Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಸ್ತೆಗಳಲ್ಲೇ ಕೊಳೆತು ನಾರುತ್ತಿದೆ ಕಸದ ರಾಶಿ

ವಿಲೇವಾರಿಯಾಗದ ಮನೆ ಕಸ: ವಿಜಯನಗರ 4ನೇ ಹಂತದ ನಿವಾಸಿಗಳ ಗೋಳು

ಸಾಲೋಮನ್

ಮೈಸೂರು: ನಗರದ ವಿಜಯನಗರ 4ನೇ ಹಂತದ ಯಾವ ರಸ್ತೆಗೆ ಹೋದರೂ ಅಲ್ಲಲ್ಲಿ ಕಸದ ರಾಶಿಗಳೇ ಕಂಡು ಬರುತ್ತಿದ್ದು, ಕಸ ವಿಲೇವಾರಿ ಮಾಡಿ ವಾರಗಳೇ ಕಳೆದಿವೆ ಎನ್ನುವುದನ್ನು ಸಾರಿ ಹೇಳುತ್ತಿವೆ. ಮನೆಗಳ ಮುಂದೆ ತುಂಬಿರುವ ದೊಡ್ಡ ಕಸದ ಚೀಲಗಳು ಹಾಗೂ ಕಸದ ಬಕೆಟ್‌ಗಳನ್ನು ಪ್ರತಿನಿತ್ಯ ಕಾಣಬಹುದು. ಕಸ ವಿಲೇವಾರಿ ಮಾಡದಿದ್ದರೆ ನಾಯಿಗಳು ಅದನ್ನು ಮನೆ ಮುಂದೆಯೇ ಚೆಲ್ಲಾಡಿ ಹೋಗುತ್ತಿದ್ದು, ಬಡಾವಣೆಯ ಜನರಿಗೆ ಇದು ಪ್ರತಿನಿತ್ಯದ ಸಮಸ್ಯೆಯಾಗಿದೆ.

ಪ್ರತಿನಿತ್ಯ ಕಸ ಸಂಗ್ರಹಣೆಯಾಗುತ್ತಿಲ್ಲ: ಹೂಟಗಳ್ಳಿ ನಗರ ಸಭೆ ವ್ಯಾಪ್ತಿಗೊಳಪಡುವ ಈ ಬಡಾವಣೆಯಲ್ಲಿ ಪ್ರತಿ ನಿತ್ಯ ಕಸ ಸಂಗ್ರಹಣೆ ಯಾಗುತ್ತಿಲ್ಲ. ಅಪರೂಪಕ್ಕೆ ಕಸ ಸಂಗ್ರಹಣೆ ವಾಹನಗಳು ಬಂದರೂ ಮನೆ ಮುಂಭಾಗ ದಲ್ಲಿ ಬಕೆಟ್‌ ಹಾಗೂ ಕವರ್ ಗಳಲ್ಲಿ ಇಟ್ಟಿರುವ ಕಸವನ್ನು ಅವರು ಸಂಗ್ರಹಿಸು ವುದಿಲ್ಲ. ಮನೆಯವರೇ ಕಸ ತಂದು ಆಟೋಗೆ ಹಾಕಬೇಕು ಎಂದು ಜೋರು ಮಾಡುತ್ತಾರೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ರಸ್ತೆಯ ಬದಿ ಕಸದ ರಾಶಿ: ಕಳೆದ 8 ದಿನಗಳಿಂದ ಮನೆ ಕಸ ತೆಗೆಯದ ಕಾರಣ ಬಡಾವಣೆಯ ಎಲ್ಲ ರಸ್ತೆಗಳಲ್ಲೂ ಸ್ಥಳೀಯರು ಚೀಲಗಳಲ್ಲಿ ತುಂಬಿ ಬಿಸಾಡಿದ ಕಸದ ರಾಶಿ ಕೆಲವೆಡೆ ಇದೆ. ಆಟೋಗಳಲ್ಲಿ ಸಂಗ್ರಹಿಸಿದ ಕಸ ವನ್ನು ರಸ್ತೆ ಮಗ್ಗುಲಲ್ಲಿ ಸುರಿದು ಹೋಗುತ್ತಿದ್ದಾರೆ ಎಂದು ಜನರು ಆರೋಪಿಸುತ್ತಾರೆ.

ಕಸ ವಿಲೇವಾರಿಗೆ ಸಿಬ್ಬಂದಿ ಕೊರತೆ: ವಿಜಯ ನಗರ 2ನೇ ಹಂತದಲ್ಲಿ ಕಸದ ಸಮಸ್ಯೆ ಉದ್ಭವಿ ಸಿರುವ ಬಗ್ಗೆ ಸ್ಥಳೀಯರು ‘ಆಂದೋಲನ’ ಪತ್ರಿಕೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ನಂತರ ಹೂಟಗಳ್ಳಿ ನಗರಸಭೆಯ ಪೌರಾಯುಕ್ತರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ವಿಚಾರಿಸಲಾಯಿತು.

ಈ ಬಗ್ಗೆ ವಿವರಣೆ ನೀಡಿದ ಪೌರಾಯುಕ್ತ ಚಂದ್ರಶೇಖರ್, ಸ್ಥಳೀಯರ ಸಮಸ್ಯೆಗಳು ನನಗೆ ಅರ್ಥವಾಗಿದೆ. ನಮಗಿರುವ ವಾಹನ ಸೌಕರ್ಯ ಹಾಗೂ ಸಿಬ್ಬಂದಿಯನ್ನು ಬಳಸಿಕೊಂಡು ಸೋಮವಾರದಿಂದ ಮನೆ ಮನೆ ಕಸ ತೆರವು ಸೋಮವಾರದಿಂದ ಮನೆ ಮನೆ ಕಸ ತೆರವು ಮಾಡಿಸುತ್ತಿದ್ದೇನೆ. ಯಾವುದನ್ನೂ ಇನ್ನೂ ಸರಿ ಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

2021ರಲ್ಲಿ ಹೂಟಗಳ್ಳಿ ನಗರಸಭೆ ಅಸ್ತಿತ್ವಕ್ಕೆ ಬಂದಿದ್ದು, ಇದರೊಂದಿಗೆ ಕೂರ್ಗಳ್ಳಿ, ಬೆಳವಾಡಿ, ಹೂಟಗಳ್ಳಿ ಹಾಗೂ ಹಿನಕಲ್ ಗ್ರಾಮಗಳನ್ನು ಸೇರಿಸಲಾಯಿತು. ನಂತರ ಕೈಗಾರಿಕಾ ಬಡಾವಣೆ ಮತ್ತು ವಿಜಯನಗರ 4ನೇ ಹಂತವನ್ನೂ ಸೇರಿಸಲಾಗಿದೆ. ಆದರೆ ಮುಡಾದಿಂದ ಬಡಾವಣೆ ಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡದ ಕಾರಣ ಇಲ್ಲಿನ ವಿದ್ಯುತ್ ಕಂಬಗಳು ಹಾಗೂ ಲೈನ್ ವ್ಯವಸ್ಥೆ, ಒಳಚರಂಡಿ, ಕುಡಿಯುವ ನೀರು ಲೈನ್ ವ್ಯವಸ್ಥೆ, ಒಳಚರಂಡಿ, ಕುಡಿಯುವ ನೀರು ಸರಬರಾಜು, ಉದ್ಯಾನವನಗಳು ಮೊದಲಾದ ಕಾಮಗಾರಿಗಳು ಪೂರ್ಣವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಇನ್ನೂ ಯಾವುದೇ ಪ್ರಕ್ರಿಯೆಗಳು ಪೂರ್ಣವಾಗಿಲ್ಲ. ಸ್ಥಳೀಯರಿಗೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಕಸ ವಿಲೇವಾರಿ ನಡೆಸುತ್ತಿದ್ದೇವೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.

ಸರ್ಕಾರಕ್ಕೆ ಪ್ರಸ್ತಾವನೆ: ಸದ್ಯಕ್ಕೆ ನಮ್ಮಲ್ಲಿ 20 ಆಟೋಗಳು, 100 ಮಂದಿ ಪೌರಕಾರ್ಮಿಕರು ಇದ್ದಾರೆ. ಇನ್ನೂ 10 ಆಟೋ ಟಿಪ್ಪರ್‌ಗಳು ಹಾಗೂ ಪೌರಕಾರ್ಮಿಕರು ಬೇಕೆಂಬ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅವೆಲ್ಲ ಸವಲತ್ತು ಸಿಕ್ಕಿದರೆ ಕಸದ ಸಮಸ್ಯೆ ಬಗೆಹರಿಯುತ್ತದೆ ಎಂದು ಪೌರಾಯುಕ್ತರು ವಿವರಿಸಿದರು.

ಹೂಟಗಳ್ಳಿ ನಗರ ಸಭೆಯಲ್ಲಿ ಪ್ರತಿನಿತ್ಯ 28 ಟನ್ ಕಸ ಸಂಗ್ರಹಣೆ ಆಗು ತ್ತಿದೆ. ಅದರಲ್ಲಿ ಒಣ ಕಸ ವಿಂಗಡನೆ ಮಾಡಲು ಹಿನಕಲ್ನಲ್ಲಿ 7 ಎಕರೆ ಜಾಗ ಕೊಟ್ಟಿದ್ದಾರೆ. ಹಸಿ ಕಸ ಸಂಗ್ರಹಣೆಗೆ ಹೂಟಗಳ್ಳಿಯಲ್ಲಿ 2 ಎಕರೆ ಜಮೀನು ನೀಡಿದ್ದಾರೆ. ಆದರೆ ಅದಕ್ಕೆ ಬೇಕಾದ ಅಗತ್ಯ ಸೌಕರ್ಯಗಳು ಇಲ್ಲ. ಕಳೆದ ವಾರ ವಿಜಯನಗರ ಭಾಗದಲ್ಲಿ ಸರ್ವೆ ಮಾಡಿಸಲಾಗಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ.
-ಚಂದ್ರಶೇಖರ್, ಪೌರಾಯುಕ್ತರು, ಹೂಟಗಳ್ಳಿ ನಗರ ಸಭೆ

ಒಂದು ವಾರದಿಂದ ಕಸ ತೆಗೆದಿಲ್ಲ. ಸೋಮವಾರದಿಂದ ಮನೆಯಿಂದ ನೂರು ಮೀಟರ್ ದೂರದಲ್ಲಿ ಕಸ ಸಂಗ್ರಹಣೆ ವಾಹನ ನಿಲ್ಲಿಸುವ ಪೌರಕಾರ್ಮಿಕರು ನೀವೆ ಕಸ ತಂದು ಹಾಕಿ ಎಂದು ಹೇಳುತ್ತಾರೆ. ಮನೆ ಮುಂದೆ ಕಸ ಇಟ್ಟಿದ್ದರೆ ನಾವು ತೆಗೆದುಕೊಳ್ಳುವುದಿಲ್ಲ ಎಂದು ಜಬರ್ದಸ್ತ್ ಮಾಡುತ್ತಾರೆ.
-ಶ್ರುತಿ, ಸ್ಥಳೀಯರು

ಕಳೆದ ಎಂಟು ದಿನಗಳಿಂದ ಮನೆ ಕಸ ವಿಲೇವಾರಿ ಮಾಡಿರಲಿಲ್ಲ. ಇದೀಗ ಕಸ ಸಂಗ್ರಹಣೆಯ ಆಟೋ ಬರುತ್ತಿದೆ. ಕಸ ಸಂಗ್ರಹಣೆಯ ವಾಹನ ರಸ್ತೆಯಲ್ಲಿ ಹೋಗುವಾಗ ಮನೆಯವರೇ ಬಕೆಟ್‌ನಲ್ಲಿರುವ ಕಸವನ್ನು ತೆಗೆದುಕೊಂಡು ಹೋಗಿ ಹಾಕಬೇಕು. ಚಲಿಸುವ ವಾಹನಕ್ಕೆ ಕಸ ಹಾಕಲು ಕಷ್ಟವಾಗುತ್ತಿದೆ. ಆದರೆ ಈ ಸಮಸ್ಯೆಯನ್ನು ಪೌರಕಾರ್ಮಿಕರು ಅರ್ಥ ಮಾಡಿಕೊಳ್ಳುತ್ತಿಲ್ಲ.
– ಪ್ರಕಾಶ್ ರೆಡ್ಡಿ, ಸ್ಥಳೀಯರು.
.

Tags: