Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕೂಲಿ ಹಣ ಪಡೆಯಲೂ ಹೋರಾಟ ಮಾಡಬೇಕಾದ ದುಸ್ಥಿತಿ

ಹೇಮಂತ್‌ಕುಮಾರ್

ಒಂದೂವರೆ ತಿಂಗಳಾದರೂ ಬಿಡುಗಡೆಯಾಗದ ನರೇಗಾ ಕೂಲಿ ಹಣ

ಮಂಡ್ಯ: ಸರ್ಕಾರಿ ನೌಕರಿಯಲ್ಲಿರುವವರಿಗೆ ಎಲ್ಲ ಸೌಲಭ್ಯಗಳೊಂದಿಗೆ ತಿಂಗಳಾದ ಕೂಡಲೇ ಪಗಾರ ಗ್ಯಾರಂಟಿ. ಆದರೆ, ಬಯಲಿನಲ್ಲಿ ಬಿರು ಬಿಸಿಲಿನಲ್ಲಿ ಬೆವರು ಹರಿಸಿ ಕೆಲಸ ಮಾಡುವ ಕೂಲಿಕಾರರು ತಮ್ಮ ಕೂಲಿ ಹಣ ಪಡೆಯಲು ಒಂದಷ್ಟು ದಿನಗಳನ್ನು ಕಾಯಬೇಕು, ಅಧಿಕಾರಿಗಳಿಗೆ ಮನವಿ ಮಾಡಬೇಕು, ಕೊನೆಗೆ ಹೋರಾಟವನ್ನೂ ಮಾಡಬೇಕಾದ ಸ್ಥಿತಿ ಬಂದಿರುವುದು ಈ ವ್ಯವಸ್ಥೆಯ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಒಂದೂವರೆ ತಿಂಗಳ ಕಾಲ ಮಣ್ಣು ಹೊತ್ತು ಶ್ರಮಿಸಿದ ಕೂಲಿಕಾರರು ತಮ್ಮ ಕೂಲಿ ಹಣ ಒಂದೂವರೆ ತಿಂಗಳಾದರೂ ಬಿಡುಗಡೆಯಾಗದೆ ಹೈರಾಣಾಗಿದ್ದರು. ಬಳಿಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದರ ಪ್ರತಿಫಲ ಎಂಬಂತೆ ಸರ್ಕಾರ ೪೫ ದಿನಗಳ ಕೂಲಿ ಹಣದ ಬದಲು ಕೇವಲ ೧೫ ದಿನಗಳ ಕೂಲಿ ಹಣ ೪೬ ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದೆ.

ಮಂಡ್ಯ ಜಿಲ್ಲೆಯಲ್ಲಿ ಪುರುಷರು, ಮಹಿಳೆಯರು ಸೇರಿದಂತೆ ೧.೭೫ ಲಕ್ಷ ಕೂಲಿ ಕಾರ್ಮಿಕರಿದ್ದು, ಅವರಲ್ಲಿ ಒಂದು ಲಕ್ಷದಷ್ಟು ಮಂದಿ ಜಾಬ್ ಕಾರ್ಡ್ ಹೊಂದಿದ್ದಾರೆ. ಇವರಿಗೆ ವರ್ಷದಲ್ಲಿ ನೂರು ದಿನಗಳ ಕಾಲ ಕೆಲಸ ಕೊಡಬೇಕೆಂಬುದು ನಿಯಮ. ವಾಸ್ತವದಲ್ಲಿ ೧೦ ಸಾವಿರ ಜನರಿಗಷ್ಟೇ ಕೆಲಸ ಸಿಗುತ್ತದೆ. ಅದರಲ್ಲೂ ೫೦ ರಿಂದ ೬೦ ದಿನಗಳ ಕಾಲ ಕೆಲಸ ಸಿಗುವುದೇ ದುಸ್ತರ. ಉಳಿದಂತೆ ಗುತ್ತಿಗೆದಾರರ ಮೂಲಕ ಬಿಲ್ ಆಗುವುದೇ ಹೆಚ್ಚು.

ಇದು ಬಲಾಢ್ಯರು, ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯ ಶಾಸಕರ ಬೆಂಬಲಿಗರ ಮರ್ಜಿಗೊಳಪಟ್ಟಿದ್ದು, ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿಗಾದಲ್ಲೇ ನಡೆಯುವ ಮಾಮೂಲಿ ಕೆಲಸ. ನಿಯಮ ರೀತ್ಯ ಮಾನವ ಶಕ್ತಿಯಷ್ಟೇ ಈ ಯೋಜನೆಯಲ್ಲಿ ಬಳಕೆಯಾಗಬೇಕು. ಆದರೆ ಗುತ್ತಿಗೆದಾರರು ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿ ಬಿಲ್ ಪಡೆದುಕೊಳ್ಳುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ದಿನಕ್ಕೆ ೩೪೮ ರೂ. ಕೂಲಿ ಕೊಡುವ ಈ ಯೋಜನೆಯಲ್ಲಿ ಕೂಲಿಕಾರರು ದಿನಕ್ಕೆ ೭ ಗಂಟೆಗಳ ಕಾಲ ಕೆಲಸ ಮಾಡಬೆಕು. ಅಂದಾಜಿನಂತೆ ಒಂದು ಕ್ಯೂಬಿಕ್ ಮೀಟರ್ ಮಣ್ಣನ್ನು ಅಗೆದು ಅದನ್ನು ೭ ಮೀಟರ್ ದೂರಕ್ಕೆ ಸಾಗಿಸಿ ಡಂಪ್ ಮಾಡಬೇಕು. ಹೀಗೆ ಶ್ರಮಿಸುವ ಕೂಲಿಕಾರರು ನಮಗೆ ಕೆಲಸ ಕೊಡಿ ಎಂದು ಕೇಳುತ್ತಾರೆ. ಕೆಲಸಕ್ಕೆ ಡಿಮ್ಯಾಂಡ್ ಇದ್ದೇ ಇದೆ. ಆದರೆ, ಕೂಲಿಕಾರರ ಸಂಘಟನೆ ಬಲಿಷ್ಠವಾಗಿರುವ ಪ್ರದೇಶದಲ್ಲಿ ಮಾತ್ರ ಒಂದಷ್ಟು ಜನರಿಗೆ ಕೂಲಿ ಕೆಲಸ ಸಿಗುತ್ತದೆ.

ಉದಾಹರಣೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಳಗವಾದಿ, ಹುಸ್ಕೂರು, ಬಂಡೂರು, ದುಗ್ಗನಹಳ್ಳಿ, ಹಿಟ್ಟನಹಳ್ಳಿಕೊಪ್ಪಲು, ಮಿಕ್ಕರೆ, ಸುಜ್ಜಲೂರು, ಆರ್.ಬಿ.ಹಳ್ಳಿ, ಪಂಡಿತಹಳ್ಳಿ, ಕುಂದೂರು, ಹಲಗೂರು, ಬ್ಯಾಡರಹಳ್ಳಿ, ನಾಗೇಗೌಡನದೊಡ್ಡಿ, ಲಿಂಗಾಪಟ್ಟಣ, ಶೆಟ್ಟಹಳ್ಳಿ, ಬೆಂಡರವಾಡಿ, ನಿಡಘಟ್ಟ, ಹಾಡ್ಲಿ, ಹಲಸಳ್ಳಿ, ಮದ್ದೂರು ತಾಲ್ಲೂಕಿನ ಬಿದರಹಳ್ಳಿ, ಕಾಡುಕೊತ್ತನಹಳ್ಳಿ ಸೇರಿದಂತೆ ಇತರೆ ಗ್ರಾಮಗಳು, ಮಂಡ್ಯ, ನಾಗಮಂಗಲ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾತ್ರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ನೆಲೆಯೂರಿದೆ.

ಉಳಿದಂತೆ ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್. ಪೇಟೆ, ಪಾಂಡವಪುರ ತಾಲ್ಲೂಕುಗಳಲ್ಲಿ ಕೂಲಿಕಾರರು ಸಂಘಟಿತರಾಗಿಲ್ಲದ ಕಾರಣ ಗುತ್ತಿಗೆದಾರರ ಮೂಲಕ ಯಂತ್ರ ಬಳಸಿ ಕೆಲಸ ನಡೆಯುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಏ.೧ರಿಂದ ಇಲ್ಲಿಯವರೆಗೆ ಸರಾಸರಿ ೪೦ರಿಂದ ೬೦ ಮಾನವ ದಿನಗಳ ಕೆಲಸ ನೀಡಲಾಗಿದ್ದು, ನೂರು ದಿನಗಳ ಕೆಲಸವೆಂಬುದು ಮರೀಚಿಕೆಯಾಗಿದೆ.

ಜಾಬ್ ಕಾರ್ಡ್ ಹೊಂದಿರುವವರ ಹೆಸರಿನಲ್ಲಿ ಗುತ್ತಿಗೆದಾರರ ಮೂಲಕ ನಡೆಯುವ ಕೆಲಸಗಳಿಗೆ ದೊಡ್ಡ ಮೊತ್ತದ ಬಿಲ್ ಆಗುತ್ತದೆ. ಬ್ಯಾಂಕ್‌ನಲ್ಲಿ ಹಣ ಪಡೆಯಲು ಆ ಕಾರ್ಡ್‌ನವರಿಗೆ ನೂರಿನ್ನೂರು ರೂ. ಕೊಟ್ಟು ಸಹಿ ಪಡೆದು ಕ್ಯಾಷ್ ಪಡೆದುಕೊಳ್ಳುವ ಪರಿ ಅಚ್ಚರಿ ಮೂಡಿಸುತ್ತದೆ. ಇದೆಲ್ಲ ವ್ಯವಹಾರದಲ್ಲಿ ಗ್ರಾಪಂ ಅಧಿಕಾರಿ, ಸದಸ್ಯರು ಮುಂತಾದವರು ಭಾಗಿಯಾಗಿರುತ್ತಾರೆಂಬುದು ಜಗಜ್ಜಾಹೀರಾಗಿದೆ.

” ನರೇಗಾ ಯೋಜನೆಅಡಿ ಕೇಂದ್ರ ಸರ್ಕಾರ ಜಿಲ್ಲೆಗೆ ೮೮.೧೪ ಕೋಟಿ ರೂ. ಬಿಡುಗಡೆ ಮಾಡಿದೆ. ಸದ್ಯ ೧೧.೬೮ ಕೋಟಿ ರೂ. ಬಾಕಿ ಇದೆ.”

ಆನಂದ್ , ಉಪ ಕಾರ್ಯದರ್ಶಿ(ಅಭಿವೃದ್ಧಿ) ಜಿಲ್ಲಾ ಪಂಚಾಯಿತಿ

” ಜಿ.ಪಂ. ಸಿಇಒ ಆಗಿ ಕೆ.ಆರ್.ನಂದಿನಿ ಅವರು ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಅವರು ಜಿಲ್ಲೆಯ ಕೂಲಿಕಾರರ ಬಗ್ಗೆ ಕಾಳಜಿ ವಹಿಸಬೇಕು. ಶ್ರಮಿಕರ ಕುಟುಂಬಗಳನ್ನು ಕಷ್ಟದ ಕೂಪಕ್ಕೆ ದೂಡದೆ, ಕೆಲಸ ಮಾಡಿರುವ ಕೂಲಿಕಾರರಿಗೆ ನಿಯಮಾನುಸಾರ ಬಾಕಿ ಕೂಲಿ ಹಣ ನೀಡಬೇಕು.”

ಎಂ.ಪುಟ್ಟಮಾದು, ರಾಜ್ಯಾಧ್ಯಕ್ಷರು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ.

” ನರೇಗಾ ಕೆಲಸಗಾರರಿಗೆ ಆಧಾರ್ ಅಡಿಯಲ್ಲಿ ಕೂಲಿ ನೀಡುವ ಪದ್ಧತಿಯನ್ನು ಕೈಬಿಡಬೇಕು, ಉದ್ಯೋಗ ಖಾತ್ರಿ ಯೋಜನೆಯನ್ನು ಪಟ್ಟಣ ಪ್ರದೇಶಗಳಿಗೂ ವಿಸ್ತರಿಸಿ, ಅದನ್ನು ಸಮರ್ಪಕವಾಗಿ ಭ್ರಷ್ಟಾಚಾರ ಮುಕ್ತವಾಗಿ ಅನುಷ್ಠಾನಗೊಳಿಸಬೇಕು.”

ಬಿ.ಹನುಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ.

Tags:
error: Content is protected !!