Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಬಳಿಸಲು ಯತ್ನಿಸಿದ ಜಮೀನು ಸರ್ಕಾರದ ವಶಕ್ಕೆ

ಎಚ್.ಡಿ.ಕೋಟೆ ತಹಸಿಲ್ದಾರ್‌ರಿಂದ ಕಾರ್ಯಾಚರಣೆ; ೪ ಎಕರೆ ಸುಪರ್ದಿಗೆ

ನಕಲಿ ದಾಖಲಾತಿ ಸೃಷ್ಟಿಸಿ ಅಮಾನತ್ತಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳು

ಮಂಜು ಕೋಟೆ

ಎಚ್.ಡಿ.ಕೋಟೆ: ಕಂದಾಯ ಇಲಾಖೆಯ ಅಧಿಕಾರಿಗಳು ಭೂ ಹಗರಣ ನಡೆಸಿ ನಕಲಿ ದಾಖಲಾತಿ ಸೃಷ್ಟಿಸಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಕಬಳಿಸಲು ಮುಂದಾಗಿದ್ದ ೪ ಎಕರೆ ೨೦ ಗುಂಟೆ ಜಮೀನನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆದು ಕೊಳ್ಳುವಲ್ಲಿ ತಹಸಿಲ್ದಾರ್ ಮುಂದಾಗಿದ್ದಾರೆ.

ತಾಲ್ಲೂಕಿನ ಪಡುಕೋಟೆ ಗ್ರಾಮದ ಸರ್ವೆ ನಂ.೫೩ರಲ್ಲಿ ೩ ಎಕರೆ ೨೦ ಗುಂಟೆ ಮತ್ತು ೧ ಎಕರೆ ಜಮೀನನ್ನು ೨ ವರ್ಷಗಳ ಹಿಂದೆ ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿದ್ದ ಗ್ರಾಮ ಲೆಕ್ಕಿಗ ಅನಿಲ್ ಕುಮಾರ್ (ಈಗ ನಂ.ಗೂಡಿನ ಹೆಡಿಯಾಲದಲ್ಲಿ ಸೇವೆ) ಮತ್ತು ಎಸ್‌ಡಿಎ ಹರೀಶ್ (ಈಗ ನರಸೀಪುರದ ತಾಲ್ಲೂಕು ಕಚೇರಿಯಲ್ಲಿ ಎಸ್‌ಡಿಎ ಆಗಿ ಸೇವೆ) ಅವರು ತಮ್ಮ ಸಂಬಂಧಿಕರಾದ ಸುಜಾತ ಮತ್ತು ಭವ್ಯ ಎಂಬವರಿಗೆ ೩ ಎಕರೆ ೨೦ ಗುಂಟೆ ಮತ್ತು ೧ ಎಕರೆ ಜಮೀನು ಸಾಗುವಳಿ ಪಡೆಯಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.

ಈ ಹಿಂದೆ ಕಂದಾಯ ನಿರೀಕ್ಷಕರಾಗಿದ್ದ ಈಗ ಮೈಸೂರು ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹೇಶ್ ಮತ್ತು ಪಿ.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಫ್ಡಿಎ ವಿಷ್ಣು, ತಹಸಿಲ್ದಾರ್ ರತ್ನಾಂಬಿಕ ಮತ್ತು ಶಿರಸ್ತೆದಾರ್ ಕುಮಾರ್ ಅವರ ಸಹಕಾರದೊಂದಿಗೆ ನಕಲಿ ದಾಖಲಾತಿ ಸೃಷ್ಟಿಸಿದ್ದರು.

ಈ ಪ್ರಕರಣದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ರಾಜೇಂದ್ರ ಅವರು ತನಿಖೆ ನಡೆಸಿ ತಹಸಿಲ್ದಾರ್ ಮತ್ತು ಶಿರಸ್ತೆದಾರ್  ಅವರನ್ನು ಹೊರತುಪಡಿಸಿ ನಾಲ್ವರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತ್ತುಗೊಳಿಸಿದ್ದರು.

ಗ್ರಾಮದ ರವಿ ಗೌಡ ಈ ಪ್ರಕರಣದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ನಕಲಿ ದಾಖಲಾತಿಗಳನ್ನು ವಜಾಗೊಳಿಸಿ ಜಮೀನನ್ನು ಸರ್ಕಾರ ವ್ಯಾಪ್ತಿಗೆ ಪಡೆದುಕೊಳ್ಳಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸಿ ಎಂದು ಆದೇಶಿಸಿದ್ದರು.

ಅದರಂತೆ ತಹಸಿಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ, ಎಡಿಎಲ್‌ಆರ್ ಬಸವರಾಜು, ಸರ್ವೆಯರ್ ಶಂಭುಲಿಂಗ, ಕಂದಾಯ ನಿರೀಕ್ಷಕರಾದ ವಿಶ್ವನಾಥ್, ಗ್ರಾಮಲೆಕ್ಕಿಗ ರಾಜೇಶ್, ಸಬ್ ಇನ್ ಸ್ಪೆಕ್ಟರ್ ಚಿಕ್ಕನಾಯಕ, ಬಸವರಾಜು ಮತ್ತಿತರರು ಜಮೀನಿಗೆ ತೆರಳಿ ಸರ್ಕಾರದ ವಶಕ್ಕೆ ಪಡೆದುಕೊಂಡು ಜಮೀನಿನ ಗೇಟ್‌ಗೆ ಬೀಗಮುದ್ರೆ ಹಾಕಿ ಸರ್ಕಾರದ ಜಮೀನು ಎಂದು ಫಲಕ ಅಳವಡಿಸಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳೇ ಭೂ ಹಗರಣ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಆಂದೋಲನ’ ದಿನಪತ್ರಿಕೆಯಲ್ಲಿ ನಿರಂತರವಾಗಿ ವರದಿ ಪ್ರಕಟ ಮಾಡಲಾಗಿತ್ತು. ಇದರಿಂದ ಎಚ್ಚೆತ್ತ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಅವರು ನಾಲ್ವರನ್ನು ಅಮಾನತ್ತುಗೊಳಿಸಿದ್ದರು. ಈಗ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಮತ್ತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಮುಂದಾಗಿದ್ದಾರೆ.

” ಲೋಕಾಯುಕ್ತ ಮತ್ತು ಜಿಲ್ಲಾಧೀಕಾರಿಗಳ ನಿರ್ದೇಶನದಂತೆ ಪಡುಕೋಟೆ ವ್ಯಾಪ್ತಿಯ ಸ.ನಂ.೫೩ರ ೪ ಎಕರೆ ೨೦ ಗುಂಟೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ. ಜಮೀನಿನ ಸಾಗುವಳಿ ಪಡೆಯಲು ಸೃಷ್ಟಿಸಿದ್ದ ನಕಲಿ ದಾಖಲಾತಿಗಳನ್ನು ರದ್ದುಗೊಳಿಸಲಾಗಿದೆ. ತಪ್ಪಿತಸ್ಥ ಕಂದಾಯ ಇಲಾಖೆಯ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮಕ್ಕೆ ಡಿಸಿ ಅವರಿಗೆ ವರದಿ ಕಳಿಸಲಾಗಿದೆ.”

-ಶ್ರೀನಿವಾಸ್, ತಹಸಿಲ್ದಾರ್, ಎಚ್.ಡಿ.ಕೋಟೆ

Tags:
error: Content is protected !!