Mysore
25
clear sky

Social Media

ಸೋಮವಾರ, 05 ಜನವರಿ 2026
Light
Dark

ಖಾಸಗಿ ಬಡಾವಣೆಗಾಗಿ ನಾಲೆಯ ಪಥವೇ ಬದಲು

ಎಸ್.ಎಸ್.ಭಟ್

ಅಧಿಕಾರಿಗಳಿಗೆ ಚಳಿ ಬಿಡಿಸಿದ ಗ್ರಾಮಸ್ಥರು; ಮಾರ್ಗ ಬದಲಾದರೆ ಜಮೀನಿಗೆ ನೀರಿನ ಕೊರತೆಯ ಆತಂಕ 

ನಂಜನಗೂಡು: ರೈತರ ಜಮೀನಿಗೆ ನೀರು ಹರಿಯಲೆಂದು ಸರ್ಕಾರ ನಾಲೆಗಳನ್ನು ನಿರ್ಮಿಸಿದೆ. ಅದೇ ಸರ್ಕಾರದ ಅಧಿಕಾರಿಗಳು ಖಾಸಗಿ ಬಡಾವಣೆಯ ನಿರ್ಮಾಣದಾರರ ಆಮಿಷಕ್ಕೆ ಒಳಗಾಗಿ ಜಮೀನಿನ ಹಿತ ಮರೆತು ನಾಲೆಯ ಪಥವನ್ನೇ ಬದಲಾಯಿಸಲು ಹೊರಟಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು-ಹುಲ್ಲಹಳ್ಳಿ ರಸ್ತೆಯ ದೇಬೂರಿನಲ್ಲಿ ಹೊಸ ಬಡಾವಣೆ ನಿರ್ಮಾಣವಾಗುತ್ತಿದ್ದು, ಆ ಬಡಾವಣೆಯ ಅನುಕೂಲಕ್ಕಾಗಿ ೪೦ ವರ್ಷಗಳ ಹಿಂದೆ ನಿರ್ಮಿಸಿದ್ದ ಹಳೆಯ ನಾಲೆಯನ್ನು ಈಗ ಮುಚ್ಚಿ, ಅದಕ್ಕೆ ಬದಲಿಯಾಗಿ ಚಿಕ್ಕ ಕೊಳವೆ ಹಾಕುವ ಕಾಮಗಾರಿ ಭರದಿಂದ ನಡೆಯುತ್ತಿದೆ.

ನಾಲೆಯ ಮಾರ್ಗ ಬದಲಾದರೆ ರೈತರ ಜಮೀನಿಗೆ ನೀರಿನ ಆತಂಕ ಎದುರಾಗಲಿದೆ. ಅದನ್ನು ತಡೆಯಿರಿ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗದಿದ್ದಾಗ ದೇಬೂರಿನ ಜನತೆ ತಹಸಿಲ್ದಾರರಿಗೆ ಈ ಕುರಿತು ದೂರು ನೀಡಿದ್ದಾರೆ. ನಾಲೆಯ ಪಥದ ಬದಲಾವಣೆಯಿಂದ ಆಗಬಹುದಾದ ಸಂಕಷ್ಟಗಳ ಬಗ್ಗೆ ಗ್ರಾಮಸ್ಥರು ತಹಸಿಲ್ದಾರ್ ಅವರಿಗೆ ವಿವರಿಸಿದರು.

ದೂರು ಆಲಿಸಿದ ತಹಸಿಲ್ದಾರ್ ಶಿವಕುಮಾರ್, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಸಮಸ್ಯೆ ಕುರಿತಂತೆ ಕಂದಾಯ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಂಟಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಈ ಮಧ್ಯೆ ನೀರಾವರಿ ಅಧಿಕಾರಿಗಳ ಅಂತರಂಗದ ಬೆಂಬಲದೊಂದಿಗೆ ಬಡಾವಣೆಯ ಮಾಲೀಕರು ಹಳೆಯ ನಾಲೆಯನ್ನು ಮುಚ್ಚಿ ಬದಲಿ ಮಾರ್ಗಕ್ಕೆ ಕೊಳವೆ ಜೋಡಿಸುವ ಕಾಮಗಾರಿ ಆರಂಭಿಸಿದ ಘಟನೆಯೂ ನಡೆದಿದೆ.

ಸೋಮವಾರ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಕಬಿನಿ ನಾಲಾ ಇಂಜಿನಿಯರ್ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡ ದೇಬೂರು ಗ್ರಾಮಸ್ಥರು, ಕೋಟ್ಯಂತರ ರೂ. ಮೌಲ್ಯದ ನಾಲಾ ಮಣ್ಣನ್ನು ಖಾಸಗಿ ರೆಸಾರ್ಟ್ ನಿರ್ಮಿಸಲು ಅಕ್ರಮವಾಗಿ ಸಾಗಿಸಿದ್ದೀರಿ. ಈಗ ಖಾಸಗಿ ಬಡಾವಣೆಯ ೪ ದಶಕಗಳ ಹಿಂದಿನ ನಾಲೆಯನ್ನೇ ಮುಚ್ಚುತ್ತಿದ್ದೀರಿ. ನೀವಿರುವುದು ಸರ್ಕಾರದ ಆಸ್ತಿ ಉಳಿಸಲೋ ಅಥವಾ ಅಕ್ರಮ ಹಣ ದೋಚಲೋ ಎಂದು ತರಾಟೆಗೆ ತೆಗೆದುಕೊಂಡರು.

ನಾಲೆ ಮುಚ್ಚುವ ಅಥವಾ ಬದಲಿಸುವ ಅಧಿಕಾರ ಯಾರಿಗಿದೆ?: ಇದರಿಂದಾಗಿ ಜಮೀನಿಗೆ ನೀರು ಹರಿಯದೆ ಆಗಬಹುದಾದ ನಷ್ಟಕ್ಕೆ ಯಾರು ಹೊಣೆ? ಯಾವ ಕಾರಣಕ್ಕೆ ನಾಲೆಯ ಪಥ ಬದಲಾಗುತ್ತಿದೆ ಎಂಬ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದ ನೀರಾವರಿ ನಿಗಮದ ಇಂಜಿನಿಯರ್ ದರ್ಶನ್ ಕಕ್ಕಾ ಬಿಕ್ಕಿಯಾಗಿ ವಾಪಸಾದರು.

” ನೀರಾವರಿ ನಾಲೆ ಸರ್ಕಾರಿ ಆಸ್ತಿ. ಅದನ್ನು ಮುಚ್ಚುವುದು ಕ್ರಿಮಿನಲ್ ಅಪರಾಧವಾಗಿದ್ದು, ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.”

– ಶಿವಕುಮಾರ್ ಕ್ಯಾಸನೂರ, ತಹಸಿಲ್ದಾರ್

Tags:
error: Content is protected !!