Mysore
21
overcast clouds
Light
Dark

ಜಂಬೂ ಸವಾರಿ ಮಾರ್ಗದ ಮರದ ಕಾಂಡ ತೆರವಾಗುತ್ತಾ..?

 

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ವಿಜಯದಶಮಿಯಂದು ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂ ಸವಾರಿ ಮೆರವಣಿಗೆ ಸಾಗುವ ಸಯ್ಯಾಜಿರಾವ್ ರಸ್ತೆಯ ಬಂಬೂ ಬಜಾರ್‌ನ ಪಾದಚಾರಿ ಮಾರ್ಗದಲ್ಲಿ ಉರುಳಿ ಬಿದ್ದಿರುವ ಮರದ ಬೃಹತ್ ಕಾಂಡವನ್ನು ಕಳೆದ ಎರಡು ವರ್ಷಗಳಿಂದ ತೆರವುಗೊಳಿಸದೇ ಇರುವುದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಜನ ಸಾಗರ ಇದ್ದೇ ಇರುತ್ತದೆ. ಲಕ್ಷಾಂತರ ಜನರು ಮಹೋತ್ಸವದ ಅಂತಿಮ ದಿನದ ಆ ಒಂದು ವೈಭವವನ್ನು ಕಣ್ಣುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ.

ಇಂಥ ವಿಶೇಷ ದಿನಗಳಲ್ಲಿ ನಗರದ ಸ್ವಚ್ಛತೆ ಬಗ್ಗೆ ಗಮನ ಹರಿಸಿದರಷ್ಟೇ ಸಾಲದು, ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಒಣಗಿದ ಮರದ ರೆಂಬೆಗಳ ತೆರವು, ರಸ್ತೆ ಮಗ್ಗುಲಲ್ಲೇ ಬಿದ್ದಿರುವ ಮರಗಳು, ಬಂಬೂ ಬಜಾರ್‌ನಲ್ಲಿರುವ ಮೆಟ್ಟಿಲುಗಳ ಮೇಲೆ ಬೆಳೆದಿರುವ ಕುರುಚಲು ಹಾಗೂ ಮುಳ್ಳಿನ ಗಿಡಗಳನ್ನೂ ತೆರವು ಗೊಳಿಸಬೇಕಾಗಿದೆ.

ಅಪಾಯಕಾರಿಯಾಗಿರುವ ಒಣಗಿದ ರೆಂಬೆಗಳು: ಜಂಬೂ ಸವಾರಿ ಸಾಗುವ ಮಾರ್ಗದ ಎರಡೂ ಕಡೆಗಳಲ್ಲಿ ಸಾಲು ಮರಗಳಿದ್ದು, ಅವುಗಳಲ್ಲಿ ಒಣಗಿದ ರೆಂಬೆಗಳೂ ಇವೆ. ದಸರಾ ಮೆರವಣಿಗೆಗೂ ಮುನ್ನ ಈ ರೆಂಬೆಗಳ ತೆರವು ಕಾರ್ಯ ಪೂರ್ಣಗೊಳ್ಳಬೇಕಿದೆ. ಆಕಸ್ಮಿಕವಾಗಿ ಯಾವುದೇ ಒಂದು ಸಣ್ಣ ಕೊಂಬೆ ಜಂಬೂ ಸವಾರಿ ವೀಕ್ಷಕರ ಮೇಲೆ ಬಿದ್ದರೂ ಅನಾಹುತ ಸಂಭವಿ ಸುತ್ತದೆ. ಹೀಗಾಗದಿರಲು ಪಾಲಿಕೆಯಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಇದಲ್ಲದೇ ಸಯ್ಯಾಜಿರಾವ್ ರಸ್ತೆಯಲ್ಲಿ ಮೋಟು ಮರವೊಂದಿದ್ದು, ಅದು ಕೂಡ ಚಿಗುರಿ ರೆಂಬೆಯೊಂದು ಎತ್ತರಕ್ಕೆ ಬೆಳೆದಿದ್ದು, ಇದನ್ನು ತೆರವುಗೊಳಿಸುವ ಬಗ್ಗೆಯೂ ಸಂಬಂಧಪಟ್ಟವರು ಗಮನ ಹರಿಸುವುದು ಅಗತ್ಯ.

ಮೆಟ್ಟಿಲುಗಳು ಸ್ವಚ್ಛವಾಗಬೇಕು: ದಸರಾ ಜಂಬೂ ಸವಾರಿಯನ್ನು ಸಾರ್ವಜನಿಕರು ಆರಾಮವಾಗಿ ಕುಳಿತು ನೋಡಬೇಕೆಂದೇ ಬಂಬೂ ಬಜಾರಿನ ಮೆಟ್ಟಿಲುಗಳ ಮೇಲೆ ಮಧ್ಯಾಹ್ನ 12 ಗಂಟೆಯಿಂದಲೇ ಜಾಗ ಹಿಡಿದುಕೊಂಡು ಕೂರುತ್ತಾರೆ. ಈ ಮೆಟ್ಟಿಲುಗಳ ಹಿಂಭಾಗದಲ್ಲಿ ಎತ್ತರದ ಮುಳ್ಳಿನ ಗಿಡಗಳು ಬೆಳೆದಿವೆ. ಜನರು ಈ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಿಂದ ದಸರಾ ವೇಳೆಯಲ್ಲಿ ಮಾತ್ರವಲ್ಲದೆ, ಬೇರೆ ಸಮಯದಲ್ಲೂ ಸ್ವಚ್ಛತೆ ಮಾಡುವುದು ಅಗತ್ಯ ಎನ್ನುತ್ತಾರೆ.

ಒಣಗಿದ ಮರಗಳ ತೆರವು: ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಡಬಲ್ ಡೆಕ್ಕರ್ ಬಸ್ ಕೂಡ ಓಡಾಡುವುದರಿಂದ ಕೆಳಕ್ಕೆ ಬಾಗಿರುವ ರೆಂಬೆಗಳನ್ನೂ ತೆರವು ಮಾಡುತ್ತೇವೆ. ಮರದ ಬೃಹತ್ ಕಾಂಡವನ್ನು ನಾಳೆಯೇ ತೆರವು ಮಾಡಿಸುತ್ತೇನೆ. ಅರಮನೆಯಿಂದ ಬನ್ನಿಮಂಟಪದ ವರೆಗೂ ಇರುವ ಮರಗಳಲ್ಲಿನ ಒಣಗಿದ ಹಾಗೂ ರಸ್ತೆಗೆ ಬಾಗಿರುವ ರೆಂಬೆಗಳ ತೆರವು ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು, ದಸರಾ ಒಂದು ವಾರ ಇರುವಂತೆಯೇ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕರಾದ ಮೋಹನ್‌ ತಿಳಿಸಿದ್ದಾರೆ.

ಜಂಬೂ ಸವಾರಿ ಮಾರ್ಗದಲ್ಲಿ ಫುಟ್ಬಾತ್ ಮೇಲೆ ಬಿದ್ದಿರುವ ಮರದ ದೊಡ್ಡ ಕಾಂಡ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ. ಕೂಡಲೇ ತೆರವು ಮಾಡಿಸುತ್ತೇನೆ. ಇದು ಮಾತ್ರವಲ್ಲ ಈ ಮಾರ್ಗದ ಮರಗಳಲ್ಲಿ ಒಣಗಿರುವ ರೆಂಬೆಗಳನ್ನು ಗಮನಿಸಿ ಕಟಾವು ಮಾಡಿಸುತ್ತೇವೆ. ಈಗ ಕುರುಬಾರಹಳ್ಳಿ ಹಾಗೂ ಚಾಮುಂಡಿ ಬೆಟ್ಟದ ಮಾರ್ಗದಲ್ಲಿರುವ ಮರಗಳ ಒಣಗಿರುವ ರೆಂಬೆಗಳನ್ನು ತೆರವು ಮಾಡುತ್ತಿದ್ದೇವೆ. ದಸರಾ ಆರಂಭಕ್ಕೂ ಮುನ್ನ ಈ ಕೆಲಸ ಮಾಡಿ ಮುಗಿಸುತ್ತೇವೆ.

-ಮೋಹನ್, ಸಹಾಯಕ ನಿರ್ದೇಶಕರು, ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗ

ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಉರುಳಿ ಬಿದ್ದಿರುವ ಮರವನ್ನು ಪಾಲಿಕೆಯವರು ಈ ವರೆಗೂ ತೆರವು ಮಾಡಿಲ್ಲ. ವಲಯ ಕಚೇರಿಗೆ ಅನೇಕ ಬಾರಿ ದೂರು ನೀಡಿದ್ದೇವೆ. ನೆಪಕ್ಕೆ ಒಂದು ಪತ್ರ ಬರೆದು ಕೊಡಿ ಎಂದು ಕೇಳುತ್ತಾರೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದಾರೆ. ಈ ವರ್ಷವಾದರೂ ಮರ ತೆರವು ಮಾಡಿ ಫುಟ್ಬಾತ್‌ನಲ್ಲಿರುವ ಮರದ ಬೇರು ತೆಗೆದು ಇಂಟರ್ಲಾಕ್ ಹಾಕುತ್ತಾರಾ ನೋಡಬೇಕು.

-ಶ್ರೀಕಾಂತ್, ಮಂಡಿ ಮೊಹಲ್ಲಾ ನಿವಾಸಿ