Mysore
18
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಈ ಬಾರಿಯೂ ತಾತ್ಕಾಲಿಕ ರಂಗಮಂದಿರದಲ್ಲಿಯೇ ದಸರಾ ಕಾರ್ಯಕ್ರಮ

ನವೀನ್ ಡಿಸೋಜ

೨೫೦ ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ; ಆರಂಭವಾಗದ ನೂತನ ರಂಗಮಂದಿರದ ಕಾಮಗಾರಿ

ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ರಂಗ ಮಂದಿರದ ಕಾಮಗಾರಿ ಆರಂಭ ಮಾಡುವುದು ವಿಳಂಬವಾಗಿದ್ದು, ಈ ಬಾರಿಯೂ ತಾತ್ಕಾಲಿಕ ರಂಗಮಂದಿರದಲ್ಲಿಯೇ ದಸರಾ ಕಾರ್ಯಕ್ರಮಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ.

ಕಳೆದ ವರ್ಷ ದಸರಾ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮುಂದಿನ ದಸರಾ ಒಳಗಾಗಿ ಗಾಂಧಿ ಮೈದಾನದಲ್ಲಿ ನೂತನ ರಂಗಮಂದಿರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದ್ದರು. ಅದರಂತೆ ೨.೦೫ ಕೋಟಿ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ಮಾಣಕ್ಕೆ ನೀಲ ನಕ್ಷೆಯೂ ಸಿದ್ಧವಾಗಿ ಕೆಲ ದಿನಗಳಲ್ಲಿಯೇ ಗುದ್ದಲಿ ಪೂಜೆಯೂ ನೆರವೇರಿತು. ಆದರೆ ರಂಗಮಂದಿರದ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ನೂತನ ವೇದಿಕೆ ನಿರ್ಮಾಣ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಜಿಲ್ಲಾಧಿಕಾರಿ ಹಾಗೂ ಅಂದಿನ ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ, ಪ್ರತಿ ದಸರಾದಲ್ಲಿ ವೇದಿಕೆ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ತಗಲುವ ಹಿನ್ನೆಲೆಯಲ್ಲಿ ಶಾಶ್ವತ ವೇದಿಕೆ ನಿರ್ಮಾಣಕ್ಕೆ ಕಾರ್ಯಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನಗರಸಭೆಯ ಎಂಟರ್‌ಪ್ರೈಸಸ್ ನಿಽಯಲ್ಲಿ ೭.೩೩ ಕೋಟಿ ರೂ. ಅನುದಾನವಿದ್ದು, ಈ ಪೈಕಿ ೨ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ರಂಗಮಂದಿರವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ವೇದಿಕೆ ನಿರ್ಮಾಣಕ್ಕೆ ಸರ್ವ ಸದಸ್ಯರು ಸಮ್ಮತಿಸಿದ್ದರು. ಆರಂಭದಲ್ಲಿ ನಗರಸಭೆಯಿಂದಲೇ ರಂಗಮಂದಿರ ನಿರ್ಮಾಣ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿತ್ತು. ತಾಂತ್ರಿಕ ಸಮಸ್ಯೆಗಳಿಂದ ಅದು ಆಗದೇ ಇದ್ದಾಗ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸುವ ಪ್ರಯತ್ನ ನಡೆಯಿತು. ಅದೂ ಸಾಧ್ಯವಾಗದೆ ಕೊನೆಗೆ ಲೋಕೋಪಯೋಗಿ ಇಲಾಖೆ ಮೂಲಕ ವೇದಿಕೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅದರಂತೆ ಕ್ರಿಯಾಯೋಜನೆ ಸಿದ್ಧಪಡಿಸಿರುವ ಲೋಕೋಪಯೋಗಿ ಇಲಾಖೆ ೨.೫೦ ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದೆ.

ಈ ಹಿಂದಿನ ಸಭೆಯಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ಮಾಣಕ್ಕೆ ತೀರ್ಮಾನವಾಗಿದ್ದು, ಇದೀಗ ಹೆಚ್ಚುವರಿಯಾಗಿ ೫೦ ಲಕ್ಷ ರೂ. ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೌನ್ಸಿಲ್ ಸಭೆಯಲ್ಲಿ ಸರ್ವ ಸದಸ್ಯರ ಅನುಮತಿ ಪಡೆದು ಅನುಮೋದನೆ ನೀಡಬೇಕಾಗಿದೆ. ಈಗಿರುವ ರಂಗಮಂದಿರ ಶಿಥಿಲಾವಸ್ಥೆಯಲ್ಲಿದ್ದು, ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಾಗಿ ಅಲ್ಲಿ ದೊಡ್ಡ ಸಮಾರಂಭಗಳನ್ನು ನಡೆಸಲು ಸಾಧ್ಯವಿಲ್ಲದೆ ಅದರ ಮುಂಭಾಗದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ದಸರಾ ಉತ್ಸವಕ್ಕೂ ಇಂತಹದ್ದೇ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಪ್ರತಿ ವರ್ಷ ೩೦ ಲಕ್ಷ ರೂ.ಗೂ ಹೆಚ್ಚು ಹಣ ಖರ್ಚುಮಾಡಲಾಗುತ್ತಿದೆ. ಹೀಗಾಗಿ ಈಗ ಹಳೆಯ ರಂಗಮಂದಿರವನ್ನು ತೆರವುಗೊಳಿಸಿ ನೂತನ ರಂಗಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಹೇಗಿರಲಿದೆ ನೂತನ ರಂಗಮಂದಿರ?:  ನೂತನ ರಂಗಮಂದಿರ ೨೧.೨೦೧೨.೦ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದ್ದು, ಇದು ಅಟ್ಯಾಚ್ಡ್ ರೆಸ್ಟ್ ರೂಂ ಇರುವ ೨ ಗ್ರೀನ್ ರೂಂ ಮತ್ತು ೨ ಡ್ರೆಸ್ಸಿಂಗ್ ರೂಂಗಳನ್ನು ಒಳಗೊಂಡಿರುತ್ತದೆ. ಜತೆಗೆ ವೇದಿಕೆ ಬದಿ ಗ್ಯಾಲರಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಇದರೊಂದಿಗೆ ವೇದಿಕೆ ಹಿಂಭಾಗದಲ್ಲಿ ಪಾವತಿಸಿ ಉಪಯೋಗಿಸುವ ಶೌಚಾಲಯ ಹಾಗೂ ಮೈದಾನದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಸ್ಥಳ ನಿರ್ಮಾಣವೂ ಈ ಯೋಜನೆಯಲ್ಲಿ ಸೇರಿದೆ.

” ನೂತನ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಅವರು ೨.೫೦ ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿಂದೆ ಕೌನ್ಸಿಲ್ ಸಭೆಯಲ್ಲಿ ೨ ಕೋಟಿ ರೂ.ಗಳಿಗೆ ಮಾತ್ರ ಅನುಮತಿ ಪಡೆಯಲಾಗಿದ್ದು, ಇದೀಗ ಮತ್ತೆ ಹೆಚ್ಚುವರಿ ಮೊತ್ತದ ಕುರಿತು ಕೌನ್ಸಿಲ್ ಅನುಮತಿ ಪಡೆಯಬೇಕಿದೆ. ಬಳಿಕ ಕಾಮಗಾರಿ ಆರಂಭವಾಗಲಿದೆ.”

-ರಮೇಶ್, ಪೌರಾಯುಕ್ತ, ಮಡಿಕೇರಿ

Tags:
error: Content is protected !!