Mysore
22
clear sky

Social Media

ಸೋಮವಾರ, 19 ಜನವರಿ 2026
Light
Dark

ಮಡಿಕೇರಿಯಲ್ಲಿ ಕುಡಿಯುವ ನೀರಿಗಿಲ್ಲ ಆತಂಕ

ನವೀನ್ ಡಿಸೋಜ

ನಗರಕ್ಕೆ ನೀರು ಸರಬರಾಜಾಗುವ ಎಲ್ಲ ಮೂಲಗಳಲ್ಲೂ ನೀರು ಸಮೃದ್ಧ; ಅಗತ್ಯ ಮುನ್ನೆಚ್ಚರಿಕೆ ಕ್ರಮ

ಮಡಿಕೇರಿ: ಕಳೆದ ಸಾಲಿನಲ್ಲಿ ದೀರ್ಘಾವಧಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಮಡಿಕೇರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ. ಕುಂಡಾಮೇಸಿ, ಕೂಟುಹೊಳೆ ಸೇರಿದಂತೆ ನಗರಕ್ಕೆ ನೀರು ಸರಬರಾಜಾಗುವ ಎಲ್ಲ ಮೂಲಗಳಲ್ಲೂ ನೀರು ಸಮೃದ್ಧವಾಗಿದ್ದು, ಈ ಬಾರಿ ಕುಡಿಯುವ ನೀರಿಗೆ ಕೊರತೆಯಾಗದು ಎಂದು ನಗರಸಭೆ ಇಂಜಿನಿಯರ್‌ಗಳು ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದೆ. ದೀರ್ಘಾವಧಿ ಮಳೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಅಂತರ್ಜಲ ಸಮೃದ್ಧವಾಗಿದೆ. ಕೆರೆ, ಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರಿನ ಸಂಗ್ರಹವಾಗಿದ್ದು, ಈ ಬಾರಿ ಬಹುತೇಕ ಕಡೆಗಳಲ್ಲಿ ಬೇಸಿಗೆಯ ಕುಡಿಯುವ ನೀರಿನ ಬವಣೆ ನೀಗಿದಂತಾಗಿದೆ. ಮುಖ್ಯವಾಗಿ ಮಡಿಕೇರಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ನಗರಸಭೆ ಅಽಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕುಂಡಾ ಮೇಸ್ತ್ರಿಕಿರು ಅಣೆಕಟ್ಟೆಯ ನೀರು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮಡಿಕೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಕಡಿಮೆಯಾಗಿದೆ. ಆದರೂ ಕೆಲವು ಬಾರಿ ಬಿಸಿಲ ಬೇಗೆಗೆ ಕೂಟುಹೊಳೆ ನೀರು ಬತ್ತಿಹೋಗುತ್ತಿದ್ದು, ಕುಂಡಾ ಮೇಸ್ತ್ರಿಯಿಂದ ನೀರೆತ್ತಿದರೂ ಕೆಲವು ಬಡಾವಣೆಗಳಿಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವ ಪರಿಸ್ಥಿತಿಯಿದೆ. ಆದರೆ ಈ ವರ್ಷ ಬೇಸಿಗೆಯಲ್ಲಿ ಅಂತಹ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ತೀರಾ ಕಡಿಮೆಯಿದೆ.

ಕೂಟು ಹೊಳೆಗೂ ನೀರಿನ ಹರಿವು ಉತ್ತಮವಾಗಿದ್ದು, ಕುಂಡಾ ಮೇಸ್ತ್ರಿಯಲ್ಲಿಯೂ ಸಾಕಷ್ಟು ನೀರಿದೆ. ಇದಲ್ಲದೆ ನಗರದ ಪಂಪು ಕೆರೆ, ರೋಷನಾರ, ಕನ್ನಂಡ ಬಾಣೆ ಸೇರಿದಂತೆ ಎಲ್ಲ ನೀರಿನ ಮೂಲಗಳಲ್ಲಿಯೂ ನೀರು ಸಮೃದ್ಧವಾಗಿದ್ದು, ಯಾವುದೇ ಸಮಸ್ಯೆ ಎದುರಾಗದು ಎಂಬ ನಂಬಿಕೆಯಲ್ಲಿ ನಗರಸಭೆಯಿದೆ. ಜನಸಂಖ್ಯಾ ಆಧಾರದಲ್ಲಿ ಮಡಿಕೇರಿ ನಗರಕ್ಕೆ ಪ್ರತಿ ದಿನ ೪೫ರಿಂದ ೫೦ ಲಕ್ಷ ಲೀಟರ್ ನೀರು ಬೇಕಿದೆ. ಆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನೀರಿನ ಬಳಕೆ ಹೆಚ್ಚಾಗಿದ್ದು, ಪ್ರತಿ ದಿನ ಅಂದಾಜು ೭೦ ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಶೇ.೧೫ರಷ್ಟು ನೀರು ಸೋರಿಕೆಯಾಗುತ್ತಿದೆ. ಸದ್ಯ ಕೂಟು ಹೊಳೆಯಲ್ಲಿ ಇನ್ನು ಒಂದೂವರೆ ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಫೆಬ್ರವರಿ ಮೊದಲ ವಾರದಿಂದಲೇ ಕುಂಡಾ ಮೇಸ್ತ್ರಿಯಿಂದ ಕೂಟುಹೊಳೆಗೆ ನೀರು ಸರಬರಾಜು ಆರಂಭಿಸಲಾಗುತ್ತದೆ. ಕುಂಡಾ ಮೇಸ್ತ್ರಿಯ ಜಲ ಮೂಲಗಳಲ್ಲಿ ಉತ್ತಮ ಹರಿವಿದ್ದು, ಬೇಸಿಗೆ ಮುಗಿಯುವವರೆಗೂ ಯಾವುದೇ ಅಡೆ-ತಡೆ ಇಲ್ಲದೇ ನೀರು ಸರಬರಾಜು ಮಾಡಬಹುದಾಗಿದೆ.

ನಗರಕ್ಕೆ ನೀರು ಸರಬರಾಜು ಮಾಡಲು ಕೂಟು ಹೊಳೆಯಲ್ಲಿ ೩೦೦ಎಚ್‌ಪಿ ಸಾಮರ್ಥ್ಯದ ಮೂರು ಮೋಟಾರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಮೋಟಾರ್ ೮ ಗಂಟೆಗಳಂತೆ ೨೪ ಗಂಟೆಯೂ ಕೂಟು ಹೊಳೆಯಿಂದ ನೀರೆತ್ತಲಾಗುತ್ತಿದೆ. ಕುಂಡಾ ಮೇಸ್ತ್ರಿಯಲ್ಲಿಯೂ ಮೂರು ಮೋಟಾರ್‌ಗಳಿದ್ದು, ಫೆಬ್ರವರಿ ಬಳಿಕ ಅಲ್ಲಿಂದ ಕೂಟು ಹೊಳೆಗೆ ನೀರು ಹರಿಸಲಾಗುತ್ತದೆ. ಎರಡೂ ಕಡೆ ಒಂದೊಂದು ಹೆಚ್ಚುವರಿ ಮೋಟಾರ್‌ಗಳನ್ನು ಇರಿಸಿಕೊಳ್ಳಲಾಗಿದ್ದು, ತಾಂತ್ರಿಕ ಸಮಸ್ಯೆ ಉಂಟಾಗದಂತೆಯೂ ಎಚ್ಚರ ವಹಿಸಲಾಗುತ್ತಿದೆ.

” ನಗರದ ಎಲ್ಲಾ ಜಲ ಸಂಗ್ರಹಾಗಾರಗಳಲ್ಲಿ ನೀರಿನ ಶೇಖರಣೆ ಉತ್ತಮವಾಗಿದೆ. ಕುಂಡಾಮೇಸ್ತ್ರಿಯಲ್ಲಿ ಜಲಮೂಲಗಳಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಕೂಟುಹೊಳೆಯಲ್ಲಿ ಇನ್ನು ಒಂದೂವರೆ ತಿಂಗಳಿಗಾಗುವಷ್ಟು ನೀರಿದೆ. ಮುಂದಿನ ತಿಂಗಳಿಂದ ಕುಂಡಾ ಮೇಸ್ತ್ರಿ ನೀರನ್ನು ಕೂಟುಹೊಳೆಗೆ ಹರಿಸುತ್ತೇವೆ. ಈ ವರ್ಷ ನಗರಕ್ಕೆ ಕುಡಿಯುವ ನೀರಿನ ಅಭಾವ ಎದುರಾಗುವುದಿಲ್ಲ.”

-ಎನ್.ಪಿ.ಹೇಮಕುಮಾರ್, ಇಂಜಿನಿಯರ್, ನಗರಸಭೆ, ಮಡಿಕೇರಿ

ಅಮೃತ್ ೨.೦ ಪೂರ್ಣವಾದರೆ ಸೋರಿಕೆಗೆ ಕಡಿವಾಣ…:  ನಗರದಲ್ಲಿರುವ ಪೈಪ್‌ಲೈನ್‌ಗಳೆಲ್ಲವೂಹಳೆಯದಾಗಿದ್ದು, ಬಹುತೇಕ ತುಕ್ಕು ಹಿಡಿದಿವೆ. ಇದರಿಂದ ಪ್ರತಿನಿತ್ಯ ಅಲ್ಲಲ್ಲಿ ಪೈಪ್ ಒಡೆದು ಸಮಸ್ಯೆಯಾಗುತ್ತಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೋರಿಕೆಯಾಗುತ್ತಿದೆ. ಈಗಾಗಲೇ ನಗರದಲ್ಲಿ ಅಮೃತ್ ೨.೦ ಯೋಜನೆಯಡಿ ಬಹುತೇಕ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು, ಈ ಕಾಮಗಾರಿ ಪೂರ್ಣಗೊಂಡರೆ ಹೊಸ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಇದರಿಂದ ನೀರಿನ ಸೋರಿಕೆಗೆ ಕಡಿವಾಣ ಬೀಳಲಿದೆ.

 

 

 

Tags:
error: Content is protected !!