ರಾಜಾರಾಂ ತಲ್ಲೂರು
ಆರ್ಥಿಕ ಶಿಸ್ತಿನ ಚೌಕಟ್ಟಿನ ಒಂದೊಂದೇ ಅಂಶಗಳನ್ನು ಮುಂದಿಟ್ಟುಕೊಂಡು – ‘ನೋಡಿ, ನಾವು ಆರ್ಥಿಕವಾಗಿ ಸ್ಥಿರವಾಗಿದ್ದು, ವಿಕಸಿತ ಭಾರತದತ್ತ ಹೆಜ್ಜೆ ಇಡುತ್ತಿದ್ದೇವೆ’ ಎಂಬ ಹಣಕಾಸು ಸಚಿವರ ಬಜೆಟ್ ಲೆಕ್ಕಾಚಾರಗಳಿಗೆ, ಈ ಬಾರಿ ವಿಶೇಷವೆಂಬಂತೆ ಭಾನುವಾರವೂ ತೆರೆದಿದ್ದ ಭಾರತದ ಸ್ಟಾಕ್ ಮಾರುಕಟ್ಟೆಯು ಕಟು ವಾಸ್ತವವನ್ನು ತೆರೆದು ತೋರಿಸಿದೆ.
ಸ್ಟಾಕ್ ಮಾರುಕಟ್ಟೆ ಎಂಬುದು ದೇಶದ ೧೪೦ ಕೋಟಿ ಜನರಲ್ಲಿ ಕೇವಲ ೧೨ ಕೋಟಿ ಜನರ ಹೂಡಿಕೆಯ ಜಾಗ. ಹಾಲಿ ಸರ್ಕಾರ ಕೂಡ ತನ್ನ ಯೋಜನೆ – ಯೋಚನೆಗಳಲ್ಲಿ ಮಧ್ಯಮ – ಮೇಲುಮಧ್ಯಮ ವರ್ಗಗಳತ್ತಲೇ ಗಮನ ಕೇಂದ್ರೀಕರಿಸಿಕೊಂಡಿರುವ ಸರ್ಕಾರ. ಸ್ಟಾಕ್ ಮಾರುಕಟ್ಟೆಯ ಹೂಡಿಕೆದಾರರೂ ಅವರೇ. ಹಾಗಾಗಿ ಸ್ವತಃ ಅವರೇ ಬಜೆಟ್‌ಗೆ ಪ್ರತಿಕ್ರಿಯಿಸಿದ ರೀತಿ, ಸರ್ಕಾರಕ್ಕೆ ಚಾಟಿಯೇಟು. ಈ ಏಟು ತಗಲುವಷ್ಟು ಸರ್ಕಾರದ ಚರ್ಮ ತೆಳುವಾಗಿ ಉಳಿದಿದೆಯೇ ಎಂಬುದು ಗಮನಿಸಬೇಕಿರುವ ಅಂಶ.
ತನ್ನ ಯೋಜನೆಗಳು, ಯೋಚನೆಗಳ “ಪ್ರೆಸೆಂಟೇಷನ್” ಅಬ್ಬರದೊಂದಿಗೆ ಕಳೆದ ಎಂಟು ಬಜೆಟ್‌ಗಳನ್ನು ಮಂಡಿಸಿದ್ದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಈ ಬಾರಿ ತೀರಾ ನಿರಾಸಕ್ತಿಯ ಬಜೆಟ್ ಮಂಡಿಸಿದಂತಿತ್ತು. ಸರ್ಕಾರವು ಈ ಬಾರಿ ಆರ್ಥಿಕ ಸುಧಾರಣೆಗಳಿಗೆ ವೇಗ ನೀಡಲಿದೆ ಎಂಬ ಬಜೆಟ್ ಪೂರ್ವ ನಿರೀಕ್ಷೆಗಳು ಇಂದಿನ ೮೫ ನಿಮಿಷಗಳ ಬಜೆಟ್ ಭಾಷಣದಲ್ಲಿ ಸಾಕಾರಗೊಳ್ಳದಿದ್ದುದು ಮೇಲುಮಧ್ಯಮ ವರ್ಗದ ತಣ್ಣೀರು ಪ್ರತಿಕ್ರಿಯೆಗೆ ಮುಖ್ಯ ಕಾರಣ ಇರಬಹುದು.
ಚಿನ್ನ-ಬೆಳ್ಳಿ-ಡಾಲರ್ ದರಗಳು; ಕುಸಿಯುತ್ತಿರುವ ಹೂಡಿಕೆ ಅವಕಾಶಗಳು; ಅಭದ್ರ ಇಂಧನ ದರಗಳು; ಅಮೆರಿಕ ವಿಧಿಸಿರುವ ದಂಡಸುಂಕಗಳು; ವಿದೇಶಿ ಹೂಡಿಕೆ ಹಿಂದೆಗೆತ… ಇವೆಲ್ಲ ಕಣ್ಣು ಕುಕ್ಕುವಂತಿದ್ದರೂ, ಸರಬರಾಜು ನಿಯಂತ್ರಣ ಕ್ರಮಗಳ ಕಾರಣದಿಂದಾಗಿ ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ತಳಮಟ್ಟದಲ್ಲಿ ಅದರ ಪರಿಣಾಮಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಆದರೆ, ಜಾಗತಿಕ ರಾಜಕೀಯ-ಆರ್ಥಿಕ ಸನ್ನಿವೇಶ ತೀರಾ ಶಿಥಿಲವಾಗಿರುವ ಹಿನ್ನೆಲೆಯಲ್ಲಿ, ಮುಂದೇನು ಎಂಬ ಸ್ಪಷ್ಟ ಚಿತ್ರಣ ಇಲ್ಲದಿರುವುದು ಸರ್ಕಾರದ ಈ ಬಾರಿಯ ಪೇಲವ ಬಜೆಟ್‌ಗೆ ಮೂಲ ಕಾರಣ ಅನ್ನಿಸುತ್ತದೆ.
ಇದನ್ನೇ ಮೊನ್ನೆ ಎಕನಾಮಿಕ್ ಸರ್ವೇ ಮಂಡಿಸಿದ ದೇಶದ ಆರ್ಥಿಕ ಮುಖ್ಯ ಸಲಹೆಗಾರ ಅನಂತ ನಾಗೇಶ್ವರನ್ ಅವರು ಪ್ರತೀ ಕ್ಷಣವು ನಮ್ಮಲ್ಲಿ ಶ್ರೇಯ (ದೀರ್ಘಕಾಲಿಕ ಒಳಿತು) ಮತ್ತು ಪ್ರೇಯ (ತಕ್ಷಣದ ಸುಖ)ಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಹೇಳುತ್ತದೆ. ಬುದ್ಧಿವಂತರು ಶ್ರೇಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಬುದ್ಧಿಹೀನರು ಪ್ರೇಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದದ್ದು.
ಎದುರಿರುವ ಅಸ್ಪಷ್ಟ ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ, ಸರ್ಕಾರವು ಈ ಬಜೆಟ್ ವೇಳೆ ತನ್ನ ಲೋಪಗಳನ್ನು ಸರಿಪಡಿಸಿಕೊಳ್ಳವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಸದ್ಯ ದೇಶಕ್ಕೆ ತುರ್ತಾಗಿ ಆಗಬೇಕಿರುವುದು:- ರಫ್ತು ಮಾರುಕಟ್ಟೆಯಲ್ಲಿ ಬಲವಾಗಿ ತಳವೂರುವ ಮೂಲಕ ಆಮದು – ರಫ್ತು ಅಸಮತೋಲನವನ್ನು ಸರಿಪಡಿಸುವುದು ಮತ್ತು ಆ ಮೂಲಕ ನಮ್ಮ ಮುಕ್ತ ಮಾರುಕಟ್ಟೆ ಒಪ್ಪಂದಗಳು ಹೊರದೇಶಗಳಿಗೆ ನಮ್ಮ ದೇಶವು ಕಸ ಸುರಿಯುವ ತಾಣ ಆಗದಂತೆ ಎಚ್ಚರ ವಹಿಸುವುದು; ದೇಶದ ಒಳಗೆ ದುಡಿಯುವ ಪ್ರಾಯವರ್ಗದವರು, ಅದರಲ್ಲೂ ಎಳೆಯರಿಗೆ ಕೌಶಲಗಳನ್ನು ಒದಗಿಸುವ ಮೂಲಕ ಅವರನ್ನು “ಎಂಪ್ಲಾಯೆಬಲ್” ಮಾಡಿಕೊಳ್ಳುವುದು; ಮತ್ತು ದೇಶದ ಜನಸಂಖ್ಯೆಯ ಶೇ.೭೦ ರಷ್ಟಿರುವ ಕೆಳ ಮಧ್ಯಮ ವರ್ಗ, ಬಡ, ಕಡುಬಡ ವರ್ಗಗಳನ್ನು ಒಳಗೊಳ್ಳಬಲ್ಲ ವ್ಯವಸ್ಥೆಯೊಂದನ್ನು ರೂಪಿಸುವುದು. ಇದನ್ನೆಲ್ಲ ಸಾಧಿಸಲು ದೇಶದಲ್ಲಿ ೧೦೦ಕ್ಕೆ ೯೫ರಷ್ಟಿರುವ MSME ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯವಿತ್ತು. ಉದ್ಯೋಗ ಸೃಷ್ಟಿ, ರಫ್ತು ಮತ್ತು ಆರ್ಥಿಕ ಸದೃಢತೆಗಳೆಲ್ಲದಕ್ಕೂ ಅವರೇ ಮೂಲ. ಅವರಿಗೆ (ಜವಳಿ ವಲಯ ಹೊರತುಪಡಿಸಿ) ಈ ಬಜೆಟ್ ತೀರಾ ನಿರಾಶಾದಾಯಕವಾಗಿತ್ತು. ಅದೇ ವೇಳೆಗೆ ಬೃಹತ್ ಉದ್ಯಮಗಳು, ನವೋದ್ಯಮಗಳಿಗೆ ಬಜೆಟ್ ವ್ಯಾಪಕ ಅವಕಾಶಗಳನ್ನು ತೆರೆದಿಡುವ ಮೂಲಕ ತಾನು “ಆನಿ ಸ್ನೇಹಿ” ಸರ್ಕಾರ ಎಂದು ಸಾಬೀತುಪಡಿಸಿದೆ.
ನ್ಯೂಕ್ಲಿಯರ್ ವಿದ್ಯುತ್, ಅದನ್ನಾಧರಿಸಿ ಡೇಟಾ ಸೆಂಟರ್, ಕ್ರಿಟಿಕಲ್ ಮಿನರಲ್ಸ್, ವಿದ್ಯುತ್ ಕ್ಷೇತ್ರ ಖಾಸಗೀಕರಣ, ಎಲೆಕ್ಟ್ರಾನಿಕ್ ಉತ್ಪಾದನೆ, ಕಾರ್ಪೊರೇಟ್‌ಗಳಿಗೆ ಅಗತ್ಯ ಇರುವ ಲಾಜಿಸ್ಟಿಕ್ಸ್, ಇ-ಕಾಮರ್ಸ್, ದಾಖಲೆ ೧೨.೨ಲಕ್ಷ ಕೋಟಿ ರೂ. ಕ್ಯಾಪೆಕ್ಸ್ ಹೂಡಿಕೆ, ಸೇವಾ ಕ್ಷೇತ್ರಕ್ಕೆ ತೆರಿಗೆ ಪಾವತಿ ಸರಳೀಕರಣ ಎಂದು ವ್ಯಾಪಕ ಅವಕಾಶಗಳನ್ನು ಬಜೆಟ್ ಕಾರ್ಪೊರೇಟ್ ವಲಯಕ್ಕೆ ತೆರೆದಿದೆ. ಇವುಗಳಲ್ಲಿ ಬಹುತೇಕ ಎಲ್ಲವೂ ಈಗಾಗಲೇ ಅನುಷ್ಠಾನದ ವಿವಿಧ ಹಂತದಲ್ಲಿ ಇರುವ ಚಿಂತನೆಗಳೇ ಆಗಿರುವುದರಿಂದ ಮೇಲು ಮಧ್ಯಮ ವರ್ಗಕ್ಕೆ ಈ ಬಾರಿಯ ಬಜೆಟ್ “ಹಳೇ ಬಾಟಲಿ, ಹಳೇ ಮದ್ಯ” ಅನ್ನಿಸಿದೆ.
ನಿಜಕ್ಕೂ ಸರ್ಕಾರದ ಬೆಂಬಲದ ನಿರೀಕ್ಷೆಯಲ್ಲಿದ್ದ ಕೃಷಿಯಂತಹ ವಲಯಗಳನ್ನು ಆಹಾರ ಉತ್ಪಾದನೆಯ ಬದಲು ವಾಣಿಜ್ಯ ಕೃಷಿ ಉತ್ಪಾದನೆ, ಮೀನುಗಾರಿಕೆಯ ರಫ್ತಿಗೆ ಪ್ರೋತ್ಸಾಹದ ಹೆಸರಿನಲ್ಲಿ ತಳ ತಪ್ಪಿಸಲಾಗುತ್ತಿದೆ; ಯುವಜನರಿಗೆ ಸ್ಕ್ರೂ ಡ್ರೈವರ್ ಕೌಶಲ, ಗಿಗ್ ಕೌಶಲಗಳಂತಹ ಭವಿಷ್ಯ – ಬೆಳವಣಿಗೆ ರಹಿತ ವಲಯಗಳನ್ನು ತೋರಿಸಲಾಗುತ್ತಿದೆ.
ದೇಶದ ಆರ್ಥಿಕತೆಯ ಸ್ಥೂಲ ಚಿತ್ರಣ ತೆಗೆಯುವ ಹೊತ್ತಿಗೆ, ಈ ರೀತಿಯ ತೇಪೆ ಸುಧಾರಣೆಗಳು ಎಲ್ಲಿಗೂ ಸಾಲುವುದಿಲ್ಲ. ಸಂಪತ್ತಿನ ಹಂಚಿಕೆಯಲ್ಲಿನ ತಾರತಮ್ಯ ನಿವಾರಣೆಯಂತಹ ಎಲ್ಲರನ್ನೂ ಒಳಗೊಳ್ಳುವ ಮೂಲಭೂತ ಚಿಂತನೆಗಳ ಬರಡುತನ ಈ ಬಾರಿಯ ಬಜೆಟ್‌ನಲ್ಲಿ, ಸರ್ಕಾರದ ಒಟ್ಟು ನೀತಿಗಳಲ್ಲಿ ಎದ್ದು ಕಾಣಿಸುತ್ತದೆ. ಬಜೆಟ್ ಬಗ್ಗೆ ಒಟ್ಟಿನಲ್ಲಿ ಹೇಳಬೇಕೆಂದರೆ- ಸರ್ಕಾರದ ಆರ್ಥಿಕ ಶಿಸ್ತು ಹದಗೆಟ್ಟಿದ್ದರೂ, ಅದಿನ್ನೂ ICU ಸೇರಿಲ್ಲ. ಸ್ವತಃ ಸರ್ಕಾರ ಮಾತ್ರ ಹಾಗೆ ಹೇಳಿಕೊಳ್ಳುತ್ತಿಲ್ಲ.
FRMB ಕಾಯಿದೆಯ ಪ್ರಕಾರ ಹಣಕಾಸು ಕೊರತೆ ೨೦೨೧ಕ್ಕೆ GDPಯ ೩%ಗೆ ತಗ್ಗಬೇಕಿತ್ತು. ೨೦೨೫-೨೬ರಲ್ಲಿ ಅದು ೪.೪% ಇದ್ದು, ೨೦೨೬-೨೭ಕ್ಕೆ ೪.೩ಗೆ ಇಳಿಯಲಿದೆ ಎಂದು ಬಜೆಟ್ ನಿರೀಕ್ಷಿಸಿದೆ. ಅದೇ ಕಾಯಿದೆಯ ಪ್ರಕಾರ ಕೇಂದ್ರ ಸರ್ಕಾರದ ಸಾಲದ ಪ್ರಮಾಣ ೨೦೨೫ಕ್ಕೆ GDPಯ ೪೦% ಒಳಗೆ ಇರಬೇಕಿತ್ತು. ಆದರೆ ೨೦೨೫-೨೬ರಲ್ಲಿ ಅದು ೫೬.೧% ಇದ್ದು, ೨೦೨೬-೨೭ಕ್ಕೆ ೫೫.೬೦%ಗೆ ಇಳಿಯಲಿದೆ ಎಂದು ಬಜೆಟ್ ನಿರೀಕ್ಷಿಸಿದೆ.
” ದೇಶದ ಆರ್ಥಿಕತೆಯ ಸ್ಥೂಲ ಚಿತ್ರಣ ತೆಗೆಯುವ ಹೊತ್ತಿಗೆ, ಈ ರೀತಿಯ ತೇಪೆ ಸುಧಾರಣೆಗಳು ಎಲ್ಲಿಗೂ ಸಾಲುವುದಿಲ್ಲ. ಸಂಪತ್ತಿನ ಹಂಚಿಕೆಯಲ್ಲಿನ ತಾರತಮ್ಯ ನಿವಾರಣೆಯಂತಹ ಎಲ್ಲರನ್ನೂ ಒಳಗೊಳ್ಳುವ ಮೂಲಭೂತ ಚಿಂತನೆಗಳ ಬರಡುತನ ಈ ಬಾರಿಯ ಬಜೆಟ್‌ನಲ್ಲಿ, ಸರ್ಕಾರದ ಒಟ್ಟು ನೀತಿಗಳಲ್ಲಿ ಎದ್ದು ಕಾಣಿಸುತ್ತದೆ.”





