Mysore
24
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಕ್ರೀಡಾಂಗಣ ಓಕೆ.. ಕೆಎಸ್‌ಐಸಿ ಜಾಗವೇ ಯಾಕೆ?

ಜಾಗದ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ರೈತರು, ಮುಖಂಡರು

ಕೆ.ಎಸ್.ಚಂದ್ರಶೇಖರ್ ಮೂರ್ತಿ

ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ಕೆಎಸ್‌ಐಸಿಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವುದನ್ನು ಸ್ವಾಗತಿಸುವ ತಿ.ನರಸೀಪುರ ತಾಲ್ಲೂಕಿನ ಜನತೆ. ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ) ಆವರಣದ ಜಾಗವನ್ನೇ ಆಯ್ಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾಗದ ವಿಚಾರ ವಾಗಿ ಪರ- ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

” ವಿವೇಚನಾ ರಹಿತ ಕ್ರಮ ತಿ.ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವುದು ಸಂತೋಷದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ವಿಷನ್ ಇದೆ. ಆದರೆ, ಕ್ರೀಡಾಂಗಣವನ್ನು ನೂರಾರು ಜನರು ಕೆಲಸ ಮಾಡುತ್ತಿರುವ ಕರ್ನಾಟಕ ರೇಷ್ಮೆ ನೂಲು ತೆಗೆಯುವ ಘಟಕದ ಆವರಣದಲ್ಲಿಯೇ ನಿರ್ಮಿಸಲು ಹೊರಟಿರುವುದು ವಿವೇಚನಾ ರಹಿತ ಕ್ರಮ.”

-ನಾಗೇಂದ್ರ ಸ್ವಾಮಿ, ನಿವಾಸಿ

ಕ್ರೀಡಾಂಗಣ ಬೇಡ, ಕಾರ್ಖಾನೆ ಮಾಡಿ:  ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕದ ಆವರಣ ಆಯ್ಕೆ ಮಾಡಿರುವುದು ಸರಿಯಲ್ಲ. ಅಲ್ಲಿನ ಪರಿಸರ ಹಾಳಾಗುತ್ತದೆ. ಕ್ರೀಡಾಂಗಣಕ್ಕಾಗಿ ೬ ಕೋಟಿ ರೂ. ಖರ್ಚು ಮಾಡುವ ಬದಲು ಅಲ್ಲಿಯೇ ಇನ್ನೊಂದು ಕಾರ್ಖಾನೆ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕು. ಕ್ರೀಡಾಂಗಣಕ್ಕೆ ತಿ.ನರಸೀಪುರದಲ್ಲಿ ಬೇರೆ ಜಾಗ ಹುಡುಕಲಿ.

-ಮಹದೇವಸ್ವಾಮಿ, ತಿ.ನರಸೀಪುರ

ಸಿಎಂಗೆ ಮನವಿ ಸಲ್ಲಿಸಿದ್ದೇವೆ:  ತಿ.ನರಸೀಪುರಕ್ಕೆ ಕ್ರೀಡಾಂಗಣ ಬೇಕು. ಆದರೆ, ಎಚ್ ಟಿಎಂಎ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕ ಇರುವ ಸ್ಥಳದಲ್ಲಿ ಕ್ರೀಡಾಂಗಣ ಮಾಡುವುದಕ್ಕೆ ಆಗಲ್ಲ. ನಾವು ಈ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ ಬಂದು ಸ್ಥಳ ನೋಡಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

-ಪ್ರಸಾದ್ ನಾಯ್ಕ್, ತಿ.ನರಸೀಪುರ ರೈತ

ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ಸರಿಯಲ್ಲ:  ನಮ್ಮೂರಿಗೆ ಸರ್ಕಾರ ಕ್ರೀಡಾಂಗಣ ಕೊಡುತ್ತಿರುವುದು ತುಂಬಾ ಖುಷಿಯ ವಿಚಾರ. ಆದರೆ, ಕ್ರೀಡಾಂಗಣ ಮಾಡಲು ಸೂಕ್ತವಾದ ಜಾಗ ಗುರುತು ಮಾಡುವುದರಲ್ಲಿ ಜನಪ್ರತಿನಿಽಗಳು ವಿಫಲರಾಗಿದ್ದಾರೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕಕ್ಕೆ ಇತಿಹಾಸವಿದೆ. ಇಲ್ಲಿ ಸಾವಿರಾರು ಮರಗಳಿವೆ. ಇಂತಹ ಪ್ರದೇಶದಲ್ಲಿ ಕ್ರೀಡಾಂಗಣ ಮಾಡುವುದು ಸೂಕ್ತವಲ್ಲ.

-ಮೋಹನ್ ಕುಮಾರ್, ಸ್ಥಳೀಯ

ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ಬೇಡ: 

ಕ್ರೀಡಾಂಗಣಕ್ಕೆ ಯಾರ ವಿರೋಧವೂ ಇಲ್ಲ, ಕ್ರೀಡಾಂಗಣ ಬೇಕು. ಆದರೆ, ಕ್ರೀಡಾಂಗಣಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕ ಇರುವ ಜಾಗವೇ ಯಾಕೆ ಬೇಕು? ಇಲ್ಲಿ ಸಾಕಷ್ಟು ಮರಗಳಿವೆ. ಮೈಸೂರು ರೇಷ್ಮೆ ಸೀರೆಗೆ ಸರತಿ ಸಾಲಿನಲ್ಲಿ ನಿಂತು ಖರೀದಿಸುವಷ್ಟು ಬೇಡಿಕೆ ಇರುವಾಗ ಇಂತಹ ಮೈಸೂರು ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗೆ ತೊಂದರೆ ಮಾಡುವುದು ಬೇಡ.

-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

” ಬೇರೆ ಜಾಗದಲ್ಲಿ ಕ್ರೀಡಾಂಗಣ ಮಾಡಲಿ ತಿ.ನರಸೀಪುರ ತಾಲ್ಲೂಕಿಗೆ ಕ್ರೀಡಾಂಗಣ ಅಗತ್ಯವಿದೆ. ಆದರೆ, ಕ್ರೀಡಾಂಗಣವನ್ನು ನೂರಾರು ಜನರು ಕೆಲಸ ಮಾಡುತ್ತಿರುವ ರೇಷ್ಮೆ ನೂಲು ತೆಗೆಯುವ ಘಟಕದಲ್ಲಿ ಮಾಡುವುದು ಬೇಡ. ಆ ಜನರ ಹೊಟ್ಟೆ ಮೇಲೆ ಹೊಡೆದು ಕ್ರೀಡಾಂಗಣ ಮಾಡುವ ಅಗತ್ಯ ಇಲ್ಲ. ರೇಷ್ಮೆ ನೂಲು ತೆಗೆಯುವ ಘಟಕದ ಜಾಗ ಬಿಟ್ಟು ಬೇರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಿ.”

-ಎನ್.ಮಹದೇವಸ್ವಾಮಿ, ಆಟೋ ಚಾಲಕ

 

 

Tags:
error: Content is protected !!