Mysore
25
few clouds

Social Media

ಶನಿವಾರ, 17 ಜನವರಿ 2026
Light
Dark

ಸುತ್ತೂರು ಜಾತ್ರೆ ಕೃಷಿ ಮೇಳ: ಕೃಷಿ ಉದ್ಯಮಿಗಳಾಗುವವರಿಗೆ ಮುಕ್ತ ವೇದಿಕೆ

ಎಸ್.ಎಸ್.ಭಟ್

ನಂಜನಗೂಡು: ತ್ರಿವಿಧ ದಾಸೋಹಕ್ಕೆ ಹೆಸರಾದ ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಕೃಷಿ ಮೇಳ, ಸಮಗ್ರ ಕೃಷಿಯಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿಗಳಾಗ ಬಯಸುವವರಿಗೆ ಹೇಳಿ ಮಾಡಿಸಿದ ವೇದಿಕೆಯಾಗಿದೆ.

ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿಗೊಳಿಸಿದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಯಂತಹ ಬೆಳೆಗಳನ್ನು ಬೆಳೆಯುವೆಡೆಗೆ ರೈತರು ಹಾಗೂ ರೈತ ಮಹಿಳೆಯರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

ಕೃಷಿ ಬ್ರಹ್ಮಾಂಡದತ್ತ ರೈತರ ಸೆಳೆತ: ಪ್ರತಿ ವರ್ಷದಂತೆ ಕೃಷಿ ಮೇಳ ಆಯೋಜಿಸುವ ಐದುಎಕರೆ ಪ್ರದೇಶದ ಪೈಕಿ ಒಂದು ಎಕರೆ ಪ್ರದೇಶದಲ್ಲಿ ಸಮಗ್ರ ಕೃಷಿ,ಯಲ್ಲಿ ಬೆಳೆಯಲಾಗಿರುವ ಟೊಮೆಟೋ,ಬದನೆ, ಹೈನುಗಾರಿಕೆ ಮತ್ತು ಪಶು ಸಂಗೋಪನೆ ಜಾತ್ರೆಗೆ ಬಂದವರನ್ನು ತನ್ನತ್ತ ಸೆಳೆಯುತ್ತಿದೆ. ಸುತ್ತೂರು ಕೃಷಿ ವಿಜ್ಞಾನ ಕೇಂದ್ರ ಆವಿಷ್ಕರಿಸಿರುವ ಮೂರ ರಿಂದ ಆರು ತಿಂಗಳವರೆಗೆ ಫಲ ನೀಡುವ ಟೊಮೆಟೋ ಮತ್ತು ಬದನೆ ಬೆಳೆಗಳು ಜನಾಕರ್ಷಣೆಯ ಕೇಂದ್ರವಾಗಿದೆ. ಈ ಬದನೆಗೆ ಕಾಡು ಬದನೆ ಅಥವಾ ಸೊಂಡು ಬದನೆಯೊಂದಿಗೆ ಕಸಿ ಮಾಡಲಾಗಿದ್ದು, ಈ ಗಿಡದಿಂದ ಮೂರು ವರ್ಷಗಳವರೆಗೂ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಡಾ.ವಿನಯ, ಟೊಮೆಟೋ ಕಸಿಯಿಂದಲೂ ಗಿಡಗಳಲ್ಲಿ ಗೊಂಚಲು ಗೊಂಚಲು ಹಣ್ಣುಗಳು ಬಿಟ್ಟಿದ್ದು, ಈ ಗಿಡಗಳು ಏಳರಿಂದ ಎಂಟು ತಿಂಗಳುಗಳ ಕಾಲ ಫಸಲು ನೀಡುತ್ತದೆ.

ಕೃಷಿ ಮೇಳದಲ್ಲಿ ಸ್ಟೆಪ್…:  ಕೃಷಿ ಮೇಳದಲ್ಲಿ ವಿಜ್ಞಾನಿಗಳ ಪ್ರಯತ್ನದ -ಲವಾಗಿ ಉತ್ತಮ ಫಸಲು ಬಿಟ್ಟಿರುವ ಬೆಳೆಗಳನ್ನು ಕಣ್ತುಂಬಿಕೊಂಡು ಹೋಗುವುದು ಮಾತ್ರವಲ್ಲದೇ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗಳನ್ನು ಪರಿಚಯಿಸುವ ಮೂಲಕ ರೈತರನ್ನು ಕೃಷಿ ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲೂ ಇಲ್ಲಿ ಪ್ರಯತ್ನ ನಡೆದಿದೆ. ಕೃಷಿ ಉದ್ಯಮಿಗಳಾಗಲು ಬಯಸಿ ಇಲ್ಲಿ ಹೆಸರು ನೋಂದಾಯಿಸಿದರೆ ಜೆಎಸ್‌ಎಸ್‌ನ ಈ ಅಂಗಸಂಸ್ಥೆ ಸೂಕ್ತ ಮಾರ್ಗದರ್ಶನ ನೀಡಲಿದೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಸ್ಟೆಪ್ ಯೋಜನೆಯಡಿ ಕೃಷಿಕರನ್ನು ಕೃಷಿ ಉದ್ಯಮಿಗಳಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿದೆ.

” ರೈತರನ್ನು ಉದ್ದಿಮೆದಾರರಾಗಿಸಲು ಈ ಕೃಷಿ ಮೇಳದಲ್ಲಿ ಕೃಷಿ ತಜ್ಞರಿಂದ ಸಂವಾದಯುಕ್ತ ಮಾರ್ಗದರ್ಶನ, ಸ್ಟಾರ್ಟ್‌ಆಪ್ ಪ್ರದರ್ಶನ, ಮಹಿಳಾ ಉದ್ದಿಮೆ ದಾರರಿಗೆ ಹೆಚ್ಚಿನ ಉತ್ತೇಶನ ನೀಡಲಾಗುತ್ತಿದೆ”

-ಬಿ.ಎನ್.ಜ್ಞಾನೇಶ್, ಮುಖ್ಯಸ್ಥರು, ಸುತ್ತೂರು

” ರೈತರ ಆಸಕ್ತಿಯ ಬೆಳೆಗಳ ಕುರಿತಾದ ಸಂಪೂರ್ಣ ಮಾಹಿತಿಯೊಂದಿಗೆ ಮಾರುಕಟ್ಟೆಗಾಗಿ ನಿಮ್ಮ ಹೆಸರನ್ನು ನೋಂದಾಯಿಸುವುದರೊಂದಿಗೆ ಆ ಬೆಳೆಗಳ ಮಾರುಕಟ್ಟೆವರೆಗಿನ ಎಲ್ಲ ಹಂತಗಳನ್ನೂ ದಾಟಿ ವರ್ಷದೊಳಗೆ ಕೃಷಿ ಉದ್ಯಮಿಗಳಾಗಿಸುವ ಜವಾಬ್ದಾರಿ ನಮ್ಮದು.”

-ಡಾ. ಶಿವಶಂಕರ್, ಎಸ್‌ಜೆಸಿಇ ಸ್ಟೆಪ್ ಸಂಸ್ಥೆ, ಮೈಸೂರು

 

 

Tags:
error: Content is protected !!