ಹೊದ್ದೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಮೈದಾನ; 11.70 ಎಕರೆ ಜಾಗದಲ್ಲಿ ನಿರ್ಮಾಣ
ನವೀನ್ ಡಿಸೋಜ
ಮಡಿಕೇರಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಕ ಕೊಡಗು ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕ್ರಿಕೆಟ್ ಸ್ಟೇಡಿಯಂ ಕಾಮ ಗಾರಿ ಚುರುಕುಗೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಮೈದಾನ ಜಿಲ್ಲೆಗೆ ದೊರಕಲಿದೆ.
ಇದು ಹಲವು ವರ್ಷಗಳ ಯೋಜನೆಯಾಗಿದ್ದರೂ ಕೆಲವಾರು ಕಾರಣಗಳಿಂ ದಾಗಿ ವಿಳಂಬವಾಗುತ್ತಲೇ ಬಂದಿತ್ತು. ಜಾಗದ ವಿವಾದ ಇಲ್ಲಿ ಸಮಸ್ಯೆಯಾಗಿದ್ದು, ನಂತರದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತ ಸಮಸ್ಯೆಗಳನ್ನು ಸರಿಪಡಿಸಿ ಜಾಗದ ದಾಖಲೆಯನ್ನು ಕೆಲವು ತಿಂಗಳುಗಳ ಹಿಂದೆ ಕೆ. ಎಸ್. ಸಿ. ಎ. ಗೆ ಅಧಿಕೃತವಾಗಿ ಹಸ್ತಾಂತರ ಮಾಡಿತ್ತು.
ಜಾಗವನ್ನು ಸುಪರ್ದಿಗೆ ಪಡೆದುಕೊಂಡ ಬಳಿಕ ಕೆ. ಎಸ್. ಸಿ. ಎ. ವತಿಯಿಂದ ಜಾಗದ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿ ಸಿ. ಸಿ. ಟಿ. ವಿ. ಅಳವಡಿಕೆಯೊಂದಿಗೆ ಸಂರಕ್ಷಿಸಲಾಗಿತ್ತು. ಕೆಲ ಸಮಯದ ಹಿಂದೆಯೇ ಅಽಕೃತವಾಗಿ ಕಾಮಗಾರಿ ಆರಂಭವಾಗ ಬೇಕಿತ್ತಾದರೂ ನಿರಂತರ ಮಳೆಯ ಕಾರಣದಿಂದಾಗಿ ಇಲ್ಲಿಯತನಕವೂ ಕೆಲಸ ವಿಳಂಬವಾಗಿತ್ತು. ಇದೀಗ ಬೃಹತ್ ಯಂತ್ರೋಪಕರಣಗಳು ಸ್ಥಳಕ್ಕೆ ಆಗಮಿಸಿದ್ದು, ಮೈದಾನ ಸಮತಟ್ಟುಗೊಳಿಸುವ ಕಾಮಗಾರಿ ಚುರುಕುಗೊಂಡಿದೆ. ಇದಾದ ಬಳಿಕ ಹಂತ ಹಂತವಾಗಿ ಇತರ ಕೆಲಸಗಳು ಆರಂಭವಾಗಲಿವೆ.
ಹೊದ್ದೂರು ಗ್ರಾಮದ ಸರ್ವೆ ನಂ. ೬೭/೧ಎಗೆ ಸೇರಿದ ೧೧. ೭೦ ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಸುಮಾರು ೫೦ ಕೋಟಿ ರೂ. ಗೂ ಅಧಿಕ ವೆಚ್ಚದ ಯೋಜನೆ ಇದಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು ೪ ವರ್ಷಗಳ ಅವಧಿ ಬೇಕಾಗಲಿದೆ.
ಕೊಡಗಿನಲ್ಲಿ ಮಳೆಯ ಕಾರಣದಿಂದಾಗಿ ಕೆಲವು ತಿಂಗಳುಗಳ ಕಾಲ ಕೆಲಸ ನಡೆಸುವುದು ದುಸ್ತರವಾಗಲಿರುವುದರಿಂದ ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ೭೪ ಮೀಟರ್ ಸುತ್ತಳತೆಯದ್ದಾದರೆ, ಹೊದ್ದೂ ರಿನ ಈ ಕ್ರೀಡಾಂಗಣ ೮೦ ಮೀಟರ್‌ನಷ್ಟು ವಿಶಾಲವಾಗಿರಲಿದೆ.
ಸ್ಟೇಡಿಯಂ ಪೂರ್ಣಗೊಂಡ ಬಳಿಕ ಭವಿಷ್ಯದಲ್ಲಿ ಯುವ ಕ್ರಿಕೆಟ್ ಪ್ರತಿಭೆಗಳಿಗೆ ವರದಾನವಾಗಲಿದೆ. ರಾಜ್ಯ ಪ್ರತಿಷ್ಠಿತ ಸ್ಟೇಡಿಯಂಗಳ ಪಟ್ಟಿಯಲ್ಲಿ ಇದೂ ಒಂದಾಗಲಿದ್ದು, ಮುಂದಿನ ದಿನಗಳಲ್ಲಿ ರಣಜಿ ಟ್ರೋಫಿ, ಕೆ. ಪಿ. ಎಲ್. ನಂತಹ ಪ್ರಮುಖ ಪಂದ್ಯಾವಳಿಗಳೂ ಇಲ್ಲಿ ನಡೆಯುವ ಆಶಾಭಾವನೆಯಿದೆ. ಸದ್ಯದ ಮಟ್ಟಿಗೆ ಸುಮಾರು ೨೦ ಸಾವಿರ ಜನರಿಗೆ ಸ್ಥಳಾವಕಾಶವಿರುವಂತೆ ಈ ಸ್ಟೇಡಿಯಂ ತಲೆ ಎತ್ತಲಿದೆ.
ಕ್ರೀಡಾ ಜಿಲ್ಲೆ ಎಂದೆನಿಸಿರುವ ಕೊಡಗಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೆ. ಎಸ್. ಸಿ. ಎ. ಸಂಸ್ಥೆ ಆರಂಭ ದಿಂದಲೂ ಉತ್ಸುಕತೆ ತೋರುತ್ತಿದೆ. ಕೆ. ಎಸ್. ಸಿ. ಎ. ಯ ಹಿಂದಿನ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದರು. ಈಗಿನ ಅಧ್ಯಕ್ಷ ರಘುರಾಮ ಭಟ್, ಉಪಾಧ್ಯಕ್ಷ ಬಿ. ಕೆ. ಸಂಪತ್, ಕಾರ್ಯದರ್ಶಿ ಶಂಕರ್, ಜಂಟಿ ಕಾರ್ಯದರ್ಶಿ ಶಾವಿರ್ ತರಡೋರ್, ಖಜಾಂಚಿ ಜಯರಾಂ ಅವರೂಗಳೂ ಆಸಕ್ತಿ ತೋರುತ್ತಿದ್ದಾರೆ.
ಏನೇನು ಇರಲಿವೆ?
ಸ್ಟೇಡಿಯಂನಲ್ಲಿ ಈಜುಕೊಳ, ಸುಸಜ್ಜಿತ ಕೊಠಡಿಗಳು, ರಿಕ್ರಿಯೇಷನ್ ಕ್ಲಬ್, ಒಳಾಂಗಣ ಕ್ರೀಡೆಗಳಾದ ಶಟಲ್, ಸ್ಕ್ರಾಷ್, ಬಾಸ್ಕೆಟ್ ಬಾಲ್, ಜಿಮ್ ಸೇರಿದಂತೆ ಇನ್ನಿತರ ಕ್ರೀಡಾ ಸೌಲಭ್ಯಗಳು ಇಲ್ಲಿರಲಿವೆ. ಪ್ರಮುಖವಾಗಿ ನುರಿತ ತರಬೇತುದಾರರಿಂದ ಕ್ರಿಕೆಟ್ ಶಿಬಿರಗಳು, ಆಯ್ಕೆ ಶಿಬಿರಗಳು, ಮತ್ತಿತರ ಪಂದ್ಯಾಟಗಳು ಇಲ್ಲಿ ನಡೆಯುವ ಸಾಧ್ಯತೆಗಳಿದ್ದು, ಯುವ ಪ್ರತಿಭೆಗಳಿಗೆ ಸದುಪಯೋಗವಾಗಲಿದೆ.
ಕಾರಣಾಂತರಗಳಿಂದ ವಿಳಂಬವಾಗಿದ್ದ ಕಾಮಗಾರಿ ಈಗ ಚುರುಕುಗೊಂಡಿದೆ. ಬೃಹತ್ ವೆಚ್ಚದ ಯೋಜನೆ ಕೆಎಸ್‌ಸಿಎ ಮೂಲಕ ಕೊಡಗಿಗೆ ಬರುತ್ತಿದೆ. ಸಂಪೂರ್ಣ ಕೆಲಸ ಪೂರ್ಣಗೊಳ್ಳಲು ೪ ವರ್ಷಗಳು ಬೇಕಾಗಬಹುದು. ಮಳೆಗಾಲದಲ್ಲಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಸದ್ಯ ಕೆಲಸ ನಡೆಯುತ್ತಿದೆ. ಚೇನಂದ ಪೃಥ್ವಿ ದೇವಯ್ಯ, ಜಿಲ್ಲಾ ಸಂಯೋಜಕ, ಕೆಎಸ್‌ಸಿಎ