Mysore
26
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಕ್ರಿಸ್‌ಮಸ್ ಹಬ್ಬಕ್ಕೆ ಅರಮನೆ ನಗರಿ ಸಜ್ಜು  

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ ನಡೆಯುತ್ತಿದೆ.

ಕ್ರೈಸ್ತ ಸಮುದಾಯದವರು ಮನೆಗಳನ್ನು ಸಿಂಗರಿಸಲು, ಬಂಧುಗಳು ಹಾಗೂ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡಲು ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.

ದೇವರಾಜ ಮಾರುಕಟ್ಟೆ ಸಮೀಪದ ಶಿವರಾಂಪೇಟೆ, ವಿನೋಬಾ ರಸ್ತೆಯ ಇಕ್ಕೆಲಗಳಲ್ಲಿನ ಮಹಾರಾಜ, ಮನ್ನಾರ್ಸ್ ಸೇರಿದಂತೆ ವಿವಿಧ ಮಾರುಕಟ್ಟೆ, ಮಳಿಗೆಗಳಲ್ಲಿ ತೂಗು ಹಾಕಲಾಗಿದ್ದ ನಕ್ಷತ್ರಗಳು, ಘಂಟೆಗಳು, ಸಾಂತಾಕ್ಲಾಸ್ ಗೊಂಬೆಗಳನ್ನು ಖರೀದಿಸಿದರು. ಮನೆ ಹಾಗೂ ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಅಲಂಕರಿಸುವುದು ಕ್ರಿಸ್‌ಮಸ್ ಆಚರಣೆಯ ಪ್ರಮುಖ ಆಕರ್ಷಣೆಯಾಗಿರುವುದರಿಂದ ಪುಟ್ಟ ಗೋದಲಿಯೊಳಗೆ ಆಡು, ಕುರಿ, ಕರುಗಳ ಗೊಂಬೆ ಜೋಡಿಸಲು ಖರೀದಿಸಿದರು. ಪ್ಲಾಸ್ಟಿಕ್‌ನ ನಕ್ಷತ್ರಗಳು ೧೨೦ರಿಂದ ೧,೪೦೦ ರೂ.ವರೆಗೆ, ವಿದ್ಯುತ್ ದೀಪಗಳು ೧೫೦ ರೂ.ನಿಂದ ೨,೫೦೦ ರೂ.ಗಳವರೆಗೆ ಇದ್ದವು. ಸಾಲು ಉದ್ದವಾದಷ್ಟೂ ದರವು ಹೆಚ್ಚಿತು. ಸಾಂತಾಕ್ಲಾಸ್ ಮುಖವಾಡಗಳು ಡಜನ್‌ಗೆ ೧೨೦ ರೂ. ಇತ್ತು. ಬೆಲ್ಸ್‌ಗಳು ೮೦ ರೂ.ಗಳಿಂದ ೪೦೦ ರೂ. ರವರೆಗೆ ಇತ್ತು. ಹಸಿರಿನ ರೀತ್ ಹಾಗೂಮರಗಳು ಗಾತ್ರಕ್ಕೆ ತಕ್ಕಂತೆ ದರದ ವ್ಯತ್ಯಾಸವಿತ್ತು. ೮ ಅಡಿಯ ಕ್ರಿಸ್‌ಮಸ್ ಮರದ ದರವು ೧೫ ಸಾವಿರ ರೂ. ವರೆಗೂ ಇತ್ತು.

ಗೋದಲಿ ಖರೀದಿ: ಬಿದಿರಿನಿಂದ ತಯಾರಿಸಿದ ಗೋದಲಿಗಳನ್ನು ಬಂಬೂ ಬಜಾರ್‌ನಲ್ಲಿ ಸಾರ್ವಜನಿಕರು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಗೋದಲಿಗಳು ೨೫೦ ರೂ.ನಿಂದ ೧ ಸಾವಿರ ರೂ.ವರೆಗೆ ವಿವಿಧ ಗಾತ್ರಗಳಲ್ಲಿ ದೊರೆಯುತ್ತಿದ್ದವು. ಮನೆಯ ಮುಂದೆ ತೂಗುಹಾಕಲು ಇದ್ದ ಬಿದಿರಿನ ನಕ್ಷತ್ರಗಳು ೩೦೦ ರೂ.ನಿಂದ ೫೦೦ ರೂ.ವರೆಗೆ ಲಭ್ಯವಿದ್ದವು. ಬಿದಿರಿನಿಂದ ಮಾಡಿದ ನಕ್ಷತ್ರ, ಗೋದಲಿ ಖರೀದಿ ಕಳೆದ ಬಾರಿಗಿಂತ ಈ ಬಾರಿ ಪರವಾಗಿಲ್ಲ. ಪ್ಲ್ಯಾಸ್ಟಿಕ್‌ನಿಂದ ಮಾಡಿದ್ದವನ್ನು ಖರೀದಿಸುತ್ತಿದ್ದಾರೆ. ವಯಸ್ಸಾದವರು ಮಾತ್ರ ಖರೀದಿಗೆ ಇಲ್ಲಿ ಬರುತ್ತಾರೆ’ ಎಂದು ಬಂಬೂ ಬಜಾರಿನ ವ್ಯಾಪಾರಿ ಸಿದ್ದರಾಜು ಹೇಳಿದರು.

ಸಂತ ಫಿಲೋಮಿನಾದಲ್ಲಿ ಐಫೆಲ್ ಟವರ್: ಸಂತ ಫಿಲೋಮಿನಾ ಚರ್ಚ್‌ನ ಅಂಗಳದಲ್ಲಿ ೧೬ ಅಡಿ ಎತ್ತರದ  ಐಫೆಲ್ ಟವರ್‌ನ ಮಾದರಿಯನ್ನು ನಿರ್ಮಿಸಲಾಗಿದೆ. ಹಾರ್ಡ್ವಿಕ್ ಚರ್ಚ್‌ನ ಗೋಡೆಗಳು ಹಳದಿ ಬಣ್ಣವನ್ನು ಕಂಡವು. ಕಾರ್ಮಿಕರು ಹಾಗೂ ಚರ್ಚ್‌ಗಳ ಸಿಬ್ಬಂದಿ ಅಂಗಳವನ್ನು ಸಿಂಗರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಪ್ರಾರ್ಥನಾಲಯದ ಒಳಾಂಗಣವನ್ನು ನಕ್ಷತ್ರಗಳು, ಬೆಲ್ಸ್ಗಳು, ಇನ್ನಿತರೆ ವಸ್ತುಗಳಿಂದ ಅಲಂಕರಿಸಲಾಗಿದೆ. ಸಾಡೇ, ವೆಸ್ಲಿ, ಬಾರ್ತೊಲೋಮಿಯಾ, ಆರ್.ಎಸ್.ನಾಯ್ಡು ನಗರದ ಇನ್‌ಫೆಂಟ್ ಜೀಸಸ್, ಯಾದವಗಿರಿಯ ಸೇಕ್ರೆಡ್ ಹಾರ್ಟ್, ಜಯಲಕ್ಷ್ಮೀಪುರಂನ ಸೇಂಟ್ಜೋಸೆಫ್, ವಿಶ್ವೇಶ್ವರ ನಗರದ ಸೇಂಟ್ ಥಾಮಸ್, ಸೇಂಟ್ ಮೇರಿಸ್ ಸೇರಿದಂತೆ ನಗರದಲ್ಲಿರುವ ೪೦ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳನ್ನು ಅಲಂಕರಿಸಲಾಗಿದೆ. ಆವರಣಗಳಲ್ಲಿ ಸಾಂತಾಕ್ಲಾಸ್‌ನ ರಥ ಹಾಗೂ ಸಾರಂಗಗಳನ್ನು ನಿಲ್ಲಿಸಲಾಗಿದೆ. ಮಿನುಗುವ ನಕ್ಷತ್ರಗಳನ್ನು ತೂಗು ಹಾಕಲಾಗಿದೆ. ಸಿಎಸ್‌ಐ ಹೊಲ್ಡ್ ವರ್ತ್ ಸ್ಮಾರಕ ಮಿಷನ್ ಆಸ್ಪತ್ರೆ, ಸೇಂಟ್ ಜೋಸೆಫ್, ಸೇಂಟ್ ಮೇರಿಸ್ ಆಸ್ಪತ್ರೆಗಳಲ್ಲಿಯೂ ಸಿದ್ಧತೆ ನಡೆದಿತ್ತು. ಸಿಕೆಸಿ, ಸೇಂಟ್ ಜೋಸೆಫ್, ನಿರ್ಮಲಾ ಸೇರಿದಂತೆ ಹಲವು ಶಾಲೆಗಳಲ್ಲೂ ಅಲಂಕಾರಗಳಲ್ಲಿ ಸಿಬ್ಬಂದಿ ನಿರತರಾಗಿದ್ದರು.

Tags:
error: Content is protected !!