Mysore
21
overcast clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಚರ್ಚೆಗೆ ಗ್ರಾಸವಾದ ದಶಮಂಟಪಗಳ ನಿಯಮ ಪಾಲನೆ ವಿಚಾರ

ಸುರಕ್ಷತೆ ದೃಷ್ಟಿಯಿಂದ ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ;

ಸಾಂಪ್ರದಾಯಿಕ ಆಚರಣೆಗೆ ಅನಗತ್ಯ ನಿಯಮ ಹೇರದಿರಲು ದಶಮಂಟಪ ಸಮಿತಿ ಒತ್ತಾಯ

ಮಡಿಕೇರಿ: ದಸರಾ ದಶಮಂಟಪಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಪಾಲಿಸಬೇಕೆನ್ನುವ ವಿಚಾರವೀಗ ಚರ್ಚೆಗೆ ಕಾರಣವಾಗಿದೆ. ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಚಲನವಲನ ಪ್ರದರ್ಶನವನ್ನು ವ್ಯವಸ್ಥಿತವಾಗಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

ಮಂಟಪ ತಯಾರಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯಿಂದ ಪೂರ್ವಾನುಮತಿ ಪಡೆಯುವ ವಿಚಾರಕ್ಕೆ ಶಾಸಕ ಡಾ. ಮಂಥರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಸಾರಿಗೆ ಇಲಾಖೆ ನಿಯಮದಂತೆ ಟ್ರಾಕ್ಟರ್‌ಗಳಲ್ಲಿ ಇಂತಿಷ್ಟೇ ಲೋಡ್ ಹಾಕಬೇಕು. ಇಷ್ಟೇ ಎತ್ತರ ಇರಬೇಕು ಎಂಬಿತ್ಯಾದಿ ನಿಯಮಗಳಿವೆ. ಆದರೆ ದಸರಾ ದಶಮಂಟಪಗಳ ವಿಚಾರದಲ್ಲಿ ಈ ನಿಯಮಗಳ ಪಾಲನೆ ಅಸಾಧ್ಯ ಎನ್ನುವ ಅಭಿಪ್ರಾಯ ಮಂಟಪ ಸಮಿತಿಗಳದ್ದಾಗಿದೆ.

ಈ ಹಿಂದೆ ೫-೬ ಟ್ರಾಕ್ಟರ್‌ಗಳನ್ನು ಬಳಸಿ ನಿರ್ಮಿಸಲಾಗುತ್ತಿದ್ದ ಮಂಟಪಗಳನ್ನು ಈಗ ೨ ಟ್ರಾಕ್ಟರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಅಲ್ಲದೆ ದಸರಾ ದಶಮಂಟಪ ಸಮಿತಿಯಿಂದಲೇ ಹಲವು ನಿಯಮಗಳನ್ನು ತರಲಾಗಿದ್ದು, ಎಲ್ಲ ಮಂಟಪಗಳೂ ಅದನ್ನು ಪಾಲಿಸುತ್ತಿವೆ. ಹೀಗಿರುವಾಗ ಹೊಸದಾಗಿ ಷರತ್ತುಗಳನ್ನು ಹೇರುವುದು ಸರಿಯಲ್ಲ ಎಂಬುದು ಮಂಟಪ ಸಮಿತಿಗಳ ಅಭಿಮತವಾಗಿದೆ.

ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶ ಮಂಟಪಗಳ ವೈಭವಕ್ಕೆ ಅಡ್ಡಿಯಾದಂತೆ ಜನದಟ್ಟಣೆ ನಿರ್ವಹಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಮಂಟಪ ಗಳನ್ನು ಹೊರಡಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

ಈಗಾಗಲೇ ದಸರಾ ದಶಮಂಟಪ ಸಮಿತಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ದಸರಾ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಲವು ಮಾರ್ಪಡುಗಳನ್ನು ಮಾಡಿಕೊಳ್ಳಲು ಚಿಂತನೆ ನಡೆಸಿದೆ. ಪ್ರತಿ ಮಂಟಪದ ತೀರ್ಪುಗಾರಿಕೆ ಪ್ರದರ್ಶನಕ್ಕೆ ಸಾರ್ವಜನಿಕರ ಓಡಾಟಕ್ಕೆ ಸ್ಥಳ ನಿಗದಿಪಡಿಸುವುದು. ತೀರ್ಪುಗಾರಿಕೆ ನಿಗದಿತ ಸಮಯದಲ್ಲಿ ನಡೆಸಲು ವ್ಯವಸ್ಥಿತ ಯೋಜನೆ ರೂಪಿಸುವುದೂ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲು ಚರ್ಚೆ ನಡೆಸಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ದಶಮಂಟಪ ಸಮಿತಿ ಮುಂದಾಗಿದ್ದು, ದಶಮಂಟಪ ಸಮಿತಿಯ ನೂತನ ಬೈಲಾ ರಚನೆಯಾಗುತ್ತಿದೆ. ಅದರಲ್ಲಿ ಮಂಟಪ ತಯಾರಿಗೆ ಸಂಬಂಧಿಸಿದಂತೆಯೂ ನಿಯಮಗಳನ್ನು ರೂಪಿಸಲು ಚಿಂತಿಸಲಾಗಿದೆ. ಶಾಸಕರು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಮಿತಿ ಸಭೆಗೆ ಕರೆದು ಅಲ್ಲಿ ಕೆಲವು ವಿಚಾರಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ದಶಮಂಟಪ ಸಮಿತಿ ಮುಂದಾಗಿದೆ

” ದಶಮಂಟಪಗಳ ನಿರ್ಮಾಣ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಸುರಕ್ಷತೆಯ ಪ್ರಮಾಣ ಪತ್ರ ಪಡೆಯುವುದು ಅಗತ್ಯ. ದಶ ಮಂಟಪಗಳ ಪ್ರದರ್ಶನಕ್ಕೆ ತೆರಳುವಾಗ ಸುರಕ್ಷತೆ ಅತೀ ಮುಖ್ಯವಾಗಿದೆ. ಹೀಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಅನುಮತಿ ಪಡೆಯುವಂತಾಗಬೇಕು. ಜನ ಸಂದಣಿ ಇರುವ ಕಡೆಗಳಲ್ಲಿ ಪಟಾಕಿ ಸಿಡಿಸಬಾರದು. ಸುರಕ್ಷಿತ ಸ್ಥಳದಲ್ಲಿ ಪಟಾಕಿ ಸಿಡಿಸಬೇಕು.”

-ಕೆ.ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

” ಮಂಟಪದಲ್ಲಿ ಪಟಾಕಿ ಸಿಡಿಸಬಾರದು ಎಂದು ತಾಕೀತು ಮಾಡಿದ್ದರು. ಅದನ್ನು ನಿಲ್ಲಿಸಿದ್ದೇವೆ. ೨ ಟ್ರಾಕ್ಟರ್‌ಗಳಿಗೆ ಸೀಮಿತವಾಗಿ ಮಂಟಪ ತಯಾರಿಸಲಾಗುತ್ತಿದೆ. ಈಗ ಪೇಪರ್ ಬ್ಲಾಸ್ಟ್ ಬಳಸಬಾರದು, ನಿಯಮ ಮೀರಿ ಭಾರ ಹಾಕಬಾರದು ಎಂದೆಲ್ಲಾ ನಿಯಮ ತಂದರೇ ಕಷ್ಟವಾಗುತ್ತದೆ. ಸಾಂಪ್ರದಾಯಿಕವಾಗಿ ನಡೆಸಲಾಗುತ್ತಿರುವ ಮಂಟಪಗಳ ವಿಚಾರದಲ್ಲಿ ನಾವೇ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಅನವಶ್ಯ ನಿಯಮಗಳನ್ನು ಹೇರಬಾರದೆಂದು ಮನವಿ ಮಾಡಿದ್ದೇವೆ.”

-ಬಿ.ಎಂ.ಹರೀಶ್, ದಸರಾ ದಶಮಂಟಪ ಸಮಿತಿ ಅಧ್ಯಕ್ಷ

Tags:
error: Content is protected !!