Mysore
27
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ದನಗಳ ಜಾತ್ರೆಯಲ್ಲಿ ಹಳ್ಳಿಕಾರ್‌ ತಳಿಯ ಎತ್ತುಗಳ ಆಕರ್ಷಣೆ

ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವದ ಪ್ರಯುಕ್ತ ಹರದೂರು ಗೇಟ್‌ನಲ್ಲಿ ಜಾತ್ರೆ

ಮಾಗಳಿ ರಾಮೇಗೌಡ

ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಹರದೂರು ಗೇಟ್ ಬಳಿ ರೈತರ ಜಮೀನಿನಲ್ಲಿ ಇತಿಹಾಸ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಪ್ರಯುಕ್ತ ನಡೆಯುವ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳ ಪ್ರದರ್ಶನ ಜಾತ್ರೆಗೆ ಕಳೆ ತಂದಿತ್ತು.

ಹಳ್ಳಿಕಾರ್ ಎತ್ತುಗಳ ಕೊಂಬುಗಳಿಗೆ ಹಣದ ನೋಟುಗಳನ್ನು ಕಟ್ಟಿ, ನಿಂಬೆಹಣ್ಣು ಸಿಕ್ಕಿಸಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಬೆಟ್ಟದಪುರ ಗ್ರಾಮದ ಕುವೆಂಪು ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಪ್ರಮುಖ ರಸ್ತೆಗಳಲ್ಲಿ ಸ್ತಬ್ಧಚಿತ್ರ, ಬ್ಯಾಂಡ್ ಸೆಟ್‌ನೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿದರು.

ಹರದೂರು ಗೇಟ್‌ನ ಜಾನುವಾರು ಜಾತ್ರೆ ಮೈದಾನದ ಚಪ್ಪರಕ್ಕೆ ಎತ್ತುಗಳನ್ನು ಮೆರವಣಿಗೆ ಮೂಲಕ ಕರೆತಂದಿದ್ದು ಗಮನ ಸೆಳೆಯಿತು.

ಪ್ರಾಧ್ಯಾಪಕ ವೃತ್ತಿಯನ್ನು ಬಿಟ್ಟು ಹಳ್ಳಿಗೆ ಬಂದು ಹಳ್ಳಿಕಾರ್ ದೇಸಿ ತಳಿಯನ್ನು ಬೆಳೆಸಲು ಟೊಂಕ ಕಟ್ಟಿ ನಿಂತಿರುವ ಪಿರಿಯಾಪಟ್ಟಣದ ಒಳಕೋಟೆಯ ಬ್ರಾಹ್ಮಣರ ಬೀದಿಯ ಪುರೋಹಿತರಾದ ಪಿ. ವಿ. ನಾಗರಾಜ್ ಅವರ ಪುತ್ರ ಅರುಣ್ ಕೌಶಿಕ್‌ರವರು ಬೆಲೆ ಬಾಳುವ ಹಳ್ಳಿಕಾರ್ ತಳಿಯ ಎತ್ತುಗಳನ್ನು ಪ್ರದರ್ಶಿಸಿದ್ದು ದನಗಳ ಜಾತ್ರೆಗೆ ಮೆರುಗು ತಂದಿತ್ತು.

ಸಾಲಿಗ್ರಾಮ ತಾಲ್ಲೂಕಿನ ಚಿಕ್ಕ ಹನಸೋಗೆ ಗ್ರಾಮದ ರೈತ ಅಭಿಲಾಶ್ ಮಾತನಾಡಿ, ೨೦ ವರ್ಷಗಳಿಂದಲೂ ಹಳ್ಳಿಕಾರ್ ತಳಿಯ ಎತ್ತುಗ ಳನ್ನು ಜಾತ್ರೆಗೆ ಕರೆತರುತ್ತಿದ್ದೇವೆ. ಪಿರಿಯಾ ಪಟ್ಟಣದ ಬ್ರಾಹ್ಮಣರ ಬೀದಿಯ ಅರುಣ್ ಕೌಶಿಕ್‌ರವರು ಮೂರು ಜೊತೆ ಹಳ್ಳಿಕಾರ್ ತಳಿಯ ಎತ್ತುಗಳನ್ನು ಮೆರವಣಿಗೆಗೆ ಕರೆ ತಂದಿದ್ದಾರೆ. ಇಂಥವರನ್ನು ಉತ್ತೇಜಿಸಲು ಸರ್ಕಾರ ಸಂಘ ಸಂಸ್ಥೆಗಳು ಗಮನ ನೀಡಬೇಕು ಎಂದರು.

ಹಳ್ಳಿಕಾರ್ ತಳಿಯ ಪೋಷಣೆ ಮಾಡುತ್ತಿರುವ ಅರುಣ್ ಕೌಶಿಕ್‌ರವರನ್ನು ಅಭಿಮಾನಿಗಳು, ರೈತರು ಸನ್ಮಾನಿಸಿ ದರು. ಮೆರವಣಿಗೆಯಲ್ಲಿ ಮಿರ್ಲೆ ಗ್ರಾಮದ ರವಿ, ಸ್ವಾಮಿ, ರೈತರು , ಅರುಣ್ ಕೌಶಿಕ್ ಅಭಿಮಾನಿಗಳು ಭಾಗವಹಿಸಿದ್ದರು.

ನಮ್ಮ ತಾತನ ಕಾಲದಿಂದಲೂ ಪೌರೋಹಿತ್ಯ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದು, ಅದರ ಜೊತೆಯಲ್ಲಿ ಹಳ್ಳಿಕಾರ್‌ ತಳಿಯ ಎತ್ತುಗಳನ್ನು ಪೋಷಣೆ ಮಾಡುತ್ತಿದ್ದೇವೆ. ನಾನನು ಪ್ರಾಧ್ಯಪಕ ವೃತ್ತಿಯನ್ನು ಬಿಟ್ಟು ದೇಶಿ ತಳಿಯನ್ನು ಉಳಿಸಿ ಬೆಳೆಸಲು ಮುಂದಾಗಿದ್ದೇನೆ. ಇಂದಿನ ಯುವಜನತೆ ದೇಸಿ ತಳಿಯನ್ನು ಬೆಳೆಸಲು ಮುಂದಾಗಬೇಕು.

– ಅರುಣ್‌ ಕೌಶಿಕ್‌, ಹಳ್ಳಿಕಾರ್‌ ತಳಿ ಎತ್ತುಗಳ ಪೋಷಕರು

 

Tags:
error: Content is protected !!