Mysore
25
few clouds

Social Media

ಶನಿವಾರ, 17 ಜನವರಿ 2026
Light
Dark

ಚುಂಚನಕಟ್ಟೆಯಲ್ಲಿ ವೈಭವದ ಶ್ರೀರಾಮ ರಥೋತ್ಸವ

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಜನರು; ಶಾಸಕರೂ ಸೇರಿದಂತೆ ಗಣ್ಯರು ಭಾಗಿ

ಹೊಸೂರು: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಶ್ರೀರಾಮದೇವರ ರಥೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ೧೧.೩೦ರಲ್ಲಿ ಶ್ರೀರಾಮ ದೇವಾಲಯದಿಂದ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅವುಗಳನ್ನು ಮೆರವಣಿಗೆಯಲ್ಲಿ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ವೇದ ಘೋಷ ಗಳೊಂದಿಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಮಧ್ಯಾಹ್ನ ೧೨ ಗಂಟೆಯ ಸಮಯದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಗಾವಡಗೆರೆ ಜಂಗಮ ದೇವರ ಮಠದ ನಟರಾಜ ಶ್ರೀ, ಬೆಟ್ಟದಪುರದ ವಿರಕ್ತ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರು ಜಂಟಿಯಾಗಿ ಚಾಲನೆ ನೀಡಿದರು.

ನಂತರ ಇಲ್ಲಿ ನೆರೆದಿದ್ದ ಶ್ರೀರಾಮನ ಭಕ್ತರು ದೇವರಿಗೆ ಜಯಕಾರ ಕೂಗಿ ರಥವನ್ನು ದೇವಾಲಯದ ಸುತ್ತ ಶ್ರೀರಾಮನ ಪಾದಕೆ ಗೋವಿಂದ, ಜೈ ಶ್ರೀರಾಮ್ ಎಂದು ಭಕ್ತಿ ಘೋಷಣೆಯೊಂದಿಗೆ ಒಂದು ಸುತ್ತು ಎಳೆದರು. ನವದಂಪತಿಗಳು, ಭಕ್ತರು ಬಾಳೆಹಣ್ಣು, ಧವನ ಎಸೆದು ಪ್ರಾರ್ಥಿಸಿದರು.

ರಥೋತ್ಸವಕ್ಕೆ ಅಗಮಿಸಿದ್ದ ಕೆಲವರು ದೇವಾಲಯದ ಆವರಣದಲ್ಲಿ ಅಡುಗೆ ಮಾಡಿ ಭಕ್ತರಿಗೆ ಉಣಬಡಿಸಿ ತಮ್ಮ ಹರಕೆ ತೀರಿಸಿದರು. ಇದರ ಜತೆಗೆ ಬಸವನ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಯಲ್ಲಿ ತೆರೆದಿದ್ದ ಸಿಹಿತಿಂಡಿ ಮತ್ತು ವಿವಿಧ ಆಟಿಕೆಯ ಅಂಗಡಿಗಳು ಮನ ಸೆಳೆದವು.

ಪೊಲೀಸ್ ಭದ್ರತೆ: ಚುಂಚನಕಟ್ಟೆ ಜಾತ್ರೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ೧ ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಸಾಲಿಗ್ರಾಮ ನಿರೀಕ್ಷಕ ಶಶಿಕುಮಾರ್ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬಾರ್‌ಗಳು ಬಂದ್: ಜಾತ್ರೆಯ ಹಿನ್ನೆಲೆಯಲ್ಲಿ ಚುಂಚನಟ್ಟೆ ಮತ್ತು ಹೊಸೂರು ಗ್ರಾಮದ ಲ್ಲಿರುವ ಬಾರ್‌ಗಳನ್ನು ಶಾಸಕ ಡಿ.ರವಿಶಂಕರ್ ಸೂಚನೆಯ ಮೇರೆಗೆ ಇದೇ ಪ್ರಥಮ ಬಾರಿಗೆ ಅಬ ಕಾರಿ ಇಲಾಖೆಯ ಅಽಕಾರಿಗಳು ಮುಚ್ಚಿಸಿದ್ದರು. ಜಾ.ದಳ ಮುಖಂಡ ಹಳಿಯೂರು ಮಧುಚಂದ್ರ ರವರ ವತಿಯಿಂದ ಪಾನಕ ಮತ್ತು ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಎಂಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ಒಕ್ಕಲಿಗರ ಸಂಘದ ಹೆಬ್ಬಾಳು ಪರಶುರಾಮ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಮಾಜಿ ಅಧ್ಯಕ್ಷ ಮಂಜುನಾಥ್, ಹಳಿಯೂರು ಗ್ರಾ.ಪಂ. ಉಪಾಧ್ಯಕ್ಷ ನೂತನ್ ಗೌಡ, ಮುಖಂಡರಾದ ಡೇರಿ ಮಾದು, ಸಾಲಿ ಗ್ರಾಮ ತಹಸಿಲ್ದಾರ್ ರುಕಿಯಾ ಬೇಗಂ, ಉಪ ತಹಸಿಲ್ದಾರ್ ಮಹೇಶ್, ಪಾರುಪತ್ತೆದಾರ ರಾದ ಯತಿರಾಜ್, ನಾಡಕಚೇರಿಯ ಭಾಗ್ಯ, ಕೆಸ್ತೂರು ವಿಜಿ, ಮತ್ತಿತರರು ಹಾಜರಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಬೆಟ್ಟದಪುರ ವಿರಕ್ತಮಠದ ಶ್ರೀ ಚನ್ನಬಸವ ದೇಶಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಾದೇವಸ್ವಾಮಿ, ಕುಪ್ಪೆ ಗ್ರಾಪಂ ಅಧ್ಯಕ್ಷ ಶಾರದಮ್ಮ, ತಹಸಿಲ್ದಾರ್ ರುಕಿಯ ಬೇಗಂ, ದೇವಾಲಯದ ಪ್ರಭಾರ ಇಒ ಮಹೇಶ್, ಪಾರುಪತ್ತೆಗಾರರಾದ ಯತಿರಾಜ್, ಮುಖಂಡರಾದ ಡೈರಿ ಮಹದೇವ್, ಕಾಂಗ್ರೆಸ್ ಅಧ್ಯಕ್ಷ ಉದಯ್, ಮಹದೇವ್, ಪರಿಚಾರಕರಾದ ವಾಸುದೇವನ್, ನಾರಾಯಣ ಅಯ್ಯಂಗಾರ್ ಮತ್ತಿತರರು ಹಾಜರಿದ್ದರು.

” ಸುಗ್ಗಿ ನಂತರ ರೈತರೆಲ್ಲರೂ ಒಂದೆಡೆ ಸೇರಿ ಸಮುದಾಯ ಗಳನ್ನು ಒಗ್ಗೂಡಿಸಿಕೊಂಡು ಹೋಗಲು ಜಾತ್ರೆ, ರಥೋತ್ಸವಗಳು ಸಹಕಾರಿಯಾಗಲಿವೆ.”

-ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠ

” ರಾಮನ ಈ ಉತ್ಸವ ಭತ್ತದ ನಾಡಾಗಿರುವ ಅವಳಿ ತಾಲ್ಲೂಕುಗಳಲ್ಲಿ ಉತ್ತಮವಾಗಿ ಮಳೆ ಬೆಳೆ ತರಲಿ. ಗ್ರಾಮೀಣ ಜನರ ಬದುಕು ಹಸನಾಗಲಿ. ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ.”

-ಡಿ ರವಿಶಂಕರ್, ಶಾಸಕ

ಅನ್ನಸಂತರ್ಪಣೆ:  ಶ್ರೀರಾಮ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

Tags:
error: Content is protected !!