ನವೀನ್ ಡಿಸೋಜ
ಇಂಡಿ ಆಥರ್ಸ್ ಅವಾರ್ಡ್‌ಗೆ ನಾಮನಿರ್ದೇಶಿತ ಕೃತಿ ಕರ್ತೃ ಮುಸ್ಕಾನ್
ಮಡಿಕೇರಿ: ನನ್ನ ಕವನಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತವೆ ಎಂದು ಭಾವಿಸಿರಲಿಲ್ಲ. ಇದೀಗ ಕವನ ಸಂಕಲನ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದೂ ಅಲ್ಲದೆ ಅಂತಾ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಹೇಳ ತೀರದ ಸಂತೋಷ ತಂದಿದೆ ಎಂದು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ವಿದ್ಯಾರ್ಥಿನಿ ದುದ್ದಿಯಂಡ ಮುಸ್ಕಾನ್ ಸೂಫಿ ಹೇಳಿದ್ದಾರೆ.
ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ ಸೂಫಿ ಅವರ ಚೊಚ್ಚಲ ಇಂಗ್ಲಿಷ್ ಕೃತಿ ’ದಿಸ್ ಟೂ ಶೆಲ್ ಪಾಸ್’ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಿದೆ.
ಅಲ್ಲದೆ, ಈ ಕೃತಿ ಅಮೆರಿಕ ಮೂಲದ ಪ್ರಸಿದ್ಧ ಕವಿ ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡ ಲಾಗುವ ೨೧ನೇ ಶತಮಾನದ ಅಂತಾರಾಷ್ಟ್ರೀಯ ಮಟ್ಟದ ಇಂಡಿ ಆಥರ್ಸ್ ಅವಾರ್ಡ್ ೨೦೨೫ಕ್ಕೆ ನಾಮನಿರ್ದೇಶನಗೊಂಡಿದೆ. ಈ ಸಂಬಂಧ ‘ಆಂದೋಲನ’ ನಡೆಸಿದ ಸಂದರ್ಶನದಲ್ಲಿ ಅವರು ಸಂತಸ ಹಂಚಿಕೊಂಡರು.
ಆಂದೋಲನ: ನಿಮ್ಮ ಚೊಚ್ಚಲ ಕವನ ಸಂಕಲನದ ಬಗ್ಗೆ ಏನು ಹೇಳಲು ಬಯಸುವಿರಿ?
ಮುಸ್ಕಾನ್: ಬುಕ್ ಲಿಫ್ ಪಬ್ಲಿಕೇಷನ್ ಆರಂಭಿಸಿದ ಕವನ ರಚನೆ ಕುರಿತ ಸವಾಲುಗಳ ಅಭಿಯಾನದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿ, ಸ್ವಯಂ ಪ್ರೇರಣೆಯಿಂದ ಅದರಲ್ಲಿ ಭಾಗವಹಿಸಿದ್ದೆ. ಹಿಂದಿನಿಂದಲೂ ಇಂಗ್ಲಿಷ್ ಕವನ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು, ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸ್ಛೂರ್ತಿ ನೀಡಿತು. ಆದರೆ ನನ್ನ ಕವನಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತವೆ ಎಂದು ಭಾವಿಸಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದರಿಂದ ಹೇಳತೀರದಷ್ಟು ಖುಷಿಯಾಗಿದೆ.
ಆಂದೋಲನ: ನಿಮ್ಮ ಕವನ ಸಂಕಲನ ಅಂತಾರಾಷ್ಟ್ರೀಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಲು ಹೇಗೆ ಸಹಕಾರಿಯಾಯಿತು?
ಮುಸ್ಕಾನ್: ಬುಕ್ ಲಿಫ್ ಪಬ್ಲಿಕೇಶನ್ ಇತ್ತೀಚೆಗೆ ೨೧ ದಿನಗಳಲ್ಲಿ ೨೧ ಕವನಗಳನ್ನು ರಚಿಸುವ ಸವಾಲುಗಳ ಅಭಿಯಾನವನ್ನು ಆಯೋಜಿಸಿತ್ತು. ಇದರಲ್ಲಿ ನಾನು ಪಾಲ್ಗೊಂಡು ಸವಾಲುಗಳ ನಿರ್ದಿಷ್ಟ ಗುರಿ ಸಾಧಿಸಿದ್ದೆ. ೨೧ ದಿನಗಳಲ್ಲಿ ೨೮ಕ್ಕೂ ಹೆಚ್ಚು ಕವನಗಳನ್ನು ರಚಿಸಿ ೫೦ ಪುಟಗಳ ಕವನ ಸಂಗ್ರಹಕ್ಕೆ ರೂಪು ನೀಡಿದ್ದೆ. ಕಾಲೇಜು ತರಗತಿಗಳ ಬಿಡುವಿನ ಸಮಯದಲ್ಲಿ ಕಾವ್ಯಕೃಷಿ ನಡೆಸಿದ್ದು, ಬಹಳ ಸಹಕಾರಿಯಾಯಿತು.
ಆಂದೋಲನ: ನಿಮ್ಮ ಕವನ ಸಂಕಲನ ಯಾವೆಲ್ಲ ಅಂಶಗಳನ್ನು ಒಳಗೊಂಡಿದೆ?
ಮುಸ್ಕಾನ್: ಮನುಷ್ಯನ ಜೀವನದ ಏರಿಳಿತಗಳು, ಸಮಾಜದ ಅನೇಕ ಬಗೆಯ ಹೊಯ್ದಾಟಗಳು, ಮನದ ತಳಮಳಗಳು, ಪ್ರಕೃತಿಯ ಸೌಂದರ್ಯ, ಅಂತಿಮವಾಗಿ ಮನುಷ್ಯ ಶರಣಾಗಲೇಬೇಕಾದ ಮರಣ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನಿಟ್ಟುಕೊಂಡು ಕವಿತೆ ರಚಿಸಿದ್ದೇನೆ. ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳನ್ನು ಹೆಚ್ಚು ಬಳಸಲಾಗಿದೆ. ನವೀನ ಪದಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ಬಹುತೇಕ ಕವನಗಳಲ್ಲಿ ಆಧುನಿಕತೆಗೆ ಒತ್ತು ನೀಡಲಾಗಿದೆ.
ಆಂದೋಲನ: ಇಂಡಿ ಆಥರ್ಸ್ ಅವಾರ್ಡ್ ೨೦೨೫ಕ್ಕೆ ನಾಮನಿರ್ದೇಶನಗೊಂಡಿರುವ ಬಗ್ಗೆ ಏನು ಹೇಳುತ್ತೀರಿ?
ಮುಸ್ಕಾನ್: ಬುಕ್ ಲಿಫ್ ಪಬ್ಲಿಕೇಶನ್ ಕವನ ರಚನೆ ಕುರಿತು ನಡೆಸುವ ಸವಾಲುಗಳ ಅಭಿಯಾನದಲ್ಲಿ ಜಾಗತಿಕವಾಗಿ ಸಾವಿರಾರು ಮಂದಿ ಕವಿಗಳು ಭಾಗ ವಹಿಸುತ್ತಾರೆ. ಈ ಪೈಕಿ ಆಯ್ಕೆಯಾದ ಅತ್ಯುತ್ತಮ ಕವನ ಸಂಕಲನಗಳನ್ನು ಬುಕ್ ಲಿಫ್ ಪಬ್ಲಿಕೇಶನ್ ಪುಸ್ತಕವಾಗಿ ಪ್ರಕಟಿಸುತ್ತದೆ. ಈ ಪೈಕಿಯೂ ಶ್ರೇಷ್ಠ ಗುಣಮಟ್ಟದ ಕವನ ಸಂಕಲನಗಳು ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ಅಂತಾರಾಷ್ಟ್ರೀಯ ಇಂಡಿ ಆಥರ್ಸ್ ಅವಾರ್ಡ್ ೨೦೨೫ಕ್ಕೆ ನಾಮ ನಿರ್ದೇಶನ ಗೊಳ್ಳುತ್ತದೆ. ಆ ಗೌರವ ನನ್ನ ಕವನ ಸಂಕಲನಕ್ಕೂ ಲಭಿಸುತ್ತದೆ ಎಂದುಕೊಂಡಿರಲಿಲ್ಲ. ಬಹಳ ಖುಷಿಯಾಗುತ್ತಿದೆ.
” ಮುಸ್ಕಾನ್ ಸೂಫಿ ಅವರು ವಿರಾಜಪೇಟೆಯ ಡಿ.ಎಚ್. ಎಸ್. ಗ್ರೂಪ್ ಆಫ್ ಕಂಪೆನಿಯ ಮಾಲೀಕರು ಮತ್ತು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಮತ್ತು ಮಸೂದ ಸೂಫಿ ದಂಪತಿಯ ಪುತ್ರಿಯಾಗಿದ್ದಾರೆ. ಮುಸ್ಕಾನ್ ಅವರ ಚೊಚ್ಚಲ ಕವನ ಸಂಕಲನ ‘ದಿಸ್ ಟೂ ಶೆಲ್ ಪಾಸ್’ ಅಮೆಜಾನ್‌ನಲ್ಲಿ ಆನ್‌ಲೈನ್ ಮೂಲಕ ಖರೀದಿಗೆ ಲಭ್ಯವಿದೆ.”





