Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಅರಳುತ್ತಿರುವ ಬಾಲಪ್ರತಿಭೆ ಕೆ.ಎಸ್.ಆದಿತ್ಯ

ಕೆ.ಟಿ.ಮೋಹನ್‌ಕುಮಾರ್

ಸಾಮಾನ್ಯಜ್ಞಾನದ ಪ್ರಶ್ನೆಗಳನ್ನು ಕೇಳಿದರೆ ಥಟ್ ಅಂತ ಉತ್ತರ ಹೇಳುವ ಬಾಲಕ, ಗ್ರಾಮೀಣ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ 

ಸಾಲಿಗ್ರಾಮ: ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದರೆ ಪಟಪಟನೆ ಉತ್ತರ ಹೇಳು ವಂತಹ ಚೂಟಿ, ಪ್ರಸ್ತುತ ವಿದ್ಯಮಾನ, ಇತಿಹಾಸ, ರಾಷ್ಟ್ರ, ರಾಜ್ಯ, ವಿದೇಶ, ಕ್ರೀಡೆ ಹೀಗೆ ವಿವಿಧ ಪ್ರಕಾರಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ಯಾರೇ ಪ್ರಶ್ನೆ ಕೇಳಿದರೂ ಥಟ್ ಅಂತ ಉತ್ತರ ಹೇಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಗ್ರಾಮೀಣ ಪ್ರತಿಭೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ರೈತ ಕುಟುಂಬದ ಅಭಿಲಾಷ ಮತ್ತು ಸುಧಾಕರ್ ದಂಪತಿಯ ಪುತ್ರ ಕೆ.ಎಸ್.ಆದಿತ್ಯ.

ಪ್ರಸ್ತುತ ದಿನಗಳಲ್ಲಿ ತಮ್ಮ ಮಕ್ಕಳು ಚೆನ್ನಾಗಿ ಕಲಿತು ದೊಡ್ಡ ವ್ಯಕ್ತಿಗಳಾಗಬೇಕು ಎಂಬ ಉದ್ದೇಶದಿಂದ ಬಹುಪಾಲು ಜನರು ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಕೃಷಿಕ ಕುಟುಂಬದಲ್ಲಿ ಜನಿಸಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಎಸ್.ಆದಿತ್ಯ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ. ಸ್ವಗ್ರಾಮ ಕಾಳಮ್ಮನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೫ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, ಪ್ರಸ್ತುತ ಸಾಲಿಗ್ರಾಮ ತಾಲ್ಲೂಕಿನ ರಾಂಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ೮ನೇ ತರಗತಿಯನ್ನು ಅಭ್ಯಾಸ ಮಾಡುತ್ತಿದ್ದಾನೆ. ಈ ವಿದ್ಯಾರ್ಥಿಯ ಸಾಮಾನ್ಯ ಜ್ಞಾನದ ಮಟ್ಟ ಇತರರಿಗೆ ಒಂದೆಡೆ ಮಾದರಿಯಾದರೆ ಮತ್ತೊಂದೆಡೆ ಎಲ್ಲರನ್ನೂ ಹುಬ್ಬೇರಿಸುವಂತಿದೆ.

ಈ ವಿದ್ಯಾರ್ಥಿಯು ಶಾಲೆಯಲ್ಲಿ ನಡೆಯುವ ಟೆಸ್ಟ್‌ಗಳು ಹಾಗೂ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಆದರ್ಶ ವಿದ್ಯಾರ್ಥಿ ಅನಿಸಿಕೊಂಡಿದ್ದಾನೆ. ಆ ಮೂಲಕ ಶಾಲೆಗೆ, ಕಲಿಸಿದ ಗುರುಗಳಿಗೆ, ಹೆತ್ತವರಿಗೆ, ಹುಟ್ಟಿದ ಊರಿಗೆ ಕೀರ್ತಿ ತರುತ್ತಿದ್ದಾನೆ.

ದಾರಿ ದೀಪವಾದ ಶಿಕ್ಷಕ ವೃಂದ:  ಕೆ.ಎಸ್.ಆದಿತ್ಯ ಓದುತ್ತಿರುವ ಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಎನ್.ಮರಯ್ಯ ಹಾಗೂ ಶಿಕ್ಷಕ ವೃಂದದವರು ಈತನಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ ಅವನ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅವನ ಸಾಧನೆಗೆ ದಾರಿ ದೀಪವಾಗಿದ್ದಾರೆ.

Tags:
error: Content is protected !!