ಪಿ.ಪಟ್ಟಣ: ಅಧಿಕಾರ ಹಿಡಿಯಲು ಜಾ.ದಳ ಕಾತರ; ಕಾಂಗ್ರೆಸ್ ಕಾರ್ಯತಂತ್ರ
ನವೀನ್‌ಕುಮಾರ್ ಪಿರಿಯಾಪಟ್ಟಣ
ಪಿರಿಯಾಪಟ್ಟಣ: ಪುರಸಭೆ ಸದಸ್ಯರು ಬಹಳ ದಿನಗಳಿಂದ ಕಾಯುತ್ತಿದ್ದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಫೆ.೧೯ರ ಬುಧವಾರ ನಿಗದಿಯಾಗಿದೆ.
೨೦೨೪ರ ಮೇ ೯ರಂದು ಈ ಹಿಂದಿನ ಅಧ್ಯಕ್ಷ ಕೆ.ಮಹೇಶ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ಕಳೆದ ಹಲವು ತಿಂಗಳುಗಳಿಂದ ಚುನಾವಣೆ ಬಾಕಿ ಉಳಿದಿತ್ತು. ಈಗ ೮ ತಿಂಗಳುಗಳ ನಂತರ ಜನಪ್ರತಿನಿಧಿಗಳಿಗೆ ಅಧಿಕಾರ ಸಿಗುತ್ತಿದೆ.
೨೦೨೪ರ ಆಗಸ್ಟ್ ೫ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ, ಅಧ್ಯಕ್ಷ ಸ್ಥಾನವನ್ನು ಪ್ರವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಮೀಸಲಾತಿ ಪುನರಾವರ್ತನೆಯಾಗಿದೆ ಎಂದು ಪ್ರಶ್ನಿಸಿ ಕಾಂಗ್ರೆಸ್ ಪುರಸಭಾ ಸದಸ್ಯೆ ರತ್ನಮ್ಮ ಪಿ.ಪಿ. ಮಹದೇವ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು. ಇದರಿಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನನೆಗುದಿಗೆ ಬಿದ್ದಿತ್ತು. ಅಂತಿಮವಾಗಿ ಉಚ್ಚ ನ್ಯಾಯಾಲಯ ಜ.೧೦ರಂದು ಅರ್ಜಿಯನ್ನು ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಫೆ.೧೯ರಂದು ಚುನಾವಣೆಗೆ ಸಭೆ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ. ಫೆ.೧೯ರ ಬುಧವಾರ ಬೆಳಿಗ್ಗೆ ೧೦ರಿಂದ ೧೨ಗಂಟೆಯವರೆಗೆ ನಾಮಪತ್ರ ಸ್ವೀಕಾರ, ಮಧ್ಯಾಹ್ನ ೧೨ರಿಂದ ೧೨.೩೦ರವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಯ ನಂತರ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾದ ತಹಸಿಲ್ದಾರ್ ತಿಳಿಸಿದ್ದಾರೆ.
ಪೈಪೋಟಿ: ಪಿರಿಯಾಪಟ್ಟಣ ಪುರಸಭೆಯಲ್ಲಿ ಒಟ್ಟು ೨೩ ಸದಸ್ಯರ ಬಲವಿದ್ದು, ಒಬ್ಬ ಶಾಸಕರು ಮತ್ತು ಒಬ್ಬ ಸಂಸದರ ಮತ ಸೇರಿ ಒಟ್ಟು ೨೫ ಮಂದಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ೧೪ ಮಂದಿ ಜಾ.ದಳ ಸದಸ್ಯರು, ೮ ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಓರ್ವ ಪಕ್ಷೇತರ ಸದಸ್ಯರಿದ್ದಾರೆ.
ಜಾ.ದಳದಲ್ಲಿ ಪ್ರವರ್ಗ- ಎನಲ್ಲಿ ರೊಹಿಲ್ಲಾಖಾನಂ, ಪುಷ್ಪ ಸುರೇಶ್, ಪ್ರಕಾಶ್ ಸಿಂಗ್, ನೂರ್‌ಜಾನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜುನಾಥ್‌ಸಿಂಗ್, ಮಹೇಶ್, ಉಪಾಧ್ಯಕ್ಷರಾಗಿದ್ದ ನಾಗರತ್ನ ಉಮೇಶ್, ಆಶಾ ಚಂದ್ರು ಕೂಡ ಅವಕಾಶ ಬಯಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಜಾ.ದಳದಲ್ಲಿ ಭಾರತಿ, ಸುವರ್ಣ ರವಿ ನಡುವೆ ಪೈಪೋಟಿ ಎದುರಾಗಿದೆ. ಕಾಂಗ್ರೆಸ್ ನಿಂದ ಅಬ್ದುಲ್ ಅರ್ಷದ್ ಪ್ರವರ್ಗ-ಎನಲ್ಲಿ ಬರುತ್ತಾರಾದರೂ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದು, ಇತ್ತ ಜಾ.ದಳದಲ್ಲಿಯೂ ಗುರುತಿಸಿಕೊಂಡಿಲ್ಲ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಚಾಮರಾಜು ಸ್ಪರ್ಧೆಗೆ ಅವಕಾಶ ಇದೆ. ಶಾಸಕ ಕೆ.ವೆಂಕಟೇಶ್ ಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರತಿಷ್ಠೆಯಾಗಿದೆ. ಇತ್ತ ಬಿಜೆಪಿ ಸಂಸದರ ಮತ ಕೂಡ ಮೈತ್ರಿಯ ಭಾಗವಾಗಿರುವುದರಿಂದ ಪೈಪೋಟಿ ಸಾಕಷ್ಟಿದೆ.
” ಜಾ.ದಳದಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಇದ್ದು ಸದಸ್ಯರ ಅಭಿಪ್ರಾಯ ಸಂಗ್ರಹಿಸಿ, ಪಕ್ಷ ನೀಡುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಇಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಮತ್ತೆ ಅಧಿಕಾರವನ್ನು ನಮ್ಮ ಪಕ್ಷವೇ ಹಿಡಿಯಲಿದೆ.”
-ಕೆ.ಮಹದೇವ್, ಮಾಜಿ ಶಾಸಕರು, ಪಿರಿಯಾಪಟ್ಟಣ.





