Mysore
21
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಆಗ ಮರಗಳು ಉಳಿದವು: ಈಗ ಉರುಳಿದವು?

ಸಾಲೋಮನ್

ಮೈಸೂರಿನ ಎಂ.ಜಿ. ರಸ್ತೆಯಲ್ಲಿ ಹೋರಾಟದಿಂದ ವೃಕ್ಷಗಳು ಪಾರು

ಹೈದರ್ ಅಲಿ ರಸ್ತೆಯಲ್ಲಿ ರಾತ್ರೋರಾತ್ರಿ ಮರಗಳ ‘ಹತ್ಯೆ’

೪೦ ಮರಗಳ ಹನನದಿಂದ ಪರಿಸರವಾದಿಗಳಲ್ಲಿ ಕಿಚ್ಚು

ಮರಗಳ ತೆರವು ಮಾಡಿದಲ್ಲೇ ಸಸಿ ನೆಡಲು ಪರಿಸರ ಪ್ರೇಮಿಗಳ ಸಿದ್ಧತೆ 

ಮೈಸೂರು: ನಗರದ ಎಂ.ಜಿ.ರಸ್ತೆ (ಲಲಿತ್ ಮಹಲ್ ರಸ್ತೆ) ಇಕ್ಕೆಲಗಳಲ್ಲಿ ಅಂದು ೫೦ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡುವ ಕಾರ್ಯಕ್ಕೆ ಪರಿಸರ ಪ್ರೇಮಿಗಳು, ತಜ್ಞರು, ಸಾರ್ವಜನಿಕರು ಸೇರಿ ತಡೆಯೊಡ್ಡಿದಾಗ, ಜನ ಶಕ್ತಿಗೆ, ಹೋರಾಟಕ್ಕೆ ನ್ಯಾಯ ಸಿಕ್ಕಿತ್ತು.

ಆದರೆ ಕಳೆದ ಭಾನುವಾರ ನಗರದ ಹೈದರ್ ಅಲಿ ರಸ್ತೆಯ ಸುಮಾರು ೫೦ ವರ್ಷಗಳಷ್ಟು ಹಳೆಯ ಮರಗಳ ಹನನ ನಡೆಸಲಾಗಿದ್ದು. ಒಂದು ರೀತಿ ಪ್ರಕೃತಿ, ಪ್ರಾಣಿ ಪಕ್ಷಿಗಳ ಮೇಲೆ ಅಮಾನವೀಯ ದಾಳಿ ಎನ್ನುವುದು ಅನೇಕ ಪರಿಸರ ಪ್ರೇಮಿಗಳ ಅಭಿಪ್ರಾಯ.

೨೦೧೧ರಲ್ಲಿ ನಗರದ ಎಂ.ಜಿ. (ಲಲಿತ ಮಹಲ್) ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹೆಚ್ಚು ಒತ್ತಡ ಇತ್ತು. ಪ್ರತಿದಿನ ನೂರಾರು ಮರಳು ಲಾರಿಗಳು, ಖಾಸಗಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಇದರಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಮನಗಂಡ ಜಿಲ್ಲಾಡಳಿತವು ರಸ್ತೆಯ ಇಕ್ಕೆಲಗಳಲ್ಲಿದ್ದ ಸುಮಾರು ೫೦ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣಗೊಳಿಸಲು ನಿರ್ಧರಿಸಿತು. ಆದರೆ, ಮರ ಕಡಿಯುವ ಸಂಬಂಧ ಮೈಸೂರಿನಲ್ಲಿ ಭಾರೀ ಹೋರಾಟವೇ ನಡೆಯಿತು. ಸಾರ್ವಜನಿಕರ ವಿರೋ ಧಕ್ಕೆ ಸರ್ಕಾರ ತಲೆಬಾಗಿ ಯೋಜನೆಯನ್ನು ರದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ.

೨೦೧೧ರಲ್ಲಿ ನಡೆದ ಈ ಹೋರಾಟದಲ್ಲಿ ನೂರಕ್ಕೂ ಹೆಚ್ಚು ಹೋರಾಟಗಾರರು ಭಾಗವಹಿಸಿದ್ದರು. ಅಂದಿನ ಸಿಎ ಶಾಶ್ವತಿ ಮಿಶ್ರಾ ಅವರು ಎಂ.ಜಿ. ರಸ್ತೆಯಲ್ಲಿಯೇ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಸಭೆ ನಡೆಸಿದರು. ಅಂದು ವಿರೋಧಿಸುವವರ ಸಂಖ್ಯೆಯೇ ಹೆಚ್ಚಿತ್ತು. ಹೀಗಾಗಿ ಮರ ಕಡಿಯಲು ಅನುಮತಿ ನೀಡುವುದಿಲ್ಲ ಎಂದು ಖಡಕ್ಕಾಗಿ ಷರಾ ಬರೆದರು. ಆನಂತರ ಮರಗಳನ್ನು ಉಳಿಸಿಕೊಂಡೇ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಯಿತು. ಇಂದಿಗೂ ಕೂಡ ನೂರಾರು ಮರಗಳು ಸಾರ್ವಜನಿಕರು ಹಾಗೂ ಪಕ್ಷಿಗಳು ಮತ್ತು ಜೀವಜಂತುಗಳಿಗೆ ಆಶ್ರಯವಾಗಿವೆ. ಹೋರಾಟದಲ್ಲಿ ಪರಶುರಾಮೇಗೌಡ, ಪ್ರೊ.ಕಾಳಚನ್ನೇಗೌಡ, ಲೀಲಾ ಶಿವಶಂಕರ್ ಸೇರಿದಂತೆ ಇಡೀ ಪರಿಸರ ಬಳಗವೇ ಹೋರಾಟ ನಡೆಸಿತ್ತು.

ಇಂತಹದೊಂದು ದೊಡ್ಡ ಹೋರಾಟದ ಯಶಸ್ಸು ಕಣ್ಣಮುಂದೆ ಇರುವಾಗಲೇ ನಗರಪಾಲಿಕೆ ಮತ್ತು ಅರಣ್ಯಾಽಕಾರಿಗಳು ೪೦ ಮರಗಳ ಹನನ ನಡೆಸಿದ್ದಾರೆ. ಸಹಜವಾಗಿ ಇದು ಪರಿಸರವಾದಿಗಳು, ಹೋರಾಟಗಾರರನ್ನು ಕೆರಳಿಸಿದೆ. ಲಲಿತಮಹಲ್ ರಸ್ತೆಯಲ್ಲಿ ಸಾಧ್ಯವಾಗಿದ್ದು, ಹೈದರ್ ಅಲಿ ರಸ್ತೆಯ ಮರಗಳ ವಿಷಯದಲ್ಲಿ ಏಕೆ ಸಾಧ್ಯವಾಗಲಿಲ್ಲ? ಕನಿಷ್ಠ ಅಂತಹ ಪ್ರಯತ್ನಕ್ಕೂ ಅವಕಾಶ ನೀಡಲಿಲ್ಲ.

ಅಭಿವೃದ್ಧಿಗೆ ನಿಜಕ್ಕೂ ಮರಗಳು ಅಡ್ಡಿಯಾಗಿದ್ದವೆ?: ನಗರದ ಎಸ್‌ಪಿ ಕಚೇರಿ ಮುಂಭಾಗ ಹೈದರ್ ಅಲಿ ರಸ್ತೆಯಲ್ಲಿ ಮರಗಳನ್ನು ತೆರವು ಮಾಡದೆ ಅಗಲೀಕರಣ ಸಾಧ್ಯವಾಗುತ್ತಿರಲಿಲ್ಲವೆ? ನಿಜಕ್ಕೂ ಅಡ್ಡಿಯಾಗಿತ್ತೆ? ಎನ್ನುವ ಪ್ರಶ್ನೆಗಳು ಪರಿಸರ ಪ್ರಿಯರನ್ನು ಕಾಡುತ್ತಿವೆ.

ಸಿಡಿಪಿಯಲ್ಲಿ ಇದೆ: ನಗರದ ಎಸ್‌ಪಿ ಕಚೇರಿ ಮುಂದೆ ಇರುವ ರಸ್ತೆ ಕೇವಲ ಹತ್ತು ಮೀಟರ್ ಮಾತ್ರ. ಇದರ ಅಗಲೀಕರಣ ಆಗಬೇಕು ಎಂದು ೨೦೧೧ರ ಸಿಡಿಪಿಯಲ್ಲಿ ಗೊತ್ತು ಮಾಡಲಾಗಿದೆ. ಆದರೆ, ಇದರ ಸಮೀಪದ ರಸ್ತೆಗಳು ಅಗಲೀಕರಣವಾಗಿದ್ದು, ಇದೇ ಸಿಡಿಪಿ ಯೋಜನೆಯ ಪ್ರಕಾರವೇ. ಆಗ ಅನುದಾನದ ಕೊರತೆ ಇದ್ದ ಕಾರಣ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳು ಮುಂದಾಗಲಿಲ್ಲ.

ಸುತ್ತಲಿನ ಎಲ್ಲಾ ರಸ್ತೆಗಳ ಅಗಲೀಕರಣ ಆದ ನಂತರ ಬಾಕಿ ಉಳಿದಿರುವ ಈ ರಸ್ತೆ ಅಭಿವೃದ್ಧಿ ಮಾಡಲೇ ಬೇಕಾಗಿದೆ. ಅಲ್ಲದೆ ಈ ರಸ್ತೆ ಅಗಲೀಕರಣಕ್ಕೆ ಸರ್ಕಾರ ೪ ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿರುವುದರಿಂದ ಕಾಮಗಾರಿ ಅನಿ ವಾರ್ಯವಾಗಿತ್ತು ಎಂಬುದು ನಗರಪಾಲಿಕೆ ಅದಿಕಾರಿಗಳ ವಲಯದಲ್ಲಿ ಕೇಳಿಬರುತ್ತಿರುವ ಸಮರ್ಥನೆ.

ಅರಣ್ಯ ಇಲಾಖೆಗೆ ೮ ಲಕ್ಷ ರೂ.: ರಸ್ತೆ ಅಗಲೀಕರಣಕ್ಕೆ ಅಡ್ಡವಾಗಿದ್ದ ೪೦ ಮರಗಳನ್ನು ತೆರವು ಮಾಡಲೇಬೇಕಿತ್ತು. ಇದಕ್ಕಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ಉಪನಿರ್ದೇಶಕ ಮೋಹನ್ ಅವರು ಅರಣ್ಯ ಇಲಾಖೆ ಅಽಕಾರಿಗಳಿಂದ ಅನುಮತಿ ಪಡೆಯಲು ಪತ್ರ ಬರೆದಾಗ, ೪೦ ಮರಗಳ ಬೆಲೆ ೮ ಲಕ್ಷ ರೂ. ಪಾವತಿಸಿ ತೆರವು ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿದೆ.

ಪರಿಸರ ತಜ್ಞರ ಲೆಕ್ಕಾಚಾರದ ಪ್ರಕಾರ ಈ ಮರಗಳ ಮೌಲ್ಯ ೨೪೦ ಕೋಟಿ ರೂ. ಇದನ್ನು ಪಾಲಿಕೆ ಹಾಗೂ ಅರಣ್ಯ ಇಲಾಖೆ ಹೇಗೆ ಭರಿಸುತ್ತದೆ? ಇದರ ಬಗ್ಗೆ ಸಾರ್ವಜನಿಕರಿಗೆ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ.

೧೧ನೇ ದಿನಕ್ಕೆ ಸಸಿ ನೆಡಲು ಸಿದ್ಧತೆ: ಮರಗಳ ಹನನ ಆದ ೧೧ನೇ ದಿನಕ್ಕೆ ನಾವು ಅದೇ ಸ್ಥಳದಲ್ಲಿ ಸಸಿಗಳನ್ನು ನೆಡುತ್ತೇವೆ. ಯಾವುದೇ ಕಾರಣಕ್ಕೂ ರಸ್ತೆಯನ್ನು ಅಭಿವೃದ್ಧಿ ಮಾಡಲು ಬಿಡುವುದಿಲ್ಲ. ಎನ್‌ಜಿಟಿ ಅಧ್ಯಕ್ಷರಾದ ಸುಭಾಶ್ ಅಡಿ ಅವರೇ ಈ ಬಗ್ಗೆ ತನಿಖೆ ನಡೆಸಬೇಕು.”

-ಭಾಮಿ ವಿ.ಶೆಣೈ, ಪರಿಸರ ತಜ್ಞ

” ಈ ಹಿಂದೆಯೇ ರಸ್ತೆ ಅಗಲೀಕರಣದ ಬಗ್ಗೆ ಸಿಡಿಪಿಯಲ್ಲಿ ತಿಳಿಸಲಾಗಿತ್ತು. ಈಗ ೪ ಕೋಟಿ ರೂ. ಅನುದಾನ ಬಂದಿರುವುದರಿಂದ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಸಾರ್ವಜನಿಕರು ಹಾಗೂ ಸಂಚಾರಕ್ಕೆ ತೊಂದರೆ ಆಗದಂತೆ ರಾತ್ರಿ ವೇಳೆ ತೆರವು ಮಾಡುವುದು ಸಹಜ. ಇದಕ್ಕಾಗಿ ಅರಣ್ಯ ಇಲಾಖೆಗೆ ಅವರು ತಿಳಿಸಿದಷ್ಟು ಹಣ ಭರಿಸಿದ್ದೇವೆ.”

-ಮಧುಸೂದನ್, ಎಇಇ, ಮಹಾನಗರ ಪಾಲಿಕೆ

” ಈಗ ಆಗಿದ್ದು ಆಗಿ ಹೋಯ್ತು. ಮುಂದೆ ಹೀಗಾಗದಂತೆ ನಾವೆಲ್ಲರೂ ಎಚ್ಚರ ವಹಿಸ ಬೇಕು. ಹಿಂದೆ ಇದ್ದಂತೆ ಟಾಸ್ಕ್ ಫೋರ್ಸ್ ರಚನೆ ಆಗಲೇಬೇಕು. ಆಗ ಮಾತ್ರ ಇಂತಹ ಅಮಾನುಷ ನಡೆ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮ ಜರುಗಿಸಲು ಸಾಧ್ಯ.”

-ಸಲೀಮ್ ಖಾನ್, ಪರಿಸರ ಪ್ರೇಮಿ

Tags:
error: Content is protected !!