ಭೇರ್ಯ ಮಹೇಶ್
ಅಡಗನಹಳ್ಳಿಯ ಎತ್ತಿನ ಗಾಣದ ಘಟಕ, ನೈಸರ್ಗಿಕ ಕೃಷಿ ಕೇಂದ್ರಕ್ಕೆ ಎಕ್ಸೆಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಭೇಟಿ
ಕೆ.ಆರ್.ನಗರ: ನಿತ್ಯ ಪುಸ್ತಕ ಹಿಡಿವ ವಿದ್ಯಾರ್ಥಿಗಳು ನೇಗಿಲು ಹಿಡಿದು ಉಳುಮೆ ಮಾಡಿದರು, ಸಾಲು ಸಾಲಿಗೆ ಹೇಗೆ ಬಿತ್ತನೆ ಮಾಡುವುದು ಎಂಬುದನ್ನು ಕಲಿತರು, ದಿನವಿಡೀ ನೈಸರ್ಗಿಕ ಕೃಷಿ ಕಲಿಕೆಯಲ್ಲೇ ನಿರತರಾದರು.
ಹೌದು, ಪಟ್ಟಣ ಸಮೀಪದ ಅಡಗನಹಳ್ಳಿ ಗ್ರಾಮದಲ್ಲಿರುವ ದೇಸಿರಿ ನ್ಯಾಚುರಲ್ಸ್ ಸಂಸ್ಥೆಯ ಎತ್ತಿನ ಗಾಣದ ಘಟಕ ಹಾಗೂ ನೈಸರ್ಗಿಕ ಕೃಷಿ ಕೇಂದ್ರಕ್ಕೆ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನ ೬ನೇ ತರಗತಿಯ ವಿದ್ಯಾರ್ಥಿಗಳು ಭೇಟಿ ನೀಡಿ ನೈಸರ್ಗಿಕ ಕೃಷಿ ಕಲಿತ ಬಗೆ ಇದು. ನೇಗಿಲು-ನೊಗ ಹೂಡಿ ಎತ್ತುಗಳಿಂದ ಉಳುಮೆ ಮಾಡಿದರು. ಕೃಷಿ ಬಗ್ಗೆ ದೇಸಿರಿ ನ್ಯಾಚುರಲ್ಸ್‌ನ ಸಹ ಸಂಸ್ಥಾಪಕ ಹಾಗೂ ನೈಸರ್ಗಿಕ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ನವೀನ್ ಕುಮಾರ್ ಅವರೊಂದಿಗೆ ಚರ್ಚಿಸಿದರು.
ಮೈಸೂರಿನ ಕೂರ್ಗಳ್ಳಿ ಎಕ್ಸೆಲ್ ಪಬ್ಲಿಕ್ ಸ್ಕೂಲ್ ವತಿಯಿಂದ ‘ಎಕ್ಸೆಲ್ ಸ್ಕೂಲ್ ನಡಿಗೆ ಹಳ್ಳಿಯ ಕಡೆಗೆ’ ಶೀರ್ಷಿಕೆಯಡಿ ೬ನೇ ತರಗತಿಯ ವಿದ್ಯಾರ್ಥಿಗಳಿಗೆ ನೈಸರ್ಗಿಕ ಕೃಷಿ ಬಗ್ಗೆ ವಿಶೇಷ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಭಾರದ ಬ್ಯಾಗ್ ಹೊತ್ತು ನಿತ್ಯ ಶಾಲೆಗೆ ಹೋಗುವ ಮಕ್ಕಳು ಒಂದಷ್ಟು ಬಿಡುವು ಮಾಡಿಕೊಂಡು ಪ್ರಗತಿಪರ ರೈತರ ಜಮೀನಿನಲ್ಲಿ ಕೃಷಿ ಬಗ್ಗೆ ಮಾಹಿತಿ ಪಡೆದರು. ಹಳ್ಳಿಗಾಡಿನ ರೈತರ ಬದುಕನ್ನು ಅರಿತರು.
ಯಾಂತ್ರಿಕತೆಯಲ್ಲಿ ಸಿಲುಕಿ ಕೇವಲ ಅಂಕಗಳಿಕೆಗಷ್ಟೇ ಸೀಮಿತವಾಗುತ್ತಿರುವ ವಿದ್ಯಾರ್ಥಿಗಳಿಗೆ ಹಳ್ಳಿಯ ಸುಂದರ ಸಾಮರಸ್ಯದ ಬದುಕಿನ ಚಿತ್ರಣವನ್ನು ತೋರ್ಪಡಿಸುವುದು, ಅವರ ಕ್ರಿಯಾ ಶೀಲತೆಯನ್ನು ಅನಾವರಣಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಎಕ್ಸೆಲ್ ಪಬ್ಲಿಕ್ ಸ್ಕೂಲ್ ಪ್ರತಿವರ್ಷದಂತೆ ಈ ಸಾಲಿನಲ್ಲೂಅನ್ನದಾತನ ಬದುಕು ಮತ್ತು ಬವಣೆ ಯನ್ನು ಪರಿಚಯಿಸುವ ತನ್ನ ಬೋಧನಾ ಮಾಧ್ಯಮದ ಭಾಗವಾಗಿ ಹಮ್ಮಿ ಕೊಂಡಿದ್ದ ಈ ಕಾರ್ಯಕ್ರಮದಲ್ಲಿ ೬ನೇ ತರಗತಿಯ ೮ ವಿಭಾಗಗಳ ೨೪೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಮೀನಿನಲ್ಲಿ ವಿದ್ಯಾರ್ಥಿಗಳಿಗೆ ನೇಗಿಲು, ನೊಗ, ಕುಂಟೆ ಮುಂತಾದ ಕೃಷಿ ಪರಿಕರಗಳನ್ನು ಕೊಟ್ಟು ಉಳುಮೆ ಮಾಡಿಸಲಾಯಿತು. ವಿದ್ಯಾರ್ಥಿಗಳೇ ನೇಗಿಲು ಹಿಡಿದು ಒಬ್ಬೊಬ್ಬರೇ ಉಳುಮೆ ಮಾಡಿದರು. ಹೆಣ್ಣು ಮಕ್ಕಳು ಜೋಳ ಬಿತ್ತನೆ ಮಾಡಿದರು.
ಬಳಿಕ ದೇಸಿರಿ ನ್ಯಾಚುರಲ್ಸ್‌ನ ಸಹ ಸಂಸ್ಥಾಪಕ ಹಾಗೂ ನೈಸರ್ಗಿಕ ಕೃಷಿಪಂಡಿತ ಪ್ರಶಸ್ತಿ ಪುರಸ್ಕ ತ ನವೀನ್ ಕುಮಾರ್ ಅವರು ಎತ್ತಿನಗಾಣ, ಸಿರಿ ಧಾನ್ಯ, ಸೋಲಾರ್ ಡ್ರೈಯರ್, ಎಣ್ಣೆ ತಯಾರಿಸುವ ಘಟಕದ ಪ್ರಯೋಗಾಲಯ, ನೈಸರ್ಗಿಕ ಕೃಷಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಮ್ಯಾಥ್ಯು, ಮುಖ್ಯ ಶಿಕ್ಷಕ ಗಣೇಶ್ ಭಟ್, ಶಿಕ್ಷಕರಾದ ಸುಚಿತ್ರ, ಅಲ್ಮಾಸ್ ಹಾಗೂ ನೂರಾರು ವಿದ್ಯಾರ್ಥಿಗಳು, ಇತರರು ಭಾಗವಹಿಸಿದ್ದರು
” ಶಾಲೆಯಲ್ಲಿ ದಿನ ನಿತ್ಯ ಓದುವುದರಲ್ಲೇ ಸಮಯ ಕಳೆಯುವ ನಮಗೆ ಇಂತಹ ನೈಸರ್ಗಿಕ ಕೃಷಿ, ಎತ್ತಿನ ಗಾಣದ ಬಗ್ಗೆ ಮಾಹಿತಿ ಕೊಡಿಸಿದ್ದು ನಿಜಕ್ಕೂ ಆಸಕ್ತಿದಾಯಕವಗಿತ್ತು. ನಮಗೆ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು.”
-ಹೆಚ್.ಎನ್.ಗಗನ್, ವಿದ್ಯಾರ್ಥಿ
” ಕೃಷಿ ಜಮೀನು ಹೇಗೆ ಉಳುಮೆ ಮಾಡುತ್ತಾರೆ ಎಂಬುದೇ ನನಗೆ ತಿಳಿದಿರಲಿಲ್ಲ. ಇದೀಗ ಕೃಷಿ ಚಟುವಟಿಕೆಯಲ್ಲಿ ನಾವು ಭಾಗಿಯಾಗಿದ್ದು ಸಂತಸವನ್ನುಂಟು ಮಾಡಿದೆ. ರೈತರು ಉಪಯೋಗಿಸುವ ಪರಿಕರಗಳ ಬಗ್ಗೆ ತಿಳಿದುಕೊಂಡಂತಾಗಿದೆ.”
-ಆರ್ಯ ಭಾರದ್ವಾಜ್, ವಿದ್ಯಾರ್ಥಿ





