ಪ್ರಶಾಂತ್ ಎಸ್.
ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ
ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ
ವಾಹನ ಸವಾರರಿಗೆ ಸವಾಲು; ಎಚ್ಚರ ತಪ್ಪಿದರೆ ಅಪಾಯ
ಮೈಸೂರು: ಜಿಲ್ಲೆಯ ವಿವಿಧೆಡೆ ರೈತರು ಡಾಂಬರ್ ರಸ್ತೆಗಳಲ್ಲೇ ರಾಗಿ, ಹುರುಳಿ ಒಕ್ಕಣೆ ಮಾಡುತ್ತಿದ್ದು, ವಾಹನ ಸವಾರರಿಗೆ ಆತಂಕ ಎದುರಾಗಿದೆ. ಅಲ್ಲಲ್ಲಿ ರಸ್ತೆಯಲ್ಲೇ ಒಕ್ಕಣೆ ಕಾರ್ಯ ನಡೆಯುತ್ತಿದ್ದು, ದೂರದ ಊರುಗಳಿಗೆ ತೆರಳುವ ವಾಹನ ಸವಾರರಿಗೆ ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರೈತರು ಜಮೀನಿನ ಕಣದಲ್ಲಿ ಒಕ್ಕಣೆ ಮಾಡುವುದನ್ನೇ ಕೈಬಿಟ್ಟಿದ್ದು, ಮುಖ್ಯರಸ್ತೆಗಳನ್ನೇ ಆಶ್ರಯಿಸಿದ್ದಾರೆ. ಬೆಳಿಗ್ಗೆಯೇ ರಾಗಿ, ಹುರುಳಿಯನ್ನು ರಸ್ತೆಗೆ ತಂದು ಹರಡುವ ರೈತರು ಸಂಜೆಯವರೆಗೂ ಒಕ್ಕಣೆ ಮಾಡುತ್ತಾರೆ. ಇಂತಹ ರಸ್ತೆಗಳಲ್ಲಿ ವಾಹನಗಳು ಸಂಚರಿಸಿದರೆ ಆಯತಪ್ಪಿ ಜಾರಿ ಬೀಳುವ ಸಾಧ್ಯತೆ ಇದೆ. ಇಂತಹ ಕಡೆ ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ.
ಬಿಸಿಲೇರುತ್ತಿದ್ದಂತೆ ಕಾದ ಹೆಂಚಿನಂತಾಗುವ ಡಾಂಬರು ರಸ್ತೆಯ ಮೇಲೆ ವಾಹನಗಳು ಚಲಿಸಿದಾಗ ಪೆಟ್ರೋಲ್, ಡೀಸೆಲ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಬಹುದು. ಈ ಹಿಂದೆ ಕೆಲವೆಡೆ ಇಂತಹ ಘಟನೆಗಳು ನಡೆದಿವೆ. ಹಲವೆಡೆ ಬೈಕ್, ಕಾರುಗಳಿಗೆ ಬೆಂಕಿ ಹೊತ್ತಿಕೊಂಡ ಉದಾಹರಣೆಗಳಿವೆ. ವಾಹನ ಸಂಚಾರಕ್ಕೆ ಸಮಸ್ಯೆ: ಕೆಲವು ಕಡೆಗಳಲ್ಲಿ ರೈತರು ಯಂತ್ರಗಳನ್ನು ಬಳಸಿಕೊಂಡು ಒಕ್ಕಣೆ ಮಾಡಿದರೆ, ಇನ್ನು ಕೆಲವು ಕಡೆಗಳಲ್ಲಿ ದೊಡ್ಡದಾದ ಟಾರ್ಪಲ್‌ಗಳಲ್ಲಿ ಒಕ್ಕಣೆ ಮಾಡುತ್ತಾರೆ. ಇನ್ನು ಕೆಲವರು ರಸ್ತೆಯ ಮಧ್ಯೆ ಭಾಗದಲ್ಲಿಯೇ ರಾಗಿ, ಹುರುಳಿ, ತೊಗರಿ, ಅಲಸಂದೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಒಕ್ಕಣೆ ಮಾಡಿಕೊಳ್ಳುತ್ತಿದ್ದಾರೆ.
ಒಕ್ಕಣೆ ದೂಳಿನಿಂದ ಕಣ್ಣಿಗೆ ಅಪಾಯ: ಒಕ್ಕಣೆ ಮಾಡುವ ರೈತರು ಭತ್ತ, ರಾಗಿ ಹಾಗೂ ಹುರುಳಿಯಂಥ ಬೆಳೆಗಳನ್ನು ರಸ್ತೆಯಲ್ಲಿ ಎತ್ತರವಾಗಿ ಹಾಕುತ್ತಾರೆ. ಇದರಿಂದಾಗಿ ಆ ಬೆಳೆಗಳ ಒಣಗಿದ ಸೆತ್ತೆ ನಾಲ್ಕು ಚಕ್ರಗಳ ವಾಹನಕ್ಕೆ ಸಿಲುಕಿ ಕೊಳ್ಳುತ್ತದೆ. ಇನ್ನು ದ್ವಿಚಕ್ರ ವಾಹನ ಸವಾರರಿಗೆ ಮುಂದೆ ಸಾಗುವುದೇ ಸವಾಲಾಗುತ್ತದೆ. ಸಾಹಸಪಟ್ಟು ಮುನ್ನುಗ್ಗಿದರೆ, ಒಕ್ಕಣೆ ಯಿಂದ ಏಳುವ ದೂಳು ಕಣ್ಣಿಗೆ ಬೀಳುವ ಅಪಾಯ ಇದೆ. ರಸ್ತೆಯಲ್ಲಿ ಹಾಕಿರುವ ರಾಗಿ ಬಣವೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ರಾಗಿ ತೆನೆ ಜೊತೆಗೆ ರಾಗಿ ಹುಲ್ಲು ವಾಹನಗಳ ಅಡಿಯಲ್ಲಿ ಸುರುಳಿಯಂತೆ ಸುತ್ತಿಕೊಂಡು ಬಹುತೇಕ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಹೋಗಿರುವ ನಿದರ್ಶನಗಳಿವೆ. ರಸ್ತೆ ಮಧ್ಯೆ ರಾಗಿ ಒಕ್ಕಣೆ ಮಾಡಬೇಡಿ ಎಂದು ಪೊಲೀಸರು ರೈತರಿಗೆ ಎಚ್ಚರಿ ಸಿದರೂ ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿರುವುದು ವಾಹನ ಸವಾರರಿಗೆ ತೊಂದರೆ ತಂದೊಡ್ಡಿದೆ.
” ಬಹುತೇಕ ರಸ್ತೆಗಳಲ್ಲಿ ಈಗಾಗಲೇ ರಾಗಿ ಬಣವೆಯನ್ನು ಹಾಕಿ ರೈತರು ಕಣಮಾಡಿಕೊಳ್ಳುತ್ತಿದ್ದು, ಇದು ವಾಹನದ ಕೆಳಗೆ ಸುತ್ತಿಕೊಳ್ಳುವುದರಿಂದ ವಾಹನ ಕೆಟ್ಟು ನಿಲ್ಲುತ್ತದೆ. ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ಹೆಚ್ಚಿನ ಅವಘಡ ಸಂಭವಿಸುವಮೊದಲು ಸಂಬಂಧಪಟ್ಟ ಅಽಕಾರಿಗಳು ಕ್ರಮಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.”
ಸುನಿಲ್, ಬೈಕ್ ಸವಾರ
” ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಸಾಕಷ್ಟು ಅಪಘಾತಗಳಾಗಿವೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಸ್ಥಳೀಯ ಠಾಣೆ ಸಿಬ್ಬಂದಿ ಹಾಗೂ ೧೧೨ ಸಿಬ್ಬಂದಿ ರಸ್ತೆಯಲ್ಲಿಒಕ್ಕಣೆ ಮಾಡಬಾರದೆಂದು ಸೂಚನೆನೀಡಲಾಗುತ್ತಿದೆ. ಅಲ್ಲದೆ, ರೈತರಿಗೆ ಅರಿವು ಮೂಡಿಸಲಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.”
ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
” ರೈತರು ತಮ್ಮ ಜಮೀನಿನಲ್ಲಿ ಕಣ ಮಾಡಿ ರಾಗಿ ಒಕ್ಕಣೆ ಮಾಡಲು ಸ್ವಲ್ಪ ಮಟ್ಟಿಗೆ ಹಣ ಖರ್ಚಾಗುತ್ತದೆ. ಆದರೆ ರಸ್ತೆಯಲ್ಲಿ ಹಾಕಿದರೆ ಅರ್ಧದಷ್ಟು ಉಳಿತಾಯವಾಗುತ್ತದೆ ಎಂದು ಹೀಗೆ ಮಾಡುತ್ತಿದ್ದಾರೆ. ಆದರೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೃಷಿ ಇಲಾಖೆಯವರು ರೈತರಿಗೆ ಪ್ರೋತ್ಸಾಹಧನದ ಮುಖಾಂತರ ಕಣಗಳನ್ನು ನಿರ್ಮಿಸಿ ಒಕ್ಕಣೆ ಮಾಡಲು ಸೌಲಭ್ಯ ಕಲ್ಪಿಸಬೇಕು. ಆಗ ರೈತರಿಗೆ ಅನುಕೂಲವಾಗುತ್ತದೆ.”
ಮಂಜು ಕಿರಣ್, ಕಾರ್ಯದರ್ಶಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ





