ನವೀನ್ ಡಿಸೋಜ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಾಕಷ್ಟು ಸಂಗ್ರಹ ವಿದ್ದು, ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಯುದ್ಧದ ವಾತಾವರಣದಿಂದಾಗಿ ವಿಶ್ವದಾದ್ಯಂತ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾಗಿ, ಭಾರತ ಸರ್ಕಾರ ಮೊದಲ ಆದ್ಯತೆಯನ್ನು ಮನೆ ಬಳಕೆಯ ಅಡುಗೆ ಸಿಲಿಂಡರ್‌ಗಳಿಗೆ ನೀಡಬೇಕು ಎಂದು ಸೂಚಿಸಿತ್ತು. ಅದರನ್ವಯ ಮನೆ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ವಾಗದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ.
ಈ ಮಧ್ಯೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಲಭ್ಯತೆಯಲ್ಲಿ ಕೊರತೆ ಎದುರಾಗಿದೆ. ಇದು ಹೋಟೆಲ್ ಉದ್ಯಮಿಗಳನ್ನು ಕಂಗೆಡಿಸಿದೆ. ಈಗಾಗಲೇ ಹಲವು ಹೋಟೆಲ್‌ಗಳವರು ಒಂದಷ್ಟು ಸಿಲಿಂಡರ್‌ಗಳ ದಾಸ್ತಾನು ಹೊಂದಿದ್ದರೂ ಅದು ಯಾವಾಗ ಖಾಲಿಯಾಗುತ್ತದೆ ಎಂದು ಹೇಳಲಾಗದು. ಶೀಘ್ರದಲ್ಲಿ ಸಿಲಿಂಡರ್ ಪೂರೈಕೆಯಾಗದೇ ಹೋದರೆ ಹೋಟೆಲ್ ನಡೆಸುವುದೇ ಕಷ್ಟಕರವಾಗುವ ಸಾಧ್ಯತೆಗಳಿವೆ ಎಂದು ಹೋಟೆಲ್ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಸಾರ್ವಜನಿಕರಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಎದುರಾಗಬಹುದು ಎಂಬ ಆತಂಕ ಎದುರಾಗಿದೆ. ಹಾಗಾಗಿ ಬುಕ್ ಮಾಡಿದವರು ತಮ್ಮ ಮನೆ ಬಾಗಿಲಿಗೆ ಅಡುಗೆ ಅನಿಲ ಸಿಲಿಂಡರ್ ಬರುವವರೆಗೂ ಕಾಯದೇ ನೇರವಾಗಿ ಏಜೆನ್ಸಿಗೆ ಎಡತಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಸಾಕಷ್ಟು ಸಂಗ್ರಹವಿದ್ದು, ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ವಾಗುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಅಲ್ಲದೆ, ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು, ಯಾವುದೇ ಆತಂಕಕ್ಕೆ ಒಳಗಾಗದೇ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಮಾತ್ರ ಬುಕ್ ಮಾಡಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಲಾಗಿದೆ.
ಅಡುಗೆ ಅನಿಲವನ್ನು ಮಿತವಾಗಿ ಪೂರೈಸಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಲ್‌ಪಿಜಿ ವಿತರಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗಳನ್ನು ಎಂದಿನಂತೆ ವಿತರಕರು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡಲಿದ್ದಾರೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ವಿತರಣೆಯಲ್ಲಿ ಕುಂದುಕೊರತೆಗಳು ಕಂಡು ಬಂದಲ್ಲಿ ಪರಿಹರಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.
” ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿದ್ದು, ಎಂದಿ ನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡಲಿದ್ದಾರೆ. ಗ್ರಾಹಕರು ಆತಂಕಕ್ಕೆ ಒಳಗಾಗದೇ ಅಗತ್ಯದಷ್ಟು ಪ್ರಮಾಣದಲ್ಲಿ ಮಾತ್ರ ಬುಕ್ ಮಾಡಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು. ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೃಹಬಳಕೆ ಗ್ಯಾಸ್ ಸಿಲಿಂಡರ್ ವಿತರಣೆಯ ವ್ಯವಸ್ಥೆ ಸುಗಮವಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು.”
-ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ
ಕುಂದುಕೊರತೆಗಳಿಗೆ ಸಂಪರ್ಕಿಸಬೇಕಾದ ಸಹಾಯವಾಣಿ..!:
ಉಪ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ.ಮೊ.ಸಂ.೯೮೪೫೭೦೬೯೮೦, ಮಾರಾಟ ವ್ಯವಸ್ಥಾಪಕರು(ಎಲ್‌ಪಿಜಿ)-ಐಒಸಿ- ೯೫೮೫೫೧೫೩೮೯, ಮಾರಾಟ ವ್ಯವಸ್ಥಾಪಕರು (ಎಲ್‌ಪಿಜಿ)-ಬಿಪಿಸಿ ಮೊ.ಸಂ.೯೮೫೩೭೩೫೯೪೪ ಮತ್ತು ಸಹಾಯಕ ಮಾರಾಟ ವ್ಯವಸ್ಥಾಪಕರು(ಎಲ್‌ಪಿಜಿ)-ಎಚ್‌ಪಿಸಿ- ೭೦೦೧೬೪೨೫೫೬, ತಾಲ್ಲೂಕು ಕಚೇರಿ ಮಡಿಕೇರಿ -೯೪೮೦೫೪೪೫೩೧, ವಿರಾಜಪೇಟೆ -೮೧೦೫೦೭೨೮೬೯, ಸೋಮವಾರಪೇಟೆ -೯೪೮೦೦೭೨೬೩೨, ಕುಶಾಲನಗರ -೯೩೮೦೦೩೨೭೨೧ ಹಾಗೂ ಪೊನ್ನಂಪೇಟೆ -೯೧೦೮೯೪೦೮೭೫ ಈ ದೂರವಾಣಿ ಸಂಖ್ಯೆಗಳಿಗೆ ಗ್ರಾಹಕರು ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.





