Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

1708 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಗುರಿ

ನವೀನ್ ಡಿಸೋಜ

ಮುಂಗಾರು ಹಿನ್ನೆಲೆ; ಕೃಷಿ ಇಲಾಖೆಯಿಂದ ಅಗತ್ಯ ತಯಾರಿ; ರಸಗೊಬ್ಬರ ಪೂರೈಕೆಗೂ ಕ್ರಮ

ಮಡಿಕೇರಿ: ಜೂನ್ ಮೊದಲ ವಾರದಲ್ಲಿ ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ಈ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ೨೦೨೫ರ ಮುಂಗಾರು ಹಂಗಾಮಿನಲ್ಲಿ ೧,೭೦೮.೨೬ ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಜೋಳದ ಬೀಜ ವಿತರಣೆ ಮಾಡುವ ಗುರಿ ಹೊಂದಲಾಗಿದೆ.

ಈಗಾಗಲೇ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದೆ. ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ರೈತರು ಕೃಷಿ ಚಟುವಟಿಕೆಯತ್ತ ಚಿತ್ತಹರಿಸಿದ್ದಾರೆ. ಕೃಷಿಗೆ ಬೇಕಾಗುವ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ತಯಾರಿ ಮಾಡಿಕೊಂಡಿದೆ.

ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳು ಜಿಲ್ಲೆಯ ಪ್ರಮುಖ ಕೃಷಿ ಬೆಳೆಗಳಾಗಿವೆ. ಭತ್ತದ ಬಿತ್ತನೆ ಮತ್ತು ನಾಟಿ ಕಾರ್ಯಗಳನ್ನು ಜೂನ್ ಅಂತ್ಯದಿಂದ ಪ್ರಾರಂಭಿಸಿ, ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ಹಾಗೂ ಮುಸುಕಿನ ಜೋಳದ ಬಿತ್ತನೆ ಕಾರ್ಯವನ್ನು ಜೂನ್ ಮಾಹೆಯಲ್ಲಿ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ೧೬ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯವಿರುವ ವಿವಿಧ ತಳಿಗಳ ಬಿತ್ತನೆ ಬೀಜಗಳನ್ನು ಕೆಎಸ್‌ಎಸ್‌ಸಿ ಮತ್ತು ಎನ್‌ಎಸ್‌ಸಿ ಸಂಸ್ಥೆಗಳಿಂದ ಪಡೆದು, ದಾಸ್ತಾನು ಮಾಡಿ, ವಿತರಣೆಗೆ ಕ್ರಮವಹಿಸಲಾಗುತ್ತಿದೆ.

ಭತ್ತ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ಸೇರಿದಂತೆ ೧,೭೦೦ ಕ್ವಿಂಟಾಲ್ ಬಿತ್ತನೆ ಬೀಜವನ್ನು ಪೂರೈಸಲು ಕ್ರಮವಹಿಸಲಾಗಿದೆ. ಕೂಡಿಗೆಯ ಕೃಷಿ ತರಬೇತಿ ಸಂಸ್ಥೆಯಲ್ಲಿ ೭೦೦ ಕ್ವಿಂಟಾಲ್ ಭತ್ತ ಬಿತ್ತನೆ ಬೀಜ ಬೆಳೆಯಲಾಗಿದೆ. ಒಟ್ಟಾರೆ ೨೦೨೫ರ ಮುಂಗಾರು ಹಂಗಾಮಿನಲ್ಲಿ ೧,೭೦೮.೨೬ ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಜೋಳದ ಬೀಜ ವಿತರಣೆಗೆ ಗುರಿ ನಿಗದಿಪಡಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೊತೆಗೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಯೂರಿಯಾ, ಡಿಐಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‌ಎಸ್‌ಪಿ ಸೇರಿದಂತೆ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ವನ್ಯಮೃಗಗಳ ಹಾವಳಿ, ದರ ಕುಸಿತದಂತಹ ಹಲವು ಸಮಸ್ಯೆಗಳಿಂದಾಗಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಹೊರತಾಗಿಯೂ ಒಂದಷ್ಟು ಕೃಷಿಕರು ಭತ್ತ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅಂತಹ ಕೃಷಿಕರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

” ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭ ಸಂಬಂಧ ಕೃಷಿ ಇಲಾಖೆಯಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ೧,೭೦೮.೨೬ ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳ ಬೀಜ ವಿತರಣೆಗೆ ಗುರಿ ನಿಗದಿಪಡಿಸಲಾಗಿದ್ದು, ಈಗಾಗಲೇ ಬಿತ್ತನೆ ಬೀಜವನ್ನು ಪೂರೈಸಲು ಕ್ರಮವಹಿಸಲಾಗಿದೆ. ರಸಗೊಬ್ಬರ ಬೇಡಿಕೆಗೆ ತಕ್ಕಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ.”

-ಚಂದ್ರಶೇಖರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

” ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆ ಕೃಷಿ ಇಲಾಖೆ ಮೂಲಕ ಕಲ್ಪಿಸಲಾಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಾಗಬೇಕು. ರಸಗೊಬ್ಬರ ಪೂರೈಕೆ ಹಾಗೂ ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು.”

-ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರು

Tags:
error: Content is protected !!