Mysore
19
scattered clouds
Light
Dark

ವನ್ಯತಾಣದ ಸೊಬಗು, ಜಲಾಶಯದ ಬೆಡಗು: ಪ್ರವಾಸೋದ್ಯಮದ ಅಕ್ಷಯ ಪಾತ್ರೆ ಎಚ್.ಡಿ.ಕೋಟೆ ಕ್ಷೇತ್ರ

• ಮಂಜು ಕೋಟೆ/ ಅನಿಲ್ ಅಂತರಸಂತೆ

 

• ಕ್ಷೇತ್ರಕ್ಕೆ ಹೊಸ ರೂಪ ನೀಡಿದ ಕಬಿನಿ ಜಲಾಶಯ
• ನದಿಯೊಂದಿಗೆ ವಿಸ್ತಾರವಾಗಿ ಹರಡಿಕೊಂಡಿರುವ ಬಂಡೀಪುರ-ನಾಗರಹೊಳೆ ಅರಣ್ಯ ಪ್ರದೇಶ ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆಗಳು ಒಂದೆಡೆ ಸೇರುವ ಸ್ಥಳಗಳಲ್ಲಿ ಕಬಿನಿ ಹಿನ್ನೀರಿನ ಪ್ರದೇಶವೂ ಒಂದು
• ನದಿ ಅಂಚಿನಲ್ಲಿ ಪ್ರಾಣಿಗಳ ಕಲರವ, ಪ್ರಾಣಿಗಳನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳ
• ಹಣವುಳ್ಳವರನ್ನು ಆಕರ್ಷಿಸುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಹಾಗೂ ಐಷಾರಾಮಿ ಖಾಸಗಿ ರೆಸಾರ್ಟ್‌ಗಳು, ವಿಶ್ವವಿಖ್ಯಾತಿ ಪಡೆದ ನಾಗರಹೊಳೆಯ ಕಾಕನಕೋಟೆ ಸಫಾರಿ
• ಇಲ್ಲಿವೆ ಕಣ್ಣನ ಸೆಳೆಯುವ ಬ್ರಿಟಿಷರ ಬಂಗಲೆಗಳು
• ಖ್ಯಾತಿ ಪಡೆದ ಕಾಕನಕೋಟೆ ಖೆಡ್ಡಾ

ಎಚ್.ಡಿ.ಕೋಟೆ ಕ್ಷೇತ್ರ ಈಗ ಒಂದು ಸುಂದರ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಯಾಗುತ್ತಿದ್ದು, ಇಂದು ವಿಶ್ವದ ಗಮನ ಸೆಳೆಯುತ್ತಿರುವ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಜಲಾಶಯಗಳು, ಅರಣ್ಯ ಪ್ರದೇಶಗಳು ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರನ್ನೂ ಕೈಬೀಸಿ ಕರೆಯುತ್ತಿವೆ.

1960-1970ರ ದಶಕದವರೆಗೂ ಕಬಿನಿ ಎಂದರೆ ಕೇವಲ ಕಪಿಲಾ ನದಿಯೇ ಕಣ್ಣೆದುರು ಚಿತ್ರಿತವಾಗುತ್ತಿತ್ತು. ಆ ಚಿತ್ರಣ ಈಗ ಬದಲಾಗಿದೆ. ಕೇರಳದಲ್ಲಿ ಹುಟ್ಟಿದರೂ ಕರ್ನಾಟಕದ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಲವು ಮೈಲಿಗಳ ದೂರ ಹರಿದು ಕಾವೇರಿಯಲ್ಲಿ ಅಂತರ್ಗತವಾಗುತ್ತಿರುವ ಕಬಿನಿ ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಒಂದು ವಿಶೇಷತೆ ತಂದುಕೊಟ್ಟಿದೆ.

1970ರಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಜಲಾಶಯವೊಂದರ ನಿರ್ಮಾಣವಾಗಬೇಕು ಎಂಬ ಪ್ರಸ್ತಾಪ ಕೇಳಿಬಂದಾಗಲೇ ಕಾವೇರಿಯ ಇತರೆ ಉಪನದಿಗಳಿಗಿರುವ ಪ್ರಾಮುಖ್ಯತೆ ಈ ನದಿಗೂ ಬಂತು. ಇದರಲ್ಲಿ ಮತ್ತೊಂದು ವಿಶೇಷವೆಂದರೆ ಈ ನದಿಯ ದಂಡೆಯ ಮೇಲೆ ಬಂಡೀಪುರ ಮತ್ತು ನಾಗರಹೊಳೆ ಎಂಬ ಎರಡು ಅರಣ್ಯ ಪ್ರದೇಶಗಳು ಹರಡಿಕೊಂಡಿದ್ದು, ಈ ನದಿ ಅಲ್ಲಿನ ಜೀವ ಸಂಕುಲ ಹಾಗೂ ಕೃಷಿಗೆ ನೀರಿನ ಮೂಲವಾಗಿದೆ. ಜಲಾಶಯ ನಿರ್ಮಾಣದಿಂದ ಅಪಾರ ಪ್ರಮಾಣದ ಕಾಡು ನಾಶವಾದರೂ ಕಾಲ ಉರುಳಿದಂತೆ ಅವುಗಳ ಸ್ವರೂಪ ಬದಲಾಗಿ, ಇಂದು ಅಪಾರ ಜೀವ ಸಂಕುಲಕ್ಕೆ ಆಹಾರ ಮತ್ತು ನೀರನ್ನು ಒದಗಿಸುತ್ತಿದೆ.

2,284 ಅಡಿ ಎತ್ತರ, 19.52 ಟಿಎಂಸಿ ನೀರು ಸಂಗ್ರಹಿಸಬಲ್ಲ ಜಲಾಶಯ ಕಾಮಗಾರಿ 1974ರಲ್ಲಿ ಪೂರ್ಣಗೊಂಡಿತು. ಇದಾದ ಬಳಿಕ ಕಾಡಿನ ಚಿತ್ರಣ ಬದಲಾಯಿತು. ವಿಸ್ತಾರವಾದ ಹಿನ್ನೀರಿನ ಪ್ರದೇಶ ಕಾಡಿನ ಎರಡೂ ತುದಿಗಳನ್ನು ಆಕ್ರಮಿಸುತ್ತಿದ್ದಂತೆ ನದಿ ಅಂಚಿನಲ್ಲಿ ಪ್ರಾಣಿಗಳ ಕಲರವ ಹೆಚ್ಚಾಯಿತು. ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆಗಳು ಒಂದೆಡೆ ಸೇರುವ ಸ್ಥಳಗಳಲ್ಲಿ ಕಬಿನಿ ಹಿನ್ನೀರಿನ ಪ್ರದೇಶವೂ ಒಂದಾಯಿತು. ಈ ಪ್ರದೇಶ ಬಂಡೀಪುರ, ನಾಗರಹೊಳೆ ಅಭಯಾರಣ್ಯಗಳ ಪ್ರಾಣಿಗಳಿಗೆ ವರ್ಷ ಪೂರ್ತಿ ಹಸಿರು ಮತ್ತು ನೀರಿನ ಮೂಲವಾಗಿ ಬದಲಾಯಿತು.

ಹಾಗೆಯೇ ಪ್ರಾಣಿಗಳನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು. ಆವರೆಗೂ ಇಲ್ಲಿದ್ದ ಟೈಗರ್ ಟ್ರಾಪ್ ರೆಸಾರ್ಟ್ 1980ರ ದಶಕದ ಆರಂಭದಲ್ಲಿ ಅಂದಿನ ಸಿಎಂ ಗುಂಡೂರಾವ್ ಕಾಲದಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಎಂದು ಬದಲಾಯಿತು. ಎಚ್.ಡಿ.ಕೋಟೆ ಕ್ಷೇತ್ರ ನಿಧಾನವಾಗಿ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿತು. ವಿಶ್ವವಿಖ್ಯಾತಿ ಸಫಾರಿ: ಪ್ರಸ್ತುತ ನಾಗರಹೊಳೆಯ ಕಾಕನಕೋಟೆ ಸಫಾರಿ ವಿಶ್ವವಿಖ್ಯಾತಿ ಪಡೆದಿದೆ. ಈಗ ಇದರ ವಾರ್ಷಿಕ ಆದಾಯ ಕೋಟ್ಯಂತರ ರೂ.ಗಳಾಗಿದೆ. ಪ್ರತಿನಿತ್ಯ ಪ್ರವಾಸಿಗರಿಂದ ಇಲ್ಲಿನ ರೆಸಾರ್ಟ್‌ಗಳು ತುಂಬಿ ತುಳುಕುತ್ತಿವೆ.

ಇಲ್ಲಿನ ಸಫಾರಿ ಮತ್ತು ರೆಸಾರ್ಟ್‌ಗಳು ಅತ್ಯಂತ ದುಬಾರಿಯಾಗಿವೆ. ದಿನಕ್ಕೆ 10 ಸಾವಿರ ರೂ.ಗಳಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಒಂದು ದಿನ ಕಳೆಯಬಹುದಾದ ರೆಸಾರ್ಟ್‌ಗಳು ಇಲ್ಲಿವೆ. ಜನಸಾಮಾನ್ಯರಿಗೆ ಅವುಗಳ ಆತಿಥ್ಯ ಪಡೆಯುವ ಭಾಗ್ಯವಿಲ್ಲದಂತಾಗಿದೆ.

ಐವತ್ತು ವರ್ಷಗಳ ಹಿಂದೆ ಕಬಿನಿಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗ್ರಾಮಗಳನ್ನು ತೊರೆದು ಪುನರ್ವಸತಿಗೊಂಡ ಗ್ರಾಮಗಳಿಗೆ ಮಾತ್ರ ಈವರೆಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.

ಇಲ್ಲಿವೆ ಬ್ರಿಟಿಷರ ಬಂಗಲೆಗಳು: ನಾಗರಹೊಳೆಯ ಬಹುತೇಕ ಎಲ್ಲ ವಲಯಗಳಲ್ಲಿಯೂ ಬ್ರಿಟಿಷರ ಕಾಲದ ಬಂಗಲೆಗಳು ನಿರ್ಮಾಣವಾಗಿವೆ. ಅವುಗಳನ್ನು ಆಗಾಗ್ಗೆ ದುರಸ್ತಿಪಡಿಸಿ ಮ್ಯೂಸಿಯಂ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಜನರ ವೀಕ್ಷಣೆಗೆ ಅವಕಾಶ ಕಲ್ಪಿಸಬಹುದು.

ಖೆಡ್ಡಾಗೆ ಖ್ಯಾತಿ ಕಬಿನಿ: ಕರ್ನಾಟಕದ ನಾನಾ ಭಾಗಗಳಲ್ಲಿ ಆನೆಗಳನ್ನು ಸೆರೆಹಿಡಿಯುವ ಖೆಡ್ಡಾ ಕಾರ್ಯಾಚರಣೆ ಚಾಲ್ತಿಯಲ್ಲಿತ್ತು. ರಾಜ್ಯದ ಸುಮಾರು 32-33 ಖೆಡ್ಡಾಗಳಲ್ಲಿ ಸುಮಾರು 1,800 ಆನೆಗಳನ್ನು ಸೆರೆಹಿಡಿಯಲಾಗಿದೆ ಎಂಬ ಮಾಹಿತಿ ಇದೆ. ಅವುಗಳ ಪೈಕಿ ಹಳೇ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಾಕನಕೋಟೆ ಅರಣ್ಯ ಪ್ರದೇಶ ಆನೆಗಳ ಖೆಡ್ಡಾ ಕಾರ್ಯಾಚರಣೆಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಸೆರೆಯಾಗಿ ಪಳಗಿಸಿದ ಆನೆಗಳು ವಿಶ್ವದಾದ್ಯಂತ ಗಮನ ಸೆಳೆದಿವೆ.

ದಾಖಲೆಗಳ ಪ್ರಕಾರ ಕಾಕನಕೋಟೆಯಲ್ಲಿ ಸುಮಾರು 24 ಖೆಡ್ಡಾಗಳಿದ್ದವು. ಅಂದಾಜು 1890-91 ರಲ್ಲಿ ಆರಂಭವಾದ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸುಮಾರು 380ಕ್ಕೂ ಹೆಚ್ಚು ಆನೆಗಳನ್ನು ಸೆರೆಹಿಡಿದು ಪಳಗಿಸಲಾಗಿದೆ. ಆದರೆ 1974ರ ಬಳಿಕ ಖೆಡ್ಡಾ ಕಾರ್ಯಾಚರಣೆಯನ್ನು ನ್ಯಾಯಾಲಯದ ಆದೇಶದಂತೆ ರದ್ದು ಮಾಡಲಾಯಿತು.

ಎರಡು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ: ಎಚ್.ಡಿ.ಕೋಟೆ ಕ್ಷೇತ್ರವು ತನ್ನ ವ್ಯಾಪ್ತಿಯಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ. ಎಚ್.ಡಿ.ಕೋಟೆ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದರೂ ಪ್ರಸ್ತುತ ಪ್ರತ್ಯೇಕ ತಾಲ್ಲೂಕಾಗಿರುವ ಸರಗೂರು ಭಾಗದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶವಿದ್ದರೆ, ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ 3 ವಲಯಗಳನ್ನು ಹೊಂದಿದೆ. ಪ್ರಸ್ತುತ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಹಾಗೂ ಕಾಕನಕೋಟೆ ಸಫಾರಿ ಲಾಭದಾಯಕವಾಗಿ ನಡೆಯುತ್ತಿದೆ.

ಮೂರು ಜಲಾಶಯಗಳ ನಾಡು: ಎಚ್‌.ಡಿ.ಕೋಟೆ ಕ್ಷೇತ್ರ ಅರಣ್ಯ ಸಂಪತ್ತು ಮಾತ್ರವಲ್ಲದೆ, ಕಬಿನಿ, ತಾರಕ ಹಾಗೂ ನುಗು ಜಲಾಶಯಗಳನ್ನು ಹೊಂದಿದ್ದು, ಇಲ್ಲಿನ ಕೃಷಿಗೆ ನೀರಿನ ಮೂಲವಾಗಿವೆ. ಆದರೆ ಇಲ್ಲಿ ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ಇಲ್ಲಿನ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಬಹುದು.

ಶಾಸಕರ ಮೇಲೆ ಹತ್ತಾರು ನಿರೀಕ್ಷೆ: ಪ್ರಸ್ತುತ ಎಚ್‌. ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ರಾಜ್ಯ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಧ್ಯಕ್ಷರಾಗಿದ್ದು, ಕ್ಷೇತ್ರದ ಪ್ರವಾಸೋದ್ಯಮಕ್ಕೆ ಸಾಕಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಗಳು ಇವೆ. ತಾಲ್ಲೂಕಿನ ಕಾರಾಪುರ ಬಳಿ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಇದ್ದರೂ ದುಬಾರಿ ಶುಲ್ಕದಿಂದಾಗಿ ಸ್ಥಳೀಯರು ಅಲ್ಲಿನ ಆತಿಥ್ಯ ಅನುಭವಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಇದರ ಅಧ್ಯಕ್ಷರಾಗಿ ಸ್ಥಳೀಯ ಶಾಸಕರೇ ನೇಮಕವಾಗಿರುವುದರಿಂದ ಇದರ ಆತಿಥ್ಯ ಸಾಮಾನ್ಯ ಜನರಿಗೂ ಎಟುಕುವಂತೆ ಏನಾದರೂ ಯೋಜನೆ ರೂಪಿಸಬಹುದೇ ಎಂದು ಕಾದುನೋಡಬೇಕಿದೆ.
====================

ಕೋಟ್ಸ್‌:

ಕೋಟೆ ತಾಲ್ಲೂಕನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರ ಜೊತೆ ಚರ್ಚಿಸಲಾಗಿದೆ. ಅನೇಕ ಹೊಸ ಯೋಜನೆಗಳ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಹಾಗೂ ರೆಸಾರ್ಟ್‌ಗಳಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವ ರೀತಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
-ಅನಿಲ್ ಚಿಕ್ಕಮಾದು, ಶಾಸಕರು

ಎಚ್.ಡಿ.ಕೋಟೆ ತಾಲ್ಲೂಕಿನ ರೆಸಾರ್ಟ್‌ಗಳು ಅತ್ಯಂತ ದುಬಾರಿಯಾಗಿವೆ. 25-30 ಸಾವಿರ ರೂ. ಗಳನ್ನು ಪಾವತಿಸಿ ಸೌಲಭ್ಯ ಪಡೆಯುವುದು ಅತ್ಯಂತ ದುಬಾರಿಯಾಗಿದೆ. ಹಾಗಂತ ನಾವು ರೆಸಾರ್ಟ್ ಸೌಲಭ್ಯ ಕೇಳುತ್ತಿಲ್ಲ. ಕಾರ್ಪೊರೇಟ್‌ನಂತೆ ಈ ರೆಸಾರ್ಟ್‌ನವರು ತಮ್ಮ ಆದಾಯದ ಒಂದಿಷ್ಟು ಮೊತ್ತವನ್ನು ಇಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಖರ್ಚುಮಾಡಲಿ,
-ಎಚ್.ವಿ.ಮನೋಜ್, ಹೊಸವಾಳ, ಎಚ್.ಡಿ.ಕೋಟೆ ತಾ.

ಎಚ್.ಡಿ.ಕೋಟೆ ತಾಲ್ಲೂಕಿನ ಬಹುತೇಕ ರೆಸಾರ್ಟ್‌ಗಳಿಗೆ ಸರಿಯಾದ ದಾಖಲೆಗಳೇ ಇಲ್ಲ. ಆದರೂ ಇಲ್ಲಿನ ಸಂಪತ್ತನ್ನು ಬಳಸಿಕೊಂಡು ಲಕ್ಷಾಂತರ ರೂ. ದೋಚುತ್ತಿದ್ದಾರೆ. ಅವುಗಳಿಗೆ ಕಡಿವಾಣ ಹಾಕಬೇಕು. ರೆಸಾರ್ಟ್‌ಗಳು ರಿಯಾಯಿತಿ ದರದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು.
-ಮಹೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.