Mysore
20
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಗ್ರೇಟರ್ ಮೈಸೂರಿನಿಂದ ವಾರ್ಡ್‌ಗಳ ಸಂಖ್ಯೆ ದ್ವಿಗುಣ

ಕೆ.ಬಿ. ರಮೇಶ ನಾಯಕ

೬೫ ವಾರ್ಡ್‌ಗಳ ಬದಲು ೧೨೦ಕ್ಕೂ ಹೆಚ್ಚು ವಾರ್ಡ್‌ಗಳ ಸೃಜನೆ ಸಾಧ್ಯತೆ 

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಗೆ ಸೇರಲಿರುವ ಮೈಸೂರು

ಗ್ರಾಪಂ, ಜಿಪಂನಲ್ಲಿ ಸೆಣಸಾಡುತ್ತಿದ್ದವರು ಮುಂದೆ ಪಾಲಿಕೆ ಚುನಾವಣೆಯಲ್ಲಿ ಸೆಣಸಾಡುವ ಸನ್ನಿವೇಶ

ಮೈಸೂರು: ಅರಮನೆಗಳ ನಗರಿ ಎಂದೇ ಮನ್ನಣೆ ಗಳಿಸಿರುವ ಮೈಸೂರು ನಗರಪಾಲಿಕೆಯು ಗ್ರೇಟರ್ ಮೈಸೂರು ಆಗಿ ರಚನೆಯಾದ ಮೇಲೆ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಟ್ರೋ ಪಾಲಿಟಿನ್ ನಗರ ಪಟ್ಟಿಗೆ ಸೇರಲಿದೆ.

ಗ್ರೇಟರ್ ಮೈಸೂರು ರಚನೆಯಿಂದಾಗಿ ಮುಂದೆ ೬೫ ವಾರ್ಡ್‌ಗಳ ಬದಲಿಗೆ ಅಂದಾಜು ೧೨೦ಕ್ಕೂ ಹೆಚ್ಚು ವಾರ್ಡ್‌ಗಳ ಸೃಜನೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಸೆಣಸಾಡುತ್ತಿದ್ದವರು ಗ್ರೇಟರ್ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸೆಣಸಾಡುವುದು ಅನಿವಾರ್ಯವಾಗಲಿದೆ.

ಬೆಂಗಳೂರು ನಂತರ ಬೆಳೆಯುತ್ತಿರುವ ಮೈಸೂರು ನಗರವನ್ನು ವಿಸ್ತರಿಸಿ ಗ್ರೇಟರ್ ಅಥವಾ ಗ್ರೇಡ್-೧ ಮೈಸೂರು ಆಗಿ ರಚನೆ ಮಾಡಬೇಕೆಂಬ ಕೂಗು ದಶಕಗಳಿಂದ ಕೇಳಿಬಂದಿತ್ತು. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದಾಗ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ನಂತರ ಈ ವಿಚಾರ ನೆನಗುದಿಗೆ ಬಿದ್ದಿತ್ತು. ಇದಾದ ಬಳಿಕ ಎರಡು ವರ್ಷಗಳಿಂದ ನಿರಂತರವಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರ -ಲವಾಗಿ ಈಗ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಗ್ರೇಟರ್ ಮೈಸೂರು ರಚನೆ ನಿರ್ಧಾರವಾಗಿದ್ದು, ಮುಂದಿನ ಅಥವಾ ನಂತರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡರೆ ಪಾಲಿಕೆ ಅಸ್ತಿತ್ವ ದೂರವಾಗಲಿದೆ.

ವಾರ್ಡ್‌ಗಳ ಸಂಖ್ಯೆ ವಿಸ್ತಾರ: ನಗರಪಾಲಿಕೆಯಲ್ಲಿ ೬೫ ವಾರ್ಡ್‌ಗಳಿದ್ದು, ಮೀಸಲಾತಿ ಬದಲಾವಣೆಯಾದರೂ ವಾರ್ಡ್ ಗಾತ್ರ ಹೆಚ್ಚಳವಾಗಿರಲಿಲ್ಲ. ೨೦೧೮ರಲ್ಲಿ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಿ ಚುನಾವಣೆ ನಡೆಸಬೇಕೆಂದು ಒಲವು ತೋರಿದರೂ ಅಂದಿನ ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರ ೬೫ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಿತ್ತು. ಈಗ ಗ್ರೇಟರ್ ಮೈಸೂರು ರಚನೆಯಾಗಿ ಹೊರಗಿನ ಪ್ರದೇಶಗಳ ಜನಸಂಖ್ಯೆಯನ್ನು ಸೇರಿಸಿಕೊಂಡರೆ ಜನ ಸಂಖ್ಯೆ ಮತ್ತು ವಿಸ್ತೀರ್ಣ ಹೆಚ್ಚಾಗುವ ಕಾರಣ ಅಂದಾಜು ೧೨೦ರಿಂದ ೧೩೦ ವಾರ್ಡ್‌ಗಳು ನಿಗದಿಯಾಗುವ ಸಾಧ್ಯತೆ ಇದೆ. ೨೦೧೧ರ ಜನಗಣತಿ ಪ್ರಕಾರ ಮೈಸೂರು ನಗರ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಬೋಗಾದಿ, ರಮ್ಮನಹಳ್ಳಿ, ಕಡಕೊಳ ಪಪಂ, ಚಾಮುಂಡಿಬೆಟ್ಟ, ಆಲನಹಳ್ಳಿ, ಸಿದ್ದಲಿಂಗಪುರ, ಧನಗಳ್ಳಿ, ಇಲವಾಲ, ಬೀರಿಹುಂಡಿ, ನಾಗವಾಲ, ನಾಗನಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ೧೧,೧೯,೭೦೫ ಜನಸಂಖ್ಯೆ ಇದ್ದರೆ, ೨೦೨೫ ಯೋಜಿತ ಪ್ರಕಾರ ೧೪,೧೬,೬೭೧ ಜನಸಂಖ್ಯೆಯನ್ನು ಹೊಂದಿದೆ. ೧೪ ವರ್ಷಗಳಲ್ಲಿ ೩ ಲಕ್ಷ ಜನಸಂಖ್ಯೆಯನ್ನು ಸೇರಿಸಿಕೊಂಡಿದೆ. ಮೈಸೂರು ನಗರವೇ ೯,೨೦,೫೫೦ರಿಂದ ೧೧,೪೬,೦೬೯ ಜನಸಂಖ್ಯೆಯನ್ನು ಹೊಂದಿರುವ ಪರಿಣಾಮವಾಗಿ ಮೆಟ್ರೋಪಾಲಿಟಿನ್ ಸಿಟಿ ಪಟ್ಟಿಗೆ ಸೇರಲಿದೆ.

ವಾರ್ಡ್‌ಗಳ ರಚನೆ ವೇಳೆ ಅಂದಾಜು ೧೮ರಿಂದ ೨೦ ಸಾವಿರದಂತೆ ೧೪ ಲಕ್ಷ ಜನಸಂಖ್ಯೆಗೆ ೧೨೦ ವಾರ್ಡ್‌ಗಳನ್ನು ರಚಿಸಬಹುದಾಗಿದೆ. ಹೀಗಾಗಿ, ನಗರಪಾಲಿಕೆಯಲ್ಲಿದ್ದ ೬೫ ವಾರ್ಡ್‌ಗಳ ಸಂಖ್ಯೆಗಿಂತ ದ್ವಿಗುಣವಾಗುವ ಸಾಧ್ಯತೆ ಇದೆ.

ಮೈಸೂರಿನ ಸುತ್ತಮುತ್ತಲಿನ ಗ್ರಾಮಗಳ ಚಿತ್ರಣವೇ ಬದಲು:  ಹಲವು ವರ್ಷಗಳಿಂದ ಗ್ರಾಪಂಗೆ ಸೇರಿದ್ದ ಗ್ರಾಮಗಳು ಈಗ ಹಳ್ಳಿಗಳ ಪೊರೆಯನ್ನು ಕಳಚಿಕೊಳ್ಳಲಿವೆ. ಹೂಟಗಳ್ಳಿ ನಗರಸಭೆಗೆ ಸೇರಿದ ಕೂರ್ಗಳ್ಳಿ, ಹೆಬ್ಬಾಳ್, ಬೆಳವಾಡಿ, ಹಿನಕಲ್, ಶ್ರೀರಾಂಪುರ ಪಪಂಗೆ ಸೇರಿದ ಶ್ರೀರಾಂಪುರ, ಲಿಂಗಾಂಬುದ್ಧಿಪಾಳ್ಯ, ಗೊರೂರು, ಕೊಪ್ಪಲೂರು, ಕಳಲವಾಡಿ, ರಮ್ಮನಹಳ್ಳಿ ಪಪಂಗೆ ಸೇರಿದ ರಮ್ಮನಹಳ್ಳಿ, ಆಲನಹಳ್ಳಿ, ನಾಡನಹಳ್ಳಿ, ಹಂಚ್ಯಾ ಸಾತಗಳ್ಳಿ, ಕಡಕೊಳ ಪಪಂಗೆ ಸೇರಿದ ಗುಡಮಾದನಹಳ್ಳಿ, ಬಂಡೀಪಾಳ್ಯ, ಹೊಸಹುಂಡಿ, ಮರಸೆ, ಮದರಗಳ್ಳಿ, ಮಂಡಕಳ್ಳಿ, ಸರ್ಕಾರಿ ಉತ್ತನಹಳ್ಳಿ, ಬೋಗಾದಿ ಪಪಂಗೆ ಸೇರಿದ ಬೋಗಾದಿ, ಮರಟಿಕ್ಯಾತನಹಳ್ಳಿ, ಜಟ್ಟಿಹುಂಡಿ, ಕೇರ್ಗಳ್ಳಿ, ಬಸವನಹಳ್ಳಿ, ಮಾದಗಳ್ಳಿ, ಕೆ.ಹೆಮ್ಮನಹಳ್ಳಿ, ಬೆಲವತ್ತ, ಮೇಟಗಳ್ಳಿ, ಧನಗಳ್ಳಿ, ಯಡಹಳ್ಳಿ, ಕೆಂಚಲಗೂಡು, ಹಾಲಾಳು, ಡಿ.ಸಾಲುಂಡಿ, ಇಲವಾಲ, ಚಿಕ್ಕೇಗೌಡನಕೊಪ್ಪಲು, ಹಳೆ ಕಾಮನ ಕೊಪ್ಪಲು, ಭದ್ರೇಗೌಡನ ಕೊಪ್ಪಲು, ಲಿಂಗದೇವರು ಕೊಪ್ಪಲು, ಈರಪ್ಪನ ಕೊಪ್ಪಲು, ಮಲ್ಲಹಳ್ಳಿ-ಬೀರಿಹುಂಡಿ, ಕುಮಾರಬೀಡು, ಗೋಹಳ್ಳಿ, ಬಲ್ಲಹಳ್ಳಿ ಗ್ರಾಮಗಳ ಸ್ವರೂಪವೇ ಬದಲಾಗಲಿದೆ. ಗ್ರಾಪಂ ಹೆಸರು ತೆಗೆದು ಹಾಕಿ ಮೈಸೂರು ನಗರಪಾಲಿಕೆ ನಾಮಫಲಕಗಳನ್ನು ಹಾಕಬೇಕಾಗುತ್ತದೆ. ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ ಸೇರಿದಂತೆ ಮತ್ತಿತರ ಮೂಲ ಸೌಕರ್ಯಗಳ ವಿಚಾರದಲ್ಲೂ ಗ್ರಾಪಂ ಆಶ್ರಯಿಸುವ ಬದಲಿಗೆ ಪಾಲಿಕೆಯ ಕಡೆಗೆ ನೋಡಬೇಕಾಗುತ್ತದೆ.

ಚುನಾವಣೆಯಲ್ಲಿ ಸೆಣಸಾಟ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸೆಣಸಾಡಲು ಸಜ್ಜಾಗಿದ್ದ ಆಕಾಂಕ್ಷಿಗಳು ಮುಂದಿನ ಚುನಾವಣೆಯಲ್ಲಿ ಗ್ರೇಟರ್ ಮೈಸೂರು ಸದಸ್ಯರಾಗಲು ಕಣಕ್ಕಿಳಿಯಬೇಕಾಗುತ್ತದೆ. ರಿಂಗ್ ರಸ್ತೆಯ ಹೊರಗಿನ ಜಿಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ದಿನೇಶ್, ಕೂರ್ಗಳ್ಳಿ ಮಹದೇವು, ಹಿನಕಲ್ ರಾಕೇಶ್ ಪಾಪಣ್ಣ, ಮಂಜುಳಾ ಮಂಜುನಾಥ್ ಸೇರಿದಂತೆ ಅನೇಕರು ತಮ್ಮ ರಾಜಕೀಯ ನೆಲೆಗಾಗಿ ಯಾವುದಾದರೂ ಒಂದು ವಾರ್ಡ್‌ಗಳಲ್ಲಿ ನಿಲ್ಲಬೇಕಾಗುತ್ತದೆ.

Tags:
error: Content is protected !!