೂ ವಿಶ್ರಾಂತಿ ಗೃಹಗಳ ಬಾಡಿಗೆ ದರಗಳನ್ನು ಪರಿಷ್ಕರಿಸಿ ಜಾರಿಗೆ ತರಲಾಗಿದೆ.

ಸಫಾರಿ ವೀಕ್ಷಣೆಗೆ ಕೆಲವರು ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಂಡರೆ, ಇನ್ನೂ ಕೆಲವರು ಸಫಾರಿ ಕೇಂದ್ರದ ಬಳಿ ಸರತಿಯಲ್ಲಿ ಕಾದು ನಿಂತು ಟಿಕೆಟ್ ಸಿಕ್ಕಲ್ಲಿ ಮಾತ್ರ ಸಫಾರಿಗೆ ಅವಕಾಶವಿದ್ದರಿಂದ ಟಿಕೆಟ್ ಸಿಗದವರು ರಸ್ತೆಯಲ್ಲಿ ಸಿಗುವ ಪ್ರಾಣಿಗಳನ್ನು ವೀಕ್ಷಿಸಿ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕಿತ್ತು.

ಮೂರು ಕಡೆ ಸಫಾರಿ ಕೇಂದ್ರ: ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗೇಟ್, ಕೊಡಗು ಭಾಗದ ನಾಣಚ್ಚಿ ಗೇಟ್ ಹಾಗೂ ಎಚ್.ಡಿ. ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ದಮ್ಮನಕಟ್ಟೆಗಳಲ್ಲಿ ಒಟ್ಟು ೩ ಸಫಾರಿ ಕೇಂದ್ರಗಳಿದ್ದು, ಪ್ರವಾಸಿಗರಿಗೆ ಅನುಕೂಲವಾಗುವಂತೆ ದರ, ಸಮಯ ಪರಿಷ್ಕರಿಸಲಾಗಿದೆ. ಮೂರೂ ಕೇಂದ್ರಗಳಲ್ಲೂ ದೊಡ್ಡವರಿಗೆ ೬೦೦ ರೂ., ಮಕ್ಕಳಿಗೆ ೩೦೦ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಹಿಂದೆ ಒಂದೊಂದು ಕೇಂದ್ರಗಳಲ್ಲಿ ಒಂದೊಂದು ಸಮಯ, ಬೇರೆ ಬೇರೆ ರೀತಿಯ ದರವಿತ್ತು.

ಜೀಪ್ ಸಫಾರಿಗೆ ತಲಾ ಸಾವಿರ ರೂ.: ಮೂರು ಸಫಾರಿ ಕೇಂದ್ರಗಳಲ್ಲೂ ಜೀಪ್ ಸಫಾರಿಗೆ ಒಂದೇ ರೀತಿಯ ಶುಲ್ಕ ನಿಗದಿಪಡಿಸಿದ್ದು, ದಮ್ಮನಕಟ್ಟೆಯಲ್ಲಿ ಒಬ್ಬರಿಗೆ ೮೫೫ ರೂ. ಗಳಿಂದ ೧,೦೦೦ ರೂ.ಗೆ ಹೆಚ್ಚಿಸಲಾಗಿದೆ. ಇದು ವೀರನಹೊಸಹಳ್ಳಿ ಗೇಟ್ ಹಾಗೂ ನಾಣಚ್ಚಿ ಗೇಟ್‌ನ ಸಫಾರಿಗೂ ಅನ್ವಯಿಸಲಿದೆ. ಆದರೆ ಸಫಾರಿ ಸಮಯವನ್ನು ೨ ಗಂಟೆಗೆ ಇಳಿಸಲಾಗಿದೆ.

ನಾಗರಹೊಳೆ ಉದ್ಯಾನದಲ್ಲಿ ಸಫಾರಿ ದರ, ಕ್ಯಾಮೆರಾ ಶುಲ್ಕ, ವಸತಿ ಗೃಹ ಬಾಡಿಗೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಷ್ಕರಿಸಿ ಆದೇಶಿಸಿದ್ದು ಎಂದಿನಂತೆ ಪ್ರವಾಸಿಗರು ಹಾಗೂ ವನಪ್ರಿಯರು ಇಲಾಖೆಯೊಂದಿಗೆ ಸಹಕರಿಸುವಂತೆ ನಾಗರ ಹೊಳೆ ಉದ್ಯಾನದ ಮುಖ್ಯಸ್ಥರಾದ ಪಿ.ಎ.ಸೀಮಾ ಮನವಿ ಮಾಡಿದ್ದಾರೆ.

ಡಿಎಲ್‌ಎಸ್‌ಆರ್ ೭೦ ಎಂ.ಎಂ.ಕ್ಯಾಮೆರಾಗಳಿಗೆ ಇದ್ದ ಶುಲ್ಕವನ್ನು ರದ್ದುಗೊಳಿಸಲಾಗಿದೆ. ಡಿಎಲ್‌ಎಸ್‌ಆರ್ ಕ್ಯಾಮೆರಾದ ೨೦೦ ಎಂ.ಎಂ.ನಿಂದ ೫೦೦ ಎಂ.ಎಂ. ವರೆಗೆ ೧೦೦೦ ರೂ. ಹಾಗೂ ಶೇ.೧೮ ಜಿಎಸ್ ಮತ್ತು ೫೦೦ ಎಂ.ಎಂ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಹಿಂದಿನಂತೆ ೧,೫೦೦ ರೂ. ಜೊತೆಗೆ , ೧,೮೦೦ ರೂ. ನಿಗದಿಪಡಿಸಲಾಗಿದೆ.

ಯಾವ್ಯಾವ ಸಮಯಕ್ಕೆ ಸಫಾರಿ?

ಕೊಡಗಿನ ಕುಟ್ಟ ಸಮೀಪದ ನಾಣಚ್ಚಿ ಗೇಟ್‌ನಿಂದ ಬೆಳಿಗ್ಗೆ ೬ರಿಂದ ೮, ೮.೧೫ರಿಂದ ೧೦.೧೫, ಮಧ್ಯಾಹ್ನ ೨.೧೫ರಿಂದ ೪.೧೫, ೪.೩೦ರಿಂದ ೬.೩೦ರವರೆಗೆ ನಾಲ್ಕು ಬಾರಿ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ. ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಬೆಳಿಗ್ಗೆ ೬ರಿಂದ ೮, ೮.೧೫ರಿಂದ ೧೦.೧೫, ಮಧ್ಯಾಹ್ನ ೨.೧೫ರಿಂದ ೪.೧೫, ೪.೩೦ರಿಂದ ೬.೩೦ರವರೆಗೆ ಪ್ರತಿದಿನ ೪ ಟ್ರಿಪ್ ಸಫಾರಿ ವ್ಯವಸ್ಥೆ ಇದೆ. ವೀರನಹೊಸಹಳ್ಳಿ ಗೇಟ್‌ನಿಂದ ಬೆಳಿಗ್ಗೆ ೬.೧೫, ಮಧ್ಯಾಹ್ನ ೩ರಿಂದ (ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಬಾರಿ) ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ.

Tags:
error: Content is protected !!