Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪಂಜಿನ ಕವಾಯತಿನೊಂದಿಗೆ ದಸರಾಕ್ಕೆ ವರ್ಣರಂಜಿತ ತೆರೆ

ಮೈಸೂರು: ಆಕರ್ಷಕ ಪರೇಡ್, ಅನೇಕ ರೋಚಕ, ಸಾಹಸ ಪ್ರದರ್ಶನಗಳು, ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ರೂಪಕ, ಹಾಡು, ಚಂಡೆ ಮದ್ದಳೆ, ಮನಮೋಹಕ ಪಂಜಿನ ಕವಾಯತು, ಡ್ರೋನ್ ಪ್ರದರ್ಶನ ಇವುಗಳೊಂದಿಗೆ 10 ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು.
ಶನಿವಾರ ಬನ್ನಿಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತು ಪ್ರದರ್ಶನ (ಟಾರ್ಚ್‌ ಲೈಟ್ ಪರೇಡ್)ದಲ್ಲಿ ಕಲೆಯ ಅನೇಕ ಪ್ರಕಾರಗಳು ಅನಾವರ ಣಗೊಂಡವು. ಸುಬೇದಾರ್ ಎಂ.ಕೆ.ಸಿಂಗ್ ನೇತೃತ್ವದಲ್ಲಿ ನಡೆದ ರೋಚಕ ಬೈಕ್ ಶೋ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು.

ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಪ್ರಾರಂಭವಾಗುವ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಪಂಜಿನ ಕವಾಯತು ಈ ಬಾರಿ ವಿಶೇಷವಾಗಿ ಗಮನ ಸೆಳೆಯಿತು. ಅಶ್ವಾರೋಹಿ ದಳದ ಸಾಹಸ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

ಅಶ್ವಾರೋಹಿ ದಳದ ಸಾಹಸ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಇದಕ್ಕೂ ಮುನ್ನ ಸಾಂಪ್ರದಾಯಿಕವಾಗಿ ರಾಜ್ಯಪಾಲ ಥಾವರ್‌ಚಂದ್‌ ಗೆಲ್ಲೋಟ್ ಅವರು ತೆರೆದ ವಾಹನದಲ್ಲಿ ಪಥ ಸಂಚಲನದ ಪರಿವೀಕ್ಷಣೆ ಮಾಡಿದರು. ಅಶ್ವಾರೋಹಿ ಪಡೆಯ ತುಕಡಿಗಳು, ಕೆಎಸ್‌ಆರ್‌ ಪಿಯ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ನೌಕದಳ, ವಾಯುದಳ, ಸೌಟ್ಸ್ ಮತ್ತು ಗೈಡ್ಸ್ ಬಾಲಕಿ ಯರು, ಸೇವಾದಳ ಸೇರಿದಂತೆ ಶಸ್ತ್ರಸಜ್ಜಿತ ತುಕಡಿಗಳಿಂದ ನಡೆದ ಪರೇಡ್
ಗಮನ ಸೆಳೆಯಿತು.

ಖ್ಯಾತ ಕಲಾವಿದರಾದ ಅನನ್ಯ ಭಟ್ ಮತ್ತು ತಂಡದವರು ನಾಡಗೀತೆ ಹಾಡಿದರೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾದ್ಯವೃಂದದವರು ರಾಷ್ಟ್ರ ಗೀತೆ ನುಡಿಸಿದರು. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ವತಿಯಿಂದ ಮೊದಲ ಬಾರಿಗೆ ಆಯೋಜಿಸಿದ್ದ ‘ಬೃಹತ್ ಡೋನ್ ಶೋ’ ನಲ್ಲಿ ಬಾನಂಗಳದಲ್ಲಿ ಮೂಡಿದ ಚಿತ್ತಾರಗಳನ್ನು ನೋಡಿ ಜನರು ಸಂಭ್ರಮಿಸಿದರು. ರೋಚಕ ಬೈಕ್ ಶೋ ಪ್ರೇಕ್ಷಕರನ್ನು ಕುತೂಹಲದ ಜತೆಗೆ ಎದೆ ಝಲ್ಲೆನಿಸುವಂತೆ ಮಾಡಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ಹಿರಿಯ ಅಧಿ ಕಾರಿಗಳು, ಗಣ್ಯರು,ಜನಪ್ರತಿನಿಧಿಗಳು ಹಾಜರಾಗಿ ಪಂಜಿನ ಕವಾಯತು ಪ್ರದರ್ಶನವನ್ನು ವೀಕ್ಷಿಸಿದರು.

ಪಾಸ್ ಇದ್ದರೂ ಗೊಂದಲ: ಜಂಬೂಸವಾರಿ ವೀಕ್ಷಿಸಿದ್ದ ಗಣ್ಯರು ಬನ್ನಿಮಂಟಪದ ಕಡೆಗೆ ಆಗಮಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ ವಾಯಿತು. ಪಾಸ್‌ ಇದ್ದರೂ ಯಾವ ಗೇಟ್‌ನಿಂದ ಒಳಗೆ ಹೋಗ ಬೇಕು ಎನ್ನುವ ಗೊಂದಲದಿಂದ ಹಲವರು ಪರದಾಡಿದರೆ, ಪಾಸ್ ಇಲ್ಲದಿದ್ದರೂ ಕೆಲವರು ಒಳನುಗ್ಗಿ ಅಡ್ಡಾಡಿಕೊಂಡು ವೀಕ್ಷಣೆ ಮಾಡಿದರು.

Tags: