ಮಂಜು ಕೋಟೆ
ಕೋಟೆ: ಹಿಮಾಲಯ, ಇನ್ನಿತರ ಪ್ರದೇಶಗಳಿಂದ ವಲಸೆ ಬಂದಿರುವ ಹಕ್ಕಿಗಳು; ಪರಿಸರ ಪ್ರಿಯರಲ್ಲಿ ಸಂತ
ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿರುವ ಜಲಾಶಯಗಳ ಹಿನ್ನೀರಿಗೆ ಹೊಸ ವರ್ಷದ ಸಂದರ್ಭದಲ್ಲಿ ನದಿ ರೀವ (ರಿವರ್ ಟರ್ನ್) ಎಂಬ ಅತ್ಯಂತ ಸುಂದರವಾದ, ಚುರುಕಾದ ಜಲಪಕ್ಷಿ ಆಗಮಿಸಿ ಪಕ್ಷಿಪ್ರಿಯರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕಬಿನಿ, ತಾರಕ, ಹೆಬ್ಬಾಳ ಜಲಾಶಯಗಳ ಹಿನ್ನೀರಿನ ವ್ಯಾಪ್ತಿಗಳಲ್ಲಿ ಜನವರಿ ತಿಂಗಳ ಆರಂಭದಲ್ಲಿ ಹಿಮಾಲಯ ಮತ್ತು ಇನ್ನಿತರ ಪ್ರದೇಶಗಳಿಂದ ಈ ನದಿ ರೀವ (ರಿವರ್ ಟರ್ನ್) ಪಕ್ಷಿಗಳು ಗುಂಪು ಗುಂಪಾಗಿ ಬಂದು ವಾಸ್ತವ್ಯ ಹೂಡುತ್ತವೆ.
ಈ ಪಕ್ಷಿಗಳು ನೀರಿನ ಮೇಲೆ ಹಾರುತ್ತಾ, ಮೀನು ಕಂಡ ತಕ್ಷಣ ಕ್ಷಣಾರ್ಧದಲ್ಲಿ ನೀರಿನೊಳಗೆ ಧುಮುಕಿ (ಪ್ಲಂಗ್ ಡೈವ್) ಮೀನನ್ನು ಹಿಡಿಯುವ ಕೌಶಲ ಹೊಂದಿವೆ. ಗಂಡು ಹಕ್ಕಿಯು ಹೆಣ್ಣು ಹಕ್ಕಿಯನ್ನು ಒಲಿಸಿಕೊಳ್ಳಲು ಮೀನನ್ನು ಬೇಟೆಯಾಡಿ ತಂದು ಉಡುಗೊರೆಯಾಗಿ ನೀಡುತ್ತದೆ. ಹೆಣ್ಣು ಹಕ್ಕಿಯು ಮೀನನ್ನು ಸ್ವೀಕರಿಸಿದರೆ ಮಾತ್ರ ಅದು ತನ್ನ ಸಂಗಾತಿಯಾಗಲು ಒಪ್ಪಿದೆ ಎಂದು ಅರ್ಥ! ಇವುಗಳು ಈ ತಾಲ್ಲೂಕಿನ ಜಲಾಶಯಗಳ ಮತ್ತು ನದಿಗಳ ಮರಳು ದಿಬ್ಬಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ.
ಮರಿ ಮಾಡಿ ನಂತರ ಹೊರ ರಾಜ್ಯದತ್ತ ಪ್ರಯಾಣ ಬೆಳೆಸಿ ಮುಂದಿನ ಹೊಸ ವರ್ಷದ ಸಂದರ್ಭದಲ್ಲಿ ಇದರ ಜೊತೆ ಇನ್ನಿತರ ಪಕ್ಷಿಗಳನ್ನು ಕರೆದುಕೊಂಡು ಬರುತ್ತವೆ. ಪ್ರಾಣಿ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ಈ ಪಕ್ಷಿಗಳು ತೀವ್ರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಇತ್ತೀಚಿನ ದಿನಗಳಲ್ಲಿ ನದಿಗಳ ನೀರು ಕಲುಷಿತವಾಗುತ್ತಿರುವುದರಿಂದ ಹಾಗೂ ಕೆಲ ಬೇಟೆಗಾರರ, ಪುಂಡರ ಹಾವಳಿ ಯಿಂದಾಗಿ ಅಪರೂಪದ ಈ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಅಪರೂಪದ ಹಕ್ಕಿಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ.
” ತಾಲ್ಲೂಕಿನಲ್ಲಿರುವ ಕಾಡು ಮತ್ತು ನದಿ, ಪರಿಸರ, ತಂಪಾದ ವಾತಾವರಣ ರಾಜ್ಯ, ದೇಶ-ವಿದೇಶಗಳ ವಿಶೇಷ ಪಕ್ಷಿಗಳಿಗೆ ಪ್ರಿಯವಾಗಿದೆ. ಆದ್ದರಿಂದ ಅನೇಕ ತರದ ಪಕ್ಷಿಗಳು ಜಲಾಶಯದ ಹಿನ್ನೀರಿಗೆ ಆಗಮಿಸುತ್ತಿದ್ದು ಇವುಗಳ ಕಲರವ ಪ್ರತಿಯೊಬ್ಬರನ್ನೂ ಸೆಳೆಯುತ್ತಿದೆ.”
-ಮನೋಜ್ ಗನ್ನ, ವನ್ಯಜೀವಿ ಛಾಯಾಗ್ರಾಹಕ, ಕೋಟೆ





