Mysore
25
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ರಾಷ್ಟ್ರ, ರಾಜ್ಯ ರಾಜಕಾರಣದ ರಂಗು

೨೦೨೫ರ ಅವಧಿಯಲ್ಲಿ ರಾಜಕೀಯವಾಗಿ ಗಂಭೀರ ವಿಪ್ಲವಗಳನ್ನು ಕಾಣದೆ ಹೋದರೂ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಬದಲಾವಣೆಗಳು ನಡೆದಿರುವುದು ದಾಖಲಾಗುವಂತೆ ಮಾಡಿದೆ. ದೇಶಾದ್ಯಂತ ಮತ ಕಳ್ಳತನದ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರ‍್ಯಾಲಿ ನಡೆಸುತ್ತಿದ್ದ ಹೊತ್ತಲ್ಲೇ ಬೌದ್ಧರ ನಾಡು ಎಂದೇ ಕರೆಯಿಸಿಕೊಂಡಿರುವ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಽಕಾರವನ್ನು ಉಳಿಸಿಕೊಳ್ಳುವ ಕೆಲಸ ಮಾಡಿದರೆ, ಈ ಚುನಾವಣೆಯ ಫಲಿತಾಂಶ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿತು.

ಕಾಂಗ್ರೆಸ್ ಅಧಿಕಾರ ಹಂಚಿಕೆ ವಿವಾದ:  ರಾಜ್ಯದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಹೇಳಿದ ನವೆಂಬರ್ ಕ್ರಾಂತಿಯ ಮಾತು ಅಧಿಕಾರ ಹಂಚಿಕೆಯತ್ತ ತಿರುಗಿ ದೊಡ್ಡ ಸದ್ದು ಮಾಡಿತು. ರಾಜ್ಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನವೆಂಬರ್ ಕ್ರಾಂತಿ ನಡೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ನಾಡಿನ ಜನರು ಈಗ ಹೊಸ ವರ್ಷದ ಕ್ರಾಂತಿಯನ್ನು ನೋಡುವಂತಾಗಿದೆ. ಎರಡೂವರೆ ವರ್ಷಗಳ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎನ್ನುವ ಮಾತು ಈಗ ದೂರವಾಗಿದೆ. ಡಿ.ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟುವ ಸಿದ್ದರಾಮಯ್ಯ ಅವರು ಅಧಿಕಾರದಿಂದ ನಿರ್ಗಮಿಸುವರೋ ಅಥವಾ ಮುಂದುವರಿದು ಐದು ವರ್ಷಗಳನ್ನು ಪೂರೈಸುವರೋ ಎಂಬುದನ್ನು ಕಾದು ನೋಡಬೇಕಿದೆ.

ಜಿಪಂ, ತಾಪಂ ಚುನಾವಣೆ ನಡೆಯುವ ನಿರೀಕ್ಷೆ:  ಕಳೆದ ಐದು ವರ್ಷಗಳಿಂದ ಆಡಳಿತಾಧಿಕಾರಿಗಳ ನಿರ್ವಹಣೆಯಲ್ಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಈಗ ಮೀಸಲಾತಿ ಪ್ರಕಟಿಸುವ ಹೊಣೆಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಿದೆ. ಚುನಾವಣೆ ಘೋಷಣೆಗಾಗಿ ಎದುರು ನೋಡುತ್ತಿರುವ ಆಕಾಂಕ್ಷಿಗಳು ೨೦೨೬ರ ಅವಧಿಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಬಿಜೆಪಿ ಪಾಲಾದ ದಿಲ್ಲಿ ಗದ್ದಿಗೆ:  ಹೊಸದಿಲ್ಲಿ ವಿಧಾನಸಭಾ ಚುನಾವಣೆ ನಡೆದು ಬಿಜೆಪಿ ದಾಖಲೆಯ ಗೆಲುವು ಸಾಧಿಸಿ ಅಧಿಕಾರ ಹಿಡಿದಿದೆ. ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಷ್ಟ್ರರಾಜಧಾನಿ ಆಡಳಿತವನ್ನು ಮತ್ತೊಮ್ಮೆ ಹಿಡಿದುಕೊಂಡಿದೆ. ಈ ರಾಜ್ಯದಲ್ಲಿ ಅಚ್ಚರಿ ಎನ್ನುವಂತೆ ರೇಖಾ ಗುಪ್ತ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ಮಹಿಳಾ ಅಭ್ಯರ್ಥಿಗೆ ಅವಕಾಶ ಮಾಡಿಕೊಡಲಾಯಿತು.

ಬಿಜೆಪಿ ಕಾರ್ಯಾಧ್ಯಕ್ಷರಾಗಿ ನಿತಿನ ನಬಿನ್ ಅಚ್ಚರಿ ಆಯ್ಕೆ:  ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್‌ಅವರನ್ನು ಅಚ್ಚರಿ ಎನ್ನುವಂತೆ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜೆ.ಪಿ.ನಡ್ಡಾ ಅವರ ಸ್ಥಾನಕ್ಕೆ ನಿತಿನ್ ಜಬಿನ್ ಅವರನ್ನೇ ನೇಮಕ ಮಾಡುವ ಸಾಧ್ಯತೆ ಇದೆ. ಆರ್‌ಎಸ್‌ಎಸ್ ಮೂಲದ ಬಿಹಾರ ರಾಜ್ಯದ ನಬಿನ್ ಅವರು ಮೋದಿ, ಶಾ ಅವರ ನೆಚ್ಚಿನ ವ್ಯಕ್ತಿಯಾಗಿರುವುದು ವಿಶೇಷವಾಗಿದೆ.

ಉಪ ರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಆಯ್ಕೆ:  ಉಪ ರಾಷ್ಟ್ರಪತಿ ಚುನಾವಣೆ ನಡೆದು ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಸುಲಭವಾಗಿ ಗೆಲುವು ಸಾಧಿಸುವುದಕ್ಕೆ ದಾರಿಯಾಯಿತು.

ಜಾ.ದಳ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಎಚ್‌ಡಿಡಿ ಮರು ಆಯ್ಕೆ:  ರಾಜ್ಯದ ಪ್ರಾದೇಶಿಕ ಪಕ್ಷವಾಗಿರುವ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷರಾಗಿ ನಿಖಿಲ್ ಕುಮಾರ್ ಅವರು ಮರು ಆಯ್ಕೆಯಾಗಿ ಗಮನ ಸೆಳೆದರೆ, ಪಕ್ಷದ ಸಂಘಟನೆಗಾಗಿ ಮೊಟ್ಟ ಮೊದಲ ಬಾರಿಗೆ ವಿವಿಧ ಸಮಿತಿಗಳನ್ನು ರಚಿಸಿ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿರುವುದು ಹೊಸ ಬದಲಾವಣೆಗೆ ದಾರಿಯಾಗಿದೆ.

ಬಿಹಾರದಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ:  ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ನಡೆದು ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಈ ಬಾರಿ ಎನ್‌ಡಿಎ ಆಡಳಿತವನ್ನು ಕಿತ್ತೊಗೆಯುವಂತೆ ಪಣ ತೊಟ್ಟಿದ್ದ ಇಂಡಿಯಾ ಒಕ್ಕೂಟ ಹೀನಾಯ ಸೋಲು ಕಂಡರೆ, ಕಾಂಗ್ರೆಸ್ ಎರಡಂಕಿ ದಾಟದಿರುವುದು ಬಿಹಾರ ಚುನಾವಣೆಯಲ್ಲಿ ದಾಖಲಾಗಿದೆ. ನಿತೀಶ್ ಕುಮಾರ್ ಅವರು ಹತ್ತನೇ ಬಾರಿಗೆ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತುಕೊಂಡಿದ್ದು ದಾಖಲೆಯಾಗಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿ:  ಭಾರತೀಯ ಸೇನಾಪಡೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನವು ತನ್ನ ರಾಷ್ಟ್ರದ ಲೆಫ್ಟಿನೆಂಟ್ ಜನರಲ್ ಅಸಿಫ್‌ ಮುನಿರ್ ಅವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಹುದ್ದೆಯ ಜತೆಗೆ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಿದರೆ, ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಭೇಟಿ ನೀಡಿದ್ದು ಗಮನಾರ್ಹವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ೧೫ ರಾಷ್ಟ್ರಗಳ ಪ್ರವಾಸ ಮಾಡುವ ಜತೆಗೆ ಜಿ-ಶೃಂಗಸಭೆ ಸೇರಿದಂತೆ ಮತ್ತಿತರ ಸಭೆಗಳಲ್ಲಿ ಪಾಲ್ಗೊಂಡು ಸಹಿ ಮಾಡಿರುವುದು ಕೂಡ ಪ್ರಮುಖವಾಗಿದೆ.

ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು:  ಮಹಾರಾಷ್ಟ್ರ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್ ಡಿಎ ನೇತೃತ್ವದ ಕೂಟ ಭರ್ಜರಿ ಗೆಲುವು ಸಾಧಿಸಿದರೆ, ಮಹಾವಿಕಾಸ ಆಘಾಡಿ ಕೂಟ ಹೀನಾಯವಾಗಿ ಸೋಲುಂಡಿತು. ಉದ್ಧವ್ ಠಾಕ್ರೆ ಶಿವಸೇನೆಯು ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಿದ್ದ ಹಿಡಿತವನ್ನು ಈ ಬಾರಿ ಕಳೆದುಕೊಂಡು ದೊಡ್ಡ ಹಿನ್ನಡೆ ಅನುಭವಿಸಿರುವುದು ದೊಡ್ಡ ರಾಜಕೀಯ ಬೆಳವಣಿಗೆಯಾದರೆ, ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್, ಎಲ್‌ಡಿಎಫ್ ಹೋರಾಟ ನಡುವೆ ಗೆಲುವು ಸಾಧಿಸಿರುವುದು ವಿಶೇಷವಾಗಿದೆ.

ಕೆಎಸ್‌ಸಿಎಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ:  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಚುನಾವಣೆ ನಡೆದು ಬ್ರಿಜೇಶ್ ಪಟೇಲ್ ಆಡಳಿತವನ್ನು ಕೊನೆಗಾಣಿಸಿ ಅಧ್ಯಕ್ಷರಾಗಿ ಹಿರಿಯ ಕ್ರಿಕೆಟಿಗ ಕೆ.ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷರಾಗಿ ಕೆ.ಎನ್.ಸನತ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಗೆಲುವಿನ ಮೂಲಕ ವೆಂಕಟೇಶ್ ಪ್ರಸಾದ್ ಅವರು ರಣಜಿ, ಐಪಿಎಲ್ ಪಂದ್ಯಾವಳಿಗಳನ್ನು ಕರ್ನಾಟಕದಲ್ಲಿ ಹೆಚ್ಚು ನಡೆಸುವಂತೆ ಮಾಡಲು ಪಣ ತೊಟ್ಟಿದ್ದಾರೆ. ಕೆಎಸ್ ಸಿಎ ಮಟ್ಟಿಗೆ ಈ ವರ್ಷ ಬದಲಾವಣೆಯ ಪರ್ವವಾಗಿ ರೂಪುಗೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು.

ವಿಧಾನಪರಿಷತ್‌ಗೆ ಪತ್ರಕರ್ತರ ನೇಮಕ:  ರಾಜ್ಯದಲ್ಲಿ ತೆರವಾಗಿದ್ದ ನಾಲ್ಕು ನಾಮ ನಿರ್ದೇಶಿತ ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ಕೆ.ಶಿವಕುಮಾರ್, ಜಕ್ಕಪ್ಪನವರ್, ಡಾ.ಆರತಿಕೃಷ್ಣ, ರಮೇಶ್ ಬಾಬು ಅವರನ್ನು ನೇಮಕ ಮಾಡಿದ್ದು, ಕಳೆದ ಎರಡು ದಶಕಗಳ ನಂತರ ಮೈಸೂರು ಭಾಗದ ಹಿರಿಯ ಪತ್ರಕರ್ತ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿರುವುದು ದಾಖಲಾಗಿದೆ. ಹಿರಿಯ ಪತ್ರಕರ್ತ ರಾಮಯ್ಯ ಅವರ ನಂತರದಲ್ಲಿ ಪತ್ರಕರ್ತರ ಕೋಟಾದಡಿ ಶಿವಕುಮಾರ್ ಅವರಿಗೆ ಒಲಿದಿದ್ದು ವರ್ಷದ ರಾಜಕೀಯ ವಿಶೇಷಗಳಲ್ಲಿ ಒಂದಾಗಿದೆ.

ಮೈಸೂರು, ಮಂಡ್ಯಕ್ಕೆ ರಾಷ್ಟ್ರಪತಿ ಮುರ್ಮು ಭೇಟಿ:  ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭಕ್ಕೆ ಆಗಮಿಸಿದ್ದರೆ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ನಡೆದ ಶ್ರೀ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿ ಜಯಂತಿ ಸಮಾರಂಭದಲ್ಲೂ ಭಾಗವಹಿಸಿದ್ದು ವಿಶೇಷ. ಪ್ರತಿವರ್ಷ ಒಂದು ರಾಜ್ಯಕ್ಕೆ ಒಂದು ಬಾರಿ ಅಥವಾ ಎರಡನೇ ಬಾರಿ ಭೇಟಿ ಮಾಡುವುದು ಸಹಜವಾದರೂ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಎರಡು ಸಮಾರಂಭಗಳಲ್ಲಿ ಭಾಗಿಯಾಗಿದ್ದು ಅವಿಸ್ಮರಣೀಯವಾಗಿದೆ.

ಎಂಡಿಎ ರಚನೆ ಸಿಎಂ ಸಿದ್ದರಾಮಯ್ಯ ದಾಖಲೆ:  ಮೈಸೂರು ಜಿಲ್ಲೆಯಲ್ಲಿ ಮುಂದಿನ ೩೦-೫೦ ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದಲ್ಲದೆ, ಮೈಸೂರು ಮಹಾನಗರಪಾಲಿಕೆಯನ್ನು ಗ್ರೇಡ್-೧ ಮೈಸೂರು ನಗರಪಾಲಿಕೆಯನ್ನಾಗಿ ರಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸಿಐಟಿಬಿ, ಪ್ರಜಾಪ್ರತಿನಿಧಿ ಆಡಳಿತದ ಕಲ್ಪನೆಯು ಈಗ ಬದಲಾಗುವಂತೆ ಮಾಡಿಸುತ್ತಿದೆ. ಎಂಡಿಎ ಹಾಗೂ ಗ್ರೇಡ್-೧ ಮೈಸೂರು ರಚನೆಯು ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರಚನೆಯಾಗಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುವ ಜತೆಗೆ ನಾಲ್ಕು ನಗರಪಾಲಿಕೆಯನ್ನಾಗಿ ಬೇರ್ಪಡಿಸಿದ್ದು ಕೂಡ ವಿಶೇಷ.

 

 

 

 

 

 

Tags:
error: Content is protected !!