ವಾರ್ಷಿಕ 3 ಕೋಟಿ ರೂ. ಮುಖ್ಯಶಿಕ್ಷಕರ ಜೇಬಿಗೆ ಕತ್ತರಿ
• ಶ್ರೀಧರ್ ಆರ್ ಭಟ್
6.50 ಸರ್ಕಾರ ಒಂದು ಮೊಟ್ಟೆಗೆ ನಿಗದಿಪಡಿಸಿರುವ ದರ
7.50 ರೂ. ಸಾಗಾಣಿಕೆ ವೆಚ್ಚ ಸೇರಿ ಒಂದು ಮೊಟ್ಟೆಯ ಬೆಲೆ
ಮೈಸೂರು: ಶಾಲಾ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವುದರ ಭಾಗವಾಗಿ ಜಾರಿಗೆ ತಂದಿರುವ ಮೊಟ್ಟೆ ಯೋಜನೆಯು ಮೇಷ್ಟ್ರು ಗಳ ಜೇಬಿಗೆ ಕತ್ತರಿ ಹಾಕಿ ಸಂಕಟ ತಂದೊಡ್ಡಿದೆ.
ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿ ಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ರೂಪಿಸಿದ್ದು, ಅದರ ವೆಚ್ಚವನ್ನೂ ಸಂಸ್ಥೆಯೇ ಭರಿಸುತ್ತಿದೆ.
ರಾಜ್ಯ ಸರ್ಕಾರ ಅಕ್ಷರ ದಾಸೋಹದ ಅಡಿ ಯಲ್ಲಿ ಶಾಲಾ ಮಕ್ಕಳಿಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ನೀಡುವ ಮೊಟ್ಟೆಯೊಂದಿಗೆ, ಮೊಟ್ಟೆ ತಿನ್ನದ ಮಕ್ಕಳಿಗೆ ಅವರವರ ಆಯ್ಕೆ ಮೇರೆಗೆ ಬಾಳೆ ಹಣ್ಣು ಅಥವಾ ಚಿಕ್ಕಿಯನ್ನು ನೀಡುತ್ತಿದೆ.
ಬಾಳೆಹಣ್ಣು ಹಾಗೂ ಚಿಕ್ಕಿಗಳು ಶಿಕ್ಷಕರ ಪಾಲಿಗೆ ತಂಪೆರದರೆ, ಮೊಟ್ಟೆ ಪ್ರತಿನಿತ್ಯವೂ ಮುಖ್ಯ ಶಿಕ್ಷಕರಿ ಸಂಕಟವನ್ನು ಉಣಬಡಿಸುತ್ತಿದೆ. ಅಲ್ಲದೆ, ಅವರ ಪ್ರಾಮಾಣಿಕತೆಗೂ ಸವಾಲು ಒಡ್ಡುವಂತಾಗಿದೆ.
ಅಜೀಂ ಪ್ರೇಮ್ ಜಿ ಫೌಂಡೇಶನ್ ನೀಡುವ ಮೊಟ್ಟೆಗೆ ಶಾಲಾ ಶಿಕ್ಷಣ ಇಲಾಖೆಯು ಪ್ರತಿ ಮೊಟ್ಟೆಗೆ 6.20 ರೂ. ದರ ನಿಗದಿಪಡಿಸಿದೆ. ಇದರಲ್ಲಿ 50 ಪೈಸೆ ಸಾಗಾಣಿಕೆ ವಾಹನದ ಇಂಧನಕ್ಕೆ, 30 ಪೈಸೆ ಬೇಯಿಸಿದ ಮೊಟ್ಟೆಯ ಮೇಲಿನ ಬಿಳಿ ಒಡಪು ಸುಲಿಯಲು ನಿಗದಿಪಡಿಸಿದ್ದರೆ ಸಾಗಾಣಿಕೆಗಾಗಿ 20 ಪೈಸೆಗಳನ್ನು ಸೇರಿಸಿ ನೀಡಲಾಗುತ್ತಿದೆ.
ಅಂಗಡಿಗಳಲ್ಲಿ 6.20 ರೂ.ಗಳಿಗಿಂತ ಕಡಿಮೆ ದರದಲ್ಲಿ ಮೊಟ್ಟೆ ಸಿಗುತ್ತಿಲ್ಲ. ಪ್ರತಿ ಮೊಟ್ಟೆಗೆ 6.20 ರೂ. ನೀಡಿದರೂ, ಸಾಗಾಣಿಕೆ ವಾಹನಕ್ಕೆ ಇಂಧನ ಹಾಗೂ ಸುಲಿಯಲು ತಲಾ ಒಂದು ಮೊಟ್ಟೆಗೆ 1 ರೂ. ಅನ್ನು ಶಿಕ್ಷಕರೇ ವೈಯಕ್ತಿಕವಾಗಿ ಭರಿಸಬೇಕಿದೆ.
ಈ ಹೆಚ್ಚುವರಿ ಹಣವು ಮೊಟ್ಟೆ ಯೋಜನೆಯ ಹೊಣೆ ಹೊತ್ತಿರುವ ಜಿಲ್ಲೆಯ 2,307 ಶಿಕ್ಷಕರ ಜೇಬಿನಿಂದ ಪ್ರತಿ ವರ್ಷ 3,83,380 ರೂ. ಖರ್ಚಾಗುತ್ತಿದೆ.
ಆ ಪ್ರಕಾರ ಪ್ರತಿಯೊಬ್ಬ ಮುಖ್ಯ ಶಿಕ್ಷಕನ ಜೇಬಿನಿಂದ ವಾರ್ಷಿಕ 12,000 ರೂ. ಗಳಿಂದ 14,000 ರೂ.ಗಳವರೆಗೆ ಆಯಾ ಶಾಲಾ ಮಕ್ಕಳ ದಾಖಲಾತಿ ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷಕರ ಸ್ವಂತ ಹಣ ವ್ಯಯವಾಗುತ್ತಿದೆ.
ಪ್ರತಿ ದಿನ ಜಿಲ್ಲೆಯಲ್ಲಿ 1,83,380 ಮೊಟ್ಟೆಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಈ ಮೊಟ್ಟೆಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಿದರೆ ಮೈಸೂರು ಜಿಲ್ಲೆಯೊಂದರಿಂದಲೇ ಪ್ರತಿ ನಿತ್ಯ ಮುಖ್ಯ ಶಿಕ್ಷಕರ ಜೇಬಿನಿಂದ 1,83,380 ರೂ. ಖಾಲಿಯಾಗುತ್ತಿದೆ. ವಾರ್ಷಿಕವಾಗಿ ಅದರ ಒಟ್ಟು ಮೊತ್ತ 3,66,76,000 ರೂ. ಆಗುತ್ತದೆ.
ಹೀಗಾಗಿ ಇದು ಶಿಕ್ಷಕರ ಪಾಲಿಗೆ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪದಂತಾಗಿದೆ. ಹಲವಾರು ತಿಂಗಳುಗಳಿಂದ ಸಹಸ್ರಾರು ರೂ. ಗಳನ್ನು ಮೊಟ್ಟೆಗಾಗಿ ಖರ್ಚು ಮಾಡಿ ಬಸವಳಿದಿ ರುವ ಶಿಕ್ಷಕ ಸಮೂಹ, ಈಗ ಈ ಮೊಟ್ಟೆಯ ದರದ ವಿರುದ್ಧ ಸಿಡಿದೆದ್ದಿದ್ದು, ತಮ್ಮ ಸಂಬಳದ ಹಣವನ್ನು ಉಳಿಸಿಕೊಳ್ಳಲು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಘಟನೆಯ ಮೊರೆ ಹೋಗುವುದಕ್ಕೆ ತೀರ್ಮಾನಿಸಿದೆ.
ʼʼಮಕ್ಕಳಿಗೆ ಪಾಠ ಮಾಡುವುದಕ್ಕೇ ಸಮಯವಿಲ್ಲದಂತಹ ಸ್ಥಿತಿ ನಮ್ಮ ಶಿಕ್ಷಕರದ್ದಾಗಿದೆ. ಮೊಟ್ಟೆ ಯೋಜನೆ ಶಿಕ್ಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಪಾಠರಹಿತ ಹೊಣೆಗಾರಿಕೆಯಿಂದ ತಪ್ಪಿಸಿ ಶಿಕ್ಷಕರನ್ನು ಶಿಕ್ಷಕರನ್ನಾಗಿ ಉಳಿಸಿದರೆ ಸಾಕು.ʼʼ
-ಸೋಮೇಗೌಡ, ಅಧ್ಯಕ್ಷ,
ಮೈಸೂರು ಜಿಲ್ಲಾ ಪ್ರಾಥಮಿಕ
ಶಾಲಾ ಶಿಕ್ಷಕರ ಸಂಘ.
;;ನಾವೆಷ್ಟು ಹಣ ಕಳೆದುಕೊಳ್ಳಬೇಕು? ಸಾಗಾಣಿಕೆ ಮಾಡುವಾಗ ಮೊಟ್ಟೆ ಒಡೆದು ಹೋದರೂ ನಮಗೇ ನಷ್ಟ ನಮಗೆ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಏರಿಕೆಯಾದರೂ ನಷ್ಟ ಖರೀದಿಯಲ್ಲೂ ನಷ್ಟ.ʼʼ
-ಲೀಲಾ, ಉಪಾಧ್ಯಕ್ಷರು, ನಂಜನಗೂಡು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ʼʼಜಿ.ಪಂ. ಮೂಲಕ ಶಾಲೆಗಳಿಗೆ ಹಣ: ಅಜೀಂ ಪ್ರೇಮ್ ಜಿ ಫೌಂಡೇಶನ್ ವಾರಕ್ಕೆ ನಾಲ್ಕು ದಿನಗಳು ಮಾತ್ರ ಮೊಟ್ಟೆಗೆ ಹಣ ನೀಡುತ್ತದೆ. ಉಳಿದ ಎರಡು ದಿನಗಳ ಹಣವನ್ನು ರಾಜ್ಯ ಸರ್ಕಾರ ಭರಿಸು ತ್ತದೆ. ಫೌಂಡೇಶನ್ ರಾಜ್ಯ ಸರ್ಕಾರಕ್ಕೆ ಪಾವತಿಸಿದ ಮೊತ್ತವನ್ನು ಸರ್ಕಾರ ಜಿಲ್ಲಾ ಪಂಚಾಯಿತಿಗಳಿಗೆ ವರ್ಗಾಯಿಸುತ್ತದೆ. ನಂತರ ಅದನ್ನು ಜಿ.ಪಂ. ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳ ಖಾತೆಗೆ ಜಮಾ ಮಾಡಲಾಗುತ್ತಿದೆ.ʼʼ
-ಕೃಷ್ಣ, ಅಕ್ಷರ ದಾಸೋಹ ಮುಖ್ಯಸ್ಥರು, ಮೈಸೂರು ಜಿಲ್ಲೆ.
ʼʼಶಿಕ್ಷಕರ ಕಷ್ಟ ತಪ್ಪಿಸಬೇಕು: ಮಕ್ಕಳಿಗೆ ಮೊಟ್ಟೆ ನೀಡು ವುದು ಉತ್ತಮ ಯೋಜನೆ. ಆದರೆ ಮೊಟ್ಟೆ ಖರೀದಿಯ ಜವಾಬ್ದಾರಿ ಯನ್ನು ಶಿಕ್ಷಕ ರಿಂದ ತಪ್ಪಿಸಿ ಬೇರೆ ಸಂಸ್ಥೆಗೆ ವಹಿಸಬೇಕು.ಮೊಟ್ಟೆಯಿಂದ ಶಿಕ್ಷಕರಿಗಾಗುತ್ತಿರುವ ನಷ್ಟದ ವಿಷಯ ವನ್ನು ಆಡಳಿತಗಾರರಿಗೆ ತಲುಪಿಸುವ ವ್ಯವಸ್ಥೆ ಯನ್ನು ಶಿಕ್ಷಕರ ಪ್ರತಿನಿಧಿಗಳಾದ ನಾವು ಮಾಡಬೇಕಿದೆʼʼ
– ಅರುಣಕುಮಾರ್, ಮೈಸೂರು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘ