• ಹನಿ ಉತ್ತಪ್ಪ
ಮಳೆಯನ್ನೆಲ್ಲ ಸುರಿಸಿ, ಸಂಜೆಯ ಪ್ರಕೃತಿ ಶಾಂತವಾಗಿತ್ತು. ಗರಿಮುರಿ ಹವೆಯಲ್ಲಿ ಬಿಸಿಬಿಸಿಯಾಗಿ ತಿನ್ನೋಣವೆಂದು ಬಂದರೆ ಅಜ್ಜಿ ತನ್ನ ಮೊಮ್ಮಗನನ್ನು ದೋಸೆ ತಿನ್ನುವುದಕ್ಕೆಂದು ಕರೆದುಕೊಂಡು ಬಂದಿದ್ದರು. ಹಾಗೆ ನೋಡುತ್ತಲಿದ್ದೆ. ವಿಷಯ ತಿಳಿದದ್ದು ಆಗಲೇ. ಈ ಮೊಮಗ ಮಹರಾಯನಿಗೆ ಅಂಗಡಿಯಲ್ಲಿ ಟೇಬಲ್ ಮೇಲೆ ಚಂದದಲ್ಲಿ ಕೂತು, ಆರ್ಡರ್ ಮಾಡಿ ತಿನ್ನುವ ದೋಸೆ ಇಷ್ಟವೇ ಆಗುವುದಿಲ್ಲ. ಅದಕ್ಕಿಂತ ಈ ತಳ್ಳುಗಾಡಿಯಲ್ಲಿ ಸಿಗುವ ದೋಸೆಯ ರುಚಿಯೇ ಅದ್ಭುತವಾಗಿರುತ್ತದೆಂದು ತನ್ನ ಕನಸಿನ ರಾಜಕುಮಾರಿಯ ಕತೆಯಂತೆ ವರ್ಣಿಸಿ ಅಜ್ಜಿಯನ್ನು ಕರೆತಂದಿದ್ದ!
ಈ ಅಜ್ಜಿ ಪಾಪ, ಮೊಮ್ಮಗನಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಗೊಣಗುಡುತ್ತಿದ್ದಳು. ಟ್ಯೂಷನ್ ನಿಂದ ಮೊಮ್ಮಗನನ್ನು ಕರೆದುಕೊಂಡು ಬರುವುದೆಂದರೆ ಹರಸಾಹಸವೇ ಎಂದು ಅವರ ಮುಖಭಾವವೇ ಹೇಳುತ್ತಿತ್ತು. ಅವನು ತನಗೆ ಬೇಕಾದ ದೋಸೆ ಎರಡನ್ನು ತಂದು ಅಜ್ಜಿಯ ಬಳಿ ನಿಂತ. ‘ಬಿಸಿ ಬಿಸಿ.. ನೋಡು ಹೇಗಿದೆ ಅಂತ’ ಎಂದ ಮೊಮ್ಮಗನ ಮಾತಿಗೆ ಬೇಸರ ಆಗಬಾರದೆಂದು, ಅಜ್ಜಿ ಒಂದೆರಡು ತುತ್ತು ತಿಂದಳು. ಮೊಮ್ಮಗರಾಯ ‘ಸಕ್ಕತಾಗಿದೆ ಅಲ್ವಾ?’ ಎಂದಿದ್ದಕ್ಕೆ ಅಜ್ಜಿ, ‘ಮೊನ್ನೆ ಇದಕ್ಕಿಂತ ಚೆನ್ನಾಗಿ, ಒಳ್ಳೆ ಮಲ್ಲಿಗೆ ಹೂವಿನ ಥರ ದೋಸೆ ಮಾಡ್ಕೊಟ್ಟಿದ್ದಲ್ಲೋ!’ ಅವನು ತಿನ್ನುವ ಖುಷಿಯಲ್ಲಿದ್ದ, ಅಜ್ಜಿಯ ಮಾತಿಗೆ ಕಿವಿಗೊಡಲಿಲ್ಲ.
ತಿಂದ ಮೇಲೆ ಮೊಮ್ಮಕ್ಕಳು ಎಂಬ ಅನುಭೂತಿ ಈ ತಿಂಗಳ ಕಂತು ಮುಗಿಯಿತು. ಇನ್ನು ಮುಂದಿನ ತಿಂಗಳ ತನಕ ಎಲ್ಲೂ ತಿನ್ನುವ ಹಾಗಿಲ್ಲ ಎಂಬ ಮಾತುಗಳನ್ನು ಎಚ್ಚರಿಕೆ ಎಂಬಂತೆ ನುಡಿಯುತ್ತಾ, ಅಜ್ಜಿ ಇನ್ನೂರು ರೂಪಾಯಿಗಳನ್ನು ಮೊಮ್ಮಗನ ಕೈಗಿತ್ತಳು. ಇವತ್ತಿನ ಮೊಮ್ಮಗ ಅಜ್ಜಿಯ ಮಾತನ್ನು ಕೇಳುತ್ತಾನಾ? ಗೊತ್ತಿಲ್ಲ. ಆದರೆ, ಬಹುತೇಕ ಅಜ್ಜಿಯರೇ ಹೀಗೆ, ತಮಗೆ ಇಷ್ಟವೋ ಕಷ್ಟವೋ ಮೊಮ್ಮಕ್ಕಳಿಗಾಗಿ ಅನೇಕ ಸಂಗತಿಗಳಿಗೆ ತಮ್ಮನ್ನು ರೂಢಿಸಿಕೊಳ್ಳುತ್ತಾರೆ. ಮಾಗುವಿಕೆ ಅವರ ಬದುಕಿನ ಅನುಭವದ ಸಿದ್ದಿ.
ಹೀಗೆ ಮೊಮ್ಮಕ್ಕಳ ಸಂಗೀತ, ಡಾನ್ಸ್, ಸ್ವಿಮ್ಮಿಂಗ್ ಕ್ಲಾಸಿಗೆಲ್ಲ ಅಜ್ಜ ಅಜ್ಜಿಯರೇ ಜೊತೆಗಾರರು.
ಟ್ಯೂಷನ್ ಕ್ಲಾಸ್‌ಗೆ ಕರೆದುಕೊಂಡು ಹೋಗು ವುದು ಅವರ ಪಾಲಿಗೆ ಸಂಭ್ರಮದ ವಿಷಯವೇ ಹೌದು. ವಾಪಸು ಮನೆಗೆ ಕರೆದುಕೊಂಡು ಬರುವಾಗ ದಾರಿಭಕ್ಷೀಸು ನೀಡುವಾಗ ಬೇಸರವಾದರೂ ರೂಢಿಸಿಕೊಳ್ಳುವುದು ಹಿರಿಯರಿಗೆ ಅನಿವಾರ್ಯ.
ಮೈಸೂರಿನಲ್ಲಂತೂ ಅನೇಕ ಕಡೆಗಳಲ್ಲಿ ಈ ಚಿತ್ರಣವನ್ನು ಕಂಡಿದ್ದೇನೆ. ದಾರಿಬದಿಯಲ್ಲಿ ಸಿಗುವ ಗೋಲ್ಗಪ್ಪಾ, ಪಾನಿಪುರಿಯಿಂದ ಆರಂಭಿಸಿದರೆ ಪಿಜ್ಜಾ, ಬರ್ಗರ್‌ವರೆಗೂ ಹಿರಿಯರು ತಮ್ಮ ಮೊಮ್ಮಕ್ಕಳೊಂದಿಗೆ ತಿಂದು ಸಂಭ್ರಮಿಸಿದ ಕ್ಷಣಗಳು ಹಲವಾರಿವೆ. ಕೇಳಿದರೆ, ಅಪರೂಪಕ್ಕೆ ಬಂದ ಮೊಮ್ಮಕ್ಕಳನ್ನು ಹಾಗೇ ಕಳಿಸುವುದು ಎಂದರೆ ಹೇಗೆ? ಎಂದು ಮನದ ಕಸಿವಿಸಿಯನ್ನು ವ್ಯಕ್ತಗೊಳಿಸುತ್ತಾರೆ. ಮೊಮಕ್ಕಳು ಹೊರಟುನಿಂತರೆ ಅವರಿಗಾಗಿ ತರತರಹದ ಚಟ್ನಿಪುಡಿ, ಸಾಂಬಾರು ಪುಡಿಗಳನ್ನು ಡಬ್ಬದಲ್ಲಿ ತುಂಬಿ, ಕಳಿಸಿಕೊಟ್ಟ ಮೇಲಷ್ಟೇ ಅಜ್ಜಿ ಎಂಬ ಜೀವಕ್ಕೆ ನೆಮ್ಮದಿ.
ಮಕ್ಕಳಿಗೆ ಹೇಳಿದ್ದನ್ನು ಕೊಡಿಸದೆ, ಗಂಭೀರವಾಗಿ ಬೆಳೆಸಿದ್ದರೂ ಮೊಮ್ಮಕ್ಕಳೆಂದರೆ ಸಾಕು ಈ ಹಿರಿಯ ಜೀವಗಳು ಕರಗಿಬಿಡುತ್ತವೆ. ಅವರ ತುಂಟಾಟಗಳಲ್ಲಿ ಕಾಲವನ್ನು ಸರಿಸುತ್ತಲೇ ಇರು ತ್ತಾರೆ. ಒಗ್ಗದ ಜೀವನಶೈಲಿಯನ್ನು ಅವರಿಗಾಗಿ ಯಾದರೂ ಆಗುಮಾಡಿಕೊಳ್ಳುವ ಹಿರಿಯ ಜೀವಗಳು ನಿಜದ ಬೆರಗು.





