ಮನೋ ಚೈತನ್ಯ ಕ್ಲಿನಿಕ್ ಮೂಲಕ ಚಿಕಿತ್ಸೆ,ಆಪ್ತ ಸಮಾಲೋಚನೆ
ಮೈಸೂರು: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮನೋರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಜ್ಞಾವಂತ ನಾಗರಿಕರ ಕಳವಳಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ ೧೧,೫೬೬ ಮಂದಿ ಮನೋರೋಗಿಗಳು ಕಂಡುಬಂದಿದ್ದರೆ, ಮನೋರೋಗಕ್ಕೆ ಒಳಗಾಗಿ ಆಪ್ತ ಸಮಾಲೋಚನೆಯ ನೆರವು ಪಡೆದವರ ಪ್ರಮಾಣದಲ್ಲೂ ಏರಿಕೆಯಾಗಿದೆ. ಇವು ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿ ಯಾಗಿರುವ ಅಂಕಿಅಂಶಗಳು. ಇದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ದಾಖಲಾಗಿದೆ.
ಮಾನಸಿಕ ಆರೋಗ್ಯ ಸಮಸ್ಯೆ ಉಳ್ಳವರಿಗೆ ನೆರವಾಗುವ ಮತ್ತು ಆಪ್ತ ಸಮಾಲೋಚನೆಯ ಮೂಲಕ ಚಿಕಿತ್ಸೆ ನೀಡುವ ಕೆಲಸವನ್ನು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ. ೨೦೨೩-೨೪ರಿಂದ ೨೦೨೫-೨೬ರ ನಡುವಿನ ಮೂರು ವರ್ಷಗಳಲ್ಲಿ ಮನೋರೋಗಕ್ಕೆ ಚಿಕಿತ್ಸೆ ಪಡೆದವರು ಹಾಗೂ ಮನೋರೋಗಕ್ಕೆ ಆಪ್ತ ಸಮಾಲೋಚನೆ ಪಡೆದವರ ಪ್ರಮಾಣ ಜಾಸ್ತಿಯಾಗಿದೆ.
ಮನೋಚೈತನ್ಯ ಕ್ಲಿನಿಕ್: ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ ‘ಮನೋಚೈತನ್ಯ ಕ್ಲಿನಿಕ್’ ನಡೆಸಲಾಗುತ್ತಿದೆ. ಮನೋರೋಗ ತಜ್ಞರು ಒಳಗೊಂಡ ಜಿಲ್ಲಾ ಮಾನಸಿಕ ಆರೋಗ್ಯ ತಂಡ ಈ ಕ್ಲಿನಿಕ್ ನಡೆಸುತ್ತದೆ. ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿದ್ದವರಿಗೆ ಆಪ್ತಸಮಾಲೋಚನೆಯ ಬೆಂಬಲವನ್ನು ಕೊಡಲಾಗುತ್ತದೆ. ಅವಶ್ಯವುಳ್ಳವರಿಗೆ ಔಷಽಯನ್ನೂ ವಿತರಿಸಲಾಗುತ್ತಿದೆ. ‘ಟೆಲಿ ಸಮಾಲೋಚನೆ’ಯ ವ್ಯವಸ್ಥೆಯೂ ಇರುತ್ತದೆ.
೧೪೪೧೬ ಸಂಖ್ಯೆಯ ಸಹಾಯವಾಣಿ ಮೂಲಕ ‘ಟೆಲಿ ಮನಸ್’ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನ ತಜ್ಞರೊಂದಿಗೆ ಮಾತನಾಡಲೂ ಅನುವು ಮಾಡಿಕೊಡಲಾಗುತ್ತಿದೆ. ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನದಲ್ಲಿ ನೆರವು ಪಡೆಯುವುದಕ್ಕಾಗಿ ಮೈಸೂರಿನ ಎಪಿಡಿ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳ ಲಾಗಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮಾನಸಿಕ ರೋಗಿ ಗಳಿಗೆ ನೆರವಾಗಲೆಂದೇ ಪ್ರತ್ಯೇಕ ವಿಭಾಗ ಆರಂಭಿಸುವು ದಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯುವಜನರಲ್ಲಿ ಖಿನ್ನತೆ ಹೆಚ್ಚಳ: ಯುವಕರಲ್ಲಿ ಖಿನ್ನತೆ (ಡಿಪ್ರೆಷನ್) ಹೆಚ್ಚಾಗುತ್ತಿರುವುದನ್ನು ‘ಮನೋ ಚೈತನ್ಯ ಕ್ಲಿನಿಕ್’ನಲ್ಲಿ ಆಪ್ತ ಸಮಾಲೋಚನೆ ನಡೆಸುವ ವೈದ್ಯರು ಗುರುತಿಸಿದ್ದಾರೆ.ಈ ಕ್ಲಿನಿಕ್‌ನಲ್ಲಿ ದಾಖಲಾಗಿರುವ ಪ್ರಕರಣಗಳ ಪ್ರಕಾರ, ಯುವಕ, ಯುವತಿಯರು ಹಲವು ಕಾರಣಗಳಿಂದಾಗಿ ಖಿನ್ನತೆಗೆ ಒಳಗಾಗಿರುವುದು ಹಾಗೂ ಜೀವನದಲ್ಲಿ ಜುಗುಪ್ಸೆ ಅನುಭವಿಸುತ್ತಿರುವುದು ಕಂಡು ಬಂದಿದೆ. ಶಿಕ್ಷಣಕ್ಕೆ ತಕ್ಕಂತೆ ಕೆಲಸ ಸಿಗದಿರುವುದು, ನಿರು ದ್ಯೋಗ ಸಮಸ್ಯೆ, ಪ್ರೇಮ ವೈಫಲ್ಯ ಮೊದಲಾದ ಕಾರಣ ಗಳಿಂದ ಬಹಳಷ್ಟು ಯುವಕರಲ್ಲಿ ಖಿನ್ನತೆ ಹೆಚ್ಚಾಗಿರುವುದು ಕಂಡು ಬಂದಿದೆ.
ದ್ವಿಚಕ್ರವಾಹನ ಸವಾರಿ ಹಾಗೂ ವಾಹನಗಳನ್ನು ಚಲಾಯಿಸುವಾಗ ಹುಚ್ಚು ಸಾಹಸ ಮಾಡಬೇಕು, ಘಟ್ಟ ಪ್ರದೇಶಗಳಲ್ಲಿ ವಾಹನಗಳಲ್ಲಿ ಅತ್ಯಂತ ವೇಗವಾಗಿ ಹೋಗಬೇಕು ಎಂಬಿತ್ಯಾದಿ ಮನೋಭಾವನೆ ಜಾಸ್ತಿ ಆಗುತ್ತಿರುವುದು ಕಳವಳ ಮೂಡಿಸುತ್ತಿದೆ. ಮದ್ಯಪಾನ, ಧೂಮಪಾನದ ಚಟಕ್ಕೆ ಒಳಗಾಗುವವರ ಪ್ರಮಾಣವೂ ಹೆಚ್ಚುತ್ತಿದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.
” ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಮನೋಚೈತನ್ಯ ಕ್ಲಿನಿಕ್ ನಡೆಸಲಾಗುತ್ತದೆ. ಸ್ಥಳೀಯವಾಗಿ ಖಿನ್ನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆ.”
– ಡಾ.ಬಿ. ಬೃಂದಾ,ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ.





