ಜೇನುಕುರುಬರ ಡೋಬಿ, ಮಾವುತ ಮತ್ತು ಗಾಯಕ ದುಬಾರೆ ಆನೆ ಶಿಬಿರ
ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಉಗಾದಿ ಸುಖ ಕಾಡಿನೊಳಗಿರುವ ಜೇನು ಕುರುಬರಾದ ನಮಗೆ ಯುಗಾದಿ ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರದ ಆರಾಧನೆ. ನಮ್ಮ ದೇವರೂ ಕಾಡಿನೊಳಗೆ ವಾಸಿಸುವನು. ದೇವರನ್ನು ನಾವು ಪ್ರಾಣಿಗಳೊಡನೆ ಹೋಲಿಸುತ್ತೇವೆ. ಯುಗಾದಿಯಂದು ಕಾಡಿನೊಳಗಿರುವ ನಮ್ಮ ದೇವರನ್ನು ಪೂಜಿಸಲು ಹೋಗುತ್ತೇವೆ. ದೇವರಿಗೂ ಕಾಡು ಪ್ರಾಣಿಗಳಿಗೂ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ.
ಯುಗಾದಿಯೆಂದರೆ ನಮ್ಮಲ್ಲಿ ಬದುಕಿದ್ದವರ ಹಬ್ಬ ಮಾತ್ರವಲ್ಲ. ಸತ್ತವರು ದೇವರೊಡನೆ ಇದ್ದಾರೆ ಎಂಬ ನಂಬಿಕೆ ನಮ್ಮದು. ಸತ್ತವರನ್ನು ದಫನ ಮಾಡಿದ ಒಂಭತ್ತು ದಿನಗಳ ನಂತರ ತಿಥಿ ಮಾಡಿ ಮುಗಿಸಿದರೆ ಮತ್ತೆ ಸತ್ತವರಿಗೆ ಉಣಬಡಿಸುವುದು ಯುಗಾದಿ ಹಬ್ಬಕ್ಕೆ. ಇದನ್ನು ನಾವು ‘ಪ್ರಸಾದ’ ಎಂದು ಕರೆಯುತ್ತೇವೆ. ದೇವರ ಪ್ರಸಾದದ ಜೊತೆಗೆ ಈ ಪ್ರಸಾದವೂ ನಮಗೆ ಯುಗಾದಿ ಹಬ್ಬಕ್ಕೆ ವಿಶೇಷವಾಗಿದೆ. ಸತ್ತವರು ದೇವರೊಡನೆ ಸೇರಿರುವುದರಿಂದ ನಾವು ಅವರನ್ನೂ ದೇವರಂತೆಯೇ ಕಾಣುತ್ತೇವೆ.
ಒಂದೊಂದು ಮನೆಗೆ ಒಬ್ಬೊಬ್ಬ ದೇವರಿದ್ದು ಆ ಮೂಲಕ ಜೇನುಕುರುಬರು ಗುರುತಿಸಲ್ಪಡುತ್ತಾರೆ. ದೇವರು ಕಣ್ಣಿಗೆ ಕಾಣುವುದಿಲ್ಲ. ಪ್ರಾಣಿಗಳು ನಮ್ಮ ಜೀವನಕ್ಕೆ ಆಧಾರ. ಇದೇ ಕಾರಣಕ್ಕೆ ನಮ್ಮಲ್ಲಿ ಎಲ್ಲಾ ದೇವರ ನಂಬಿಕೆಯ ಹಿಂದೆಯೂ ಪ್ರಾಣಿಗಳ ಆರಾಧನೆ ಕಾಣುತ್ತದೆ. ‘ನಂಬಿಕೆ ಎನ್ನುವುದು ನಾವು ನಂಬಿದಂತೆ’ ಎನ್ನುವುದು ಜೇನುಕುರುಬರ ಸಂಸ್ಕೃತಿ, ಆದರೆ ಇತ್ತೀಚಿನ ದಿನಗಳಲ್ಲಿ ಕಾಡು ನಾಶ, ಪ್ರಾಣಿಗಳ ಬೇಟೆ ಇವೆಲ್ಲ ಹೆಚ್ಚಾಗುತ್ತಿರುವುದನ್ನು ಕಂಡು ಮನಸ್ಸಿನಲ್ಲಿ ಅಂಜಿಕೆ ಹುಟ್ಟುತ್ತಿದೆ.
ಯುಗಾದಿಯಂದು ದೇವರಿಗೆ ಸಿಹಿ ಹಾಗೂ ಕಹಿ ಪದಾರ್ಥಗಳನ್ನು ಇಡುತ್ತೇವೆ. ದೇವರಿಗೆ ಮಾಂಸಾಹಾರ ಇಲ್ಲ. ಆದರೆ, ಕಾಡಿನೊಳಗೆ ಹೋಗಿ ಮಾಡುವ ಹೊಸ ತೊಡಕಿನಲ್ಲಿ ಮಾಂಸಾಹಾರ ಇದ್ದೇ ಇದೆ. ಆ ಸಂದರ್ಭದಲ್ಲಿ ಸತ್ತವರಿಗೂ ಎಡೆ ಇಡುವ ಮೂಲಕ ಜೀವಂತವಾಗಿರಿಸಿಕೊಳ್ಳುತ್ತೇವೆ. ಆದರೂ ಹಿಂದಿದ್ದ ಹಬ್ಬದ ಸಂಭ್ರಮ ಈಗಿಲ್ಲ. ಅಂದು ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಸುಖ ಇತ್ತು. ಹಿರಿಯರು ಪುಣ್ಯವಂತರು. ಅವರ ದುಡಿಮೆ ಮುಂದೆ ನಮ್ಮದೆಲ್ಲವೂ ಸುಳ್ಳು. ಈಗಿನ ಕಾಲಕ್ಕೆ ಎಲ್ಲವೂ ಬದಲಾಗಿದೆ. ಊರ ಹೊರಗೆ ಕಾಡಿನಲ್ಲಿ ಹಬ್ಬ ಆಚರಿಸುವವರೂ ಬೆರಳೆಣಿಕೆ ಮಂದಿ ಸಂಪ್ರದಾಯಗಳು ಬೇರೆ ಬೇರೆ ಇರಬಹುದು, ಆದರೆ ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿದರೆ ಮಾತ್ರ ಹಬ್ಬ.



